ಸಿದ್ದಯ್ಯನ ಕೋಟೆಯಲ್ಲಿ 101ನೇ ಶಿವಾನುಭವ ಗೋಷ್ಠಿ
ಮೊಳಕಾಲ್ಮುರು :
ಬಸವಾದಿ ಶಿವಶರಣರ ತತ್ವ-ವಿಚಾರಗಳು ಪ್ರತಿಯೊಬ್ಬರ ಮನೆ-ಮನಗಳನ್ನು ತಲುಪುವಂತಹ ಸತ್ಕಾರ್ಯಗಳನ್ನು ಭಕ್ತಾದಿಗಳು ಮಾಡಬೇಕು ಎಂದು ಕಾಯಕಯೋಗಿ ಬಸವಲಿಂಗ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಸಿದ್ಧಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾಮಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 101ನೇ ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಮಕ್ಕಳು ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಮಠದ ಸಹಯೋಗದಲ್ಲಿ ನಡೆಯುವ ಶಿವಾನುಭವ ಗೋಷ್ಠಿಗೆ ಪ್ರತಿ ಕುಟುಂಬದ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆತಂದು ಶಿವಾನುಭವದ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಮಠದ ಭಕ್ತರಾದ ಬಿ.ಎನ್. ನಾಗೇಂದ್ರಪ್ಪ ಬಿಜಿಕೆರೆ ಮಾತನಾಡಿ, “ಶ್ರೀಗಳು ಕಳೆದ ಮೂರು ದಶಕಗಳಿಂದ ಈ ಭಾಗದಲ್ಲಿ ಮಠವನ್ನು ಕಟ್ಟಿ, ಶರಣರ ಚಿಂತನೆ ಹಾಗೂ ಸತ್ಸಂಗದಂತಹ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಮ್ಮ ಬಿ.ಜಿ. ಕೆರೆ ಜನರ ಸೌಭಾಗ್ಯ” ಎಂದು ಪ್ರಶಂಸಿಸಿದರು.

ಬಸವ ಕೇಂದ್ರದ ಅಧ್ಯಕ್ಷರಾದ ಎಂ.ಬಿ. ಭೋಗೇಶಗೌಡ ಮಾತನಾಡಿ, “ಲಿಂಗವಂತರಾದ ನಾವುಗಳು ಬಸವಾದಿ ಶಿವಶರಣರು ಹಾಕಿಕೊಟ್ಟ ಲಿಂಗಾಯತ ಧರ್ಮದ ಅಷ್ಟಾವರಣ, ಪಂಚಾಚಾರ ಹಾಗೂ ಷಟಸ್ಥಲ ತತ್ವಗಳನ್ನು ಮೈಗೂಡಿಸಿಕೊಂಡು ಶ್ರದ್ಧೆಯಿಂದ ಲಿಂಗಪೂಜೆ ಮಾಡಬೇಕು” ಎಂದರು.
ಚಳ್ಳಕೆರೆ ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ ಬಿ.ಎನ್. ಸಂಪತಕುಮಾರ್ ಮಾತನಾಡಿ, “ಕುಟುಂಬ ಸಮೇತ ಇಂತಹ ಶಿವಾನುಭವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮ ಬದುಕಿಗೆ ಉತ್ತಮ ಮೌಲ್ಯಗಳನ್ನು ನೀಡುತ್ತದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ, ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕೆ. ಬಸಣ್ಣ, ಎಸ್.ಪಿ. ಲಕ್ಷ್ಮಣ, ಕಲಾವಿದರಾದ ರಾಮಸಾಗರ ಟಿ. ಗುರು, ಶಂಕ್ರಪ್ಪ, ಡಾ. ರಂಗಪ್ಪ ಎಸ್.ಕೆ., ಚಿಜ್ಯೋತಿ ವಿಜಯ ಮಹಾಂತೇಶ್ವರ ಮಹಿಳಾ ಸಂಘದ ಅಧ್ಯಕ್ಷೆ ಪಿ. ತುಳಸಿ, ಅಕ್ಕನ ಬಳಗದ ಅಧ್ಯಕ್ಷೆ ಎಂ.ಬಿ. ಸಂಧ್ಯಾ, ರುದ್ರಮ್ಮ ಸೇರಿದಂತೆ ಅನೇಕ ಗಣ್ಯರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
