ನಾಟಕ: ನೀವು ಇವತ್ತು ವಚನ ಕೇಳಲು ಶುರು ಮಾಡಿದರೆ, ನಾಳೆ ನಿಮ್ಮ ಮಕ್ಕಳೂ ಕೇಳುತ್ತಾರೆ

ಶಾಂಡಿಲ್ಯ (ಹರ್ಷ)
ಶಾಂಡಿಲ್ಯ (ಹರ್ಷ)

ನನಗೆ ವಚನ ಕೇಳುವ ಅಭ್ಯಾಸ ಇಲ್ಲ ಎನ್ನುವವರಿಗೆ ಒಂದು ಸಂದೇಶ

ದೃಶ್ಯ 1

ಹಕ್ಕಿಗಳ ಚಿಲಿಪಿಲಿ. ಸೂರ್ಯನ ಕಿರಣಗಳು ನಿಧಾನವಾಗಿ ಊರಿನ ಮೇಲೆ ಬೀಳುತ್ತಿರುತ್ತವೆ.

ನಂಜಪ್ಪ ಸುಮಾರು 60 ವರ್ಷ. ಪ್ರತಿದಿನದಂತೆ ಬೆಳಗಿನ ವಾಕಿಂಗ್‌ಗೆ ಹೊರಟಿದ್ದಾನೆ.

ಕೈಯಲ್ಲಿ ಸಣ್ಣ ಕೋಲು. ನಿಧಾನವಾಗಿ ನಡೆಯುತ್ತಾ ಸುತ್ತಮುತ್ತಲಿನ ಮನೆಗಳನ್ನು ಗಮನಿಸುತ್ತಾನೆ.

ಅದೇ ಸಮಯದಲ್ಲಿ ಬಸವರಾಜು ತನ್ನ ಮನೆಯ ಮುಂದೆ ನಿಂತು

ಬಸವರಾಜು:
ಓಹೋ… ನಂಜಪ್ಪ! ಬಾ ಬಾ… ಬೆಳಿಗ್ಗೆ ಬೆಳಿಗ್ಗೆ ನಮ್ಮ ಮನೆ ಕಡೆಗೆ ಬಂದಿದ್ದೀಯಲ್ಲ!

ನಂಜಪ್ಪ:
ವಾಕಿಂಗ್‌ಗೆ ಬಂದಿದ್ದೆ. ನಿನ್ನ ಮನೆ ಮುಂದೆ ಬಂದ ಮೇಲೆ ಒಂದು ಕಾಫಿ ಕುಡಿದು ಹೋಗೋಣ ಅನಿಸ್ತು.

ಬಸವರಾಜು:
ಅಯ್ಯೋ, ಕಾಫಿ ಕುಡಿಯೋಕೆ ಕೇಳಬೇಕಾ? ಬಾ ಒಳಗೆ.

ಇಬ್ಬರೂ ಮನೆಯೊಳಗೆ ಹೋಗುತ್ತಾರೆ.

ದೃಶ್ಯ 2 – ಮನೆಯ ಹಾಲ್

ಬಸವರಾಜು ಅಡುಗೆಮನೆಯಿಂದ ಎರಡು ಕಪ್ ಕಾಫಿ ತರುತ್ತಾನೆ.

ಇಬ್ಬರೂ ಕುಳಿತುಕೊಳ್ಳುತ್ತಾರೆ.

ಹಿನ್ನೆಲೆಯಲ್ಲಿ ಹಳೆಯ ಸಂಸ್ಕೃತ ಭಕ್ತಿಗೀತೆ ಕೇಳಿಸುತ್ತಿರುತ್ತದೆ.

ನಂಜಪ್ಪ ಕಾಫಿ ಕುಡಿಯುತ್ತಾ ಆ ಹಾಡನ್ನು ಗಮನಿಸುತ್ತಾನೆ.

ಸ್ವಲ್ಪ ಸಮಯ ಮೌನ.

ನಂಜಪ್ಪ:
ಈಗ ಬರುತ್ತಿರುವ ಹಾಡಿನ ಅರ್ಥ ನಿನಗೆ ಗೊತ್ತಾ?

ಬಸವರಾಜು:
ಇಲ್ಲ.

ನಂಜಪ್ಪ:
ಇಲ್ಲವಾ?

ಬಸವರಾಜು:
ಇಲ್ಲಪ್ಪ. ಹಾಡು ಚೆನ್ನಾಗಿದೆ. ಕೇಳೋಕೆ ಇಷ್ಟ. ಅಷ್ಟೇ.

ನಂಜಪ್ಪ:
ಅರ್ಥ ಗೊತ್ತಿಲ್ಲ… ಆದರೂ ಪ್ರತಿದಿನ ಕೇಳ್ತೀಯಾ?

ಬಸವರಾಜು:
ಹೌದು.

ನಂಜಪ್ಪ:
ಯಾಕೆ?

ಬಸವರಾಜು ನಗುತ್ತಾನೆ.

ಬಸವರಾಜು:
ಅದನ್ನ ನಮ್ಮ ತಂದೆ ಕೇಳ್ತಿದ್ರು. ನಮ್ಮ ತಾತ ಕೂಡ ಕೇಳ್ತಿದ್ರು. ಅವರು ಹೇಳ್ತಿದ್ರು… “ಇಂತಹ ದೇವರ ಹಾಡು ಕೇಳಿದ್ರೆ ಮನೆಯಲ್ಲಿ ಒಳ್ಳೆಯದಾಗುತ್ತೆ” ಅಂತ.

ನಂಜಪ್ಪ ಕಾಫಿ ಕಪ್ ಕೆಳಗಿಡುತ್ತಾನೆ.

ಅವನ ಮುಖದಲ್ಲಿ ಸಣ್ಣ ನಗು.

ನಂಜಪ್ಪ:
ಅಂದರೆ… ಹಾಡಿನ ಅರ್ಥ ಗೊತ್ತಿಲ್ಲ. ಆದರೆ ಕೇಳಿದರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ?

ಬಸವರಾಜು:
ಹೌದು.

ನಂಜಪ್ಪ:
ಹಾಗಾದರೆ ಒಂದು ಮಾತು ಕೇಳ್ತೀನಿ…ನಿನಗೆ ಅರ್ಥವಾಗದ ಹಾಡು ಕೇಳಿದ್ರೆ ಒಳ್ಳೆಯದಾಗುತ್ತೆ ಅಂತ ನಂಬ್ತೀಯ.

ಬಸವರಾಜು:
ಹೌದು.

ನಂಜಪ್ಪ:
ಆದರೆ… ಅರ್ಥವಾಗುವ ಹಾಡು ಕೇಳಿದ್ರೆ ಇನ್ನೂ ಒಳ್ಳೆಯದಲ್ಲವಾ?

ಬಸವರಾಜು ಯೋಚಿಸುತ್ತಾನೆ.

ಬಸವರಾಜು:
ಅದು ಹೇಗೆ?

ನಂಜಪ್ಪ:
ನಮ್ಮ ವಚನಗಳು ಗೊತ್ತಲ್ಲ?

ಬಸವರಾಜು:
ಗೊತ್ತು.

ನಂಜಪ್ಪ:
ಅದರಲ್ಲಿರುವ ಮಾತುಗಳು ನಮಗೆ ಅರ್ಥವಾಗುತ್ತವೆ. ಜೀವನ ಹೇಗೆ ಇರಬೇಕು, ಮನುಷ್ಯ ಹೇಗೆ ಬದುಕಬೇಕು, ಇನ್ನೊಬ್ಬರ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನ ಹೇಳುತ್ತವೆ.

ಬಸವರಾಜು ಮೌನವಾಗಿರುತ್ತಾನೆ.

ನಂಜಪ್ಪ:
ನೀನು ಈಗ ಕೇಳುತ್ತಿರುವ ಹಾಡಿನ ಅರ್ಥ ನಿನಗೆ ಗೊತ್ತಿಲ್ಲ.

ಬಸವರಾಜು:
ಹೌದು.

ನಂಜಪ್ಪ:
ಆದರೆ ವಚನ ಕೇಳಿದರೆ… ಅದರಲ್ಲಿರುವ ಒಂದು ಮಾತಾದರೂ ನಿನ್ನ ಮನಸ್ಸಿಗೆ ತಲುಪಬಹುದು.

ಬಸವರಾಜು ತಲೆಯಾಡಿಸುತ್ತಾನೆ.

ಬಸವರಾಜು:
ಸರಿ. ಆದರೆ ನನಗೆ ವಚನ ಕೇಳುವ ಅಭ್ಯಾಸ ಇಲ್ಲ.

ನಂಜಪ್ಪ ನಗುತ್ತಾನೆ.

ನಂಜಪ್ಪ:
ಅಭ್ಯಾಸ ಇಲ್ಲ ಅಂದ್ರೆ… ಇವತ್ತಿನಿಂದ ಶುರು ಮಾಡು.

ಬಸವರಾಜು:
ಇವತ್ತಿನಿಂದ?

ನಂಜಪ್ಪ:
ಹೌದು.

ನಂಜಪ್ಪ:
ನೀನು ಇವತ್ತು ಶುರು ಮಾಡಿದರೆ, ನಾಳೆ ನಿನ್ನ ಮಕ್ಕಳು ಕೇಳ್ತಾರೆ. ಅವರು ಕೇಳಿದರೆ ನಿನ್ನ ಮೊಮ್ಮಕ್ಕಳು ಕೇಳ್ತಾರೆ. ಒಂದು ದಿನ ಅದು ನಿಮ್ಮ ಮನೆಯ ದಿನಚರಿಯಾಗುತ್ತೆ.

ಬಸವರಾಜು ಆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ.

ನಂಜಪ್ಪ:
ಒಂದು ಹಾಡು ಅರ್ಥವಾಗದೇ ಕೇಳುವುದಕ್ಕಿಂತ… ಒಂದು ಮಾತು ಅರ್ಥ ಮಾಡಿಕೊಂಡು ಬದುಕೋದು ಮುಖ್ಯ.

ಬಸವರಾಜು ನಿಧಾನವಾಗಿ ತಲೆಯಾಡಿಸುತ್ತಾನೆ.

ಬಸವರಾಜು:
ಹೌದು ನಂಜಪ್ಪ. ನೀನು ಹೇಳೋದು ಸರಿ.

ನಂಜಪ್ಪ ತನ್ನ ಮೊಬೈಲ್ ತೆಗೆದುಕೊಳ್ಳುತ್ತಾನೆ.

ನಂಜಪ್ಪ:
ನೋಡು… ನಿನಗೆ ಕೆಲವು ವಚನಗಳ ಹಾಡು ಕಳಿಸ್ತೀನಿ.

ಮೊಬೈಲ್‌ನಲ್ಲಿ ಕೆಲವು ವಚನ ಗೀತೆಗಳನ್ನು ಹುಡುಕುತ್ತಾನೆ.

ಬಸವರಾಜು:
ನನಗೆ ಅರ್ಥವಾಗುತ್ತಾ?

ನಂಜಪ್ಪ:
ಮೊದಲ ದಿನ ಎಲ್ಲವೂ ಅರ್ಥವಾಗಬೇಕಿಲ್ಲ. ಕೇಳುತ್ತಾ ಹೋದರೆ… ನಿಧಾನವಾಗಿ ಅರ್ಥವಾಗುತ್ತೆ.

ನಂಜಪ್ಪ ಕೆಲವು ಹಾಡುಗಳನ್ನು ಬಸವರಾಜನ ಮೊಬೈಲ್‌ಗೆ ಕಳುಹಿಸುತ್ತಾನೆ.

ನಂಜಪ್ಪ:
ಇವತ್ತು ಬೆಳಿಗ್ಗೆ ಒಂದು ಕೇಳು. ಸಂಜೆ ಒಂದು ಕೇಳು.

ಬಸವರಾಜು:
ಸರಿ.

ನಂಜಪ್ಪ ಎದ್ದು ನಿಲ್ಲುತ್ತಾನೆ.

ನಂಜಪ್ಪ:
ಸರಿ, ನಾನು ಹೊರಡ್ತೀನಿ.

ಬಸವರಾಜು:
ನಾಳೆ ಮತ್ತೆ ಬಾ.

ನಂಜಪ್ಪ:
ಯಾಕೆ?

ಬಸವರಾಜು:
ನಾಳೆ ನಾನು ಕೇಳಿದ ವಚನದ ಅರ್ಥ ನಿನಗೆ ಹೇಳಬೇಕು.

ಇಬ್ಬರೂ ನಗುತ್ತಾರೆ.

ದೃಶ್ಯ 5 – ಬಸವರಾಜನ ಮನೆ / ಮರುದಿನ ಬೆಳಗ್ಗೆ

ಬೆಳಗ್ಗೆ.

ಬಸವರಾಜು ಕಾಫಿ ಮಾಡುತ್ತಿರುತ್ತಾನೆ.

ಮೊಬೈಲ್‌ನಲ್ಲಿ ವಚನ ಗೀತೆ ಕೇಳಿಸುತ್ತಿರುತ್ತದೆ.

ದೃಶ್ಯ 6 – ಒಂದು ವಾರದ ನಂತರ – ಬಸವರಾಜನ ಮನೆ

ಬಸವರಾಜನ ಮಗ:ಅಪ್ಪಾ… ಇತ್ತೀಚೆಗೆ ಬೇರೆ ಹಾಡು ಹಾಕ್ತಿಲ್ಲ?

ಬಸವರಾಜು:
ಹಾಕ್ತೀನಿ. ಆದರೆ ಈಗ ಇವುಗಳನ್ನು ಕೇಳೋಕೆ ಇಷ್ಟ ಆಗ್ತಿದೆ.

ಬಸವರಾಜನ ಮಗ:ಯಾಕೆ?

ಬಸವರಾಜು:
ಕೇಳಿದ್ರೆ ಮಾತು ಅರ್ಥವಾಗುತ್ತೆ.

ಮಗ ಕುತೂಹಲದಿಂದ ಕುಳಿತುಕೊಳ್ಳುತ್ತಾನೆ.

ಬಸವರಾಜನ ಮಗ:ನಾನೂ ಕೇಳ್ತೀನಿ.

ಇಬ್ಬರೂ ಕೇಳುತ್ತಾರೆ.

ದೃಶ್ಯ 7 – ಕೆಲವು ದಿನಗಳ ನಂತರ / ನಂಜಪ್ಪ ಮತ್ತು ಬಸವರಾಜು

ಇಬ್ಬರೂ ಮತ್ತೆ ಕಾಫಿ ಕುಡಿಯುತ್ತಿದ್ದಾರೆ.

ನಂಜಪ್ಪ:
ಹೇಗಿದೆ ವಚನ ಕೇಳೋ ಅಭ್ಯಾಸ?

ಬಸವರಾಜು:
ಮೊದಲಿಗೆ ಹೊಸದಾಗಿತ್ತು. ಈಗ ಬೆಳಗ್ಗೆ ವಚನ ಕೇಳದಿದ್ರೆ ಏನೋ ಕಳೆದುಕೊಂಡ ಹಾಗೆ ಅನಿಸುತ್ತೆ. ಹಿಂದೆ ಹಾಡು ಕೇಳುತ್ತಿದ್ದೆ… ಆದರೆ ಮಾತು ಕೇಳುತ್ತಿರಲಿಲ್ಲ.ಈಗ ಮಾತು ಕೇಳ್ತೀನಿ… ಅರ್ಥ ಮಾಡ್ಕೊಳ್ತೀನಿ… ಯೋಚನೆ ಮಾಡ್ತೀನಿ.

ನಂಜಪ್ಪ:
ಅಷ್ಟೇ ಸಾಕು.

ದೃಶ್ಯ 8 – ಒಂದು ತಿಂಗಳ ನಂತರ / ಗ್ರಾಮದ ವಿವಿಧ ಸ್ಥಳಗಳು

ಒಂದು ತಿಂಗಳು ಕಳೆದಿರುತ್ತದೆ.

ಬಸವರಾಜನ ಮನೆಯ ಕಿಟಕಿಯಿಂದ ವಚನದ ಹಾಡು ಕೇಳಿಸುತ್ತದೆ.

ಪಕ್ಕದ ಮನೆಯ ಮಹಿಳೆ ಆಲಿಸುತ್ತಾಳೆ.

ಒಬ್ಬ ವೃದ್ಧ ತನ್ನ ಮನೆಯ ರೇಡಿಯೋದಲ್ಲಿ ಅದೇ ರೀತಿಯ ವಚನ ಕೇಳುತ್ತಾನೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುವ ಇಬ್ಬರು ಯುವಕರು ಬಸವರಾಜನ ಮನೆಯೊಳಗಿಂದ ಬರುತ್ತಿರುವ ಹಾಡನ್ನು ಕೇಳುತ್ತಾರೆ.

ಯುವಕ 1:
ಏನಿದು ಹೊಸದಾಗಿ ಬಸವರಾಜನ ಮನೆಯಲ್ಲಿ ಕೇಳಿಸ್ತಿದೆ?

ಯುವಕ 2:
ವಚನ ಅಂತ ಕಾಣುತ್ತೆ.

ಅವರು ನಿಂತು ಸ್ವಲ್ಪ ಕೇಳುತ್ತಾರೆ.

ದೃಶ್ಯ 9 – ಬಸವರಾಜನ ಮನೆ

ಬಸವರಾಜನ ಮಗ ತನ್ನ ಮೊಬೈಲ್‌ನಲ್ಲಿ ವಚನ ಕೇಳುತ್ತಿದ್ದಾನೆ.

ಅವನ ಮಗು ಕೂಡ ಹತ್ತಿರ ಕುಳಿತಿದೆ.

ಮಗು:
ಅಪ್ಪಾ… ಇದು ಏನು ಹಾಡು?

ಬಸವರಾಜನ ಮಗ:ವಚನ.

ಮಗು:ಅದರ ಅರ್ಥ ಏನು?

ಮಗ ನಗುತ್ತಾನೆ.

ಬಸವರಾಜನ ಮಗ:ಅದರ ಅರ್ಥ ಹೇಳ್ತೀನಿ..

ಅಜ್ಜ ಬಸವರಾಜು ದೂರದಿಂದ ಇದನ್ನೆಲ್ಲಾ ನೋಡುತ್ತಿರುತ್ತಾನೆ.

ಅವನ ಮುಖದಲ್ಲಿ ಸಂತೋಷ.

ಅವನಿಗೆ ನಂಜಪ್ಪ ಹೇಳಿದ್ದ ಮಾತು ನೆನಪಾಗುತ್ತದೆ:

ನಂಜಪ್ಪನ ಧ್ವನಿ – VOICE OVER:
“ನೀನು ಇವತ್ತು ಶುರು ಮಾಡಿದರೆ… ನಾಳೆ ನಿನ್ನ ಮಕ್ಕಳು ಕೇಳ್ತಾರೆ. ಅವರ ಮಕ್ಕಳು ಕೂಡ ಕೇಳ್ತಾರೆ.”

ಬಸವರಾಜು ಸಣ್ಣ ನಗು ಬೀರುತ್ತಾನೆ.

“ಒಂದು ಅಭ್ಯಾಸವನ್ನು ಬದಲಾಯಿಸಲು ಒಬ್ಬ ವ್ಯಕ್ತಿ ಸಾಕು…”

“ಒಳ್ಳೆಯ ಮಾತನ್ನು ಮುಂದಿನ ಪೀಳಿಗೆಗೆ ತಲುಪಿಸಲು ಒಂದು ಮನೆ ಸಾಕು.”

ಸ್ವಲ್ಪ ವಿರಾಮ.

ಕೊನೆಯ ಬರಹ:

“ಕೇಳೋಣ… ಅರ್ಥ ಮಾಡಿಕೊಳ್ಳೋಣ… ಬದುಕಿನಲ್ಲಿ ಅಳವಡಿಸಿಕೊಳ್ಳೋಣ.”

FADE OUT.

Share This Article
2 Comments
  • Can you please share one vachana every day with the meaning explaining in simple kannada language so that we can understand real meaning of every vachana. Please tell some books where we can understand vachana and their meaning easily .

  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

ಚಿತ್ರ ನಿರ್ದೇಶಕರು, ಬೆಂಗಳೂರು (9606300369, kanncinm@gmail.com)