ಅನುಭವ ಮಂಟಪದ ಅಧ್ಯಾತ್ಮಿಕ ನಿರ್ವಹಣೆ ಲಿಂಗಾಯತರಿಗೆ ನೀಡಲಿ

ರವೀಂದ್ರ ಕೋಳಕೂರ
ರವೀಂದ್ರ ಕೋಳಕೂರ

ಬಸವಕಲ್ಯಾಣ:

ಕಾಶಿ, ಅಯೋಧ್ಯೆ ಮಾದರಿಯಲ್ಲೇ ಬಸವಕಲ್ಯಾಣದಲ್ಲಿ ₹ 742 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪದ ಧಾರ್ಮಿಕ ನಿರ್ವಹಣೆಯನ್ನು ಲಿಂಗಾಯತ ಅನುಯಾಯಿಗಳಿಗೆ ಹಸ್ತಾಂತರವಾಗಬೇಕು.

ಭಾರತದಲ್ಲಿ ಅಧಿಕಾರ ನಡೆಸಿರುವ ಅನೇಕ ಸರ್ಕಾರಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನೂರಾರು ಕೋಟಿ ಸಾರ್ವಜನಿಕ ಹಣ ವಿನಿಯೋಗಿಸಿ ಭೌತಿಕ ಮೂಲಸೌಕರ್ಯ ನಿರ್ಮಿಸಿ ಕೊಟ್ಟು, ದಿನನಿತ್ಯದ ಪೂಜೆ ಹಾಗೂ ಆಧ್ಯಾತ್ಮಿಕ ಉಸ್ತುವಾರಿಯನ್ನು ಆಯಾ ಧರ್ಮದ ಅನುಯಾಯಿಗಳಿಗೆ ನೀಡುತ್ತಾ ಬಂದಿದೆ.

ಅದೇ ಮಾದರಿಯಲ್ಲಿ, ಬಸವಕಲ್ಯಾಣದ ನೂತನ ಅನುಭವ ಮಂಟಪದ ಧಾರ್ಮಿಕ ಚುಕ್ಕಾಣಿಯೂ ಲಿಂಗಾಯತ ಧರ್ಮಿಯರು, ಅನುಯಾಯಿಗಳ ಆದೀನಕ್ಕೇ ಸಿಗಬೇಕು ಎಂಬ ಕೂಗು ತೀವ್ರವಾಗುತ್ತಿದೆ.

ಇದಕ್ಕೆ ಕೆಲವು ಮಾದರಿಗಳು

ರಾಷ್ಟ್ರೀಯ ಕಾರಿಡಾರ್‌ಗಳು:

₹ 800 ಕೋಟಿಯ ಕಾಶಿ ವಿಶ್ವನಾಥ ಧಾಮ, ₹ 85೦ ಕೋಟಿಯ ಮಹಾಕಾಲ ಲೋಕ, ನೂರಾರು ಕೋಟಿಯ ಕೇದಾರನಾಥ-ಬದರಿನಾಥ ಧಾಮ ಹಾಗೂ ಅಯೋಧ್ಯಾ ನಗರದ ಬೃಹತ್ ಮೂಲ ಸೌಕರ್ಯಗಳನ್ನು ಸರ್ಕಾರವೇ ಹಣ ವಿನಿಯೋಗಿಸಿ ನಿರ್ಮಿಸಿದೆ. ಆದರೆ, ಅಲ್ಲಿನ ಧಾರ್ಮಿಕ ನೀತಿಗಳು ಮತ್ತು ವಿಧಿವಿಧಾನಗಳು ಆಯಾ ಧರ್ಮದ ಅರ್ಚಕರು ಮತ್ತು ಟ್ರಸ್ಟ್‌ಗಳ ಕೈಯಲ್ಲೇ ಸ್ವತಂತ್ರವಾಗಿ ನಡೆಯುತ್ತಿವೆ.

ಅಲ್ಪಸಂಖ್ಯಾತ ಸಂಸ್ಥೆಗಳು:

ಸರ್ಕಾರದ ಅನುದಾನ ಪಡೆದ ಬೀದರನ ಶ್ರೀ ನಾನಕ್ ಝೀರಾ ಸಾಹಿಬ್ ಗುರುದ್ವಾರದ ಪೂಜೆ ಮತ್ತು ಲಂಗರ್ ವ್ಯವಸ್ಥೆಯನ್ನು ಸಿಖ್ ಪ್ರಬಂಧಕ ಕಮಿಟಿಯೇ ನಡೆಸುತ್ತದೆ.

ಸರ್ಕಾರದ ಅನುದಾನ ಪಡೆದ ಬೆಂಗಳೂರಿನ ಹಜ್ ಭವನ ಮತ್ತು ವಕ್ಫ್ ಸಂಸ್ಥೆಗಳ ಧಾರ್ಮಿಕ ಶಿಬಿರಗಳನ್ನು ಮುಸ್ಲಿಂ ಉಲೇಮಾಗಳೇ ಮುನ್ನಡೆಸುತ್ತಾರೆ.

ನೂತನ ಅನುಭವ ಮಂಟಪ

ಪ್ರಸ್ತುತ ಬಸವಕಲ್ಯಾಣದಲ್ಲಿ ಸರ್ಕಾರದ ವತಿಯಿಂದ ಭಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪವು ಕೇವಲ ಪ್ರವಾಸಿ ಪ್ರದರ್ಶನ ಕೇಂದ್ರವಾಗಬಾರದು. ಅಲ್ಲಿ ದಿನನಿತ್ಯ ಮೊಳಗಬೇಕಾದ ವಚನಗಳ ಭಜನೆ, ಇಷ್ಟಲಿಂಗಪೂಜೆ, ಶೂನ್ಯ ಸಿಂಹಾಸನದ ಸಾತ್ತ್ವಿಕ ಸ್ಮರಣೆ ಹಾಗೂ ಕಾಯಕ ಮತ್ತು ದಾಸೋಹದ ಸಂಸ್ಕಾರವನ್ನು ಕೇವಲ ಸರ್ಕಾರಿ ಅಧಿಕಾರಿಗಳಿಂದ ನಡೆಸಲು ಸಾಧ್ಯವಿಲ್ಲ. ಅದನ್ನು ಧಾರ್ಮಿಕ ವಿಧಿವಿಧಾನ ಮಾಡಲಿಕ್ಕೆ ಲಿಂಗಾಯತರ ಆಧೀನದಲ್ಲಿ ಕೊಟ್ಟರೆ ಮಾತ್ರ ಬಸವಾದಿ ಶರಣರ ಆಶಯ ಅನುಷ್ಠಾನ ಮಾಡಲು ಸಾಧ್ಯ. ಸಾರ್ವಜನಿಕ ಹಣದ ಸದ್ಬಳಕೆಯ ಜೊತೆಗೆ, ಧಾರ್ಮಿಕ ಹಕ್ಕುಗಳು ಭಕ್ತರ ಕೈಯಲ್ಲೇ ಸುರಕ್ಷಿತವಾಗಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ಜಯವಾಗಿದೆ.

ಸರ್ಕಾರವು ನೂತನ ಅನುಭವ ಮಂಟಪದ ನಿರ್ಮಾಣದ ಕೆಲಸ ಮುಗಿದ ತಕ್ಷಣ, ಅದರ ಆಂತರಿಕ ಧಾರ್ಮಿಕ ನಿರ್ವಹಣೆಯನ್ನು ಲಿಂಗಾಯತ ಸಮಾಜದ ಪೂಜ್ಯ ಮಠಾಧೀಶರಿಗೆ, ಬಸವತತ್ವದ ಸಂಘಟನೆಗಳಿಗೆ, ಬಸವ ಅನುಯಾಯಿಗಳಿಗೆ ಒಪ್ಪಿಸುವುದೇ ನೈಜ ಬಸವ ಧರ್ಮದ ಆಶಯವಾಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *