ನಾಟಕ: ನಿಮ್ಮ ಕನಸಿಗೂ ಒಮ್ಮೆ ಓಡಿ

ಶಾಂಡಿಲ್ಯ (ಹರ್ಷ)
ಶಾಂಡಿಲ್ಯ (ಹರ್ಷ)

ಗಣೇಶ ಹಬ್ಬಕ್ಕೆ ವಿಶೇಷ ವಾಸ್ತವದ ಕಥೆ. ಇದು ಯಾವುದೇ ಧರ್ಮ- ಜಾತಿಯ ಬಗ್ಗೆ ಅಲ್ಲ, ವಿಗ್ರಹಾರಾಧನೆಯ ಬಗ್ಗೆಯೂ ಅಲ್ಲ. ಗಣೇಶ ಕೂರಿಸುವವರು ಮತ್ತು ಅದಕ್ಕೆ ಸಹಾಯ ಮಾಡುವವರು ಈ ನಾಟಕವನ್ನು ದಯವಿಟ್ಟು ಓದಲೇಬೇಕು, ಎನ್ನುತ್ತಾರೆ ಚಲನಚಿತ್ರ ನಿರ್ದೇಶಕ ಶಾಂಡಿಲ್ಯ

SCENE 1 — ಬೆಳಗ್ಗೆ | ಗ್ರಾಮದ ರಸ್ತೆ
ಮೂರು ನಿರುದ್ಯೋಗಿ ಯುವಕರು ಟೀ ಅಂಗಡಿ ಮುಂದೆ ಕುಳಿತಿದ್ದಾರೆ.

ರವಿ:
“ಬೆಳಗ್ಗೆ ಎದ್ದು ಕೆಲಸ ಹುಡುಕೋಣ ಅಂತ ಪ್ರತಿದಿನ ಅಂದುಕೊಳ್ತೀವಿ… ಆದರೆ ಕೆಲಸವೇ ನಮ್ಮನ್ನ ಹುಡುಕಿಕೊಂಡು ಬರ್ತಿಲ್ಲ!”

ಮಂಜು:
“ಕೆಲಸ ಸಿಗಲ್ಲ ಅಂತ ಬೇಜಾರು ಮಾಡ್ಕೊಳ್ತೀವಿ… ಸಿಕ್ಕ ಕೆಲಸಕ್ಕೆ ಸಂಬಳ ಕಡಿಮೆ ಅಂತ ಬೇಜಾರು ಮಾಡ್ಕೊಳ್ತೀವಿ!”

ಶಿವು:
“ನಮ್ಮ ಜೀವನದಲ್ಲಿ ಒಂದೇ ಒಂದು permanent thing ಇದೆ… ಅದು ನಿರುದ್ಯೋಗ!”

ಮೂವರು ನಗುತ್ತಾರೆ..
ಅಷ್ಟರಲ್ಲಿ ಪೂಜಾರಿ ಬರುತ್ತಾನೆ.

ಪೂಜಾರಿ:
“ಮಕ್ಕಳೇ… ಒಂದು ಸಹಾಯ ಮಾಡ್ತೀರಾ?”

ರವಿ:
“ಹೇಳಿ ಸ್ವಾಮಿ.”

ಪೂಜಾರಿ:
“ಈ ಊರಲ್ಲಿ ಗಣೇಶನನ್ನು ಕೂರಿಸಬೇಕು. ನನಗೆ ನಿಮ್ಮ ಸಹಾಯ ಬೇಕು. ನಾನು ಒಬ್ಬನೇ ಏನೂ ಮಾಡಲು ಆಗಲ್ಲ.”

ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ.

ಶಿವು:
“ಕೆಲಸ ಇಲ್ಲ ಅಂತ ಕುಳಿತಿದ್ದೀವಿ… ಗಣೇಶನ ಕೆಲಸ ಆದರೂ ಮಾಡೋಣ!”

—————————————— CUT TO ————————————

SCENE 2 — ಗಣೇಶ ಚಂದಾ | Montage

ಹಿನ್ನೆಲೆಯಲ್ಲಿ energetic music.

ಮೂವರು ಬೆಳಗ್ಗೆ ಬೇಗ ಎದ್ದು ಹೊರಡುತ್ತಾರೆ.

ಮನೆ ಮನೆಗೆ ಹೋಗಿ ಚಂದಾ ಕೇಳುತ್ತಾರೆ.

ಅಂಗಡಿಗಳಿಗೆ ಹೋಗುತ್ತಾರೆ.

ಬಿಸಿಲಿನಲ್ಲಿ ಓಡುತ್ತಾರೆ.

ಕೆಲವರು ₹100 ಕೊಡುತ್ತಾರೆ.

ಕೆಲವರು ₹500 ಕೊಡುತ್ತಾರೆ.

ಕೆಲವರು ಬೈದು ಕಳುಹಿಸುತ್ತಾರೆ.

ಮೂವರು ಮತ್ತೆ ನಗುತ್ತಾ ಮುಂದಕ್ಕೆ ಹೋಗುತ್ತಾರೆ.

ಒಬ್ಬ ವೃದ್ಧ ₹50 ಕೊಡುತ್ತಾನೆ.

ವೃದ್ಧ:
“ನನ್ನಿಂದ ಇಷ್ಟೇ ಆಗುತ್ತೆ ಮಕ್ಕಳೇ.”

ರವಿ:
“ನೀವು ಕೊಟ್ಟಿದ್ದು 50 ರೂಪಾಯಿ ಅಲ್ಲ ಅಜ್ಜ… ನಿಮ್ಮ ನಂಬಿಕೆ.”

ಮೂವರು ಹಣ ಸಂಗ್ರಹಿಸುತ್ತಾರೆ.ಗಣೇಶ ಮೂರ್ತಿ ಬರುತ್ತದೆ.

ಅವರು ಮಂಟಪ ಕಟ್ಟುತ್ತಾರೆ. ಲೈಟಿಂಗ್ ಮಾಡುತ್ತಾರೆ. ಗಣೇಶನನ್ನು ಕೂರಿಸುತ್ತಾರೆ.

—————————————— CUT TO ————————————

SCENE 3 — ಹಬ್ಬದ ನಂತರ

ಹಬ್ಬ ಮುಗಿದಿದೆ.

ಪೂಜಾರಿ ಖುಷಿಯಿಂದ ಮೂವರನ್ನು ನೋಡುತ್ತಾನೆ.

ಪೂಜಾರಿ:
“ನಿಮ್ಮ ಮೂವರು ಇಲ್ಲದಿದ್ದರೆ ಈ ಗಣೇಶ ಹಬ್ಬ ಇಷ್ಟು ಚೆನ್ನಾಗಿ ಆಗ್ತಿರಲಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ.”

ಮೂವರು ನಗುತ್ತಾರೆ.

ಪೂಜಾರಿ ಅಲ್ಲಿಂದ ಹೊರಡುತ್ತಾನೆ.

CUT TO:

ಒಂದು ಹೊಸ TVS ಗಾಡಿ ಮುಂದೆ ಪೂಜಾರಿ ನಿಂತಿದ್ದಾನೆ.

ಅವನು ಗಾಡಿಗೆ ಪೂಜೆ ಮಾಡಿಸುತ್ತಾನೆ.

ಮೂವರು ದೂರದಿಂದ ನೋಡುತ್ತಾರೆ.

ಮಂಜು:
“ನೋಡು… ನಮ್ಮ ಗಣೇಶನ ದುಡ್ಡಿನಿಂದ ಬಂದ ಗಾಡಿ!”

ರವಿ:
“ಅವನ ಜೀವನ ಮುಂದೆ ಹೋಗಿದೆ… ನಾವು ಮಾತ್ರ ಮತ್ತೆ ಅದೇ ಜಾಗದಲ್ಲಿ.”

—————————————— CUT TO ————————————

SCENE 4 — ಶೇಖರ್ ಅವರ ಮಾತು

ಇದನ್ನೆಲ್ಲಾ ನೋಡುತ್ತಿದ್ದ ಶೇಖರ್ ಮೂವರನ್ನು ಕರೆದುಕೊಳ್ಳುತ್ತಾನೆ.

ಶೇಖರ್:
“ನೀವು ಮೂರು ಜನ ಒಂದು ತಿಂಗಳು ಕಷ್ಟಪಟ್ಟಿರಿ. ಬೆಳಗ್ಗಿನಿಂದ ರಾತ್ರಿ ತನಕ ಓಡಾಡಿದಿರಿ. ಆದರೆ ಕೊನೆಗೆ ನಿಮಗೆ ಏನು ಸಿಕ್ಕಿತು?”

ಮೂವರು ಮೌನ.

ಶೇಖರ್:
“ನಿಮ್ಮ ಶ್ರಮದಿಂದ ಒಬ್ಬನಿಗೆ ಗಾಡಿ ಬಂತು. ನಿಮ್ಮ ಬದುಕಿಗೆ ಏನು ಬಂತು?”

ಶಿವು:
“ನಾವು ಏನು ಮಾಡಬೇಕು ಅಣ್ಣ?”

ಶೇಖರ್:
“ನೀವು ಮೂರು ಜನ ಸೇರಿ ಒಂದು ಸ್ವಂತ ಉದ್ಯೋಗ ಶುರುಮಾಡಿ.”

ರವಿ:
“ಅದಕ್ಕೆ ದುಡ್ಡು ಬೇಕಲ್ಲ ಅಣ್ಣ.”

ಶೇಖರ್:
“ಗಣೇಶ ಹಬ್ಬ ಮಾಡಲು ನಿಮ್ಮತ್ರ ದುಡ್ಡಿತ್ತಾ?”

ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ.

ಶೇಖರ್:
“ದುಡ್ಡಿಲ್ಲದಿದ್ದರೂ ಗಣೇಶನಿಗಾಗಿ ಕೇಳೋಕೆ ನಿಮಗೆ ನಾಚಿಕೆ ಬರಲಿಲ್ಲ. ನಿಮ್ಮ ಬದುಕಿಗಾಗಿ ಕೇಳೋಕೆ ಯಾಕೆ ನಾಚಿಕೆ?”

ಮೂವರು ಮೌನ.

ಶೇಖರ್:
“ಗಣೇಶನ ಹಬ್ಬಕ್ಕೆ ನೀವು ಹೇಗೆ ಮನೆ ಮನೆಗೆ ಹೋಗಿ ಸಹಾಯ ಕೇಳಿದಿರೋ… ಅದೇ ರೀತಿ ಹೋಗಿ…ಆದ್ರೆ ಈ ಸಲ… ದೇವರಿಗಾಗಿ ಅಲ್ಲ. ನಿಮ್ಮ ಭವಿಷ್ಯಕ್ಕಾಗಿ.”

—————————————— CUT TO ————————————

SCENE 5 — ಉದ್ಯೋಗಕ್ಕಾಗಿ ಸಹಾಯ

ಮೂವರು ಮನೆ ಮನೆಗೆ ಹೋಗುತ್ತಾರೆ.

ರವಿ:
“ಅಣ್ಣ… ನಾವು ಒಂದು ಸಣ್ಣ ಉದ್ಯೋಗ ಶುರುಮಾಡಬೇಕು. ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ.”

ಒಬ್ಬ ವ್ಯಕ್ತಿ:

ವ್ಯಕ್ತಿ:
“ನನ್ನಿಂದ ಆಗಲ್ಲ. ನನಗೂ ತುಂಬಾ ಖರ್ಚು ಇದೆ.”

ಮತ್ತೊಂದು ಮನೆ.

ಮಂಜು:
“ಅಕ್ಕ… ₹500 ಆದರೂ ಸಹಾಯ ಮಾಡಿ.”

ಮಹಿಳೆ:
“ಕ್ಷಮಿಸಿ, ನಮಗೂ ಕಷ್ಟ ಇದೆ.”

ಮತ್ತೊಂದು ಅಂಗಡಿ.

ಶಿವು:
“ಸಾರ್, ನಾವು ಮೂವರು ಸೇರಿ ಕೆಲಸ ಶುರುಮಾಡ್ತೀವಿ. ಸ್ವಲ್ಪ ಸಹಾಯ…”

ಅಂಗಡಿಯವನು:
“ನೀವೇ ಮೊದಲು ಕೆಲಸ ಮಾಡಿ ದುಡ್ಡು ಸಂಪಾದಿಸಿ. ಯಾಕೆ ಬೇರೆವರನ್ನು ಕೇಳ್ತೀರಾ?”

ಮೂವರು ನಿಧಾನವಾಗಿ ಹಿಂದಿರುಗುತ್ತಾರೆ.

ಒಂದು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ.

ಮಂಜು:
“ಗಣೇಶನಿಗೆ ಕೇಳಿದಾಗ ಎಲ್ಲರೂ ಕೊಟ್ಟರು…”

ರವಿ:
“ನಮ್ಮ ಬದುಕಿಗೆ ಕೇಳಿದಾಗ ಯಾರೂ ಕೊಡಲಿಲ್ಲ.”

ಶಿವು:
“ಬಹುಶಃ… ನಾವು ಕೇಳೋದನ್ನೇ ತಪ್ಪಾಗಿ ಕಲಿತಿದ್ದೀವಿ.”

ಮೂವರು ಎದ್ದು ಹೊರಡುತ್ತಾರೆ.

—————————————— CUT TO ————————————

SCENE 6 — ಒಂದು ವರ್ಷ ನಂತರ

“ಒಂದು ವರ್ಷ ಕಳೆದಿದೆ…”
ಅದೇ ಊರು.

ಮತ್ತೆ ಗಣೇಶ ಹಬ್ಬದ ಸಮಯ.

ಅದೇ ಪೂಜಾರಿ ಬರುತ್ತಾನೆ.

ಅದೇ ಮೂರು ಯುವಕರು ಅವನನ್ನು ನೋಡುತ್ತಾರೆ.

ಪೂಜಾರಿ:
“ಮಕ್ಕಳೇ… ಈ ವರ್ಷವೂ ಗಣೇಶನನ್ನು ಕೂರಿಸಬೇಕು. ನಿಮ್ಮ ಸಹಾಯ ಬೇಕು.”

ಮೂವರು ಒಬ್ಬರ ಮುಖ ಒಬ್ಬರು ನೋಡುತ್ತಾರೆ.

ಸ್ವಲ್ಪ ಮೌನ.

ರವಿ:
“ಸರಿ ಸ್ವಾಮಿ… ಮಾಡೋಣ.”

ಮತ್ತೆ ಮೂವರು ಬೆಳಗ್ಗಿನಿಂದ ಚಂದಾ ವಸೂಲಿ ಮಾಡುತ್ತಾರೆ.

ಅದೇ ಓಡಾಟ.

ಅದೇ ಬಿಸಿಲು.

ಅದೇ ಬೆವರು.

ಅದೇ ಗಣೇಶ ಹಬ್ಬ.

ಹಬ್ಬ ಮುಗಿಯುತ್ತದೆ.

—————————————— CUT TO ————————————

SCENE 7 – ಪೂಜಾರಿ ಈ ಬಾರಿ ಹೊಸ Activa ಮೇಲೆ ಕುಳಿತು ಹೊರಡುತ್ತಾನೆ.

ಮೂವರು ಅವನನ್ನು ನೋಡುತ್ತಾ ನಿಂತಿರುತ್ತಾರೆ.

ಕೆಲವು ಕ್ಷಣ ಮೌನ.

ಶಿವು ನಿಧಾನವಾಗಿ:

ಶಿವು:
“ಕಳೆದ ವರ್ಷ TVS… ಈ ವರ್ಷ Activa…”

ಮಂಜು:
“ಮುಂದಿನ ವರ್ಷ?”

ರವಿ ಅವನತ್ತ ನೋಡುತ್ತಾನೆ.

ಸ್ವಲ್ಪ ನಗು.

ರವಿ:
“ಮುಂದಿನ ವರ್ಷ… ನಾವು ನಮ್ಮದೇ ಗಾಡಿಯಲ್ಲಿ ಇರಬೇಕು.”

ಮೂವರು ಒಬ್ಬರನ್ನೊಬ್ಬರು ನೋಡುತ್ತಾರೆ.

ಶಿವು:
“ಆದ್ರೆ ಈ ಸಲ ಗಣೇಶನಿಗಾಗಿ ಓಡಾಡೋದು ಸಾಕು…”

ರವಿ:
“ಮುಂದಿನ ಸಲ ನಮ್ಮ ಬದುಕಿಗಾಗಿ ಓಡೋಣ.”

ಮೂವರು ನಿಧಾನವಾಗಿ ಮುಂದೆ ನಡೆಯುತ್ತಾರೆ.

—————————————— CUT TO ————————————

SCENE 8 – FINAL SHOT

ಅವರು ಹಾದುಹೋಗುವಾಗ, ಗೋಡೆಯ ಮೇಲೆ ಒಂದು ಪೋಸ್ಟರ್:

“ಸ್ವಂತ ಉದ್ಯೋಗ — ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ.”

ಮೂವರು ಪೋಸ್ಟರ್‌ನ್ನು ನೋಡುತ್ತಾರೆ.

ರವಿ ನಿಂತು ಹೇಳುತ್ತಾನೆ:

“ದುಡ್ಡು ಇಲ್ಲ ಅಂತ ನಿಲ್ಲಬಾರದು…
ದುಡ್ಡು ಬರೋ ದಾರಿ ಹುಡುಕಬೇಕು.”

FADE OUT.
TITLE CARD:

“ಇತರರ ಕನಸನ್ನು ನನಸು ಮಾಡುವಷ್ಟು ಶ್ರಮ ನಿಮಗಿದ್ದರೆ…ನಿಮ್ಮ ಕನಸಿಗಾಗಿ ಒಮ್ಮೆ ಓಡಿ.”

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಓಂ ಶ್ರೀ ಗುರು ಬಸವ ಲಿಂಗಾಯ ನಮಃ🙏🙏
    ಕಥೆ ಚಿಕ್ಕದಾದರೂ ಇದರ ಅರ್ಥ ಈಗಿನ ಯುವ ಪೀಳಿಗೆಗೆ
    ತುಂಬಾ ಅವಶ್ಯವಿದೇ

    ವಚನ
    ತನುವ ಕರಗಿಸಿ ಹರಿವ ಮನವ ನಿಲಿಸಿ
    ಅಂಗ ಗುಣವ ಅಳಿದು ಲಿಂಗ ಗುಣವ ನಿಲಿಸಿ
    ಭಾವವಳಿದು ಬಯಕೆ ಸವೆದು ಮಹಾದೇವನಾದ ಶರಣನ
    ಜಗದ ಮಾನವರೆತ್ತ ಬಲ್ಲರು ಅಪ್ಪಣ್ಣ ಪ್ರೀಯ ತನ್ನ ಬಸವಣ್ಣ

    (ವಚನಕಾರ್ತಿ)
    ಶರಣೆ ಹಡಪದ ಲಿಂಗಮ್ಮ
    ಶರಣು ಶರಣಾರ್ಥಿಗಳು🙏🙏

  • ಒಳ್ಳೆಯ ನೀತಿಯ ಬಗ್ಗೆ ಮಾಹಿತಿ ನೀಡಿದರಿ. ಈ ಜಗತ್ತು ದೇವರಿಗೆ ಚಂದಾ ಕೊಡುವ ಮನುಷ್ಯನಿಗೆ ಬಾಹ್ಯ ಮಾಡುವುದಿಲ್ಲ. ಜೈ ಬಸವ

Leave a Reply

Your email address will not be published. Required fields are marked *

ಚಿತ್ರ ನಿರ್ದೇಶಕರು, ಬೆಂಗಳೂರು (9606300369, kanncinm@gmail.com)