ಲಿಂಗಾಯತ ಧರ್ಮದ ಅಸ್ತಿತ್ವ ಉಳಿಸಿಕೊಳ್ಳುವ ಕಾಲ ಬಂದಿದೆ : ವಿದ್ಯಾಶಂಕರ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಎರಡು ದಿನದ ಲಿಂಗಾಯತ ಧರ್ಮ ಅಧ್ಯಯನ ಶಿಬಿರ.

ಗುಬ್ಬಿ:

ಸಮಾಜದಲ್ಲಿ ತೀವ್ರವಾಗಿದ್ದ ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತಿತರ  ಶೋಷಣೆಗಳನ್ನು ಹೋಗಲಾಡಿಸಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿ ಸಾಮಾಜಿಕವಾಗಿ ಮುನ್ನೆಲೆಗೆ ಎಲ್ಲರನ್ನು ತರಬೇಕೆನ್ನುವ  ಸದಾಶಯದಿಂದ ಧರ್ಮಗುರು ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದ್ದರು ಎಂದು ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಹೇಳಿದರು.

ತಾಲೂಕಿನ ಚೇಳೂರು ಪಟ್ಟಣದಲ್ಲಿ ಈಚೆಗೆ ಎರಡು ದಿನಗಳ ಕಾಲ ನಡೆದ ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ ಕುರಿತಾದ ಅಧ್ಯಯನ ಶಿಬಿರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಹೋಬಳಿ ಘಟಕಕ್ಕೆ ಚಾಲನೆ, ಸೇವಾ ದೀಕ್ಷೆಯ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ವೈಚಾರಿಕ ಚಿಂತನೆ ಹೆಚ್ಚಿಸಿ, ಮಾನವೀಯ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಅಂತರ್ಜಾತಿ ವಿವಾಹ ಹಾಗೂ ಪುರೋಹಿತಶಾಹಿಗಳ ವಿರುದ್ಧ ತೀವ್ರ ಹೋರಾಟ ನಡೆಸಿ ಮಹಾನ್ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದರು. ಬಸವಾದಿ ಶರಣರ ವಚನಗಳ ಆಶಯಗಳನ್ನು ರೂಢಿಸಿಕೊಂಡು ಸಾಗುತ್ತಿರುವ ಲಿಂಗಾಯತ ಧರ್ಮದ ಅಸ್ತಿತ್ವ ಉಳಿಸಿಕೊಳ್ಳುವ ಕಾಲ ಈಗ ಬಂದಿದೆ. ಇಲ್ಲವಾದಲ್ಲಿ ವೈದಿಕ ಪರಂಪರೆಯಲ್ಲಿ ಲಿಂಗಾಯತ ಧರ್ಮದ ಅಸ್ತಿತ್ವವೇ ಇಲ್ಲದಂತಾಗುವುದು ಎಂದು ಎಚ್ಚರಿಸಿದರು.

ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡುತ್ತ, ‘ಮನುಷ್ಯ ತನ್ನನ್ನು ತಾನು ಅರಿತು, ಶರಣರ ಅರಿವಿನೊಂದಿಗೆ ಸಾಗಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ ಎನ್ನುವ ಆಶಯವನ್ನು ಬಸವಣ್ಣ ಹೊಂದಿದ್ದರು.

ಅನುಭವ ಮಂಟಪ ಸ್ಥಾಪಿಸುವ ಮೂಲಕ ಪ್ರಪಂಚಕ್ಕೆ ಸಂಸತ್ತಿನ ಪರಿಕಲ್ಪನೆ, ಪ್ರಜಾಸತ್ತೆಯನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಲಿಂಗಾಯತ ಧರ್ಮದ ಸಿದ್ಧಾಂತಗಳ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡಿಸಿ ವಿಶ್ವಶ್ರೇಷ್ಠ ಧರ್ಮವನ್ನಾಗಿಸಬೇಕಿದೆ’ ಎಂದು ಹೇಳಿದರು.

ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರ ಪರಂಪರೆ ಪಾಲಿಸಿಕೊಂಡು ಹೋಗುತ್ತಿರುವ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಅಗತ್ಯ. ಬಸವಣ್ಣನ ಆದರ್ಶ, ತತ್ವ, ಸಿದ್ಧಾಂತಗಳನ್ನು ಒಳಗೊಂಡಿರುವ ಲಿಂಗಾಯತ ಧರ್ಮ ಪಾಲನೆಯು ಇಂದಿನ ಅಗತ್ಯ’ ಎಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಚೇಳೂರು ಹೋಬಳಿ ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ನಾಗಭೂಷಣ, ರಾಜ್ಯ ಉಪಾಧ್ಯಕ್ಷ ಕೆಂಪಗೌಡ್ರ, ತಾಲ್ಲೂಕು ಘಟಕದ ಅಧ್ಯಕ್ಷ ಬೆಣಜಿಗೆರೆ ಸಂಗಪ್ಪ, ಮುಖಂಡರಾದ ಬಸವರಾಜು, ನಂಜುಂಡಪ್ಪ, ಹೋಬಳಿ ಘಟಕದ ನಿರ್ದೇಶಕರು ಪಾಲ್ಗೊಂಡಿದ್ದರು.

ವಿಜಯಪುರದ ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಅವರು ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ ಕುರಿತಾದ ಎರಡು ದಿನದ ಅಧ್ಯಯನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಠ ಮಾಡಿದರು. 250 ಜನ ಶರಣ ಬಂಧುಗಳು ಶಿಬಿರಾರ್ಥಿಗಳಾಗಿದ್ದರು. ಇಷ್ಟಲಿಂಗ ಶಿವಯೋಗ ಸಹ ಶಿಬಿರದಲ್ಲಿ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *