ಕನ್ನೇರಿ ಸ್ವಾಮೀಜಿಗೆ ಛೀ ಮಾರಿ ಹಾಕಿದ ಕಲಬುರಗಿ ಚಲೋ ಸಮಾವೇಶ

ಕಲಬುರಗಿ :

ಬಸವಭಕ್ತರು, ಭೀಮಭಕ್ತರು, ಪ್ರಗತಿಪರರು, ಸ್ವಾಮೀಜಿಗಳು ಸೇರಿಕೊಂಡು ಬುದ್ದ, ಬಸವ, ಅಂಬೇಡ್ಕರ್ ಚಿಂತನೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಸೆ.‌27ರಂದು ಕಲಬುರಗಿಯಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶ ವಿರೋಧಿಸಿ ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯ ಬಹಿರಂಗ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಗತಿಪರ ಸಮಾಜದ ಪರಿವರ್ತನೆಗೆ ಎಲ್ಲರೂ ಒಗ್ಗಟ್ಟಾಗಿ ಪ್ರಶ್ನೆ ಮಾಡಬೇಕು ಎಂದರು.

ಸಮಿತಿ ಗೌರವಾಧ್ಯಕ್ಷ ಪ್ರೊ.‌ ಆರ್.ಕೆ. ಹುಡಗಿ ಮಾತನಾಡಿ, ಬಸವಾದಿ ಶರಣರ ತತ್ವದರ್ಶನ ನಿರ್ನಾಮ ಮಾಡಲು ಈ ದೇಶದ ಫ್ಯಾಸಿಸ್ಟರು (ಸನಾತನವಾದಿಗಳು) ಬೆನ್ನು ಹತ್ತಿದ್ದು, ಇದರ ವಿರುದ್ಧ ಟೊಂಕಕಟ್ಟಿ ನಿಲ್ಲಬೇಕು ಎಂದರು.

ಶರಣತತ್ವ ಚಿಂತಕಿ ಡಾ.‌ ಮೀನಾಕ್ಷಿ ಬಾಳಿ ಮಾತನಾಡಿ, ವೈದಿಕರಿಗೆ ಧಿಕ್ಕಾರ ಕೂಗುವುದು, ಅವರನ್ನು ಹಿಮ್ಮೆಟ್ಟಿಸಿ ದಾರಿ ತಪ್ಪಿದ ನಮ್ಮವರಿಗೆ ದಾರಿ ತೋರಿಸುವುದು ನಮ್ಮ ಸಂಘಟನೆ ಗುರಿಯಾಗಿದ್ದು, ನಿಮ್ಮ ಜೊತೆ ಭಾಗವತ್ ಇರಬಹುದು. ನಮ್ಮ ಜೊತೆ ಬಸವ ಇದ್ದಾನೆ. ಶರಣರನ್ನು ಹತ್ಯೆ ಮಾಡಿದ ಶನಿಸಂತಾನ ಈಗ ಬಸವಾದಿ ಶರಣರ ವಚನಗಳನ್ನು ಹಾಳು ಮಾಡಲು ಹೊರಟಿದ್ದಾರೆ.  ಸಹನೆಗೂ ಒಂದು ಮಿತಿ ಇದೆ ಎಂದರು.

ಸಮಾವೇಶ ಮಾಡುವವರಿಗೆ ಇಲ್ಲಿನ ಬಡತನ, ನಿರುದ್ಯೋಗ, ಬರಗಾಲ, ಶಿಕ್ಷಣದ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲ. ಕಲ್ಯಾಣದಲ್ಲಿ 2028ರಲ್ಲಿ ಬಸವ ಭಾರತ ಸಂಸ್ಕೃತಿ ಉತ್ಸವದ ಕುತಂತ್ರ ನಡೆಸುತ್ತಿದ್ದು, ಸ್ವಾಮೀಜಿಗಳು ಬಲೆ ಬೀಳಬಾರದು.‌ ಡಿ.ಎಸ್. ಎಸ್, ಬಿ.ಎಸ್.ಎಸ್. ಸೇರಿ ದೇಶವ್ಯಾಪಿ ಹೋರಾಟ ಮಾಡಬೇಕು ಎಂದು ತಿಳಿಸಿದರು.

ಆಳಂದ ತೋಂಟದಾರ್ಯ ಮಠದ ಕೋರಣೇಶ್ವರ ಸ್ವಾಮೀಜಿ, ಡಾ. ಚನ್ನಬಸವಾನಂದ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಮಹಾರಾಷ್ಟ್ರದ ಅವಿನಾಶ ಬೋಸಿಕರ್, ಮರೆಪ್ಪ ಹಳ್ಳಿ, ಲಚ್ಚಪ್ಪ ಜಮಾದಾರ, ಶಿವಶರಣಪ್ಪ ಹುಗ್ಗೆ ಪಾಟೀಲ, ಪಿ‌ ರುದ್ರಪ್ಪ, ಗಣೇಶ ಚಿನ್ನಾಕಾರ, ಶಿವಲಿಂಗಪ್ಪ ಗೌಳಿ, ಲಚ್ಚಪ್ಪ ಜಮಾದಾರ, ಅವಿನಾಶ ಬೋಸಗಿಕರ್ ಮಾತನಾಡಿ ಸಮಾವೇಶವನ್ನು ಖಂಡಿಸಿದರು.

ಬಸವಕಲ್ಯಾಣ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಅಕ್ಕ ಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ಶಿವಮೊಗ್ಗದ ಶ್ರೀಗುರು ಮಲ್ಲೇಶ್ವರ ದಾಸೋಹ ಅಕ್ಕಮಹಾದೇವಿ ತಾಯಿ, ಮುಗಳಿ ಮಹಾನಂದ ತಾಯಿ, ರವೀಂದ್ರ ಶಾಬಾದಿ, ಅಪ್ಪಾರಾವ ಅಕ್ಕೋಣಿ, ಆರ್.ಜಿ. ಶೆಟಗಾರ, ಅಶೋಕ ಘೂಳಿ, ಗಿರೆಪ್ಪಗೌಡ ಬಾಣತಿಹಾಳ, ಭೀಮಣ್ಣ ಬೋನ್ಹಾಳ, ನಾಗನಾಥ ಸುರೋಳೆ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಇತರರು ವೇದಿಕೆಯಲ್ಲಿದ್ದರು.

ಅಶೋಕ ಘೂಳಿ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ವಡ್ಡನಕೇರಿ ನಿರೂಪಿಸಿದರು. ರವೀಂದ್ರ ಶಾಬಾದಿ ವಂದಿಸಿದರು.

ಬಸವರಾಜ ಕಟ್ಟಿ, ಪಿಡ್ಡಪ್ಪ ಜಾಲಗಾರ, ಮಲ್ಲಿಕಾರ್ಜುನ ಪಾಲಾಮೂರ, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಬಸವ ಕಲ್ಲಾ, ನೀಲಕಂಠರಾವ ಅವಂಟಿ, ನಳಿನಿ ಮಹಾಗಾಂವಕರ, ಶಿವಶರಣಪ್ಪ ದೇಗಾಂವ, ರವಿ ಪಾಪಡೆ ಇತರರು ಇದ್ದರು.

ಜಿಲ್ಲೆಯ ಎಲ್ಲ ತಾಲ್ಲೂಕು ಸೇರಿದಂತೆ ರಾಯಚೂರು, ಬೀದರ, ಯಾದಗಿರಿ, ಅಕ್ಕಲಕೋಟ, ನಾಂದೇಡ ಮುಂತಾದ ಕಡೆಯಿಂದ ಸಹಸ್ರಾರು ಜನ ಬಸವಾಭಿಮಾನಿಗಳು, ಸಂವಿಧಾನ ಸಂರಕ್ಷಕರು, ಕಾಯಕ ಜೀವಿಗಳು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮೊದಲು ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಸ‌ಸ್ರಾರು ಜನತೆಯ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಬಸವಾದಿ ಶರಣರಿಗೆ ಹಿಂದೂಗಳೊಂದಿಗೆ ಸೇರಿಸಲು ಬಿಡುವುದಿಲ್ಲ ಎಂಬ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಮಾವೇಶ ಸ್ವೀಕರಿಸಿದ ನಿರ್ಣಯಗಳು:

1. ಬಸವಾದಿ ಶಿವಶರಣರ ಹೆಸರುಗಳನ್ನು ಹಿಂದುತ್ವದೊಂದಿಗೆ ಸೇರಿಸಬಾರದು.

2. ಶರಣರ ಸಿದ್ಧಾಂತಗಳನ್ನು ತಿರುಚುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

3. ಶರಣದ್ರೋಹಿಗಳನ್ನು ಕೂಡಲೇ ನಿಗ್ರಹಿಸಬೇಕು. ಕನ್ನೇರಿ ಸ್ವಾಮೀಜಿಯನ್ನು ಕರ್ನಾಟಕದಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು.

4. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಬಸವತತ್ವ ಸಂರಕ್ಷಿಸಬೇಕು.

5. ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡ ಜ್ಞಾನೇಶಕುಮಾರ ಅವರನ್ನು ಪದಚ್ಯುತಿಗೊಳಿಸಬೇಕು. ಆಯೋಗದ ವಿಕೃತ ನೌಕರಶಾಹಿಯನ್ನು ಉಚ್ಚಾಟಿಸಿ ಚುನಾವಣಾ ಆಯೋಗದ ಮೇಲೆ ವಿಶ್ವಾಸ ಮೂಡಿಸಬೇಕು.

ನಿರ್ಣಯಗಳನ್ನು ಚಿಂತಕಿ ಕೆ. ನೀಲಾ ಮಂಡಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment

Leave a Reply

Your email address will not be published. Required fields are marked *