ದೇವದಾಸಿ ಸಮುದಾಯದ ಯುವಕ, ಯುವತಿಯರಿಗೆ ಇಷ್ಟಲಿಂಗ ದೀಕ್ಷೆ

ಬಸವ ಮೀಡಿಯಾ
ಬಸವ ಮೀಡಿಯಾ

ಹುಕ್ಕೇರಿ:

ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ಬೆಂಗಳೂರು ವತಿಯಿಂದ ತಾಲೂಕಿನ ದುರದುಂಡೇಶ್ವರ ಸಿದ್ಧಸಂಸ್ಥಾನಮಠದಲ್ಲಿ ದೇವದಾಸಿ ಸಮುದಾಯದ 25 ಯುವಕ ಯುವತಿಯರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.

ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮೀಜಿಯವರು ಇಷ್ಟಲಿಂಗ ದೀಕ್ಷೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು, ಲಿಂಗದೀಕ್ಷೆ ಮಾಡಿ ಮಾತನಾಡುತ್ತ, ವಿಶ್ವಗುರು ಬಸವಣ್ಣನವರು ಕೊಟ್ಟ ಲಿಂಗಾಯತ ಸಮಾನತೆಯ ಧರ್ಮವಾಗಿದೆ.

ದೇವಸ್ಥಾನದ ಒಳಗಡೆ ನಿಮ್ನ ವರ್ಗದವರನ್ನು ಬಿಟ್ಟುಕೊಳ್ಳದೇ ಶೋಷಿಸಿದ್ದ ಆ ಕಾಲದಲ್ಲಿ ಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ದೇಹವನ್ನೇ ದೇಗುಲ ಮಾಡಿದರು. ಮಾನವರನ್ನೇ ನಡೆದಾಡುವ ದೇವಾಲಯವನ್ನಾಗಿ ಮಾರ್ಪಡಿಸಿದರು.

ಅವರು ಕಲಿಸಿದ ಆಚಾರ ನಿಷ್ಟೆಯಲ್ಲಿ ನಡೆದು, ಅವರ ತತ್ವಗಳನ್ನು ಇಂದು ಕಾಯಕ ಸಮುದಾಯದವರು ಅಪ್ಪಿಕೊಳ್ಳಬೇಕು ಎಂದರು.

ಅಧ್ಯಯನ ಕೇಂದ್ರದ ಶ್ರೀಶೈಲ ಜಿ. ಮಸೂತೆ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಗತ್ತಿನ ಎಲ್ಲರೂ ಲಿಂಗಾಯತರೇ ಆದ ಕಾರಣ ಲಿಂಗವಿಲ್ಲದ ಅಂಗ ಇರಲಿಕ್ಕೆ ಸಾಧ್ಯವೇ ಇಲ್ಲ. ಲಿಂಗ ಎಂಬುವುದು ಚೈತನ್ಯ ಅದು ಇರುವುದರಿಂದ ನಾವು ಮನುಷ್ಯರಾಗಿದ್ದೇವೆ. ಆ ಚೈತನ್ಯದ ಅರಿವು ಪಡೆದು ಆಚಾರ, ಅನುಭಾವದೊಂದಿಗೆ ಬದುಕುವನು ಯಾವನೋ ಅವನು ನಿಜ ಲಿಂಗವಂತನಾಗುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಡಸೋಸಿಯ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪೂಜ್ಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಶರಣ ಶ್ರೀಶೈಲ ಜಿ ಮಸೂತೆ ಇವರು ನಮ್ಮ ಭಾಗದ ದೇವದಾಸಿ ಮಕ್ಕಳ ಮತ್ತು ಕಾಯಕ ಸಮುದಾಯದ ಯುವಕ-ಯುವತಿಯರಿಗೆ ಬಸವಧರ್ಮ ಸಂಸ್ಕಾರ ನೀಡಬೇಕೆಂದು ಸಂಕಲ್ಪಿಸಿ; ಅವರಿಗೆ ಲಿಂಗದೀಕ್ಷೆ ಮಾಡಿಸಿರುವುದು ಶ್ಲಾಘನೀಯ ಕಾರ್ಯ.

ಅಲ್ಲದೇ ದೇವದಾಸಿ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ಪಡೆದು ಓದಿಸಲು ಮುಂದೆ ಬಂದಿದ್ದು ಹಾಗೂ ಮೂರು ಜೋಡಿಗಳಿಗೆ ಮದುವೆ ಮಾಡಿಸುವ ಅವರ ಔದಾರ್ಯ ಮೆಚ್ಚುವಂತಹದ್ದು ಎಂದರು.

ಡಾ. ದಯಾನಂದ ನೂಲಿ ಅವರು ವಚನ ಗಾಯನ ಮಾಡಿದರಲ್ಲದೆ, ಇದೇ ಸಂದರ್ಭದಲ್ಲಿ ಶರಣ ಶ್ರೀಶೈಲ ಮಸೂತೆ ಅವರು ದೇವದಾಸಿ ಸಮುದಾಯದ ಮದುವೆಯಾಗುವ ಯುವಕ ಯುವತಿಯರಿಗೆ ಇಷ್ಟಲಿಂಗ ದೀಕ್ಷೆ ಕೊಡಿಸುವುದಲ್ಲದೆ, ಇದೇ ಅಕ್ಟೋಬರ್ 04 ರಂದು ಕಲಬುರ್ಗಿಯಲ್ಲಿ ನಡೆಯುವ ‘ಇವ ನಮ್ಮವ ಬಸವ ಸಂಸ್ಕೃತಿ ಉತ್ಸವ’ ಹಮ್ಮಿಕೊಂಡು ಉಚಿತವಾಗಿ ಮದುವೆ ಮಾಡಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಬಸವಭಕ್ತರು ಆಗಮಿಸಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಸ್ವಾನುಭವ ನೆಲೆ ಸಂಘಟನೆಯ ಶಿವಾನಂದ ಅರಬಾವಿ, ಪದ್ಮಶ್ರೀ ಪುರಸ್ಕೃತ ದೇವದಾಸಿ ವಿಮೋಚನಾ ಸಂಘದ ಡಾ. ಸೀತವ್ವ ದುಂಡಪ್ಪ ಜೋಡಟ್ಟಿ, ಕಾರ್ಯದರ್ಶಿ ರೇಖಾ ಕಾಂಬಳೆ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
2 Comments
  • ಹುಕ್ಕೇರಿಯಲ್ಲಿ ಒಂದು ಮೂಡನಂಬಿಕೆ ಪ್ರಚಾರ ಮಾಡುವ ಶಿವಾಚಾರ್ಯ ಮಠ ಇದೆ, ಕಲ್ಲಿನಲ್ಲಿ ಹುಟ್ಟಿದ ಪುಣ್ಯಾತ್ಮ ಆರಾಧನೆ, ಮೂರ್ಖ ಶಿಖಾಮಣಿ ಪುಸ್ತಕ ಬಿಡುಗಡೆ, ಅಡ್ಡಪಲ್ಲಕ್ಕಿ ಉತ್ಸವ ಮಾಡುತ್ತಾ ಇರುತ್ತಾರೆ.
    ಅವರು ಈ ಜನರಿಗೆ ತಮ್ಮ ವೀರಶೈವ ಧರ್ಮ ಪದ್ಧತಿಯಂತೆ ಅಯ್ಯಾಚಾರ ಮಾಡಿಸಲು ಹೇಳಿ ನೋಡಬೇಕಿತ್ತು

  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ

Leave a Reply

Your email address will not be published. Required fields are marked *