ವೈಚಾರಿಕತೆ ಹೆಸರಿನಲ್ಲಿ ಪ್ರತ್ಯೇಕ ಧರ್ಮದ ಷಡ್ಯಂತ್ರ ನಡೆಯುತ್ತಿದೆ: ವಿಜಯೇಂದ್ರ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಲ್ಲರೆ ರಾಜಕೀಯದಿಂದ ಧರ್ಮ ಒಡೆಯುವ ಕೆಲಸ ಆಗುತ್ತಿದೆ: ಶಂಕರ ಬಿದರಿ

ಬೆಂಗಳೂರು

ನಗರದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಆಯೋಜಿಸಿರುವ ‘ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ’ವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬಿ.ವೈ.ವಿಜಯೇಂದ್ರ ಶನಿವಾರ ಉದ್ಘಾಟಿಸಿದರು

“ಪ್ರಗತಿಪರತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ಧರ್ಮದ ಮೂಲ ಆಶಯಗಳನ್ನು ವಿಕೃತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರಹಾರ ಒಳಗಿನವರಿಂದಲೇ ನಡೆಯುತ್ತಿರುವುದು ವಿಪರ್ಯಾಸ. ಇಂತಹ ವಿಚಾರಗಳ ಕುರಿತು ಸಾರ್ವಜನಿಕ ವೇದಿಕೆಗಳಲ್ಲಷ್ಟೇ ಅಲ್ಲದೆ, ಸಮಾಜದೊಳಗೂ ಮುಕ್ತವಾಗಿ ಚರ್ಚೆ ನಡೆಯಬೇಕು,” ಎಂದು ಅವರು ಅಭಿಪ್ರಾಯಪಟ್ಟರು.

ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಾವಿರಾರು ಮಠಗಳು ಇಂದು ಆರ್ಥಿಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿವೆ. ಹೀಗಾಗಿ ಸಮಾಜದ ಎಲ್ಲ ಮುಖಂಡರು ಅಗತ್ಯವಾದ ಬೆಂಬಲ ಮತ್ತು ಶಕ್ತಿ ನೀಡಬೇಕು ಎಂದು ವಿಜಯೇಂದ್ರ ಹೇಳಿದರು.

‘ಇಂದು ಚಿಲ್ಲರೆ ರಾಜಕೀಯದಿಂದ ಧರ್ಮ ಒಡೆಯುವ ಕೆಲಸ ಆಗುತ್ತಿದೆ. ಸಮಾಜದಿಂದ ಕಂಬಾರ, ಕುಂಬಾರ, ಹೆಳವರು ದೂರವಾಗುತ್ತಿದ್ದಾರೆ,’ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

‘ಅಣ್ಣ ಶಿವಾಚಾರ್ಯ ಮಠದಲ್ಲಿದ್ದರೆ, ತಮ್ಮ ವಿರಕ್ತ ಮಠದಲ್ಲಿರುತ್ತಾನೆ ಎಂದ ಮೇಲೆ ಭೇದ ಏಕೆ? ಸಮಾಜಕ್ಕೆ ಅಂಟಿಕೊಂಡಿರುವ ರೋಗವನ್ನು ದೂರ ಮಾಡಬೇಕು. ಬಸವಣ್ಣ ಹಾಗೂ ರೇಣುಕಾಚಾರ್ಯರಿಗೆ ಸಮಾನ ಗೌರವ ನೀಡಬೇಕು. ವೀರಶೈವ ಆಚಾರ ಹಾಗೂ ಬಸವಣ್ಣನ ವಿಚಾರ ಸೇರಿದರೆ ಶಕ್ತಿ ಸಿಗುತ್ತದೆ.

ಸ್ವಾಮೀಜಿಗಳಿಗೆ ಬಹಳ ಗೌರವ ಇದೆ.‌ ಒಂದು ದೊಡ್ಡ ಮಠದ ವಿಚಾರದಲ್ಲಿ ಬಹಳ ಬೇಸರವಾಗಿದೆ. ಪೀಠಾಧ್ಯಕ್ಷರಾದವರು ಪೂರ್ವಾಶ್ರಮ ಮರೆತು ಮಠ ನಡೆಸಬೇಕು. ಕಟ್ಟುಪಾಡುಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಹೋಗಿ, ಬೇರೆ ಅರ್ಹರಿಗೆ ಅವಕಾಶ ನೀಡಿ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಾತನಾಡಿ, ‘ವೀರಶೈವ ಲಿಂಗಾಯತರು ಒಂದೇ. ಬಸವೇಶ್ವರರ ವಚನಗಳನ್ನು ಅಳವಡಿಸಿಕೊಳ್ಳುತ್ತೇವೆ, ಹಾಗೆಯೇ ರೇಣುಕಾಚಾರ್ಯರನ್ನೂ ಪೂಜಿಸುತ್ತೇವೆ. ಎಲ್ಲರೂ ಇಷ್ಟಲಿಂಗ ಪೂಜೆಯನ್ನೇ ಮಾಡುವಾಗ ಭಿನ್ನ ಹೇಗಾಗುತ್ತದೆ? ರಾಜಕೀಯ ಹಿತಾಸಕ್ತಿಗಾಗಿ ಸಮಾಜ ಒಡೆಯುವುದನ್ನು ಒಪ್ಪುವುದಿಲ್ಲ,’ ಎಂದು ಹೇಳಿದರು

ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಿಂದಗಿಯ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎಡೆಯೂರಿನ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿಯ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *