ಪೂರ್ವಭಾವಿ ಸಿದ್ಧತಾ ಸಭೆ
ಸಾಣೇಹಳ್ಳಿ :
ಕಲಾಶ್ರಮದ ನೆಲೆವೀಡು, ಸಾಂಸ್ಕೃತಿಕ ಕೇಂದ್ರ ಎಂದೇ ಖ್ಯಾತಿ ಪಡೆದಿರುವ ಸಾಣೇಹಳ್ಳಿಯಲ್ಲಿ ಮುಂಬರುವ ನವೆಂಬರ್ 1 ರಿಂದ 6 ರವರೆಗೆ ಅದ್ಧೂರಿಯಾಗಿ ಜರುಗಲಿರುವ ಪ್ರತಿಷ್ಠಿತ ರಾಷ್ಟ್ರೀಯ ನಾಟಕೋತ್ಸವದ ಪೂರ್ವಭಾವಿ ಸಿದ್ಧತಾ ಸಭೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ನಾಟಕೋತ್ಸವದ ಯಶಸ್ಸು ಹಾಗೂ ಆಗಮಿಸುವ ಕಲಾಪ್ರೇಮಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ಆಳವಾದ ಚರ್ಚೆ ನಡೆಸಿ, ವಿವಿಧ ಸಮಿತಿಗಳ ರಚನೆ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಯಿತು.
ನಾಟಕೋತ್ಸವದ ಅವಧಿಯಲ್ಲಿ ಪ್ರತಿದಿನ ನಾನಾ ಭಾಗಗಳಿಂದ ಆಗಮಿಸುವ ಭಕ್ತಾದಿಗಳು ಮತ್ತು ಕಲಾಭಿಮಾನಿಗಳಿಗೆ ಪ್ರಸಾದದ ವ್ಯವಸ್ಥೆಯು ಅತ್ಯಂತ ರುಚಿ-ಶುಚಿಯಾಗಿ ಮತ್ತು ವ್ಯವಸ್ಥಿತವಾಗಿರಬೇಕು ಎಂದು ಪೂಜ್ಯರು ಸೂಚನೆ ನೀಡಿದರು.
ನಾಟಕೋತ್ಸವ ನಡೆಯುವ ಆರು ದಿನಗಳ ಕಾಲ ಸಾಣೇಹಳ್ಳಿ ಸಂಪೂರ್ಣವಾಗಿ ನಳನಳಿಸುವಂತೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಲದೆ, ವಾತಾವರಣದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಇಡೀ ಸಾಣೇಹಳ್ಳಿ ವಲಯದಲ್ಲಿ ಮದ್ಯಪಾನ ಹಾಗೂ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೂಜ್ಯರು ಆದೇಶಿಸಿದರು.

ನಾಟಕೋತ್ಸವಕ್ಕೆ ಆಗಮಿಸುವ ಸಾವಿರಾರು ವಾಹನಗಳ ಸುಗಮ ಸಂಚಾರ ಹಾಗೂ ದಟ್ಟಣೆ ಉಂಟಾಗದಂತೆ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು. ಆಗಮಿಸುವ ಗಣ್ಯರು, ಅತಿಥಿಗಳಿಗೆ ಯಾವುದೇ ಲೋಪವಾಗದಂತೆ ಅತಿಥಿ ಸತ್ಕಾರ ನೆರವೇರಬೇಕು ಎಂದು ತಿಳಿಸಿದರು.
ಉತ್ಸವದ ಪ್ರತಿಯೊಂದು ವಿಭಾಗದ ನಿರ್ವಹಣೆಗೂ ನಾಲ್ಕೈದು ಜನರನ್ನೊಳಗೊಂಡ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಪ್ರತಿಯೊಬ್ಬರಿಗೂ ಸ್ಪಷ್ಟ ಜವಾಬ್ದಾರಿಗಳನ್ನು ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸ್ಥಳೀಯ ಮುಖಂಡರಿಗೆ ಸಲಹೆ ನೀಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಗ್ರಾಮದ ಮುಖಂಡರಾದ ಎ.ಸಿ. ಚಂದ್ರಪ್ಪ, ಸಿದ್ದಪ್ಪ, ಓಂಕಾರಪ್ಪ, ಮಲ್ಲಿಕಾರ್ಜುನ, ಚಂದ್ರಶೇಖರಯ್ಯ, ಇಂಜಿನಿಯರ ವಿಶ್ವನಾಥ, ಸಾಣೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು ಹಾಗೂ ಹೊಸದುರ್ಗ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಪಾಲ್ಗೊಂಡು ನಾಟಕೋತ್ಸವದ ಯಶಸ್ಸಿಗೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಶಿಕ್ಷಕ ಪ್ರಕಾಶ ಸ್ವಾಗತಿಸಿದರೆ ಕಲಾಸಂಘದ ಕಾರ್ಯದರ್ಶಿ ಎಸ್. ಕೆ. ಪರಮೇಶ್ವರಯ್ಯ ನಿರೂಪಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
