ಕರ್ನಾಟಕ ಇತಿಹಾಸ ಅಕಾಡೆಮಿ ರಾಷ್ಟ್ರೀಯ ಸಮ್ಮೇಳನ
ಭಾಲ್ಕಿ :
23, 24 ಮತ್ತು 25 ಅಕ್ಟೋಬರ್ 2026 ಮೂರು ದಿನಗಳ ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ನಡೆಯಿತು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರೂ, ಮೈಸೂರಿನ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರೂ ಆಗಿರುವ ಡಾ.ಕೆ. ರವೀಂದ್ರನಾಥ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಉದ್ಘಾಟನೆಗೊಂಡಿತು.
ಸಮ್ಮೇಳನದ ಸಾನಿಧ್ಯವನ್ನು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಕಿರಿಯ ಪೂಜ್ಯರಾದ ಗುರುಬಸವ ಪಟ್ಟದ್ದೇವರು ವಹಿಸಿಕೊಂಡಿದ್ದರು.
ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಈಶ್ವರ ಖಂಡ್ರೆ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ದೇವರಕೊಂಡ ರೆಡ್ಡಿ, ಉಪಾಧ್ಯಕ್ಷರಾದ ಡಾ. ಡಿ.ವಿ. ಪರಮಶಿವಮೂರ್ತಿ, ಕಾರ್ಯದರ್ಶಿ ಕೆ .ಎಲ್. ರಾಜಶೇಖರ, ಎಫ್.ಟಿ. ಹಳ್ಳಿಕೇರಿ, ಶ್ರೀಮಠದ ಆಡಳಿತಾಧಿಕಾರಿ ಮೋಹನ ರೆಡ್ಡಿ, ಡಾ. ರಾಜು ಜುಬರೆ ಮುಂತಾದವರು ಉಪಸ್ಥಿತರಿದ್ದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ಮಾತನಾಡಿ, ಸಾಹಿತ್ಯ ಕೃತಿಗಳು, ದಾಖಲೆಗಳು, ಹಸ್ತಪ್ರತಿಗಳು ಕಟ್ಟಿಕೊಡಬಹುದಾದ ಇತಿಹಾಸವನ್ನು ಉದಾಹರಣೆ ಸಹಿತ ವಿವರಿಸಿದರು.
ಸಮ್ಮೇಳನ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಪ್ರಾಚೀನ ಸಾಹಿತ್ಯ, ತತ್ವಪದ ಸಾಹಿತ್ಯ, ಕೀರ್ತನ ಸಾಹಿತ್ಯ ಕುರಿತು ಅವುಗಳಲ್ಲಿರುವ ಚಾರಿತ್ರಿಕ ಸಂಗತಿಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದರು.
ವಿಶೇಷವಾಗಿ ಬಸವಾದಿ ಪ್ರಮಥರ ಕಾಯಕ ಭೂಮಿಯಾದ ಕಲ್ಯಾಣ ಕರ್ನಾಟಕ ಪರಂಪರೆ ವಿಶೇಷವಾದುದು. ಸಮಯಕಲ್ಯಾಣ (ಬಸವಕಲ್ಯಾಣ), ವಿಜಯಕಲ್ಯಾಣ (ಹಂಪಿ), ಅಮರಕಲ್ಯಾಣ (ದಿಗ್ಗಿಸಂಗಮನಾಥ), ಧರ್ಮ ಕಲ್ಯಾಣ (ನಾಗಾವಿ), ಕಡೆಯ ಕಲ್ಯಾಣ (ಕೊಡೆಕಲ್) ಹೀಗೆ 12ನೇ ಶತಮಾನದಿಂದ ಕಟ್ಟುತ್ತಾ ಬಂದ ಕಲ್ಯಾಣಗಳಿಂದ ಈ ಭಾಗ “ಕಲ್ಯಾಣ ಕರ್ನಾಟಕ” ಎನಿಸಿತು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ “ಇತಿಹಾಸ ದರ್ಶನ” ಸಂಪುಟವನ್ನು ಬಿಡುಗಡೆ ಮಾಡಲಾಯಿತು.
