‘ಶೈಕ್ಷಣಿಕ ಕ್ರಾಂತಿ ಮಾಡಿದ ಜಯದೇವ ಜಗದ್ಗುರುಗಳು’

ದಾವಣಗೆರೆ :

ಚಿತ್ರದುರ್ಗ ಮುರುಘಾಮಠದ 24ನೆಯ ಪೀಠಾಧ್ಯಕ್ಷರಾದ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು 20ನೇ ಶತಮಾನದಲ್ಲಿ ರಾಜ್ಯ ಹಾಗೂ ಅಂತಾರಾಜ್ಯದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ತ್ರಿವಿಧ ದಾಸೋಹಿಗಳು, ಯುಗ ಪ್ರವರ್ತಕರು ಎಂದು ಕಲ್ಲೂರಿನ ಶ್ರೀ ಮಹಾಂತೇಶ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.

ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದಲ್ಲಿ ಶ್ರೀ ವಿರಕ್ತ ಮಠ, ಶ್ರೀ ಶಿವಯೋಗಾಶ್ರಮದಲ್ಲಿ 3/10/2026ರಿಂದ 8/10/2026ರವರೆಗೆ   ಐದು ದಿನಗಳ ಕಾಲ ಏರ್ಪಡಿಸಲಾಗಿರುವ ಶ್ರೀ ಜಯದೇವ ಲೀಲೆ ಪುರಾಣದ ಎರಡನೇ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಚನ್ನಬಸವಯ್ಯ ಭ್ರಮರಾಂಬೆ ದಂಪತಿಗಳ ಮಗನಾಗಿ 27/8/1878ರಲ್ಲಿ ಅವರು ಜನಿಸಿದರು. ನಂತರ ಪ್ರಾಥಮಿಕ  ಶಿಕ್ಷಣಕ್ಕಾಗಿ ಗದುಗಿನ ತೋಂಟದಾರ್ಯ ಮಠಕ್ಕೆ ಹೋಗಿ ಅಲ್ಲಿ ಸಂಸ್ಕೃತ ಕಲಿತರು, ಅಲ್ಲಿಂದ ಪ್ರೌಢ  ವಿದ್ಯಾಭ್ಯಾಸಕ್ಕಾಗಿ  ಗದುಗಿನ ಮಾನ್ವಿ ರುದ್ರಮ್ಮನವರಿಂದ ಸಹಾಯ ಪಡೆದು ಕಾಶಿಯ ವಿಶ್ವರಾಧ್ಯ ಪೀಠಾಧ್ಯಕ್ಷರಾದ ರಾಜೇಶ್ವರ ಸ್ವಾಮಿಗಳ ಮಠದಲ್ಲಿದ್ದು ವಿದ್ಯಾಭ್ಯಾಸವನ್ನು ಮುಂದುವರಿಸಿ, ತರ್ಕಶಾಸ್ತ್ರ, ವ್ಯಾಕರಣವನ್ನು ಕಲಿತು ಸಕಲ ವಿದ್ಯಾ ಪಾರಂಗತರಾಗಿ ಕರ್ನಾಟಕಕ್ಕೆ ಮರಳಿದರು.

ಆಗ 1902ರಲ್ಲಿ ಚಿತ್ರದುರ್ಗ ಬೃಹನ್ ಮಠದ  ಶೂನ್ಯಪೀಠದ ಮುಪ್ಪಿನೆಂದ್ರ  ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದು, ಆ ಪೀಠಕ್ಕೆ ಹಲವು ವಟುಗಳು ಆಕಾಂಕ್ಷಿತರಾಗಿದ್ದಾಗ ಭಕ್ತರು ಪ್ರಪ್ರಥಮ ಬಾರಿಗೆ ಮತದಾನದ ಮೂಲಕ ಜಯದೇವ ಜಗದ್ಗುರುಗಳನ್ನ ಆಯ್ಕೆ ಮಾಡಿದ್ದು, ಆಗ ಸಾಲ ಮಾಡಿಕೊಂಡಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ ಮಠವನ್ನು ನವಕೋಟಿ ನಾರಾಯಣ ಮಠವನ್ನಾಗಿ ಪರಿವರ್ತಿಸಿದ ಕೀರ್ತಿ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗಾಗಿ ರಾಜ್ಯ ಹಾಗೂ ಅಂತರಾಜ್ಯಗಳಲ್ಲಿ ಬಸವಾದಿ  ಶಿವಶರಣರ ಆಶಯದಂತೆ ಉಚಿತ ಪ್ರಸಾದ ನಿಲಯಗಳು ಹಾಗೂ ಶಾಲಾ ಕಾಲೇಜುಗಳನ್ನು ನಿರ್ಮಿಸಿ  ಶಿಕ್ಷಣ ಕ್ರಾಂತಿಯನ್ನು ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮ ಸಾನಿಧ್ಯ ವಹಿಸಿದ ವಿರಕ್ತ ಮಠದ ಪೂಜ್ಯ ಡಾ. ಬಸವಪ್ರಭು ಸ್ವಾಮೀಜಿಗಳು ಮಾತನಾಡಿ, ಜಯದೇವ ಜಗದ್ಗುರುಗಳ ಅನ್ನ, ಅಕ್ಷರ, ಸಂಸ್ಕಾರವೆಂಬ ತ್ರಿವಿಧ ದಾಸೋಹವನ್ನು ನೀಡಿಧ  ಫಲವಾಗಿ ಮಠದ ಸಂಸ್ಥೆಗಳಲ್ಲಿ  ಶಿಕ್ಷಣ ಕಲಿತ ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್. ಆರ್. ಕಂಠಿ ಅವರುಗಳು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಐತಿಹಾಸಿಕ ಘಟನೆಯಾಗಿದೆ ಎಂದರು.

ಈ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಹಲವು ಲಿಂಗಾಯತ ಮಠಗಳು ಮಾಡಿದ್ದು, ಅದರಲ್ಲಿ ಶ್ರೀ ಜಯದೇವ ಜಗದ್ಗುರುಗಳು ಪ್ರಮುಖರಾಗುತ್ತಾರೆ. ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇಂತಹ ಮಹಾನ್ ಶಿವಯೋಗಿಗಳ ಪುರಾಣವನ್ನು ಆಲಿಸಿ ಧನ್ಯರಾಗಬೇಕು ಎಂದು ತಿಳಿಸಿದರು.

ಬಸವ ಕಲಾ ಲೋಕದ ಅರುಣ ಅವರು ವಚನ ಗಾಯನವನ್ನು ನೆರವೇರಿಸಿಕೊಟ್ಟರು. ಶ್ರೀ ಮಠದ ಭಕ್ತರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಸಂದೇಶ ರವಾನಿಸಿದ್ದಾರೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *