ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೮ ಜೋಡಿಗಳು ದಾಂಪತ್ಯ ಜೀವನಕ್ಕೆ
ಚಿತ್ರದುರ್ಗ :
ಮದುವೆಯಾಗುವ ವಧುವಿಗೆ ಮಾತ್ರ ಸಂಸ್ಕಾರದ ನುಡಿಗಳನ್ನು ಹೇಳಿಕೊಡುವುದಲ್ಲ. ವರನಿಗೂ ಸಹ ಗುಟ್ಕಾ, ಸಿಗರೇಟು, ಮದ್ಯಪಾನ ಇವನ್ನು ಸೇವಿಸದೆ ತನ್ನ ಕುಟುಂಬದ ಸದಸ್ಯರನ್ನು, ಬಾಳಸಂಗಾತಿಯನ್ನು ಪ್ರೀತಿಸಿ ಬಾಳನ್ನು ಸೊಗಸಾಗಿ ನಡೆಸಬೇಕು. ನಿಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ, ಒಳ್ಳೆಯ ಸಂಸ್ಕಾರವನ್ನು ನೀಡಿರಿ ಎಂದು ಶಿರಸಂಗಿಯ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ಕಿವಿಮಾತು ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ೩೬ನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂಟಿ ಜೀವನಕ್ಕಿಂತ ಜಂಟಿ ಜೀವನ ಆರಾಮದಾಯಕ. ಸತಿಪತಿಗಳಾದ ನಂತರ ಜೀವನದಲ್ಲಿ ನಂಬಿಕೆ, ಹೊಂದಾಣಿಕೆ ತುಂಬಾ ಮುಖ್ಯ. ವಿವಾಹದ ನಂತರ ನೀವು ಮೊದಲಿನಂತೆ ನಿಮ್ಮ ಜನ್ಮದಾತರ ಮಾತಿನಂತೆಯೇ ಮುನ್ನಡೆಯಿರಿ.
ದೇವರನ್ನು ದೇವಾಲಯಗಳಲ್ಲಿ ಹುಡುಕುವುದಕ್ಕಿಂತ ನಿಮ್ಮ ತಂದೆ-ತಾಯಿಗಳಲ್ಲಿ ಕಾಣಿರಿ. ಅವರಲ್ಲಿ ದುಃಖದ ಕಣ್ಣೀರು ತರಿಸದೆ ಗೌರವಿಸಿ ಆನಂದಬಾಷ್ಪವನ್ನು ತರಿಸಿ. ಮಾತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವವನ್ನು ಅರಿತು ನಡೆಯಿರಿ. ಬಸವಾದಿ ಪ್ರಮಥರು ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ, ಇದ್ದರೇನು ಶಿವಶಿವ ಹೋದರೇನು ಎಂದಿದ್ದಾರೆ ಎಂದು ನುಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ, ಇಂದು ಶ್ರೀ ಮುರುಘಾಮಠದಲ್ಲಿ ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹಗಳು ನೆರವೇರುತ್ತಿವೆ. ಶ್ರೀಮಠವು ಸದಾ ಜಾತಿ, ಲಿಂಗ, ವರ್ಗ, ವರ್ಣ, ಧರ್ಮಭೇದದಿಂದ ದೂರವಿರುವ ಸಮಾನತೆಯನ್ನು ಮಂತ್ರವನ್ನು ಸಾರುವ ಮಠವಾಗಿದೆ.

ಸತಿಪತಿಗಳು ಒಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆತಂತೆ. ಅರಿತು ಬೆರೆತು ಒಂದಾಗಿ ಬಾಳಿದರೆ ಬದುಕು ಅಮೃತದಂತೆ. ನೀವೆಲ್ಲರೂ ಸದಾ ಸಂತೋಷವಾಗಿ ಬಾಳಿ ಎಂದು ಶುಭ ಹಾರೈಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಹಾಲಿನಿಂದ ತುಪ್ಪ ಆಗುವುದು ಒಂದು ಪ್ರಕ್ರಿಯೆ. ಹಾಗೆಯೇ ಇದೊಂದು ಸಂಸ್ಕಾರ. ಹಾಲಿಗೆ ಹೆಪ್ಪನ್ನು ಹಾಕಬೇಕೇ ಹೊರತು ಉಪ್ಪನ್ನು ಹಾಕಬಾರದು. ಸಮಾಜದಲ್ಲಿ ಉಪ್ಪನ್ನು ಹಾಕುವವರು ಬಹುಮಂದಿ. ನೀವು ನಕಾರಾತ್ಮಕವಾಗಿ ಯೋಚಿಸದೆ ಧನಾತ್ಮಕವಾಗಿ ಸಕಾರಾತ್ಮಕವಾಗಿ ಯೋಚಿಸಿ. ಜೀವನದಲ್ಲಿ ಹೊಂದಿಕೊಂಡು ಬಾಳಿ. ಜ್ಞಾನಿಗಳ ಸಂಘದಲ್ಲಿರಿ ಎಂದು ನವ ವಿವಾಹಿತರಿಗೆ ಶುಭ ಹಾರೈಸಿದರು.
ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ತುಂಬಾ ಸಂಸ್ಕಾರವಂತ ಕುಟುಂಬದಲ್ಲಿ ನೀವು ಜನಿಸಿದ್ದೀರಿ. ಹಾಗಾಗಿ ಎರಡು ಜ್ಯೋತಿಗಳನ್ನು ಬೆಳಗಿಸುವ ಹೊಂಬಾಳೆ ಹೂ ಮುಡಿಸಿರುವ ಕಲಶಗಳನ್ನು ಇಲ್ಲಿ ಜೋಡಿಸಿದ್ದೀರಿ. ಎರಡು ದೀಪಗಳನ್ನು ಬೆಳಗುವ ಉದ್ಧೇಶ ನೀವು ಜ್ಯೋತಿ ಸ್ವರೂಪರಾಗಿ ಬಾಳಿ ಎನ್ನುವುದಾಗಿದೆ.

ಹೊಂಬಾಳೆ ಮುಡಿಸಿರುವ ಉದ್ಧೇಶ ಬಂಗಾರದಂತಹ ಬಾಳನ್ನು ಬಾಳಿ ಎಂದು, ನೀರನ್ನು ಹಾಕಿರುವ ಉದ್ಧೇಶ ನಿಮ್ಮ ತನು ಮನ ಭಾವಶುದ್ಧವಾಗಿರಲೆಂದು, ನಿಮ್ಮ ಬಾಳು ಸುಗಂಧ ಪರಿಮಳಭರಿತವಾಗಿರಲಿ ಎನ್ನುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ೨ ಜತೆ ಅಂತರ್ಜಾತಿ ವಿವಾಹ ಸೇರಿದಂತೆ ೮ ಜೋಡಿ ವಧು – ವರರಿಗೆ ವಚನ ಮಂತ್ರದೊಂದಿಗೆ ವಿಭೂತಿ ಧಾರಣೆ, ರುದ್ರಾಕ್ಷಿ ಧಾರಣೆ, ಪ್ರತಿಜ್ಞಾವಿಧಿಯ ನಂತರ ಮಾಂಗಲ್ಯಧಾರಣೆ ನೆರವೇರಿಸಲಾಯಿತು.

ಜಮುರಾ ಕಲಾವಿದ ಉಮೇಶ ಪತ್ತಾರ ವಚನ ಪ್ರಾರ್ಥನೆ ಹಾಡಿದರು. ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ಸಹಶಿಕ್ಷಕಿ ನೇತ್ರಾವತಿ ಎಸ್.ಆರ್. ಸ್ವಾಗತಿಸಿದರು. ಎಸ್.ಜೆ.ಎಂ. ಪಾಲಿಟೆಕ್ನಿಕ್‌ನ ಎನ್.ಟಿ. ಲಿಂಗರಾಜು ನಿರೂಪಿಸಿದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ