ದಾವಣಗೆರೆ:
ಪ್ರಯಾಗ ರಾಜ್ ನ ಕುಂಭಮೇಳದಲ್ಲಿ ಮುಳುಗಿ ಬಂದವರ ಜೀವನ ಈಗ ಹೇಗಿದೆ? ಹಳ್ಳಿ ಹಳ್ಳಿಗಳಿಂದ ಜನ ಹೋಗಿ ಮುಳುಗಿ ಬಂದರು, ಅವರ ಪಾಪ ಹೋಗಿದೆಯೇ ಎಂದು ದಾವಣಗೆರೆ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆ.ಜಿ. ಶಾಂತರಾಜು ಅವರು ಪ್ರಶ್ನೆ ಮಾಡಿದರು.
ಅವರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಕಕ್ಕರಗೊಳ್ಳ ವಿದ್ಯಾರ್ಥಿ ನಿಲಯದಲ್ಲಿ ನಡೆದ ಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ಪೂಜಾರಿ, ಪುರೋಹಿತರು ನಮ್ಮನ್ನು ತಮ್ಮ ಆಧೀನದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ, ಅವರ ಕಪಿಮುಷ್ಠಿಯಲ್ಲಿ ಸಿಲುಕದೆ ಜಾಗೃತಿ ಹೊಂದಬೇಕು ಎಂದು ಎಚ್ಚರಿಸಿದರು.
ಅನುಭವ ನೀಡಿದ ಪರಿಷತ್ತು ತಾಲೂಕು ಅಧ್ಯಕ್ಷ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು, ಶರಣರ ಬದುಕು ನಮ್ಮೆಲ್ಲರಿಗೂ ದಾರಿದೀಪ ಹಾಗಾಗಿ ನೀವೆಲ್ಲರೂ ಮುಂದೆ ದೊಡ್ಡವರಾದ ಮೇಲೆ ಉತ್ತಮ ನಾಗರಿಕರಾಗಿ ನಿಮ್ಮ ನಿಮ್ಮ ಕುಟುಂಬವನ್ನು ಸನ್ಮಾರ್ಗದಲ್ಲಿ ಕರೆದೊಯ್ದರೆ ದೇಶಕ್ಕೆ ಉತ್ತಮ ಭವಿಷ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಲಿವೀರ ಕಳ್ಳಿಮನಿ ಅವರು, ಸಮಾನತೆ ಮಾನವೀಯತೆ ಪರವಾಗಿ ಅಸ್ಪೃಶ್ಯತೆ ಮೂಢನಂಬಿಕೆ ವಿರುದ್ಧ ಹೋರಾಡಿದ ಬುದ್ಧ ಬಸವ ಅಂಬೇಡ್ಕರ್ ನಮಗೆ ಸ್ಪೂರ್ತಿ ಆಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ನಿಲಯ ಪಾಲಕರಾದ ಕವಿತಾ ಪೋರಮ್ಮನವರು ಮಾತನಾಡಿ, ದೇಹವನ್ನೇ ದೇವಾಲಯ ಮಾಡಿಕೊಂಡು ಕಾಯಕ ನಿಷ್ಠೆ ಬೆಳೆಸಿಕೊಳ್ಳಲು ಕಿವಿಮಾತು ಹೇಳಿದರು.
ಸ್ವಾಗತ, ನಿರೂಪಣೆ, ದತ್ತಿ ದಾನಿಗಳ ಪರಿಚಯ ಪ್ರಾಸ್ತಾವಿಕ ಹಾಗೂ ಶರಣು ಸಮರ್ಪಣೆಯನ್ನು ಶರಣ ಕಕ್ಕರಗೊಳ್ಳ ನಾಗರಾಜ ನೆರವೇರಿಸಿದರು.
ಇದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಅದರಲ್ಲಿ ಪ್ರಥಮ ಜ್ಯೋತಿ, ದ್ವಿತೀಯ ತನುಷಾ, ತೃತೀಯ ಕಾವೇರಿ, ಸಮಾಧಾನಕರವಾಗಿ ಸಂಗೀತ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಗೌಡ ಗೋಪನಾಳ, ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
