ಬೆಂಗಳೂರು
ವೀರಶೈವ, ಲಿಂಗಾಯತ ಮಠಾಧೀಶರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ ವೀರಶೈವ ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ. ನಾನು ಹೇಳಿದ್ದು ಮತದಾರರಿಗೆ ಹೊರತು ಸ್ವಾಮೀಜಿಗಳಿಗಲ್ಲ. ಯಾವ ಸ್ವಾಮೀಜಿಗಳಿಗೂ ಅಗೌರವದಿಂದ ನಡೆದುಕೊಂಡಿಲ್ಲ. ನಾನು ಸ್ವಾಮೀಜಿಗಳಿಗೆ ಕೊಡುವಷ್ಟು ಗೌರವ ಇನ್ಯಾರಿಗೂ ಕೊಡಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವವನು ನಾನು. ಎಲ್ಲಾ ಜಾತಿಗಳು ಒಂದೇ ಎಂದು ಹೇಳುವವನು ನಾನು, ಎಂದರು.
ವೀರಶೈವ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಅವರು ಹೇಳಿದ್ದ ಕೆಲವು ಮಾತುಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ತಮ್ಮ ಭಾಷಣದಲ್ಲಿ “ಮೂರು ಸಾವಿರ ಮಠ ಇದ್ಯೋ ಆರು ಸಾವಿರ ಮಠ ಇದ್ಯೋ, ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ, ಆವಾಗಷ್ಟೇ ನಿಮಗೆ ಶಾಂತಿ ನಿಮ್ಮ ಅಭಿವೃದ್ಧಿ,” ಎಂದಿದ್ದರು.
ಇದರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ “ಮುಖ್ಯಮಂತ್ರಿಯವರ ಗದ್ದುಗೆ ತಲೆಗೆ ಏರಿದೆ” ಎಂದು ಕಿಡಿಕಾರಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, “ನನ್ನ ಹೇಳಿಕೆ ತಿರುಚಿ ಡಿಕೆಶಿ ಅವರಿಗೆ ಮದ ಬಂದಿದೆ ಅಂತಾರೆ, ಮದ ಇದ್ದರೆ ಇಳಿಸಲಿ,” ಎಂದರು.
