ಚಿತ್ರದುರ್ಗ
ಇಂದು ರಾಜ್ಯದಲ್ಲಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟಗಳಲ್ಲಿ ನೂರಾರು ಬಸವ ಸಂಘಟನೆಗಳು ಸಕ್ರಿಯವಾಗಿದ್ದರೂ, ಅವುಗಳ ನಡುವೆ ಸಂಪರ್ಕ, ಸಹಯೋಗದ ಕೊರತೆಯಿದೆ.
ಬಸವ ಸಂಘಟನೆಗಳ ನಡುವೆ ಸಂವಾದ, ಸಹಯೋಗ ರೂಪಿಸುವ ಪ್ರಯತ್ನ ಚಿತ್ರದುರ್ಗದ ಬಸವಶಕ್ತಿ ಶಿಬಿರದಲ್ಲಿ ಶುರುವಾಯಿತು.

ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅಕ್ಟೋಬರ್ ೧೯ ನಡೆದ ಒಂದು ದಿನದ ಬಸವಶಕ್ತಿ ಶಿಬಿರದಲ್ಲಿ ಬಸವ ಸಂಘಟನೆಗಳ ‘ಮುಖಾಮುಖಿ’ ವಿಷಯದ ಮೇಲೆ ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ಮೊದಲನೇ ಗೋಷ್ಠಿಯಲ್ಲಿ ಕಳೆದ 25 ವರ್ಷಗಳ ಬೆಳವಣಿಗೆಗಳ ಅನುಭವವನ್ನು ಟಿ ಎಚ್ ಬಸವರಾಜ್, ಪಿ.ರುದ್ರಪ್ಪ, ಸಂಗಮೇಶ ಕಲಹಾಳ, ಎನ್ರಿಚ್ ಮಹಾದೇವಸ್ವಾಮಿ ಹಂಚಿಕೊಂಡರು.
ಎರಡನೇ ಗೋಷ್ಠಿಯಲ್ಲಿ ಮುಂದಿನ 25 ವರ್ಷಗಳು ಮಾಡಬೇಕಾದ ಕೆಲಸಗಳ ಬಗ್ಗೆ ಯುವ ಕಾರ್ಯಕರ್ತರಾದ ಸುಮಾ ಸುನೀಲ, ಡಾ. ಅಕ್ಕಿ ಬಸವೇಶ್, ಕಿರಣ್ ಬೆಲ್ಲದ್, ಸಿ.ಜಿ ಪಾಟೀಲ್ ಮಾತನಾಡಿದರು.
ಕಳೆದ 25 ವರ್ಷಗಳ ಅನುಭವ
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಬಸವ ಸಂಘಟನೆಗಳಿಗೆ ದೀರ್ಘ ಇತಿಹಾಸವಿದ್ದರೂ ೨೦೧೮ರ ನಂತರ ಅವುಗಳ ಸಂಘಟನೆ, ಚಟುವಟಿಕೆಗಳು ಬೆಳೆಯುತ್ತಿವೆ ಎಂದು ಹೊಸಪೇಟೆಯ ಟಿ ಎಚ್ ಬಸವರಾಜ್ ಹೇಳಿದರು.

ರಾಯಚೂರಿನ ಜಾಗತಿಕ ಲಿಂಗಾಯತ ಮಹಾಸಭಾದ ಪಿ.ರುದ್ರಪ್ಪ ಮಾತನಾಡಿ, ೨೦೧೭ರ ಲಿಂಗಾಯಿತ ರ್ಯಾಲಿಗಳ ನಂತರ ಬಳ್ಳಾರಿ ಜಿಲ್ಲೆ, ರಾಯಚೂರು ಜಿಲ್ಲೆ ಸಂಘಟನೆಗಳಲ್ಲಿ ಮಹತ್ತರ ಬದಲಾವಣೆಗಳಾದವು ಎಂದರು.
ಜಿಲ್ಲೆಯಲ್ಲಿ ಹಲವಾರು ಸಂಘಟನೆಗಳಿದ್ದರೂ ಅವುಗಳ ನಡುವೆ ಸಾಮರಸ್ಯದ ಕೊರತೆಯಿದೆ. ಜನರಲ್ಲಿ ಬಸವ ಪ್ರೇಮವಿದೆ. ಅದರ ಪ್ರಯೋಜನ ಪಡೆದುಕೊಂಡು ಬೆಳೆಯಬೆಕಾದರೆ ಎಲ್ಲಿಯೂ ಅಹಂ ಇಲ್ಲದೆ ಒಗ್ಗಟ್ಟಿನಿಂದ ನಡೆದುಕೊಂಡರೆ ಮಾತ್ರ ಸಾಧ್ಯ ಎಂದರು.

ಕೊಪ್ಪಳ ಜಾಗತಿಕ ಲಿಂಗಾಯತ ಮಹಾಸಭಾದ ಸಂಗಮೇಶ ಕಲಹಾಳ ಮಾತನಾಡಿ, ಜಾತಿ ಧರ್ಮ ಲಿಂಗ ತಾರತಮ್ಯ ಮಾಡುವಂತಿಲ್ಲ ಎಂದು ಬಸವಧರ್ಮ ಹೇಳುತ್ತದೆ. ಬಸವಣ್ಣ ಹೇಳಿದ ಸಮಾಜದ ಸಮಾನತೆಯನ್ನು ಸಂವಿಧಾನದಲ್ಲಿ ಹೇಳಿದೆ. ಆದರೂ ಧರ್ಮ, ವರ್ಗ ವರ್ಣ ತಾರತಮ್ಯತೆ ಇವತ್ತಿಗೂ ಉಳಿದುಕೊಂಡಿದೆ.
ಎಲ್ಲಾ ವರ್ಗದವರಿಗೆ ಲಿಂಗಪೂಜೆ, ಶಿವಯೋಗ ಅಭ್ಯಾಸ ಮಾಡಿಸಿದರೆ ಲಿಂಗಾಯತ ಒಳ ಪಂಗಡಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ, ಎಂದರು.

ಚಾಮರಾಜನಗರ ಬಸವಕೇಂದ್ರದ ಎನ್ರಿಚ್ ಮಹಾದೇವಸ್ವಾಮಿ ಮಾತನಾಡಿ, ಅತಿ ಹೆಚ್ಚು ಬಸವತತ್ವ ಪ್ರಚಾರವಾದ ಜಿಲ್ಲೆಗಳಲ್ಲಿ ಒಂದಾದ ಚಾಮರಾಜನಗರದಲ್ಲಿ ೧೦೦ಕ್ಕೂ ಹೆಚ್ಚು ಲಿಂಗಾಯತ ಮಠಗಳಿವೆ.

ಹಲವಾರು ಸಂಘಟನೆಗಳು ಸಕ್ರಿಯವಾಗಿವೆ, ಉತ್ತರ ಕರ್ನಾಟಕದಿಂದ ದಕ್ಷಿಣಕ್ಕೆ ಬಂದರೆ ಬಸವತತ್ವ ಕ್ಷಿಣಿಸುವುದು ಎಂಬ ಮಾತನ್ನು ಚಾಮರಾಜನಗರ ಸುಳ್ಳಾಗಿಸಿದೆ ಎಂದರು.

ಚಿತ್ರದುರ್ಗದ ಜಿ ಟಿ ನಂದೀಶ್ ಜಿಲ್ಲೆಯಲ್ಲಿ ಬಸವತತ್ವ ಬೆಳೆಸುವಲ್ಲಿ ಮುರುಘಾ ಮಠದ ಕೊಡುಗೆಯನ್ನು ಸ್ಮರಿಸಿದರು. ಹೊಸದುರ್ಗದಂತಹ ತಾಲೂಕುಗಳಲ್ಲಿ ಬಸವ ಸಂಘಟನೆಗಳು ಸಬಲವಾಗುತ್ತಿವೆ, ಮಿಕ್ಕ ತಾಲೂಕುಗಳಲ್ಲಿಯೂ ಸಕ್ರಿಯವಾಗಬೇಕು ಎಂದರು.
ಮುಂದಿನ ವರ್ಷ ಲೋಕಾರ್ಪಣೆಯಾಗುತ್ತಿರುವ ಅನುಭವ ಮಂಟಪದ ಸಮರ್ಪಕ ನಿರ್ವಹಣೆಯ ಜವಾಬ್ದಾರಿಯನ್ನು ಬಸವ ಸಂಘಟನೆಗಳು ತೆಗೆದುಕೊಳ್ಳಬೇಕೆಂದು ಹೇಳಿದರು.

ಜೆ.ಎಲ್.ಎಂ. ಚಿಕ್ಕಮಗಳೂರಿನ ಮಹಿಳಾ ಘಟಕದ ಅಧ್ಯಕ್ಷೆ ಎಸ್. ಗಾಯತ್ರಮ್ಮ ಉಪಸ್ಥಿತರಿದ್ದು ತಮ್ಮ ಜಿಲ್ಲೆಯ ಅನುಭವ ಹಂಚಿಕೊಂಡರು.
ಮುಂದಿನ ಹೆಜ್ಜೆಗಳು
ಎರಡನೇ ಗೋಷ್ಠಿಯಲ್ಲಿ ಭದ್ರಾವತಿಯ ರಾಷ್ಟ್ರೀಯ ಬಸವದಳದ ಸುಮಾ ಸುನೀಲ ಮಾತನಾಡಿ, ಮುಂದಿನ ೨೫ ವರ್ಷಗಳಲ್ಲಿ ಶ್ರೇಣಿಕೃತ ವ್ಯವಸ್ಥೆ ವಿರೋಧಿಸಿ ಎಲ್ಲರೂ ಒಂದಾಗುವ ಸಮಾನ ಸಮಾಜ ತರಬೇಕು. ಮುಂದಿನ ಪೀಳಿಗೆಗೆ ಬಸವತತ್ವ ಪ್ರಸಾರ ಮಾಡಬೇಕಾದರೆ ಮಾಡಬೇಕಾದರೆ ಮೊದಲು ಸೈದ್ಧಾಂತಿಕ ತಳಪಾಯ ಗಟ್ಟಿಯಾಗಿರಬೇಕು.

ಬಸವ ಸಂಘಟನೆಗಳಲ್ಲಿ ಯುವಕರು, ಮಹಿಳೆಯರು ಭಾಗವಹಿಸುತ್ತಿಲ್ಲ. ಸಂಘಟನೆಗಳಲ್ಲಿ ಮಹಿಳಾ ಘಟಕ, ಯುವಕರ ಘಟಕ ರಚನೆ ಮಾಡಬೇಕು. ಇದರಿಂದ ಯುವಕರ, ಮಹಿಳೆಯರ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ, ಎಂದರು.
ಧಾರವಾಡದ ಜಾಗತಿಕ ಲಿಂಗಾಯತ ಮಹಾಸಭಾದ ಸಿ.ಜಿ ಪಾಟೀಲ್ ಮಾತನಾಡಿ, ಬಸವ ಸಂಘಟನೆಗಳು ಬೆಳೆಯಲು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳೆಸಿಕೊಳ್ಳಬೇಕು. ವಿವಿಧ ಚುನಾವಣೆಗಳಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧವಾಗಬೇಕು.

ಜೊತೆಗೆ ಬುದ್ದ ಬಸವ ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಗರಿಬೊಮ್ಮನಹಳ್ಳಿಯ ಪ್ರಾಧ್ಯಾಪಕರಾದ ಡಾ. ಅಕ್ಕಿ ಬಸವೇಶ್, ಮಾತನಾಡಿ ಬಸವ ಸಂಘಟನೆಗಳು ತಾತ್ವಿಕವಾಗಿ ಸಂಘಟನೆಯಾದರೆ ಶರಣ ಸಂಸ್ಕೃತಿಯನ್ನು ಸಮಾಜದಲ್ಲಿ ಎಲ್ಲಾ ಕಡೆ ಪಸರಿಸಲು ಸಹಾಯಕವಾಗುತ್ತದೆ.
ಬಸವ ಸಂಘಟನೆಗಳನ್ನು ಬೇರೆ ಸಂಘಟನೆಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಬೇರೆ ಸಂಘಟನೆಯಲ್ಲಿ ಮನೋರಂಜನೆ ಇರುವುದರಿಂದ ಯುವಕರು ಅಲ್ಲಿ ಹೋಗುತ್ತಾರೆ. ಬಸವ ಸಂಘಟನೆಗಳಲ್ಲಿ ತತ್ವವಿದೆ, ಎಲ್ಲಾ ಮನೆಗಳಲ್ಲಿ ಬಸವತತ್ವ ಸರಿಯಾಗಿ ಅನುಷ್ಠಾನವಾದರೆ ಯುವಕರು ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ, ಎಂದರು.

ರಾಷ್ಟ್ರೀಯ ಬಸವದಳದ ಕಿರಣ್ ಬೆಲ್ಲದ್ ಮಾತನಾಡಿ ಬಸವ ಮೀಡಿಯಾ ಒಳ್ಳೆಯ ಕೆಲಸ ಮಾಡುತ್ತಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿದರೆ ಡಿಜಿಟಲೈಸೇಶನ್ ಮಾಡಿದರೆ ಮುಂದೆ ಸಾಧನೆ ಮಾಡಬೇಕು
ಬೌದ್ಧ ಧರ್ಮದಂತೆ ಲಿಂಗಾಯತ ಧರ್ಮ ಪ್ರಚಾರವಾಗಬೇಕು. ಧನಾತ್ಮಕವಾಗಿ ಪ್ರಚಾರ ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ಜನರಿಗೆ ತಲುಪಿಸಬೇಕು.

ಯುವಕರು ಪಾಲ್ಗೊಳ್ಳಲು ಟ್ರೆಕಿಂಗ್, ಸ್ವಚ್ಛತಾ ಅಭಿಯಾನಗಳಂತಹ ಹೊಸ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಲಿಂಗಾಯತ ಧರ್ಮ ಬೆಳೆಸಲು ತಂತ್ರಜ್ಞಾನ, ಡಿಜಿಟಲೀಕರಣಗಳಿಗೆ ಒತ್ತು ಕೊಡಬೇಕು ಎಂದರು.
ಕಾರ್ಯಕ್ರಮವನ್ನು ಟಿ ಎಚ್ ಬಸವರಾಜ್, ಬಸವ ಮೀಡಿಯಾದ ಡಾ. ಎಚ್ ಎಮ್. ಸೋಮಶೇಖರಪ್ಪ, ರವೀಂದ್ರ ಹೊನವಾಡ ನಿರೂಪಿಸಿದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ