ಶಹಾಪುರ
ಕರ್ನಾಟಕದ ಲಿಂಗಾಯತರು ಲಿಂಗಾಯತರಾಗಿ ಉಳಿಯಲು ಸಾಧ್ಯವೇ ಎಂಬುದು ಇಂದಿನ ದಿನಮಾನಗಳಲ್ಲಿ ಅಸಾಧ್ಯವಾದ ಮಾತೇನೋ ಅನಿಸುತ್ತದೆ. ಲಿಂಗಾಯತವು ಒಂದು ತತ್ವ, ಅದಕ್ಕೆ ಅದರದ್ದೇ ಆದ ಸಿದ್ಧಾಂತವಿದೆ, ಆಚರಣೆಯಿದೆ, ನಂಬಿಕೆಯಿದೆ ಎಂಬುದು ಗೌಣವಾಗುತ್ತಾ ಇದೆ ಎಂದರೆ ಅತಿಶಯೋಕ್ತಿಯ ಮಾತಾಗಲಿಕ್ಕಿಲ್ಲ.
ಲಿಂಗಾಯತ ತತ್ವ ಕೊಟ್ಟವರು ಅಣ್ಣ ಬಸವಣ್ಣನವರು. “ಮಾನವಕುಲಂ ತಾನೊಂದೇ ವಲಂ” ಎಂದು ಕವಿ ಪಂಪನು ಹೇಳಿದ್ದಾನೆ. ಮುಂದೆ “ಮಾನವ ಧರ್ಮಕ್ಕೆ ಜಯವಾಗಲಿ” ಎಂದು ಅಂದ ಮಹಾತ್ಮರೂ ಆಗಿಹೋಗಿದ್ದಾರೆ. ಆದರೆ ಈ ಇಬ್ಬರ ಮಾತುಗಳನ್ನೂ ಮೀರಿಸಿ, “ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವವನೇ ಕುಲಜ” ಎಂದು ಸಾರಿದವರು ಬಸವಣ್ಣ ಮತ್ತು ಆತನ ಶರಣರು.
ಬಸವಣ್ಣನವರನ್ನು ನಂದಿ, ಎತ್ತನ್ನಾಗಿ ಸೃಷ್ಟಿಸಿದ ಒಂದು ವರ್ಗ, ಆತನನ್ನು ಮನುಷ್ಯನನ್ನಾಗಿ ನೋಡಲೇ ಇಲ್ಲ. “ಚಾತುರ್ವರ್ಣ್ಯಂ ಮಯಾ ಸೃಷ್ಟಂ” ಎಂದ ಕೃಷ್ಣ ಪರಮಾತ್ಮನ ಮಾತು ನಂಬಿದವರು ಒಂದು ವರ್ಗವಾದರೆ, ಅಸಮಾನತೆಯು ಮನುಷ್ಯನ ಸೃಷ್ಟಿಯೇ ಹೊರತು ದೇವರದ್ದಲ್ಲ; ಮನುಷ್ಯರೆಲ್ಲರೂ ಸಮಾನರು ಎಂದು ಸಾರಿದವರು ಶರಣರು.
“ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು… ಆನು ಹಾರುವನೆಂದರೆ ಕೂಡಲಸಂಗಮದೇವ ನಗುವನಯ್ಯಾ” ಎಂದ ಬಸವಣ್ಣನವರ ಮಾತನ್ನು ನಾವು ಒಪ್ಪುವುದು ಯಾವಾಗ?
ಆರ್.ಎಸ್.ಎಸ್.ನವರೇ ಆಗಿದ್ದ ಎ.ಕೆ. ಸುಬ್ಬಯ್ಯನವರು ಅದರ ಸಿದ್ಧಾಂತದ ಬಗ್ಗೆ ಒಂದು ಮಾತು ಹೇಳಿದ್ದರು. “ಯೂಸ್ ಆಂಡ್ ಥ್ರೋ” (ಉಪಯೋಗಿಸಿಕೊಂಡು ಎಸೆಯಿರಿ) ಎಂಬುದು ಅವರ ತತ್ವ ಎಂದು. ಆದರೆ ಇದೇ ತತ್ವವನ್ನು ಲಿಂಗಾಯತದ ಬಲಾಢ್ಯರು ಬಸವಣ್ಣನವರ ವಿಷಯದಲ್ಲಿ ಉಪಯೋಗಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಯಾಕೆಂದರೆ ಇವರಿಗೆ ಬಸವಣ್ಣ ಇರಲಿ (ಗುಡಿಯಲ್ಲಿ), ಆತನ ತತ್ವದ ಆಚರಣೆ ಯಾಕೆ? ಎನ್ನುವ ಹಂತಕ್ಕೆ ಲಿಂಗಾಯತರು ತಲುಪಿದ್ದಾರೆ ಎನಿಸುತ್ತದೆ.
ಗುರು, ಲಿಂಗ, ಜಂಗಮ ಇವು ತತ್ವಗಳೇ ಹೊರತು ಬರೀ ವ್ಯಕ್ತಿಗಳಲ್ಲ, ವ್ಯಕ್ತಿತ್ವಗಳು. ಶರಣರ ವಿಚಾರದಲ್ಲಿ ಅರಿವು ಗುರುವಾಗಿದೆ, ಆಚರಣೆ ಲಿಂಗವಾಗಬೇಕಾಗಿದೆ, ಜಂಗಮ ಸಮಾಜಮುಖಿಯಾಗಬೇಕಾಗಿದೆ. ಆದರೆ ಇಂದು ಇವು ತಿರುಗು-ಮುರುಗಾಗಿರುವುದು ವಿಷಾದದ ಸಂಗತಿಯಾಗಿದೆ.
ವ್ಯಕ್ತಿ, ಪಕ್ಷ ಮತ್ತು ದೇಶ—ಇವುಗಳಲ್ಲಿ ಇಂದು ದೇಶಕ್ಕಿಂತ ಪಕ್ಷ, ಪಕ್ಷಕ್ಕಿಂತ ವ್ಯಕ್ತಿಪ್ರಧಾನತೆಯೇ ಹೆಚ್ಚಾಗಿದೆ. ಸಿದ್ಧಾಂತಕ್ಕಿಂತ ಅಧಿಕಾರವೇ ಮುಖ್ಯವಾಗಿದೆ.
“ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ ನಾಣುಗೆಡಲೇಕೆ,
ಕೂಡಲಸಂಗಮದೇವನುಳ್ಳನ್ನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ?”
ತನ್ನ ತತ್ವಕ್ಕೆ ಕುಂದು ಬಂದಾಗ ಅಧಿಕಾರವನ್ನು ತಲೆಗೆ ಹತ್ತಿದ ಧೂಳನ್ನು ಜಾಡಿಸಿದಂತೆ, ತಲೆಯ ಮೇಲಿನ ಕಿರೀಟವನ್ನು ಮತ್ತು ಖಡ್ಗವನ್ನು ಕೆಳಗಿಟ್ಟು ಹೊರನಡೆದ ಬಸವಣ್ಣನ ವಾರಸುದಾರರು ನಾವು ಎಂಬುದನ್ನು ಲಿಂಗಾಯತರೆನ್ನುವವರೆಲ್ಲರೂ ಆಲೋಚಿಸಬೇಕಾಗಿದೆ. ಯಾರೋ ಒಬ್ಬ ಕಾವಿಧಾರಿ ಹೇಳಿದ ಮಾತಿಗೆ ಮರುಳಾಗಿ ನಮ್ಮ ತತ್ವವನ್ನು ನಾವು ಮರೆಯಬೇಕೇ ಎಂಬುದನ್ನು ನಾವು ಯೋಚಿಸಬೇಕಾಗಿದೆ.
ನಾವು ಆರ್ಥಿಕವಾಗಿ ದಿವಾಳಿಯಾದರೆ ಸುಧಾರಿಸಿಕೊಳ್ಳಬಹುದು, ಆದರೆ ನಮ್ಮ ಬೌದ್ಧಿಕತೆ ದಿವಾಳಿಯಾದರೆ ಗತಿ ದುರ್ಗತಿಯಾಗುತ್ತದೆ; ಅದಕ್ಕೆ ನಾವೇ ಜವಾಬ್ದಾರರಾಗಬೇಕಾಗುತ್ತದೆ. ಬಸವಣ್ಣನವರು ಲಿಂಗಾಯತರಿಗೆ ದುಡಿಮೆಯನ್ನು ನಂಬಿಸಿದವರು, ‘ಕಾಯಕವೇ ಕೈಲಾಸ’ವೆಂದು ನಂಬಿಸಿದವರು. ದುಡಿಮೆಯಲ್ಲೇ ದೇವರನ್ನು ಕಂಡವರು ನಾವು, ದೇವರಲ್ಲೇ ದುಡಿಮೆಯನ್ನು ಕಾಣುವವರಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

ಉತ್ತಮ ಲೇಖನ , ಶರಣಾರ್ಥಿ.
ಉತ್ತಮವಾದ ಲೇಖನ ಎಲ್ಲರು ಓದಿ ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಜೈ,ಬಸವ