ಸರೋಜಮ್ಮ, ರುದ್ರಪ್ಪ ಶಂಕರಪ್ಪ ಪಟ್ಟಣ ಅವರ ಸ್ಮರಣೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

‘ಶರಣ ತತ್ವ ಬದುಕಾಗಿಸಿಕೊಂಡು ನಡೆದ ಆದರ್ಶ ಜೀವಿಗಳು’

ಗದಗ :

ಲಿಂಗೈಕ್ಯ ಶರಣೆ ಸರೋಜಮ್ಮ ಹಾಗೂ ಲಿಂಗೈಕ್ಯ ಶರಣ ರುದ್ರಪ್ಪ ಶಂಕರಪ್ಪ ಪಟ್ಟಣ ಅವರು ಕೇವಲ ಒಂದು ಕುಟುಂಬದ ಹಿರಿಯರಲ್ಲ; ಸಂಸ್ಕಾರ, ಶರಣ ಸಂಸ್ಕೃತಿ, ಸಮಾಜಮುಖಿ ಚಿಂತನೆ, ಸ್ವಾತಂತ್ರ್ಯ ಹೋರಾಟದ ಆದರ್ಶ ಹಾಗೂ ಬಸವಾದಿ ಶಿವಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆದ ಆದರ್ಶ ಜೀವಿಗಳು.

ಅವರ ಜೀವನಮೌಲ್ಯಗಳು ಮತ್ತು ಸಮಾಜಸೇವೆಯ ಹೆಜ್ಜೆಗುರುತುಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಡಾ. ಅಶೋಕ ಆಲೂರು, ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ, ಕೊಡಗು ಅವರು ತಿಳಿಸಿದರು.

ರವಿವಾರ ಗದಗದ ಹುಡ್ಕೋ ಬಡಾವಣೆಯ ಶ್ರೀ ಸಚ್ಚಿದಾನಂದ ಕಲ್ಯಾಣ ಮಂಟಪದಲ್ಲಿ, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ರಾಮದುರ್ಗ ಹಾಗೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ವೇದಿಕೆಯ ಆಶ್ರಯದಲ್ಲಿ ನಡೆದ ಅವರ ಸ್ಮರಣೋತ್ಸವವು ಸಾಮಾನ್ಯ ಸ್ಮರಣ ಕಾರ್ಯಕ್ರಮವಾಗಿರದೆ, ಹಿರಿಯರ ಬದುಕಿನ ಆದರ್ಶಗಳನ್ನು ವರ್ತಮಾನದ ಬದುಕಿನೊಂದಿಗೆ ಜೋಡಿಸಿದ ಅಪೂರ್ವ ಶರಣ ಸಂಗಮವಾಗಿ ಮೂಡಿಬಂದಿತು.

ಬಸವಾದಿ ಶರಣರ ಅಮೂಲ್ಯ ವಚನ ಸಾಹಿತ್ಯದ ದಿವ್ಯ ಸಾನಿಧ್ಯದಲ್ಲಿ, ಪೂಜ್ಯ ಶಾಂತಲಿಂಗ ಸ್ವಾಮಿಗಳು, ದೊರೆಸ್ವಾಮಿ ಮಠ, ಬೈರನಟ್ಟಿ ಹಾಗೂ ತೋಂಟದಾರ್ಯಮಠ, ಶಿರೋಳ ಇವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವು ಆಧ್ಯಾತ್ಮಿಕತೆ, ಚಿಂತನೆ, ಕೃತಜ್ಞತೆ ಹಾಗೂ ಮಾನವೀಯ ಮೌಲ್ಯಗಳ ಸಂಗಮವಾಗಿತ್ತು.

 ಹಿರಿಯರ ಬದುಕೇ ನಮಗೆ ಬರೆದಿಟ್ಟ ಗ್ರಂಥ :

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅಶೋಕ ಆಲೂರು, ಕುಲಪತಿಗಳು, ಪಟ್ಟಣ ಕುಟುಂಬದ ಪರಂಪರೆ, ಶರಣ ಸಂಸ್ಕೃತಿ, ಸಮಾಜಸೇವೆ, ಸ್ವಾತಂತ್ರ್ಯ ಹೋರಾಟ ಹಾಗೂ ಬಸವಾದಿ ಶಿವಶರಣರ ತತ್ವಾದರ್ಶಗಳ ಪಾಲನೆಯನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ವಿಶ್ವಗುರು ಬಸವಣ್ಣ ಹಾಗೂ ಬಸವಾದಿ ಶರಣರ ತತ್ವಗಳನ್ನು ತಮ್ಮ ಬದುಕಿನ ದಾರಿದೀಪವನ್ನಾಗಿಸಿಕೊಂಡು, ತಂದೆ-ತಾಯಿಯ ಸ್ಮರಣೆಯನ್ನು ಇಷ್ಟೊಂದು ಅರ್ಥಪೂರ್ಣವಾಗಿ ಆಚರಿಸಿರುವುದು ನಿಜಕ್ಕೂ ಮಾದರಿಯ ಕಾರ್ಯವೆಂದು ಅವರು ಅಭಿಪ್ರಾಯಪಟ್ಟರು.

“ತಂದೆ-ತಾಯಿಯನ್ನು ನೆನೆಯುವುದು ಎಂದರೆ ಕೇವಲ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡುವುದಲ್ಲ; ಅವರ ಆದರ್ಶಗಳನ್ನು ಬದುಕಿನಲ್ಲಿ ಮುಂದುವರಿಸುವುದೇ ನಿಜವಾದ ಸ್ಮರಣೆ” ಎಂಬ ಆಶಯವನ್ನು ಅವರು ಮನಮುಟ್ಟುವಂತೆ ವ್ಯಕ್ತಪಡಿಸಿದರು.

ಮಗಳು ಆಶಾತಾಯಿ ಅವರು ತಮ್ಮ ಹಿರಿಯರ ವ್ಯಕ್ತಿತ್ವವನ್ನು ಪರಿಚಯಿಸಿದ ರೀತಿ, ಅವರ ಬದುಕಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದ ರೀತಿ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಇಂತಹ ಸ್ಮರಣೋತ್ಸವಗಳು ಪ್ರತಿಯೊಂದು ಕುಟುಂಬಕ್ಕೂ ಪ್ರೇರಣೆಯಾಗಬೇಕು ಎಂಬ ಸಂದೇಶವೂ ಈ ಸಂದರ್ಭದಲ್ಲಿ ಮೂಡಿಬಂದಿತು.

ಹಿರಿಯರನ್ನು ಚಿರಂತನವಾಗಿ ನೆನಪಿನಲ್ಲಿ ಉಳಿಸಬೇಕಾದರೆ, ಅವರ ಜೀವನಾನುಭವ, ಆದರ್ಶ, ಮೌಲ್ಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಬರಹದ ಮೂಲಕ ದಾಖಲಿಸಿ, ಗ್ರಂಥಗಳ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಡಾ. ಆಲೂರ ಅವರು ಅಭಿಪ್ರಾಯಪಟ್ಟರು.

ಕಪ್ಪತಗುಡ್ಡದ ನಂದೀಶ್ವರ ಸ್ವಾಮಿಗಳು ಮಾತನಾಡಿ, ಮಹಾರಾಷ್ಟ್ರದಿಂದ ಬಂದು ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಮತ್ತು ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿರುವ ಡಾ. ಶಶಿಕಾಂತ ಪಟ್ಟಣ ಅವರ ಸೇವಾ ಮನೋಭಾವವನ್ನು ವಿಶೇಷವಾಗಿ ಪ್ರಶಂಸಿಸಿದರು.

 ಕುಟುಂಬದ ಆದರ್ಶಕ್ಕೆ ಮತ್ತೊಂದು ಕೊಂಡಿ :

ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರು ಹಾಗೂ ರಾಮದುರ್ಗ ಶಾಸಕರಾದ ಅಶೋಕ ಪಟ್ಟಣ ಅವರು ಉದ್ಘಾಟನಾ ನುಡಿಗಳಲ್ಲಿ ತಮ್ಮ ಕುಟುಂಬದ ಪರಂಪರೆ, ಮಮತೆ, ಕರ್ತವ್ಯನಿಷ್ಠೆ, ಸಮಾಜಮುಖಿ ಚಿಂತನೆ ಹಾಗೂ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಭಾವುಕರಾಗಿ ಮೆಲುಕು ಹಾಕಿದರು.

ತಮ್ಮ ಸಹೋದರರೊಂದಿಗೆ ತಾವು ಕೂಡ ಹಿರಿಯರು ಬಿಟ್ಟುಹೋದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಗುತ್ತಿರುವುದನ್ನು ಹಂಚಿಕೊಂಡರು.

ಹಿರಿಯರನ್ನು ನೆನೆಯುವುದು ಎಂದರೆ ನಮ್ಮ ಬೇರುಗಳನ್ನು ನೆನೆಯುವುದು; ಬೇರುಗಳನ್ನು ನೆನೆದಾಗಲೇ ನಮ್ಮ ಬದುಕಿನ ಮರ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ಭಾವ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಪ್ರತಿಧ್ವನಿಸಿತು.

 ಡಾ. ಫ.ಗು. ಹಳಕಟ್ಟಿಯವರಿಗೆ ಗೌರವ ನಮನ :

ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದ ಮಹಾನ್ ಸೇವಕರಾದ ಡಾ. ಫ.ಗು. ಹಳಕಟ್ಟಿ ಅವರ ಮೊಮ್ಮಗಳಾದ ಶರಣೆ ಸುಜಾತಾ ಹಳಕಟ್ಟಿ ಅವರನ್ನು ಸತ್ಕರಿಸುವ ಮೂಲಕ ಹಳಕಟ್ಟಿ ಕುಟುಂಬಕ್ಕೆ ಗೌರವ ಸಮರ್ಪಿಸಲಾಯಿತು.

ಇದು ಕೇವಲ ಒಬ್ಬ ವ್ಯಕ್ತಿಯ ಸನ್ಮಾನವಾಗಿರದೆ, ವಚನ ಸಾಹಿತ್ಯದ ಮಹೋನ್ನತ ಪರಂಪರೆಗೆ ಸಲ್ಲಿಸಿದ ಗೌರವವಾಗಿತ್ತು.

ಕಾರ್ಯಕ್ರಮದ ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ ಘಟ್ಟವೆಂದರೆ “ಬಸವ ಗುರು” ಪ್ರಶಸ್ತಿ ಪ್ರದಾನ,

ಡಾ. ಅಶೋಕ ಆಲೂರು, ಡಾ. ವೀಣಾ ಯಲಿಗಾರ, ಡಾ. ದಾನಮ್ಮ ಝಳಕಿ, ಅಪ್ಪಾಸಾಹೇಬ ತುಪ್ಪದ, ಡಾ. ಶಾರದಾಮಣಿ ಹುನಶಾಳ, ಜಿ.ಎಂ. ಹಡಗಿನಾಳ ಹಾಗೂ ಶರಣೆ ಅನ್ನಪೂರ್ಣ ಎಸ್. ಕೊಟಗಿ ಅವರಿಗೆ “ ಬಸವ ಗುರು ” ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ವಿದ್ಯೆಯ ದಾರಿಯಲ್ಲಿ ಬೆಳಕು ನೀಡಿದ ಗುರುಗಳನ್ನು ಹಾಗೂ ಬದುಕಿನ ಅನುಭವಗಳಿಂದ ದಾರಿ ತೋರಿದ ಹಿರಿಯರನ್ನು ಗೌರವಿಸಲಾಯಿತು.

ವಿಶೇಷವಾಗಿ ಶಿಕ್ಷಕ ದಂಪತಿಗಳು ಹಾಗೂ ಅಧ್ಯಾಪಕರನ್ನು ಸಾಂಕೇತಿಕವಾಗಿ ಸನ್ಮಾನಿಸುವ ಮೂಲಕ “ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ; ಬದುಕಿನ ದಿಕ್ಕನ್ನು ತೋರಿಸುವ ದಾರಿದೀಪ” ಎಂಬ ಮೌಲ್ಯವನ್ನು ಎತ್ತಿಹಿಡಿಯಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಡಾ. ವೀಣಾ ಯಲಿಗಾರ ಅವರು ಪಟ್ಟಣ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿ, ಈ ಪ್ರಶಸ್ತಿಗಳು ಸಂತೋಷದ ಜೊತೆಗೆ ತಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ ಎಂಬ ಅರ್ಥಪೂರ್ಣ ಮಾತುಗಳನ್ನು ಹಂಚಿಕೊಂಡರು.

ಡಾ. ಎಸ್.ಸಿ. ಚವಡಿ, ಮಹಾದೇವಪ್ಪ ಬಟ್ಟೂರ, ಪ್ರೊ. ಶಾರದಮ್ಮ ಪಾಟೀಲ, ಆಶಾಲತಾ ಸೊಗಲದ, ಡಾ. ಶಿಲ್ಪಾ ಪವಾಡಶೆಟ್ಟರ ಹಾಗೂ ಶಾಸನತಜ್ಞೆ, ಹಿರಿಯ ಸಂಶೋಧಕಿ ಪ್ರೊ. ಹನುಮಾಕ್ಷಿ ಗೋಗಿ ಅವರ ಉಪಸ್ಥಿತಿಯು ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿತು.

ಕಾರ್ಯಕ್ರಮ ಕೇವಲ ತಮ್ಮ ತಂದೆ-ತಾಯಿಯ ಸ್ಮರಣೆಯಲ್ಲ; ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರ ಮನದಲ್ಲೂ ತಮ್ಮ ತಂದೆ-ತಾಯಿ, ಗುರುಗಳು ಮತ್ತು ಹಿರಿಯರ ನೆನಪಿನ ದೀಪವನ್ನು ಬೆಳಗಿಸಿದ ಅಪೂರ್ವ ಸಂದರ್ಭ.

ಪಟ್ಟಣ ಕುಟುಂಬದ ಆತ್ಮೀಯತೆ, ಸರಳತೆ, ಪ್ರೀತಿ ಮತ್ತು ಆದರದ ಆತಿಥ್ಯವು ಎಲ್ಲರ ಮನ ಗೆದ್ದಿತು. ಪಟ್ಟಣ ಸಹೋದರರು, ಅವರ ಅಕ್ಕ ಆಶಾಲತಾ ಸೊಗಲದ, ರವೀಂದ್ರ ಪಟ್ಟಣ ಅವರ ಪತ್ನಿ ಹಾಗೂ ಮಗಳ ಆತ್ಮೀಯ ನಡೆ-ನುಡಿ ಮತ್ತು ಸತ್ಕಾರವು ಕಾರ್ಯಕ್ರಮದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತು.

ಶಂಕರ ಕುಪ್ಪಸ್ತ ಅವರ ಅಚ್ಚುಕಟ್ಟಾದ ನಿರೂಪಣೆ ಕಾರ್ಯಕ್ರಮವನ್ನು ಸುಂದರವಾಗಿ ಮುನ್ನಡೆಸಿತು. ಕೊನೆಯಲ್ಲಿ ನೀಡಿದ ಸಾತ್ವಿಕ ಹಾಗೂ ಹಿತಕರ ಪ್ರಸಾದವು ದಾಸೋಹದ ಪರಂಪರೆಯನ್ನು ಸಾರ್ಥಕಗೊಳಿಸಿತು.

ಪ್ರೊ. ರವೀಂದ್ರ ಪಟ್ಟಣ ಸರ್ವರನ್ನು ಸ್ವಾಗತಿಸಿದರು. ಪ್ರೊ. ಶಶಿಕಾಂತ ಪಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಪಟ್ಟಣ ಶರಣು ಸಮರ್ಪಣೆ ಮಾಡಿದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *