ನರಗುಂದ :
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುವ ನಿರ್ಣಯವನ್ನು ಪಾಲಿಕೆ ಪರಿಷತ್ ಸರ್ವಾನುಮತದಿಂದ ಅಂಗೀಕರಿಸಿದ್ದು ಸಂತಸದ ಸಂಗತಿ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಇದಕ್ಕೆ ಸಹಕರಿಸಿದ ಕರ್ನಾಟಕ ಸರ್ಕಾರಕ್ಕೆ, ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸೂರ್ಯ ಚಂದ್ರರಿರುವವರೆಗೂ ಬೆಳಗಾವಿ ಎಂದೆಂದೂ ಕರ್ನಾಟಕದ್ದೆ ಎಂದು ಅಧಿಕೃತವಾಗಿ ಆದೇಶಿಸಿದ ಈ ಸುದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸ್ಮರಣೀಯ ಕ್ಷಣವಾಗಿದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ನೀಡಿದ ಗೌರವವಾಗಿದೆ ಎಂದು ಅವರು ಅಭಿಮಾನ ವ್ಯಕ್ತಪಡಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಪಾಲಿಕೆಯ ಅಧಿಕೃತ ದಾಖಲೆಗಳಲ್ಲಿ ಸ್ಪಷ್ಟವಾಗಿ ದಾಖಲಿಸಬೇಕು ಎಂದು ಶ್ರೀಮಠದ ಕನ್ನಡ ಸಾಹಿತ್ಯ ಮತ್ತು ಸಾಂಸಸ್ಕೃತಿಕ ವೇದಿಕೆ ಸೇರಿದಂತೆ ನಾಡಿನ ಹಲವಾರು ಕನ್ನಡಪರ ಸಂಘಟನೆಗಳು ಹಲವು ವರ್ಷಗಳಿಂದ ಈ ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಮನವಿ, ಪ್ರತಿಭಟನೆ ಸೇರಿದಂತೆ ವಿವಿಧ ರೀತಿಯಲ್ಲಿ ಒತ್ತಡ ಹೇರಲಾಗಿತ್ತು ಎಂದಿದ್ದಾರೆ.
2005ರಲ್ಲಿ ಎಂಇಎಸ್ ಬೆಂಬಲಿತ ಆಡಳಿತದ ಅವಧಿಯಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪರವಾಗಿ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 21 ವರ್ಷಗಳ ಬಳಿಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಅದಿಕೃತವಾಗಿ ಮಹಾನಗರ ಪಾಲಿಕೆಯಲ್ಲಿ ಠರಾವಿಗೆ ಅನುಮೋದನೆ ನೀಡುವ ಮೂಲಕ ಕರ್ನಾಟಕದ ಪರ ನಿರ್ಣಯ ಅಂಗೀಕರಿಸಿದ್ದು ಸಮಸ್ತ ಕನ್ನಡಾಭಿಮಾನಿಗಳಲ್ಲಿ ಹರ್ಷತಂದಿದೆ ಎಂದು ಸ್ವಾಮೀಜಿ ಹೇಳಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
