ಇಳಕಲ್ಲ: ವಚನ ಸಾಹಿತ್ಯದ ಸಂಭ್ರಮದ ಅಡ್ಡಪಲ್ಲಕ್ಕಿ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

35 ಗಂಟೆ 15 ನಿಮಿಷಗಳ ಕಾಲ ನಡೆದ ಮೆರವಣಿಗೆ

ಇಳಕಲ್ಲ:

ವಿಜಯಮಹಾಂತೇಶ ಸಂಸ್ಥಾನಮಠದಲ್ಲಿ ಲಿಂಗೈಕ್ಯ ಶರಣ, ತಪಸ್ವಿ ಪೂಜ್ಯ ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ, ಶ್ರೀಮಠದಲ್ಲಿ ಮಂಗಳವಾರ ಸಂಜೆಯ ಅಡ್ಡಪಲ್ಲಕ್ಕಿಯಲ್ಲಿ ಪೂಜ್ಯ ಗುರುಮಹಾಂತಪ್ಪ ಶ್ರೀಗಳು ವಚನ ಸಾಹಿತ್ಯದ ತಾಡೋಲೆ ಕಟ್ಟುಗಳನ್ನು ಇಟ್ಟು, ಪೂಜಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

ಅಡ್ಡಪಲ್ಲಕ್ಕಿಯ ಮೆರವಣಿಗೆಯು ಗಾಂಧಿ ಚೌಕ್, ಗ್ರಾಮ ಚಾವಡಿ, ಕಂಠಿ ವೃತ್ತ, ಬಸವನಗುಡಿ, ಕಾಯಿಪಲ್ಲೆ ಮಾರುಕಟ್ಟೆ, ಮುಖ್ಯ ಬಜಾ‌ರ್ ಮಾರ್ಗವಾಗಿ ಸಾಗಿ ಬಂದು ಗುರುವಾರ ಬೆಳಿಗ್ಗೆ 03-20ಕ್ಕೆ ಮಠವನ್ನು ತಲುಪಿತು. ಒಟ್ಟು 35 ಗಂಟೆ 15 ನಿಮಿಷಗಳ ಕಾಲ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ನಗರದ ವಿಜಯ ಮಹಾಂತೇಶ ತರುಣ ಸಂಘ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ಯುವ ಸೇವಾ ಬಳಗ ಮತ್ತಿತರ ಸಂಘ, ಸಂಸ್ಥೆಗಳ ಸದಸ್ಯರು ಪಲ್ಲಕ್ಕಿಯ ಮೆರವಣಿಗೆಯಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

ಮಾರ್ಗದುದ್ದಕ್ಕೂ ಲಕ್ಷಾಂತರ ಭಕ್ತರು ಪಲ್ಲಕ್ಕಿಗೆ ಹೂವು, ಹಣ್ಣು, ತೆಂಗಿನಕಾಯಿ ಅರ್ಪಿಸಿ ಶ್ರದ್ಧೆ – ಭಕ್ತಿಯಿಂದ ಅಡ್ಡಪಲ್ಲಕ್ಕಿಯನ್ನು ಪೂಜಿಸುತ್ತಿದ್ದರು.

ಮೆರವಣಿಗೆಯಲ್ಲಿ ಜಾನಮಟ್ಟಿಯ ಚನ್ನಬಸು ಹಿರಕಣ್ಣವರ ಡೊಳ್ಳು ಕುಣಿತ, ಅಮೀನಗಡದ ನಾಗಪ್ಪ ಪುರ್ತಗೇರಿ ಅವರ ಕರಡಿಮಜಲು, ಕಂಕನವಾಡಿಯ ಸತ್ಯಪ್ಪ ಕೊಣ್ಣೂರ ಅವರ ಗೊಂಬೆ ಕುಣಿತ, ಎಸ್‌.ಕೆ. ಕೊಪ್ಪದ ಪ್ರಭು ಮದಭಾವಿ ಅವರ ಹಲಗೆ ಮಜಲು, ಸೋಮಶೇಖರ ಹೋಟಿ ಅವರ ವೀರಗಾಸೆ, ಸೋಮನಕೊಪ್ಪದ ವಾಣಿಶ್ರೀಗೌಡ ಅವರ ಮಹಿಳಾ ಡೊಳ್ಳು ಕುಣಿತ, ಕೊಟ್ಟೂರಿನ ಶಿವರಾಜ ಅವರ ನಂದಿಧ್ವಜ, ಹಡಗಲಿಯ ಜ್ಯೋತಿ ಅವರ ಬಂಜಾರ ನೃತ್ಯ, ಸಿದ್ದಾಪುರದ ಸಂಜೀವ ಖೋತ ಅವರ ಸತ್ತಿಗೆ ಕುಣಿತ ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಜಾನಪದ ಜಾತ್ರೆ ನೋಡುಗರ ಗಮನ ಸೆಳೆದವು.

ಜಹಗೀ‌ರ ಗುಡದೂರು, ಶಿರಬಡಗಿ, ಹೊಸೂರ, ವಕ್ಕಂದುರ್ಗ, ರಾಂಪೂರ ಸೇರಿದಂತೆ ವಿವಿಧ ಗ್ರಾಮಗಳ ಭಜನಾ ಮೇಳಗಳು, ಹುನಗುಂದ, ವೀರಾಪುರ, ಬಾದವಾಡಗಿ ಗ್ರಾಮಗಳ ಡೊಳ್ಳಿನ ಮೇಳಗಳು, ಕರಡಿ ಮಜಲು, ಸಮಾಳ ವಾದ್ಯ ತಂಡಗಳು, ಸೊನ್ನದ ಹಲಗೆ ವಾದಕ ವೆಂಕಪ್ಪ ಸೊನ್ನ ಅವರ ಹಲಗೆ ಮಜಲು, ಇಳಕಲ್ಲಿನ ನಿಂಗಪ್ಪ ಬೆಳಗಲ್‌ ಅವರ ಜೋಡು ಕುದುರೆಗಳ ಕುಣಿತ ಎಲ್ಲರನ್ನೂ ಆಕರ್ಷಿಸಿದವು.

ಶರಣ ಮಹೋತ್ಸವದ ಮೂರು ದಿನಗಳು ನಿರಂತರ ಅನುಭವ ಮಂಟಪದ ಆವರಣದಲ್ಲಿ ಭಕ್ತರಿಗೆ ಅನ್ನದಾಸೋಹ ನಡೆಯಿತು. ಹುಗ್ಗಿ, ಉದರ ಸಜ್ಜಕ, ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ, ಸಾಂಬಾರು ಜೊತೆಗೆ ಮಿರ್ಚಿ ಭಜಿಯನ್ನು  ಎಲ್ಲರೂ ಸವಿದರು. ಪೊಲೀಸ ಸಿಬ್ಬಂದಿ ಅಹೋರಾತ್ರಿ ಇದ್ದು ಪಲ್ಲಕ್ಕಿ ಮೆರವಣಿಗೆ ಸುಸೂತ್ರವಾಗಿ ನಡೆಯಲು ಸಹಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
3 Comments
  • ನಮ್ಮ ಪ್ರತಿಯೊಂದು ಬಸವ ಪರಂಪರೆಯ ವಿರಕ್ತ ಮಠಗಳಲ್ಲಿ
    ಪ್ರತಿ ವರ್ಷ ಇದೇ ರೀತಿ ವಚನ ಸಾಹಿತ್ಯ ಕಟ್ಟುಗಳ
    ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಸಬೇಕು
    ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏🙏

  • ಒಳ್ಳೆಯ ಕಾರ್ಯಕ್ರಮವಾಗಿದೆ. ಜೈ ಬಸವ

  • ಓಂ ಶ್ರೀ ಗುರು ಬಸವಲಿಂಗಾಯನಮಃ
    ಇದೆ ರೀತಿ ಎಲ್ಲ ಬಸವ ತತ್ವ ವಿರಕ್ತ ಮಠಗಳಲ್ಲಿ ವಚನಗಳ ಸಾಹಿತ್ಯ ಅಡ್ಡ ಪಲ್ಲಕ್ಕಿ ಉತ್ಸವಗಳು, ವಚನೋತ್ಸವಗಳು ನಡೆಯುವಂತಾಗಲಿ.
    ಶರಣು ಶರಣಾರ್ಥಿಗಳು 🙏🙏🙏 💐💐

Leave a Reply

Your email address will not be published. Required fields are marked *