ಭಾಲ್ಕಿ:
ಹಿರೇಮಠ ಸಂಸ್ಥಾನದಲ್ಲಿ ಶಿವಶರಣ ಹೂಗಾರ ಮಾದಣ್ಣನವರ ಜಯಂತಿ ಹಾಗೂ 503ನೆಯ ಮಾಸಿಕ ಶಿವಾನುಭವ ಗೋಷ್ಠಿ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯ ಗುರುಬಸವ ಪಟ್ಟದ್ದೇವರು, 12ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣರಲ್ಲಿ ಹೂಗಾರ ಮಾದಣ್ಣನವರು ಒಬ್ಬ ಶ್ರೇಷ್ಠ ಅನುಭಾವಿ ಶರಣರಾಗಿದ್ದರು. ಅವರು ತಮ್ಮ ಕಾಯಕದಲ್ಲಿ ನಿಷ್ಠೆ ಮತ್ತು ದಾಸೋಹ ಮಾಡುತ್ತ ಜೀವನ ಸಾಗಿಸಿದರು. ಹೂಗಾರ ಮಾದಣ್ಣನವರು ಶರಣರ ಅಂಗಪೂಜೆಗೆ ಹೂ, ಪತ್ರಿ ನೀಡುವ ಕಾಯಕ ಮಾಡುತ್ತ, ಮನಸ್ಸು ಭಾವವು ಹೂವಿನಂತೆ ಮೃದುವಾಗಿ ಮಾಡುತ್ತಿದ್ದರು ಎಂದರು.

ಹೂ ಯಾವ ರೀತಿ ಎಲ್ಲ ಕಡೆ ಸುಗಂಧ ಪಸರಿಸುತ್ತದೆಯೋ ಅದೇ ರೀತಿ ಮಾದಣ್ಣನವರು ತಮ್ಮ ಅನುಭಾವದ ಸುಗಂಧ ಎಲ್ಲ ಕಡೆ ಪಸರಿಸುತ್ತಿದ್ದರು. ಅವರ ಬದುಕು ನಮಗೆ ಮಾದರಿಯಾಗಿದೆ ಎಂದು ಆಶೀರ್ವಚನ ನೀಡಿದರು.
ಪೂಜ್ಯ ಶಿವಬಸವ ಸ್ವಾಮಿಗಳು, ಹೂಗಾರ ಮಾದಣ್ಣನವರ ಸಮಗ್ರ ಜೀವನ ದರ್ಶನವನ್ನು ತಮ್ಮ ಅನುಭಾವದಲ್ಲಿ ತಿಳಿಸಿಕೊಟ್ಟರು.
ಡಾ. ಎಸ್.ಎಂ. ಜನವಾಡಕರ್ ಇದೇ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಹಾಗೂ ಡಾ. ಶಿವಯ್ಯಸ್ವಾಮಿ ಅವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಡಾ.ಎಸ್.ಎನ್. ಜನವಾಡಕರ್ ಅವರು ಭಾಲ್ಕಿಯ ಹಿರೇಮಠ ನಮ್ಮ ನಾಡಿನ ಶ್ರೇಷ್ಠ ಶ್ರೀಮಠವಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಧರ್ಮ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಸಾಧಕರಿಗೆ ಸ್ಫೂರ್ತಿ ನೀಡುವ ಕೇಂದ್ರವಾಗಿದೆ. ನಾವು ಕೀರ್ತಿ ಮತ್ತು ಪ್ರತಿಷ್ಠೆಯ ಹಿಂದೆ ಬೀಳದೆ ಕಾರ್ಯ ಮಾಡುತ್ತ ಇರಬೇಕು. ನಮ್ಮ ಕಾರ್ಯಗಳು ನೋಡಿ ಕೀರ್ತಿ, ಪದವಿ, ಪುರಸ್ಕಾರಗಳು ನಮ್ಮನ್ನು ಹುಡುಕುತ್ತ ಬರುತ್ತವೆ. ಎಂಬ ಅರ್ಥಪೂರ್ಣ ಮಾತುಗಳನ್ನಾಡಿ ಶ್ರೀಮಠದ ಉಭಯ ಪೂಜ್ಯರಿಗೆ ಭಕ್ತಿಯ ಗೌರವ ಸಲ್ಲಿಸಿದರು.
ಡಾ. ಶಿವಯ್ಯಸ್ವಾಮಿ ಅವರು ಭಾಲ್ಕಿ ಹಿರೇಮಠ ನಾಡಿನ ಮಠಗಳಿಗೆ ನಿಜವಾಗಿಯೂ ಹಿರಿಯ ಮಠವಾಗಿದೆ. ಪೂಜ್ಯರ ಬಸವತತ್ವ ಪ್ರಸಾರದ ಕಾಳಜಿ ಅಪರೂಪವಾದದ್ದು. ಪೂಜ್ಯರ ಕಾರ್ಯಗಳಿಂದ ಪ್ರೇರಣೆ ಪಡೆದು ಸೇವೆ ಸಲ್ಲಿಸಿದ ಕಾರಣ ಇಂದೂ ಗೌರವ ಡಾಕ್ಟರೇಟ್ ದೊರೆತಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ನುಡಿದರು.

ಮನೋಹರ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಹೂಗಾರ ಬಸವಗುರುಪೂಜೆ ಮಾಡಿದರು. ಸಂತೋಷ ಮಾಲಗಾರ ವಚನ ಪಠಣ ನಡೆಸಿಕೊಟ್ಟರು.
ನಿವೃತ್ತ ಶಿಕ್ಷಕರಾದ ಸುಭಾಷ ಮೂಲಗೆ, ಚನ್ನಪ್ಪ ಮಲ್ಲಪ್ಪ ಮೇತ್ರೆ, ಬಸವರಾಜ ಮಡಿವಾಳ ಇವರಿಗೆ ಪೂಜ್ಯರು ಸನ್ಮಾನಿಸಿ ಸೇವಾ ನಿವೃತ್ತಿ ಜೀವನ ಆರೋಗ್ಯಪೂರ್ಣವಾಗಿ ಸಾಗಲೆಂದು ಶುಭ ಹಾರೈಸಿದರು.

ಜಗದೀಶ ಹೂಗಾರ, ವಿಶ್ವ ಧನರಾಜ ಹೂಗಾರ ಉಪಸ್ಥಿತರಿದ್ದರು. ಶಿವಕುಮಾರ ಹೂಗಾರ ಶರಣು ಸಮರ್ಪಣೆ ಮಾಡಿದರು. ದೀಪಕ ಠಮಕೆ ನಿರೂಪಿಸಿದರು. ಸಂಗಮೇಶ ಡೋಣಗಾಪೂರೆ, ವಿಜಯಕುಮಾರ ನಿಟ್ಟೂರೆ ಸಂಗೀತ ಸೇವೆ ಸಲ್ಲಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
