ದಾವಣಗೆರೆ :
“ತನುವಿನಲ್ಲಿ ನಿರ್ಮೋಹ,
ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ,
ಚಿತ್ತದಲ್ಲಿ ನಿರಪೇಕ್ಷೆ,
ವಿಷಯಂಗಳಲ್ಲಿ ಉದಾಸೀನ,
ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ.”
ನಿರ್ಮೋಹ, ನಿರಹಂಕಾರ, ನಿರ್ಭಯ, ಬೇಕು ಬೇಡಗಳಿಲ್ಲದ ನಿರಪೇಕ್ಷೆ, ಅನ್ಯ ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು, ದೇಹ ಭಾವ ಅಳಿದು ; ಭಾವದಲ್ಲಿ ದಿಗಂಬರವಾಗಿ ಪರವಸ್ತುವಿನ ನೆನಹಿನಲ್ಲಿ , ಪರಮಾನಂದ ನೆಲೆಗೊಂಡವರು ಲಿಂಗವೇ ತಾವಗಿರುತ್ತಾರೆ, ಅಂತಹ ಗುರುವಿನ ಶರಣನ ಜಂಗಮದ ಸರ್ವಾಂಗವು ಲಿಂಗಮಯ, ಲಿಂಗ ಶರೀರವಾಗಿರುತ್ತದೆ ಎಂದು, ಮೇಲಿನ ವಚನದಲ್ಲಿ ಶರಣ ಆದಯ್ಯನವರು, ಗುರುವಿನ ಮನಸ್ಥಿತಿ, ಶರಣರ ಜಂಗಮದ ಮನಸ್ಥಿತಿ ಮತ್ತು ನಿಲುವು ಹೇಗಿದೆ ಎಂಬುದಾಗಿ ವಿವರಿಸಿದ್ದಾರೆ.
ಇಂತಹ ಘನತರವಾದ ವ್ಯಕ್ತಿತ್ವವನ್ನು ಹೊಂದಿದ್ದವರು ಚಿತ್ರದುರ್ಗ ಮುರುಘಾಮಠದ ಜಗದ್ಗುರು ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು.
ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದಲ್ಲಿ ; ಭಕ್ತಿ ಸಂಪನ್ನರು, ಜಂಗಮ ಪ್ರೇಮಿಗಳಾದ ಹಿರೇಮಠದ ಚೆನ್ನಬಸಯ್ಯ ಮತ್ತು ಭ್ರಮರಾಂಬೆ ದಂಪತಿಗಳಿರುತ್ತಾರೆ. ಚೆನ್ನಬಸಯ್ಯನವರ ಮನೆಗೆ ಆಗಾಗ ಶರಣರು, ಜಂಗಮರು ಬಂದು ಪೂಜೆ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದರು. ಒಮ್ಮೆ ಇವರ ಮನೆಗೆ ಒಬ್ಬ ಶಿವಯೋಗಿಗಳು ಬಂದು, ಪೂಜೆ ಪ್ರಸಾದ ಸ್ವೀಕರಿಸಿ ಹೋಗುವಾಗ, ನಿಮಗೆ ಒಬ್ಬ ಪುಣ್ಯ ಪುರುಷ ಮಗ ಹುಟ್ಟುತ್ತಾನೆ, ಅವನಿಂದ ಸಮಾಜೋದ್ಧಾರಕ ಕೆಲಸಗಳಾಗುತ್ತವೆ, ಅವನು ಸಮಾಜದ ಶಕ್ತಿಯಾಗುತ್ತಾನೆ ಎಂದು ಭವಿಷ್ಯವಾಣಿ ನುಡಿದು ಹೋಗುತ್ತಾರೆ.
ಅದರಂತೆ ದಿನಾಂಕ 27.08.1874 ರಂದು ಮಗುವಿನ ಜನನವಾಗುತ್ತದೆ. ಆ ಮಗುವಿಗೆ ಚನ್ನವೀರದೇವರು ಎಂದು ಹೆಸರಿಡುತ್ತಾರೆ. ಕೆಲವು ದಿನಗಳ ನಂತರ ಶಿವಯೋಗಿಗಳ ಆಜ್ಞೆಯಂತೆ, ದಂಪತಿಗಳು ಗದಗ ತೊಂಟದಾರ್ಯ ಮಠಕ್ಕೆ ಚೆನ್ನವೀರದೇವರನ್ನು ಒಪ್ಪಿಸುತ್ತಾರೆ. ಚೆನ್ನವೀರದೇವರು ಮಠದಲ್ಲಿಯೇ ಇದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಾರೆ. ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು, ಸಂಸ್ಕೃತ ವಿದ್ಯಾಭ್ಯಾಸವನ್ನು ಕಾಶಿಯಲ್ಲಿ ಮಾಡುತ್ತಾರೆ.
ಚೆನ್ನವೀರದೇವರಲ್ಲಿ ಜ್ಞಾನದ ವಿದ್ವತ್ತು ಅಪಾರವಾಗಿತ್ತು. ಯಾರೆ ಅವರೊಂದಿಗೆ ; ಯಾವುದೇ ವಿಷಯದ ಕುರಿತು ಸಂವಾದ ಮಾಡಿದರು, ವಚನ ಸಾಹಿತ್ಯ, ವಿವಿಧ ಪ್ರಕಾರದ ಸಾಹಿತ್ಯ, ಸಂಸ್ಕೃತ ಗ್ರಂಥಗಳ ಕುರಿತು ಸಂವಾದ ಪ್ರಶ್ನೋತ್ತರಗಳನ್ನು ನಡೆಸಿದರು, ಸಹಜವಾಗಿಯೇ ಚೆನ್ನವೀರದೇವರು ಜಯಗಳಿಸುತ್ತಿದ್ದರು. ಹಾಗಾಗಿ ಎಲ್ಲರೂ ಇವರನ್ನು ಜಯದೇವ ಎಂದು ಕರೆಯುತ್ತಿದ್ದರು. ಅಥಣಿ ಮುರುಘೇಂದ್ರ ಶಿವಯೋಗಿಗಳ ಕರಕಮಲ ಸಂಜಾತರಾಗಿ ಚೆನ್ನವೀರದೇವರು ಬೆಳೆಯುತ್ತಾರೆ. ಸವದತ್ತಿಯಲ್ಲಿ ನಡೆದ ಬಸವ ಪುರಾಣದ ಮಂಗಲ ಕಾರ್ಯಕ್ರಮದಲ್ಲಿ, ಚೆನ್ನವೀರದೇವರ ಪ್ರವಚನವಿರುತ್ತದೆ, ಆಗ ಅಥಣಿಯ ಮುರುಘೇಂದ್ರ ಶಿವಯೋಗಿಗಳು ಚೆನ್ನವೀರದೇವರಿಗೆ ಗೌರವಿಸುವ ಸಮಯದಲ್ಲಿ, ಮುಂದೆ ಜಯದೇವ ಜಗದ್ಗುರುವಾಗುವೆ ಎಂದು ಆಶೀರ್ವಾದ ಮಾಡುತ್ತಾರೆ.
ಶಿವಯೋಗಿಗಳ ವಾಣಿಯಂತೆ ; ಚೆನ್ನವೀರದೇವರು ಬಸವಣ್ಣನವರು ಸ್ಥಾಪಿಸಿದ ಶೂನ್ಯಪೀಠದ ಅಧ್ಯಕ್ಷರಾಗಿ, ಚಿತ್ರದುರ್ಗ ಮುರುಘಾ ಮಠಕ್ಕೆ 03.11.1903 ರಂದು 17 ನೇ ಪೀಠಾಧಿಪತಿಯಾಗುತ್ತಾರೆ. ಸಾಮಾಜಿಕ, ಆದ್ಯಾತ್ಮಿಕ ಕಾರ್ಯ ಚಟುವಟಿಕೆಯಿಂದ ಮುರುಘಾಮಠದ ಕೀರ್ತಿಯನ್ನು ಹೆಚ್ಚಿಸುತ್ತಾರೆ.
ಸಮಾನತೆಯ ಸಮ ಸಮಾಜವನ್ನು ನಿರ್ಮಾಣದ ನುಡಿಗಳು ವೇಧಿಕೆಯ ಭಾಷಣಕ್ಕೆ ಮೀಸಲು ಮಾಡದೆ, ಎಲ್ಲಾ ಸಮುದಾಯ, ಧರ್ಮದವರೊಂದಿಗೆ ಜಗದ್ಗುರುಗಳು ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡು ಭಾವೈಕ್ಯತೆಯನ್ನು ಬೆಸೆಯುತ್ತಾರೆ.
ಶಿಕ್ಷಣದಿಂದ ಜ್ಞಾನ ಮತ್ತು ಜೀವನಾಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ, ವಿದ್ಯಾರ್ಥಿಗಳು ಉಳಿದುಕೊಳ್ಳಲು ಪ್ರಸಾದ ನಿಲಯಗಳನ್ನು ( ವಿದ್ಯಾರ್ಥಿ ನಿಲಯ / ಹಾಸ್ಟೆಲ್ ) ಪ್ರಥಮವಾಗಿ ಸ್ಥಾಪಿಸಿದ ಹೆಗ್ಗಳಿಕೆಯು ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಭಾಗದಲ್ಲಿರುವ ತಮ್ಮ ಶಾಖಾಮಠದಲ್ಲಿ ಪ್ರಸಾದ ನಿಲಯಗಳನ್ನು ತೆರೆಯುತ್ತಾರೆ. ಯಾವುದೇ ಬೇಧ ಇಲ್ಲದೆ, ಅಲ್ಲಿ ಲಿಂಗಾಯತರಿಗಷ್ಟೇ ಅಲ್ಲದೆ ; ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಕೊಡುತ್ತಾರೆ. ವಿವಿಧ ಸಮುದಾಯ ಧರ್ಮದ ಮುಖಂಡರುಗಳು ಜಗದ್ಗುರುಗಳಲ್ಲಿ ಬಂದು ಬಿನ್ನಹಿಸಿ, ತಮ್ಮ ಸಮುದಾಯದಲ್ಲು ವಿದ್ಯಾರ್ಥಿ ನಿಲಯಗಳನ್ನು ತೆರೆಯಲು, ಆರ್ಥಿಕ ಸಹಾಯವನ್ನು, ಆಶೀರ್ವಾದವನ್ನು ಜಗದ್ಗುರುಗಳಿಂದ ಪಡೆದುಕೊಂಡು ಹೋಗುತ್ತಾರೆ. ಈ ಕಾರಣದಿಂದ ವಿದ್ಯಾರ್ಥಿ ನಿಲಯಗಳನ್ನು ತೆರೆಯುವಲ್ಲಿ ಜಗದ್ಗುರುಗಳು ಕೈಗೊಂಡ ಅವಿಸ್ಮರಣೀಯ ಕಾರ್ಯದಿಂದ, ಜಯದೇವ ಜಗದ್ಗುರುಗಳನ್ನು ‘”ವಿದ್ಯಾರ್ಥಿ ನಿಲಯಗಳ ಜನಕ” ಎಂದು ಕರೆಯಲಾಗುತ್ತದೆ. ವಿವಿಧ ಮಠಗಳು ; ವಿದ್ಯಾರ್ಥಿ ನಿಲಯಗಳನ್ನು ತೆರೆಯಲು, ಜಗದ್ಗುರುಗಳು ಮಾಡಿದ ಕೆಲಸ ಮಾದರಿಯಾಗಿದೆ.
ಹೀಗೆ ಜಯದೇವ ಜಗದ್ಗುರುಗಳು ಅನೇಕ ಕ್ಷೇತ್ರದಲ್ಲಿ ಸಾಮಾಜಿಕ ಸೇವಯವಕಾರ್ಯಗಳನ್ನು, ಕನ್ನಡ ಚಳುವಳಿಗಳನ್ನು ಮಾಡುತ್ತಾ, ಪೀಠದ ಪರಂಪರೆಯಾದ ಬಸವ ತತ್ವದ ಶಿವಯೋಗ, ಅರಿವು ಆಚಾರ, ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳ ಸಿದ್ಧಾಂತಗಳ ಮಹತ್ವವನ್ನು ತಿಳಿಸುತ್ತಾ, ಬಸವ ಚೇತನವಾಗಿ, ಚಿನ್ಮೂಲಾದ್ರಿ ಚೇತನವಾಗಿದ್ದಾರೆ.
ಶಿವಯೋಗಿಗಳು ವಿಭೂತಿಪುರುಷರು ಆದ ಜಯದೇವ ಜಗದ್ಗುರುಗಳು 02.10.1956 ರಂದು ಲಿಂಗೈಕ್ಯರಾಗುತ್ತಾರೆ. ಜಗದ್ಗುರುಗಳ ಇಚ್ಛೆಯಂತೆ ; ದಾವಣಗೆರೆಯ ಶಿವಯೋಗಾಶ್ರಮದಲ್ಲಿ, ಜಯದೇವ ಜಗದ್ಗುರುಗಳ ಲಿಂಗ ಶರೀರದ ಗದ್ದುಗೆ ಇದೆ.
“ಸಿದ್ಧರ ಗ್ಯಾನ, ಶಿವ ಗ್ಯಾನ ” ಎಂಬ ಜಾನಪದಕಾರರ ನುಡಿಯಂತೆ, ನಾಡಿನಾದ್ಯಂತ ಜಗದ್ಗುರುಗಳನ್ನು ಸ್ಮರಣೆ ಮಾಡಿಕೊಳ್ಳುವ ಅನೇಕ ಭಕ್ತರಿದ್ದಾರೆ. ದಾವಣಗೆರೆ ಚಿತ್ರದುರ್ಗ ಮತ್ತು ಕೊಪ್ಪಳದ ಸುತ್ತ ಮುತ್ತಲಿನ ಅನೇಕ ಭಕ್ತರು, ತಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರು, ಮೊದಲು ಗುರುಗಳ ಗದ್ದುಗೆಗೆ ಬಂದು, ಆಶೀರ್ವಾದ ಪಡೆದು ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ಪ್ರತಿವರ್ಷ ದಾವಣಗೆರೆಯಲ್ಲಿ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ : ಜಯದೇವ ಜಗದ್ಗುರುಗಳ ಜಯಂತಿ ಸ್ಮರಣೋತ್ಸವ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ. ಇದೆ ಅಕ್ಟೊಬರ್ 8 ರಂದು ಜಯದೇವ ಜಗದ್ಗುರುಗಳ 70 ನೇ ವರ್ಷದ ಸ್ಮರಣೋತ್ಸವ ಮತ್ತು ರಥೋತ್ಸವ, ವಚನ ಗ್ರಂಥ ಮೆರವಣಿಗೆ ಕಾರ್ಯಕ್ರಮವು ನಾಡಿನ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ನಡೆಯುತ್ತಿದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
