ಪಂ. ಪುಟ್ಟರಾಜ ಕವಿ ಗವಾಯಿಗಳವರು ಸಾಹಿತ್ಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು
ಗದಗ:
ಡಾ. ಪುಟ್ಟರಾಜ ಕವಿ ಗವಾಯಿಗಳು ಅಂಧ ಅನಾಥರಿಗೆ ಆಶ್ರಯದಾತರು. ತ್ರಿಭಾಷಾ ಕವಿಗಳಾಗಿ ಅನೇಕ ಪುರಾಣ, ಚರಿತ್ರೆ, ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಪಂಡಿತ ಪುಟ್ಟರಾಜ ಕವಿ, ಗವಾಯಿಗಳು ನೀಡಿದ ಕೊಡುಗೆ ಅಪಾರವಾದದ್ದು ಎಂದು ಡಾ. ತೋಂಟದ ಸಿದ್ದರಾಮ ಮಾಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೮೧೬ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪುಟ್ಟರಾಜ ಕವಿ ಗವಾಯಿಗಳು ವಾರ್ಧಕ್ಯ ಷಟ್ಪದಿಯಲ್ಲಿ ಬರೆದಿರುವ ಕೃತಿಗಳು ಅಮೂಲ್ಯವಾದ ಕೃತಿಗಳಾಗಿವೆ. ನಿರಂತರ ೧೨ ವರ್ಷಗಳವರೆಗೆ ಹಿಂದಿ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ರಚಿಸಿರುವ ಬಸವ ಪುರಾಣ ಇಡೀ ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಆಗಿದೆ.

ಅಂಧ ಅನಾಥ ಮಕ್ಕಳಿಗೆ ಬೆಳಕಾದವರು. ಭಿಕ್ಷೆ ಬೇಡಿ ಜೀವನ ಸಾಗುತಿಸುತ್ತಿದ್ದ ಅನೇಕರ ಕೈಗೆ ತಂಬೂರಿ ಕೊಟ್ಟು ಸಂಗೀತ ಸಾಧನೆ ಮಾಡಲು ಹಚ್ಚಿದ ಮಹಾತ್ಮರು. ತ್ರಿಕಾಲ ಪೂಜಾ ನಿಷ್ಠರಾಗಿ ಲಿಂಗಾಂಗ ಸಾಮರಸ್ಯ ಮಾಡುತ್ತ ಪರಶಿವನನ್ನು ಆರಾಧಿಸುತ್ತಾ ತಾವೇ ಶಿವಯೋಗಿಯಾದವರು.
ಭಕ್ತರ ಕಷ್ಟ ದುಃಖ ದುಮ್ಮಾನಗಳನ್ನು ದೂರ ಮಾಡಿದ ಮಹಾತ್ಮರು ಎಂದು ಮಾತನಾಡಿದರು.
ಪಂಡಿತ ಕಾಶೀನಾಥ ಶಾಸ್ತ್ರಿಗಳು ಅಡ್ನೂರ ಅವರು ಮಾತನಾಡಿ, ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಬದುಕು ಸಾಧನೆಗಳನ್ನು ವಿವರಿಸುತ್ತಾ, ಪುಟ್ಟರಾಜ ಕವಿ ಗವಾಯಿಗಳು ಈ ನಾಡು ಕಂಡ ನಡೆದಾಡುವ ದೇವರು. ಭಕ್ತರ ಆರಾಧ್ಯ ದೈವರಾಗಿ ಪೂಜಿಸಲ್ಪಡುವ ಮಹಾತ್ಮರು. ಅವರು ಸಾಹಿತ್ಯ, ಸಂಗೀತ, ನಾಟಕ, ಕಲೆ, ಮುಂತಾದ ಕ್ಷೇತ್ರಗಳ ಸಾಧಕರಿಗೆ ಶಕ್ತಿಯಾದವರು.

ಸಾವಿರಾರು ಪ್ರತಿಭೆಗಳು ಈ ಕ್ಷೇತ್ರದಲ್ಲಿ ಸಾಧನೆಗೈಯಲು ಮಾಡಿದ ಆಶೀರ್ವಾದ ಅಪಾರವಾದದ್ದು ಎಂದರು.
ಆರಂಭದಲ್ಲಿ ಸುಪ್ರಸಿದ್ಧ ರೆಡಿಯಾಲಾಜಿಸ್ಟ ಡಾ. ಅದ್ವೈತ ಶಿವಪುರ ಅವರಿಂದ ಕೊಳಲು ವಾದನ ಜರುಗಿತು. ಸುಪ್ರಸಿದ್ಧ ಸಂಗೀತ ಸಾಧಕರಾದ ವೀರೇಶ ಕಿತ್ತೂರ ಅವರಿಂದ ಸ್ವರ ನಮನ ಜರುಗಿತು. ಖ್ಯಾತ ವಾಯಲಿನ್ ವಾದಕರಾದ ಡಾ. ನಾರಾಯಣ ಹಿರೇಕೊಳಚಿ ಮತ್ತು ಸುಪ್ರಸಿದ್ಧ ತಬಲಾ ವಾದಕರಾದ ಡಾ. ಹನುಮಂತ ಪಡಗಾನೂರ ಅವರಿಂದ ವಾಯಲಿನ್ ಮತ್ತು ತಬಲಾ ಜುಗಲ್ ಬಂಧಿ ಭಕ್ತರನ್ನು ತಲೆದೂಗಿಸುವಂತೆ ಮಾಡಿತು.
ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಪಂಚಾಕ್ಷರಿ ಗವಾಯಿಗಳು ಅಣ್ಣಿಗೇರಿ ಇವರು ಹಾರ್ಮೋನಿಯಂನಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಅವರಿಗೆ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ ನಿಮಿತ್ತ ಅವರಿಗೆ ಪೂಜ್ಯರು ಗೌರವ ಸನ್ಮಾನ ಮಾಡಿದರು.
ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನ ಸಂಗೀತ, ಧರ್ಮಗ್ರಂಥ ಪಠಣ ಮಹೇಶ ಪುರಾಣಿಮಠ, ವಚನಚಿಂತನ ಮಹಾಂತೇಶ ಪುರಾಣಿಮಠ ಮಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಣೆ ಮಾಡಿದರು. ದಾಸೋಹ ಸೇವೆಯನ್ನು ಬನ್ನಿಕೊಪ್ಪದ ಬಸವಣ್ಣೆಮ್ಮ ಶಿವಪ್ಪ ನಡಮನಿ ಹಾಗೂ ದಯಾನಂದ ಬಿರಾದಾರ ಸಿಂದಗಿ ವಹಿಸಿದ್ದರು. ಶಿವಪ್ಪ ಯರಾಸಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕೊನೆಯಲ್ಲಿ ವಚನಮಂಗಲ ಜರುಗಿತು. ಪ್ರಭು ಗಂಜಾಳ, ಆದೇಶ ಅಂಗಡಿ, ಸೋಮು ಪುರಾಣಿಕ, ಎಸ್.ಐ. ಪಟ್ಟೇದ, ಶ್ರೀಮತಿ ಸುನಂದ ಪಿಳ್ಳೆ ಮುಂತಾದವರು ಉಪಸ್ಥಿತರಿದ್ದರು.
