ಬಸವಶಕ್ತಿ: 5,000 ಮತ ತಪ್ಪಿಸಿದರೆ ರಾಜಕಾರಣಿಗಳು ದಾರಿಗೆ ಬರುತ್ತಾರೆ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ ಶಿಬಿರದ ಎರಡನೇ ದಿನದ ವರದಿ

ಧಾರವಾಡ

ಧಾರವಾಡ ಬಸವಶಕ್ತಿ ಶಿಬಿರದ ಮೊದಲನೆಯ ದಿನದ ಚರ್ಚೆಯ ನಂತರ ಎರಡನೆಯ ದಿನದ ಗೋಷ್ಠಿ ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವ ವಿಷಯದಿಂದ ಶುರುವಾಯಿತು.

ಮೊದಲು ಮಾತನಾಡಿದ ಧಾರವಾಡ ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಸಿ ಜಿ ಪಾಟೀಲ್ ಎಲ್ಲರಿಗೂ ಲಿಂಗಾಯತ ಮತಗಳು ಬೇಕು ಆದರೆ ಲಿಂಗಾಯತರು ಅಧಿಕಾರದಲ್ಲಿರುವುದು ಯಾರಿಗೂ ಬೇಡ ಎಂದರು.

30-40 ಕ್ಷೇತ್ರಗಳಲ್ಲಿ 5-10,000 ಮತಗಳನ್ನು ಕ್ರೋಡೀಕರಿಸಿದರೆ ರಾಜಕಾರಣಿಗಳು ಮನೆ ಬಾಗಿಲಿಗೆ ಬರುತ್ತಾರೆ.

ಬೂತ್ ಮಟ್ಟದಲ್ಲಿ ಕೆಲಸ ಮಾಡಲು ತಂಡಗಳು ರಚಿಸಿ, ಅವರಿಗೆ ಸರಿಯಾಗಿ ಕೆಲಸ ಮಾಡಲು ತರಭೇತಿ ನೀಡಬೇಕು. ಆರೆಸ್ಸೆಸ್ ತರಹ ನಾವೂ ಕೇಡರ್ ಗಳನ್ನು ಬೆಳೆಸಬೇಕು.

ನಾವು ರಾಜಕೀಯವಾಗಿ ಬಲಿಷ್ಠರಾದರೆ ನಮ್ಮ ಗುರಿ ಮುಟ್ಟಬಹುದು. ನಮಗೆ ಧರ್ಮ ಮಾನ್ಯತೆ ನೀಡುವುದು ಆರೆಸ್ಸೆಸ್ ಅಲ್ಲ, ಸಂವಿಧಾನ, ಎಂದು ಹೇಳಿದರು.

ಹೊಸಪೇಟೆಯ ಪ್ರಾಂಶುಪಾಲರಾದ ಟಿ ಎಚ್ ಬಸವರಾಜ್ ಚುನಾವಣೆ ಮುಗಿದ ನಂತರವೂ ಬಸವ ಸಂಘಟನೆಗಳು ರಾಜಕೀಯದಲ್ಲಿ ಸಕ್ರಿಯವಾಗಿರಬೇಕು. ಸಂಸತ್ತು, ವಿಧಾನಸಭೆ ಸದಸ್ಯರಿಂದ ಹಿಡಿದು ಎಲ್ಲಾ ಮಟ್ಟದ ರಾಜಕಾರಣಿಗಳ ಜೊತೆ ಒಡನಾಟ ಬೆಳೆಸಿಕೊಳ್ಳಬೇಕು. ಸಹಕಾರ ಸಂಘಗಳಲ್ಲಿರುವ ಸಣ್ಣ ರಾಜಕಾರಣಿಗಳ ಜೊತೆಗೂ ಪರಿಚಯ ಬೆಳೆಸಿಕೊಳ್ಳಬೇಕು, ಎಂದರು.

ಬೂತ್ ಮಟ್ಟದಲ್ಲಿ ಪ್ರಭಾವ ಬೆಳೆಸಿಕೊಳ್ಳಬೇಕಾದರೆ ಎಲ್ಲಾ ಸಮಯಗಳಲ್ಲಿಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ನಾಡು ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ ವಿಷಯದ ಮೇಲೆ ಸ್ನೇಹ ಭೂಸನೂರ ಮಾತನಾಡಿದರು. ಕನ್ನಡ ಶೋಚನೀಯ ಪರಿಸ್ಥಿತಿಯಲ್ಲಿದ್ದಾಗ ಬಸವಾದಿ ಶರಣರು ಅದನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ದೇವವಾಣಿ ಎನಿಸಿಕೊಂಡಿದ್ದ ಸಂಸ್ಕೃತವನ್ನು ತಿರಸ್ಕರಿಸಿ ಜನವಾಣಿ ಕನ್ನಡವನ್ನು ಅದೇ ಎತ್ತರಕ್ಕೆ ಏರಿಸಿದರು. ಆದರೆ ಇಂದು ನಾವು ಕನ್ನಡ ಮಾತನಾಡಲು ಹಿಂಜರಿಯುತ್ತಿರುವ ನತದೃಷ್ಟರು.

ಕನ್ನಡ ನುಡಿ, ನೆಲ, ಜಲಗಳ ಉಳಿವಿಗಾಗಿ ಬಸವ ಸಂಘಟನೆಗಳು ಶ್ರಮಿಸಬೇಕೆಂದು ಕರೆ ನೀಡಿದರು.

ವಿಷಯವನ್ನು ವಿಸ್ತರಿಸಿದ ಹೊಸದುರ್ಗ ಜಾಗತಿಕ ಲಿಂಗಾಯತ ಮಹಾಸಭಾದ ಮಲ್ಲೇಶ ರೇಷ್ಮೆರಾಜ ಬಸವಾದಿ ಶರಣರು ಒಂದು ಸಾವಿರ ವರ್ಷ ಮುಂದೆ ಆಲೋಚಿಸಿದ್ದರೆ ನಾವು ಒಂದು ಸಾವಿರ ವರ್ಷ ಹಿಂದೆ ಬದುಕುತ್ತಿದ್ದೇವೆ.

ಇಂದು ಕನ್ನಡವನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ, ಬಸವ ತತ್ವ ಒಂದೇ ನಾಣ್ಯದ ಎರಡು ಮುಖಗಳು.

ಮನುಸ್ಮೃತಿಯನ್ನು ಸಂವಿಧಾನದಲ್ಲಿ ತುರುಕುವ ಕೆಲಸ ನಡೆಯುತ್ತಿದೆ. ದಲಿತರು ಸಂವಿಧಾನವನ್ನು ಸಂರಕ್ಷಿಸಿಕೊಳ್ಳಲು ಹೋರಾಡುತ್ತಿರುವಂತೆ ಲಿಂಗಾಯತರೂ ಶ್ರಮಿಸಬೇಕು ಎಂದು ಹೇಳಿದರು.

ಅನುಭವ ಮಂಟಪ ಜಾಗೃತಿ ಶಿಬಿರದಲ್ಲಿ ಹಿರಿಯ ವಿದ್ವಾಂಸ ವೀರಣ್ಣ ರಾಜೂರ ಮಾತನಾಡಿದರು.

ವಚನಗಳ ಹಾಗೂ ನಂತರ ಬಂದ ಸಾಹಿತ್ಯದ ಆಧಾರವಿಟ್ಟುಕೊಂಡು 12ನೇ ಶತಮಾನದ ಅನುಭವ ಮಂಟಪದ ಸ್ವರೂಪ, ಉದ್ದೇಶಗಳನ್ನು ವಿವರಿಸಿದರು.

ಏಕದೇವೋಪಾಸನೆ, ಕಾಯಕ, ದಾಸೋಹ ತತ್ವಗಳ ಪ್ರತಿಪಾದನೆ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವೀಯತೆ, ಜನವಾಣಿಗೆ ಮನ್ನಣೆ ಮುಂತಾದ ಮೌಲ್ಯಗಳನ್ನು ಅನುಭವ ಮಂಟಪದಲ್ಲಿ ಪ್ರತಿಪಾದಿಸಲಾಯಿತು. ಅದಕ್ಕೆ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎಂದು ಹೆಸರಾಗಿದೆ, ಎಂದರು.

ಹಗರಿಬೊಮ್ಮನಹಳ್ಳಿಯ ಪ್ರಾಧ್ಯಾಪಕ ಅಕ್ಕಿ ಬಸವೇಶ ಅನುಭವ ಮಂಟಪ ವಿವಿಧ ಹಿನ್ನಲೆಯಿಂದ ಬಂದ ಶರಣರ ಕೇಂದ್ರವಾಗಿತ್ತು, ಅವರ ಸಾಮಾಜಿಕ ಅನುಸಂಧಾನದ ತೊಟ್ಟಿಲಾಗಿತ್ತು, ಎಂದರು.

ಬಸವಕಲ್ಯಾಣದಲ್ಲಿ ಮುಂದಿನ ವರ್ಷ ಲೋಕಾರ್ಪಣೆಯಾಗುತ್ತಿರುವ ನೂತನ ಅನುಭವ ಮಂಟಪದ ಸ್ವರೂಪವನ್ನು ಪರಿಚಯ ಮಾಡಿಕೊಟ್ಟು, ಅದರ ಸಂರಕ್ಷಣೆ ಹಾಗೂ ನಿರ್ವಹಣೆಯನ್ನು ಬಸವಾಭಿಮಾನಿಗಳು ಸಮರ್ಪಕವಾಗಿ ನಿರ್ವಹಿಸಬೇಕೆಂದು ಕರೆ ನೀಡಿದರು.

ಶಿಬಿರದ ಭಾಗವಾಗಿ ನೂತನ ಅನುಭವ ಮಂಟಪದ ಸಂರಕ್ಷಣೆ ಹಾಗೂ ನಿರ್ವಹಣೆ ಕಾರ್ಯಕ್ಕಾಗಿ ಸಿದ್ಧವಾಗುತ್ತಿರುವ ಕಾರ್ಯಪಡೆಗೆ ಶಿಭಿರಾರ್ಥಿಗಳ ನೋಂದಾಯಿಸುವ ಕೆಲಸವೂ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *