ಲಿಂಗಾಯತರಲ್ಲಿ ಸಂಘಟನೆ ಮನೋಭಾವ ಬೆಳೆಯುತ್ತಿದೆ: ಸಾಣೆಹಳ್ಳಿ ಸ್ವಾಮೀಜಿ

Basava Media
Basava Media

‘ಮಠಾಧಿಪತಿಗಳು ಮಾಡಬೇಕಾದ ಕೆಲಸವನ್ನು ಲಿಂಗಾಯತ ಸಮಾಜ ಮಾಡಲು ಮುಂದಾಗಿರುವುದು ಪ್ರಶಂಸನೀಯ. ‘

ಚನ್ನಗಿರಿ

ಸರ್ಕಾರ ಲಿಂಗಾಯತ ಸ್ವತಂತ್ರ ಎಂಬ ಮಾನ್ಯತೆ ನೀಡದಿದ್ದರೂ ಕೂಡ ನಾವು ಸ್ವತಂತ್ರರೇ. ರಾಜ್ಯದ ಲಿಂಗಾಯತರಲ್ಲಿ ಸಂಘಟನೆ ಮನೋಭಾವ ಬೆಳೆಯುತ್ತಿದೆ, ಎಂದು ಸಾಣೆಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಚನ್ನಮಾಜಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಸಾಧು ಲಿಂಗಾಯತ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಲಿಂಗಾಯಿತ ಧರ್ಮೀಯರ ಸಮಾವೇಶದಲ್ಲಿ ಮಾತನಾಡಿದರು.

ಲಿಂಗಾಯತ ಎನ್ನುವುದು ಜಾತಿಯಲ್ಲ. ಒಂದು ಧರ್ಮ, ಸಿದ್ಧಾಂತ, ತತ್ವಗಳಿಗೆ ಅನುಗುಣವಾಗಿ ನಡೆ ನುಡಿ ಇರುತ್ತದೆಯೋ ಅವರೇ ನಿಜವಾದ ಲಿಂಗಾಯತರು.

ಇಂದು ಸಮಾಜದಲ್ಲಿ ಜಾತಿ ಭೇದ ಹೋಗುತ್ತಿಲ್ಲ. ಎಲ್ಲರ ನಡುವೆ ನಮ್ಮವರು ಎನ್ನುವ ಗೋಡೆ ಕಟ್ಟುತ್ತ ಹೋದರೆ ಲಿಂಗಾಯತರು ಸಂಘಟನೆ ಅಗಲು ಸಾಧ್ಯವಿಲ್ಲ, ಬಸವಣ್ಣ ಹೇಳಿದಂತೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಬರಬೇಕು. ಆಗ ಮಾತ್ರ ಸಂಘಟಿತರಾಗಲು ಸಾಧ್ಯ ಎಂದರು.

ಲಿಂಗಧಾರಣೆ ಮಾಡಿಸಿಕೊಂಡವರು ಬೇರೆ ದೇವರನ್ನು ಪೂಜಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬ ಲಿಂಗಧಾರಿ ಮಾಡಬೇಕು.

ಅಂಗದ ಮೇಲೆ ಲಿಂಗ ಇಟ್ಟುಕೊಂಡು ನಿತ್ಯ ಪೂಜೆಯನ್ನು ವಾಡುವವರು ಮಾತ್ರ ನೈಜ ಲಿಂಗಾಯತರಾಗಲು ಸಾಧ್ಯ, ಲಿಂಗಾಯತ ರಾದವರು ಲಿಂಗವನ್ನು ಧರಿಸಿಕೊಂಡು ದುಶ್ಚಟಗಳನ್ನು ಮಾಡಿದರೆ ಲಿಂಗಧರಿಸಿದ್ದು ವ್ಯರ್ಥಎಂದೇ ತಿಳಿಯಬೇಕು ಎಂದರು.

‘ಮಠಾಧಿಪತಿಗಳು ಮಾಡಬೇಕಾದ ಕೆಲಸವನ್ನು ಲಿಂಗಾಯತ ಸಮಾಜ ಮಾಡಲು ಮುಂದಾಗಿರುವುದು ಪ್ರಶಂಸನೀಯ. ಮಾನವೀಯ ಕಾಳಜಿ ಇದ್ದಾಗ ಮಾತ್ರ ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ದಾರಿ ತಪ್ಪುತ್ತಿದೆ. ಅವರನ್ನು ಸರಿ ದಾರಿಗೆ ತರುವಂತಹ ಕಾರ್ಯ ಆಗಬೇಕಿದೆ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ಲಿಂಗಾಯತರ ಸಂಖ್ಯೆ ಪಟ್ಟಣದಲ್ಲಿ ಕಡಿಮೆ ಇತ್ತು. ಆದರೆ ಇಂದು ಅಧಿಕವಾಗುತ್ತಿದೆ. ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಿಕ್ಕ ಅವಕಾಶಗಳನ್ನು ಬಳಕೆ ಮಾಡಿಕೊಂಡು ಬೆಳೆಯಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕು.

‘ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ, ಆದರೆ ಸಂಘಟನೆ ಇರಲಿಲ್ಲ. ಸಮಾಜದ ಏಳಿಗೆಗಾಗಿ ಸಂಘಟಿತರಾಗಬೇಕಿದೆ. ಸಹಕಾರ ಹಣದ ರೂಪದಲ್ಲೇ ಇರಬೇಕು ಎಂಬುದೇನೂ ಇಲ್ಲ. ಪ್ರೋತ್ಸಾಹ ನೀಡಿದರೆ ಸಾಕು,’ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

75 ವರ್ಷ ತುಂಬಿದ ಸಮಾಜದ ಹಿರಿಯರನ್ನು ಗೌರವಿಸಲಾಯಿತು.

ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ತುಮ್‌ಕೋಸ್ ಮಾಜಿ ಅಧ್ಯಕ್ಷ ಆರ್.ಎಂ.ರವಿ, ಚಂದ್ರಪ್ಪ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *