ಕಕ್ಕೇರಾ:
ಅಯ್ಯಪ್ಪ ಸ್ವಾಮಿ ಮಾಲಾ, ಹನುಮಾ ಮಾಲಾ ಮಾದರಿಯಲ್ಲಿ ಬಸವಮಾಲಾ ಕಾರ್ಯಕ್ರವನ್ನು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಬಸವ ಸೇವಾ ಸಮಿತಿಯ ಯುವಕರ ಗುಂಪೊಂದು 1996-97 ರಿಂದ ಅಂದರೆ ಸುಮಾರು ೩೦-೩೫ ವರ್ಷಗಳಿಂದ ಆಚರಿಸುತ್ತಾ ಬರುತ್ತಿದೆ.
ಪ್ರತಿ ಶ್ರಾವಣ ಮಾಸದ ಮೊದಲ ದಿನ ಬಿಳಿ ಶಲ್ಯೆ, ಬಿಳಿ ಅಂಗಿ, ಬಿಳಿ ಲುಂಗಿ ಧರಿಸಿ ಇಷ್ಟಲಿಂಗ ಪೂಜೆಯ ಮೂಲಕ ಮಾಲಾಧಾರಿಗಳಾಗುತ್ತಾರೆ.

ಮೊದಮೊದಲು ಮಾಲಾಧಾರಣೆಯ ನಂತರ ಯುವಕರು ಅಯ್ಯಪ್ಪ ಸ್ವಾಮಿ ಮಾಲಧಾರಿಗಳ ರೀತಿಯಲ್ಲಿಯೇ ಮಹಿಳೆಯರ ಕೈ ಊಟ ಮಾಡಿತ್ತಿದ್ದಿಲ್ಲ. ಕಾಯಕ ಮಾಡುತ್ತಿದ್ದಿಲ್ಲ, ಗುಂಪಾಗಿ ಕೂಡುವುದು, ಅಡಿಗೆ ಮಾಡಿಕೊಂಡು ಊಟ ಮಾಡುವುದು ಹೀಗೆ ಸಾಗಿತ್ತು.
ಸ್ಥಳೀಯ ಬಸವನಿಷ್ಟ, ವೈಚಾರಿಕ ಸ್ವಾಮಿಗಳಾದ ಪೂಜ್ಯ ಮಲ್ಲಿಕಾರ್ಜುನಸ್ವಾಮಿ, ಜಾಲಿಬೆಂಚಿ ಅವರಿಗೆ ಈ ಆಚರಣೆ ಮಾದರಿ ಸರಿಕಾಣದೇ ಯುವಕರಿಗೆ ತಿಳಿಹೇಳಿ ತಾವು ಎಲ್ಲರೊಂದಿಗೆ ಜೊತೆಗೂಡಿ ಕಾಯಕ ಮಾಡಿಕೊಂಡಿರುವುದು, ಮನೆಯಲ್ಲಿಯೂ ಸಹ ಪ್ರಸಾದ ತೆಗೆದುಕೊಳ್ಳುವುದು, ಕಡ್ಡಾಯ ಲಿಂಗಪೂಜೆ ಹೀಗೆ ಬದಲಾಯಿಸಿದರು.
೩೦ ರಿಂದ ಕೆಲವೊಮ್ಮೆ ೪೦-೪೫ ದಿನಗಳ ನಂತರ ಸುಮಾರು 80 ಕಿ.ಮೀ ಅಂತರದ ಕೂಡಲಸಂಗಮಕ್ಕೆ ಪಾದಯಾತ್ರೆ ಹೋಗಿ ಐಕ್ಯಮಂಟಪದಲ್ಲಿ ಪೂಜೆ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ಇದೇ ಕಕ್ಕೇರಾ ಪಟ್ಟಣದಲ್ಲಿ ಪುರಾತನ ಸಾಣೇ ಹಿಡಿದ ಕಪ್ಪುಕಲ್ಲಿನ ನಯವಾದ ಕಂಬಗಳ ಡೋಹರ ಕಕ್ಕಯ್ಯನ ಹೆಸರಿನ ದೇವಸ್ಥಾನ ಒಂದಿದೆ. ಇದು ಶಿವಶರಣ ಡೋಹರ ಕಕ್ಕಯ್ಯನ ಹುಟ್ಟೂರು ಎಂಬುದು ಅಲ್ಲಿನ ಸ್ಥಳಪುರಾಣ. ಇಲ್ಲಿ ಪ್ರತಿ ಹುಣ್ಣುಮೆ ದಿನ ಸ್ಥಳೀಯ ಶರಣ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ವಚನಚಿಂತನ ಕಾರ್ಯಕ್ರಮ ನಡೆಯುತ್ತದೆ. ಸುಮಾರು ೨೦೦ ಕಾರ್ಯಕ್ರಮಗಳಾಗಿವೆ. ಇನ್ನೂ ಮುಂದುವರೆದಿದೆ.

ಈ ಊರಿಗೆ ಶಹಾಪುರದ ಶರಣ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಅವರು ಬಂದು ಇಲ್ಲಿನ ಶರಣಜೀವಿ ಮಲ್ಲಿಕಾರ್ಜುನ ಸ್ವಾಮಿಗಳ ಮುಖಾಂತರ “ಮನೆ-ಮನ ಬಸವ ಬೆಳಕು” ಹೆಸರಿನಲ್ಲಿ ಶರಣ ಚಿಂತನ ಕಾರ್ಯಕ್ರಮ ಪ್ರಾರಂಭಿಸಿದರು. ಪ್ರತಿ ಸೋಮವಾರ ಯಾರದಾದರೂ ಒಬ್ಬರ ಮನೆಯಲ್ಲಿ ವಚನಚಿಂತನ ನಡೆಯುತ್ತಿತ್ತು. ಯಾರೂ ಇಲ್ಲದಾಗ ಸ್ವಾಮಿಗಳ ಮನೆ ಖಾಯಂ ಚಿಂತನ, ದಾಸೋಹದ ಮನೆ ಯಾಗಿರುತ್ತದೆ. ಇಲ್ಲಿಗೆ ೨೧೦ ಕಾರ್ಯಕ್ರಮಗಳಾಗಿವೆ.
ಸ್ವಾಮಿಗಳು ಸ್ವಂತ ಖರ್ಚಿನಲ್ಲಿ ಆಸಕ್ತರಿಗೆ ಜಾತಿಭೇದವಿಲ್ಲದೇ ಲಿಂಗಧಾರಣೆ ಮಾಡಿಸುವುದಲ್ಲದೇ ಅನೇಕರಿಗೆ ಬೆಳ್ಳಿಯ ಕರಡಿಗೆಯನ್ನು ಉಚಿತವಾಗಿ ಕೊಟ್ಟಿರುವರು.
ಊರಿನ ಬಹುತೇಕ ಹಾಲುಮತದ ಸಮಾಜದವರು, ವಾಲ್ಮೀಕಿ ಸಮಾಜದವರು ಇವರಿಂದ ಲಿಂಗಧಾರಣೆ ಮಾಡಿಕೊಂಡಿದ್ದಾರೆ. ಬಸವಮಾಲಾಧಾರಿಗಳು ಕಡ್ಡಾಯ ಲಿಂಗಧಾರಣೆ ಮಾಡಿಕೊಂಡೇ ಮಾಲೆ ಧರಿಸುವರು. ಸುತ್ತಮುತ್ತಲಿನ ಹಳ್ಳಿಯ ಜನರು ಸಹ ಸೇರಿ ಬಸವಮಾಲಾ ಧರಿಸಿ ೨೫-೩೦ ಜನರಿಂದ ಕೂಡಲಸಂಗಮ ಪಾದಯಾತ್ರೆ ಪ್ರಾರಂಭವಾಗಿ ಅದು ೭೦-೮೦ ಜನರು ಭಾಗವಹಿಸುವರು. ಒಂದು ವರ್ಷ ೧೪೦ ಜನ ಮಾಲೆಧರಿಸಿ ಹೋಗಿಬಂದ ಉದಾಹರಣೆಯಿದೆ.
ಒಟ್ಟಾರೆ ಕಕ್ಕೇರಿ ಗ್ರಾಮ ೧೨ನೇ ಶತಮಾನದ ಶರಣ ಡೋಹರ ಕಕ್ಕಯ್ಯನ ತತ್ವದಲ್ಲಿ ಮುನ್ನೆಡೆದುದು ತುಂಬಾ ಸಂತೋಷದಾಯಕವಾಗಿದೆ.
ಕಕ್ಕೇರಾ ಪಟ್ಟಣದ ಬಸವ ಸೇವಾ ಸಮಿತಿ ವತಿಯಿಂದ ಪ್ರತಿ ಭಾನುವಾರ ಸಂಜೆ 8ರಿಂದ 9 ಗಂಟೆಯವರೆಗೆ ಇಷ್ಟಲಿಂಗ ಪೂಜೆ, ಬಸವಾದಿ ಶರಣರ ವಚನಗಳ ಪಠಣ, ಸತ್ಸಂಗ ಕಾರ್ಯಕ್ರಮ ಮಾಡಲಾಗುವುದು.
ಕಾರ್ಯಕ್ರಮದ ರೂವಾರಿ ಶರಣಜೀವಿ ಮಲ್ಲಿಕಾರ್ಜುನ ಸ್ವಾಮಿ (ಜಾಲಿಬೆಂಚಿ ) ನೇತೃತ್ವದಲ್ಲಿ ಜರುಗುತ್ತಿರುವುದು ವಿಶೇಷ.

ಮಲ್ಲಿಕಾರ್ಜುನ ಸ್ವಾಮಿ ಬಸವತತ್ವದ ಪ್ರಚಾರಕರು, ಸಾವಿರಾರು ವಚನಗಳನ್ನು ಸರಳವಾಗಿ ಹೇಳುವ ಶರಣಜೀವ ಅವರಾಗಿದ್ದಾರೆ.
