ಬೀದರ :
ನ್ಯಾಯಾಂಗ, ಶಾಸಕಾಂಗ, ಕಾರ‍್ಯಾಂಗ ಪ್ರಜಾಪ್ರಭುತ್ವದ ಮೂಲ. ಜೊತೆಗೆ ಪತ್ರಿಕಾರಂಗ ಸಹ ಎಲ್ಲಾ ಆಶಯಗಳನ್ನು ಈಡೇರಿಸುವ ಬಹುದೊಡ್ಡ ಮಾಧ್ಯಮ ಇದಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬುಳ್ಳಾ ನುಡಿದರು.
ವಚನ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ಸಂಪಾದಕತ್ವದಲ್ಲಿ ಹೊರತರಲಾಗುತ್ತಿರುವ ವಚನ ಚಿಂತನೆ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವ್ಯಕ್ತಿಯ ಚಿಂತನೆ ಅವರ ಬದುಕಿಗೆ ಪ್ರೇರಣೆ ನೀಡಿದರೆ ಮಹಾತ್ಮರ ಚಿಂತನೆ ವ್ಯವಸ್ಥೆಯ ಅಭಿವೃದ್ಧಿಗೆ ಅಡಿಪಾಯವಾಗುತ್ತದೆ. ಬಸವಣ್ಣನವರ ಪ್ರಜಾಪ್ರಭುತ್ವದ ಚಿಂತನೆ ಇಡೀ ವ್ಯವಸ್ಥೆಗೆ ಮೌಲ್ಯ ಕೊಡುವುದಾಗಿದೆ. ವಚನ ಚಿಂತನೆ ಇದು ಸರ್ವಸಾರ್ವತ್ರಿಕ ಬದುಕಿಗೆ ಪೂರಕ ವಾತಾವರಣ ಕಲ್ಪಿಸುತ್ತದೆ.

ವಚನ ಚಿಂತನೆ ಪತ್ರಿಕೆ ಹೊಸ ಆಚಾರ ವಿಚಾರಗಳಿಂದ ಕೂಡಿ ಪ್ರತಿ ದಿವಸ ವಿಶೇಷ ಅಂಕಣ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ದಿಸೆಯಲ್ಲಿ ಸಕರಾತ್ಮಕ ನಿಲುವಿನಿಂದ ಕೂಡಿರುವ ಪತ್ರಿಕೆಯಾಗಿ ಹೊರಹೊಮ್ಮಲಿ. ಇಂದಿನ ದಿನಮಾನಗಳಲ್ಲಿ ಅನೇಕ ಕ್ಷೇತ್ರಗಳು ಕಲುಷಿತಗೊಂಡು ಸತ್ಯಕ್ಕೆ ಬೆಲೆ ಇಲ್ಲದಂತಾಗಿದೆ. ವಚನ ಚಿಂತನ ಪತ್ರಿಕೆ ಸಮಾಜದ ಓರೆ-ಕೋರೆಗಳನ್ನು ತಿದ್ದುತ್ತ ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಗುಣ ಹೊಂದಲೆಂದು ಮಾತನಾಡಿ ಶುಭ ಕೋರಿದರು.
ಪಶು ವೈದ್ಯಕಿಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಭತ್ಮರ‍್ಗೆ ಮುಖ್ಯ ಅಥಿತಿಗಳಾಗಿ, ವಚನ ಚಿಂತನೆ ಪತ್ರಿಕೆಯಲ್ಲಿ ಕೃಷಿ, ಪಶು, ವೈಚಾರಿಕ ಲೇಖನಗಳಿಗೆ ಕೆಲವು ಪುಟ ಮೀಸಲಾಗಿಟ್ಟಿರುವುದು ಸಂತಸ. ವಚನ ಸಮೂಹ ಸಂಸ್ಥೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸಾಮಾನ್ಯರ ಆರ್ಥಿಕ ಸದೃಢತೆ ಸಾಧಿಸುತ್ತಲೆ ೧೬ ವರ್ಷಗಳ ಪಯಣ ಎಲ್ಲರನ್ನು ಅಚ್ಚರಿಗೊಳಿಸಿದೆ. ಇಂದು ಮಾಧ್ಯಮ ರಂಗಕ್ಕೆ ಕಾಲಿಟ್ಟು ಯುವಕರಿಗೆ ವೈಚಾರಿಕ ಹಾಗೂ ವೈಜ್ಞಾನಿಕ ವಿಷಯಗಳನ್ನು ಮನವರಿಕೆ ಮಾಡಿಕೊಡಲು ಸಂಕಲ್ಪತೊಟ್ಟ ಕಾರ‍್ಯಕ್ಕೆ ಶುಭ ಕೋರಿದರು.

ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಹಿರಿಯ ವರದಿಗಾರರಾದ ಶಶಿಕಾಂತ ಶೆಂಬೆಳ್ಳಿ ಮಾತನಾಡುತ್ತ, ಗಾಂಧೀಜಿ ಮತ್ತು ಶಾಸ್ರೀಯ ಬಗ್ಗೆ ಜನಸಾಮಾನ್ಯರು ಯಾವತ್ತು ಮರೆಯಬಾರದು. ಅಹಿಂಸೆ ಹಾಗೂ ಪ್ರಾಮಾಣಿಕತೆ ಇವರಿಬ್ಬರ ಬದುಕಿನಲ್ಲಿ ನಾವು ಕಾಣಬಹುದಾಗಿದೆ. ಅಂಥವರ ಜನ್ಮದಿನದಂದು ವಚನ ಚಿಂತನೆ ಪತ್ರಿಕೆಯ ಕಾರ್ಯಾಲಯ ಉದ್ಘಾಟನೆಯಾಗುತ್ತಿರುವುದು ಒಂದು ದಾಖಲೆ. ಪತ್ರಿಕೆ ಒಂದೇ ತತ್ವ ಸಿದ್ದಾಂತಗಳಿಗೆ ಸೀಮಿತವಾಗದೆ ಸರ್ವರ ಭಾವನೆಗಳಿಗೆ ಬೆಲೆಕೊಟ್ಟು ನೈತಿಕತೆಗೆ ಒತ್ತು ನೀಡಬೇಕು.
ಇಂದು ಪತ್ರಿಕಾರಂಗ ಬಹುದೊಡ್ಡ ಚಾಲೆಂಜ್ ಆಗಿದೆ. ಅಲ್ಲಮಪ್ರಭು ನಾವದಗೇರೆ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಜಾಗರೂಕರಾಗಿ ಮುನ್ನಡೆಯಲು ಸಂಕಲ್ಪ ಮಾಡಬೇಕೆಂದು ಸೂಚ್ಯವಾಗಿ ತಿಳಿಸುತ್ತ ಸತ್ಯ, ನ್ಯಾಯ, ನಿಷ್ಠೆಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ವಚನ ಚಿಂತನೆ ಪತ್ರಿಕೆಯ ಸಂಪಾದಕರಾದ ಅಲ್ಲಮಪ್ರಭು ನಾವದಗೇರೆ ಮಾತನಾಡುತ್ತ, ವಚನ ಸಂಸ್ಕೃತಿಯ ಆಶಯದೊಂದಿಗೆ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿ ಸಮುದಾಯ ಕಟ್ಟುವ ಕೆಲಸದಲ್ಲಿ ಪತ್ರಿಕೆಯ ಸಹಕಾರವಿರುತ್ತದೆ. ಮುಂಬರುವ ದಿನಗಳಲ್ಲಿ ಚಿನ್ಮಯಜ್ಞಾನ ವಿದ್ಯಾಕೇಂದ್ರ ಪ್ರಾರಂಭಿಸಿ ಕೌಶಲ್ಯಧಾರಿತ ಶಿಕ್ಷಣ ನೀಡಿ ಸ್ವಾವಲಂಭಿ ಬದುಕಿಗೆ ಸಹಕರಿಸುವ ಮುಖ್ಯ ವಿಚಾರ ನಮ್ಮದಾಗಿದೆ.
ನಕರಾತ್ಮಕ ಭಾವನೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಸಕರಾತ್ಮಕ ಚಿಂತನೆಗೆ ಒತ್ತು ನೀಡಿ ಓದುಗರ ಭಾವನೆಗಳಿಗೆ ಸಹಕರಿಸುವ ವಿಚಾರ ನಮ್ಮದಾಗಿದೆ ಎಂದು ನುಡಿದು ಎಲ್ಲರೂ ನಮ್ಮ ಕಾರ್ಯಕ್ಕೆ ಸಹಕರಿಸಲು ಮನವಿ ಮಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪೂಜ್ಯ ಸದ್ಗುರು ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡುತ್ತ, ವಚನ ಸಮೂಹ ಸಂಸ್ಥೆಯ ಸರ‍್ವ ಕಾರ್ಯಗಳಿಗೆ ವಚನಗಳು ಆಧಾರವಾಗಿರುವುದರಿಂದ ತಮ್ಮ ಪತ್ರಿಕೆಯಲ್ಲಿ ನೈತಿಕ ಬರಹಗಳಿಗೆ ಒತ್ತು ನೀಡಿ.
ಇಂದಿನ ಯುವಕರಿಗೆ ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಗುವತಿಲ್ಲವಾದ್ದರಿಂದ ದಾರಿ ತಪ್ಪುತ್ತಿದ್ದಾರೆ. ಅದನ್ನು ತಪ್ಪಿಸಲು ವಚನ ಸಮೂಹ ಸಂಸ್ಥೆ ನಿರಂತರ ಶ್ರಮಿಸಲಿ ಎಂದು ನುಡಿದರು.
ರೇಖಾ ನಿಂಗದಳ್ಳಿ ಪ್ರಾರ್ಥನೆ ಗೀತೆ ಹಾಡಿದರೆ, ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ಡಾ. ಶಿವಶಂಕರ ಟೋಕರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಬಿರಾದರ ಸ್ವಾಗತಿಸಿ, ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರೆ, ಜಗನ್ನಾಥ ಶಿವಯೋಗಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
