ರಾಯಚೂರು ಶಿಬಿರ: ಮೊದಲನೇ ದಿನದ ವರದಿ
ರಾಯಚೂರು
ನಗರದ ಬಸವಕೇಂದ್ರದಲ್ಲಿ ಎರಡು ದಿನಗಳ ಬಸವಶಕ್ತಿ ಶಿಬಿರ ವಚನ ಪ್ರಾರ್ಥನೆ, ಸಂವಿಧಾನ ಪಠಣದೊಂದಿಗೆ ಅಕ್ಟೊಬರ್ 3 ಶುರುವಾಯಿತು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪಿ ರುದ್ರಪ್ಪ ತಮ್ಮ ಸ್ವಾಗತ ಭಾಷಣದಲ್ಲಿ ಬಸವ ಸಂಘಟನೆಗಳ ರಾಜಕೀಯ, ಪ್ರಜ್ಞೆ, ಪ್ರಭಾವ ಬೆಳೆಸಲು ಶ್ರಮಿಸುತ್ತಿರುವ ಬಸವ ಶಕ್ತಿ ಶಿಬಿರಗಳು ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಯಶಸ್ವಿಯಾಗಿ ನಡೆಯಬೇಕೆಂದು ಕರೆ ನೀಡಿದರು.

ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಬಸವಶಕ್ತಿ ಶಿಬಿರಗಳ ಕಾರ್ಯಸೂಚಿಯನ್ನು ವಿವರಿಸಿದರು.
ಲಿಂಗಾಯತರ ಮೇಲೆ ದಾಳಿ
ದಿನದ ಮೊದಲನೇ ಗೋಷ್ಠಿಯಲ್ಲಿ ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ರಾಜಕೀಯ ದಾಳಿಯ ಬಗ್ಗೆ ಕಾರ್ಮಿಕ ನಾಯಕ ಹನಮೇಶ ಕಲ್ಮಂಗಿ ಮಾತನಾಡಿದರು.
ಲಿಂಗಾಯತರು ಜಾಗೃತರಾಗುತ್ತಿದ್ದಾರೆ, ಆದರೆ ಅದನ್ನು ನೇರವಾಗಿ ಎದುರಿಸುವ ಸಾಮರ್ಥ್ಯವಿಲ್ಲದೆ ನಮ್ಮ ವಿರೋಧಿಗಳು ಕನ್ನೇರಿ ಸ್ವಾಮಿಯಂತವರನ್ನು ಛೂ ಬಿಟ್ಟಿದ್ದಾರೆ. ರಾಷ್ಟ್ರಭಕ್ತಿ, ಅನ್ಯ ಧರ್ಮಗಳ ದಾಳಿಗಳಂತಹ ವಿಷಯಗಳನ್ನು ದುರ್ಬಳಕೆ ಮಾಡಿಕೊಂಡು ಲಿಂಗಾಯತರ ದಾರಿ ತಪ್ಪಿಸುತ್ತಿದ್ದಾರೆ. ಈ ಸಂಘರ್ಷದ ಸನ್ನಿವೇಶದಲ್ಲಿ ಲಿಂಗಾಯತರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಲಿಂಗಾಯತ ನಾಯಕತ್ವ ನಾಶ ಮಾಡುವ ದೊಡ್ಡ ಪ್ರಯತ್ನ ನಡೆಯುತ್ತಿದೆ. ಯಡಿಯೂರಪ್ಪ ಇದೇ ಕಾರಣಕ್ಕಾಗಿ 2013ರಲ್ಲಿ ಕೆಜೆಪಿ ಕಟ್ಟಿದರು.
ಅದರ ಹೊಡೆತ ತಾಳಲಾರದೆ ಅವರನ್ನು ಪಕ್ಷಕ್ಕೆ ಮತ್ತೆ ಕರೆಸಿಕೊಂಡು, ಪಟ್ಟ ಕಟ್ಟಿ, ಇಳಿಸಿ, ಅಳಿಸಿದರು. ವಿಜಯೇಂದ್ರರಿಗೆ ಪಟ್ಟ ಕಟ್ಟಿ ಹಿಂದಿನಲ್ಲಿಯೇ ಪರ್ಯಾಯ ಸೃಷ್ಟಿಸಿದರು.

ಲಿಂಗಾಯತರನ್ನು ಜಾಗೃತಗೊಳಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಬಸವತತ್ವದ ಪ್ರಚಾರ ಯುದ್ದೋಪಾದಿಯಲ್ಲಿ ನಡೆಯಬೇಕು.
ಅದನ್ನು ಯಶಸ್ವೀಯಾಗಿ ಮಾಡಲು ಬಸವ ಸಂಘಟನೆಗಳಿಗೆ ರಾಜಕೀಯ ಬೇಕು. ರಾಜಕೀಯ ಹೊಲಸು ಅಂತ ಬಿಡಲಾಗುವುದಿಲ್ಲ. ದುರ್ಜನರ ಅಟ್ಟಹಾಸಕ್ಕಿಂತ ಸಜ್ಜನರ ಮೌನ ಅಪಾಯಕಾರಿ, ಎಂದು ಕಲ್ಮಂಗಿ ಹೇಳಿದರು.
ಲಿಂಗಾಯತರ ಮೇಲೆ ಸಾಂಸ್ಕೃತಿಕ, ರಾಜಕೀಯ ದಾಳಿ ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎಂದು ಬಸವ ಮೀಡಿಯಾ ಸಂಪಾದಕ ಎಂ ಎ ಅರುಣ್ ವಿಶ್ಲೇಷಿಸಿದರು.
ವಯೋಸಹಜವಾದ ಕಾರಣಗಳಿಂದ ಯಡಿಯೂರಪ್ಪನವರ ಪ್ರಭಾವ ಕ್ಷೀಣಿಸಿದ ನಂತರ ಈ ದಾಳಿಗಳು ಶುರುವಾಗಿದೆ.
ರಾಜಕೀಯದಲ್ಲಿ ಯಡಿಯೂರಪ್ಪನವರ ಪ್ರಭಾವ ನಡೆಯುತ್ತಿದ್ದ ತನಕ ಆರೆಸ್ಸೆಸ್ಸಿನವರು ಲಿಂಗಾಯತ ಸಮುದಾಯವನ್ನು ನೇರವಾಗಿ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
ಈಗ ಬದಲಾದ ಸನ್ನಿವೇಶದಲ್ಲಿ ವಚನ ದರ್ಶನ, ಕನ್ನೇರಿ ಸ್ವಾಮಿ ಸಮಾವೇಶಗಳ ಮೂಲಕ ಲಿಂಗಾಯತರ ತಲೆಯಲ್ಲಿ ಹಿಂದುತ್ವ ತುಂಬುವ ಪ್ರಯತ್ನ ನಡೆಯುತ್ತಿದೆ.
ಜೊತೆಗೆ ಲಿಂಗಾಯತರಲ್ಲಿ ಗಟ್ಟಿ, ಸ್ವತಂತ್ರ ನಾಯಕತ್ವ ಬೆಳೆಯದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಧಾರವಾಡದಲ್ಲಿ ಬಿಜೆಪಿ ಲಿಂಗಾಯತ ನಾಯಕರು ಪ್ರಹ್ಲಾದ ಜೋಶಿಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಹೆದರುತ್ತಾರೆ.
ಇದರ ಬಗ್ಗೆ ಜಾಗೃತರಾಗದಿದ್ದರೆ ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತಿನಲ್ಲಿ ಪಟೇಲರು ಸಂಘ ಪರಿವಾರದ ಕಪಿಮುಷ್ಟಿಗೆ ಸಿಲುಕಿರುವಂತೆ ಲಿಂಗಾಯತರು ಸಿಲುಕಿಕೊಂಡು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾರೆ.
ಕಾಂಗ್ರೆಸ್ಸಿನಲ್ಲಿಯೂ ಲಿಂಗಾಯತ ಧರ್ಮಕ್ಕೆ ಬೆಂಬಲವಿಲ್ಲ. ಬಸವ ಸಂಘಟನೆಗಳು ರಾಜಕೀಯವಾಗಿ ಜಾಗೃತವಾಗುವುದೇ ಈ ಸಮಸ್ಯೆಗಳಿಗೆ ಪರಿಹಾರ, ಎಂದು ಹೇಳಿದರು.
ರಾಜಕೀಯ ಹೊಲಸಲ್ಲ

ಬಸವ ಸಂಘಟನೆಗಳಿಗೆ ರಾಜಕೀಯ ಪ್ರಭಾವ, ಪ್ರಜ್ಞೆ ಬೇಕೇ ವಿಷಯದ ಮೇಲೆ ಸಿಂಧನೂರು ಬಸವ ಕೇಂದ್ರದ ಬಸಲಿಂಗಪ್ಪ ಬಾದರ್ಲಿ ಮಾತನಾಡಿದರು.
ಬಸವ ಸಂಘಟನೆಗಳಿಗೆ ಮೂರು ಉದ್ದೇಶಗಳಿವೆ: ಧರ್ಮ ಪ್ರಚಾರ, ಸ್ವತಂತ್ರ ಧರ್ಮ ಮಾನ್ಯತೆ, ನೂತನ ಅನುಭವ ಮಂಟಪ ನಿರ್ವಹಣೆ.
ಈ ಮೂರೂ ಉದ್ದೇಶ ಸಾಧಿಸಲು ರಾಜಕೀಯ ಪ್ರಭಾವ, ಪ್ರಜ್ಞೆಯಿದ್ದರೆ ಮಾತ್ರ ಸಾಧ್ಯ.
ಕೇಂದ್ರ ಸರಕಾರ ನಿಯಂತ್ರಣ ಮಾಡುತ್ತಿರುವ ಆರೆಸ್ಸೆಸ್ ರಾಜಕೀಯ ಮಾಡುತ್ತಿಲ್ಲ ಎನ್ನುತ್ತಾರೆ. ಆದರೆ ಅವರು ಮಾಡುತ್ತಿರುವ ರಾಜಕೀಯ ಎಲ್ಲರಿಗೂ ಗೊತ್ತಿದೆ.
ಬಸವ ಸಂಘಟನೆಗಳು ಸೈದ್ಧಾಂತಿಕವಾಗಿ ಹತ್ತಿರವಾಗಿರುವವರನ್ನು ಬೆಂಬಲಿಸಬೇಕು, ಬಸವ ಪ್ರಜ್ಞೆ ಇರುವ ರಾಜಕಾರಣಿಗಳನ್ನು ಬೆಂಬಲಿಸಬೇಕು. ಅದರಿಂದ ಧರ್ಮ ಪ್ರಚಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ.
ಕನ್ನೇರಿ ಸ್ವಾಮಿಗೆ ಬೆನ್ನೆಲುಬಾಗಿ ನಿಂತಿರುವವರು ಸ್ಥಳೀಯ ಲಿಂಗಾಯತ ನಾಯಕರು. ಅಂತವರೇ ಮಹಾಶರಣ ಎಂ ಎಂ ಕಲ್ಬುರ್ಗಿಯರನ್ನು ಹತ್ಯೆ ಮಾಡಿದವರನ್ನು ಸನ್ಮಾನ ಮಾಡಿದ್ದಾರೆ. ಅಂತವರನ್ನು ಘೇರಾವ್ ಮಾಡಬೇಕು.
ರಾಜಕೀಯ ಹೊಲಸಲ್ಲ, ರಾಜಕೀಯ ಮಾಡುವವರ ಮನಸ್ಸು ಗಲೀಜಾಗಿದೆ, ಎಂದು ಹೇಳಿದರು.
ವಿಷಯ ವಿಸ್ತರಿಸಿದ ಕಾಂಗ್ರೆಸ್ ನಾಯಕ ಕೆ ಶಾಂತಪ್ಪ ಒಂದು ಶ್ರೇಷ್ಠ ಬಸವತತ್ವದ ಮಠದಿಂದ ಒಂದು ಕಾಡು ಹೆಗ್ಗಣ ಬಂದಿದೆ. ಲಿಂಗಾಯತರ ಒಗ್ಗಟ್ಟನ್ನು ತೂತು ಮಾಡಲು ಅದರ ಜೊತೆ ಕೆಲವು ಇಲಿಗಳೂ ಬಂದಿವೆ. ಅವರು ಹೆಗ್ಗಣವಾದರೆ ನಾವು ಹುಲಿಗಳಾಗಬೇಕು.
ಬಸವಶಕ್ತಿ ರಾಜಕೀಯ ಶಕ್ತಿಯಾಗಬೇಕು, ರಾಜಕೀಯವಾಗಿ ಬಲಿಷ್ಠವಾಗಲು ಎಲ್ಲಾ ಒಳಪಂಗಡಗಳನ್ನು ಬಸವಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕು, ಎಂದು ಹೇಳಿದರು.
ಚುನಾವಣೆಗಳಲ್ಲಿ ಸಕ್ರಿಯರಾಗಿ

ಚುನಾವಣೆಗಳಲ್ಲಿ ಬಸವ ಸಂಘಟನೆಗಳು ಸಕ್ರಿಯವಾಗುವ ಬಗ್ಗೆ ಬಸವತತ್ವ ಪ್ರಚಾರಕ ಬಸವರಾಜ ಸಿಂಧನೂರು ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಬಸವ ಕಾರ್ಯಕರ್ತರು ಸಂಘಟನಾತ್ಮಕವಾಗಿ ಒಗ್ಗೂಡಬೇಕು. ಆದ್ಯತೆಯ ಮೇಲೆ ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆಗಳಲ್ಲಿ ಪ್ರಚಾರ ಮಾಡಬೇಕು.
ನಮಗೆ ಬೆಲೆ ಕೊಡುವ ಅಭ್ಯರ್ಥಿಗೆ ಮಾತ್ರ ಮತಹಾಕುವಂತೆ ಜಾಗೃತಿ ಮೂಡಿಸಬೇಕು. ಇಂತಹ ಒಂದು ತಂಡ ಚುನಾವಣೆ ಸಮಯದಲ್ಲಿ ಕೆಲಸ ಮಾಡುತ್ತಿದೆ ಎಂದು ಗೊತ್ತಾದರೆ ಅಭ್ಯರ್ಥಿಗಳೇ ಸಂಪರ್ಕ ಮಾಡುತ್ತಾರೆ.
ಆದರೆ ಎಲ್ಲದಿಕ್ಕಿಂತ ಮೊದಲು ನಾವು ಸೈದ್ಧಾಂತಿಕವಾಗಿ ಗಟ್ಟಿಯಾಗಬೇಕು, ಎಂದು ಅವರು ಹೇಳಿದರು.
ಅವರ ಮಾತನ್ನು ಮುಂದುವರೆಸಿ ಕಲಬುರಗಿಯ ಶರಣ ತತ್ವ ಚಿಂತಕ ಸಂಜಯ ಮಾಕಲ್ ಲಿಂಗಾಯತರು ರಾಜಕೀಯವಾಗಿ ಜಾಗೃತರಾಗುವ ಮೊದಲು ಸೈದ್ಧಾಂತಿಕವಾಗಿ ಜಾಗೃತರಾಗಬೇಕು, ನಮ್ಮ ವಿರೋಧಿಗಳು ಯಾರೆಂದು ಸಮುದಾಯಕ್ಕೆ ಸ್ಪಷ್ಟವಾಗಬೇಕೆಂದು ಹೇಳಿದರು.
ಮನು ಸಂವಿಧಾನದಲ್ಲಿ ಶೂದ್ರರಿಗೆ ಶಿಕ್ಷಣ, ಅಧಿಕಾರ, ಆಸ್ತಿ, ದುಡ್ಡು, ಅಸ್ತ್ರ, ಶಸ್ತ್ರ ಹೊಂದುವ ಅಧಿಕಾರವಿಲ್ಲ. ಭಾರತೀಯರನ್ನು ಕತ್ತಲಲ್ಲಿ ಇಟ್ಟು ಪುರೋಹಿತವರ್ಗ ಆಳುತ್ತಿದೆ. ಬಸವತತ್ವದ ಪ್ರಕಾರವಿರುವ ಸಂವಿಧಾನವನ್ನು ತೆಗೆದು ಮನುಸ್ಮೃತಿ ಹೇರುವ ಪ್ರಯತ್ನವಾಗುತ್ತಿದೆ.
ಇದರ ಬಗ್ಗೆ ಚುನಾವಣೆ ಸಮಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು, ಎಂದರು.
ನಾಡು ನುಡಿಗೆ ಸ್ಪಂದಿಸಿ

ನಾಡು ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ ವಿಷಯದ ಮೇಲೆ ಲೇಖಕಿ ಜಯಶ್ರೀ ಮಹಾಜನಶೆಟ್ಟಿ ಪೀಠಿಕೆ ಹಾಕಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ‘ದೇವಭಾಷೆ’ ಸಂಸ್ಕೃತ ತಿರಸ್ಕರಿಸಿ ಕನ್ನಡಿಗರಲ್ಲಿ ಭಾಷಾ ಜಾಗೃತಿ ಮೂಡಿಸಿದರು.
ಬಸವ ಸಂಘಟನೆಗಳು ನಾಡುನುಡಿಗೆ ಐತಿಹಾಸಿಕವಾಗಿ ಸ್ಪಂದಿಸಿವೆ. ಈಗಲೂ ನೆಲ, ಜಲ, ಭಾಷೆಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧ ಹೋರಾಡಬೇಕು.
ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗಾವಕಾಶ, ಡಿಜಿಟಲ್ ಮಾಧ್ಯಮದಲ್ಲಿ ಕನ್ನಡ ಬೆಳೆಸುವುದು ಮುಂತಾದ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಬ್ಯಾಂಕ್ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಬಸವ ಸಂಘಟನೆಗಳು ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಬೇಕು, ಎಂದರು.
ಹಟ್ಟಿಯ ಶಿಕ್ಷಕಿ ಶಿಲ್ಪ ನಾರನಾಳ ಬಸವ ಸಂಘಟನೆಗಳು ನಾಡು ನುಡಿಗೆ ಸ್ಪಂದಿಸದಿದ್ದರೆ ಸೀಮಿತವಾಗಿ ಉಳಿದುಬಿಡುತ್ತೇವೆ. ನಾವು ಬಾವಿ ಕಪ್ಪೆಯಾಗದೆ ಸಮುದ್ರದ ಮೀನಾಗಬೇಕು.
ಕನ್ನಡ ಬೇರೆಯಲ್ಲ ಬಸವತತ್ವ ಬೇರೆಯಲ್ಲ, ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಘಟನೆಗಳೊಂದಿಗೆ ನಾವು ಕೈ ಜೋಡಿಸಬೇಕು.
ಸಾರ್ವಜನಿಕ ಹಿತಾಸಕ್ತಿಗೆ ಎಲ್ಲೇ ಧಕ್ಕೆ ಬಂದರೂ ಧ್ವನಿಯೆತ್ತಬೇಕು, ಪ್ರಶ್ನಿಸುವ, ಅಭಿವೆಕ್ತಿ ಸ್ವಾತಂತ್ರ್ಯ ಚಲಾಯಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಎಂದು ಕರೆ ನೀಡಿದರು.
