ಶಹಾಪುರ :
ಇಂದು ಜಗತ್ತು ಹಲವಾರು ಧಾವಂತಗಳಿಂದ ಒಡಗೂಡಿದೆ. ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಧಃಪತನವನ್ನು ತಲುಪಿದ್ದೇವೆ.
ಇವೆಲ್ಲ ಬಿಕ್ಕಟ್ಟುಗಳಿಗೆ ೧೨ ನೇ ಶತಮಾನದ ಬಸವಾದಿ ಶರಣರ ಚಿಂತನೆಗಳು ಶಾಶ್ವತ ಪರಿಹಾರವನ್ನು ನೀಡಬಲ್ಲವು ಎಂದು ಕಲಬುರ್ಗಿಯ ಖ್ಯಾತ ಸಾಹಿತಿ ಉಪನ್ಯಾಸಕ ಡಾ. ಶ್ರೀಶೈಲ ನಾಗರಾಳ ಮಾರ್ಮಿಕವಾಗಿ ನುಡಿದರು.

ನಗರದ ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ, ವೀರಶರಣ ಮಡಿವಾಳ ಮಾಚಿದೇವರ ಸ್ಮರಣೋತ್ಸವದ ನಿಮಿತ್ತ ತಿಂಗಳ ಬಸವ ಬೆಳಕು- ೧೩೬ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ’ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದುಕೊಂಡು ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಿದ್ದ ಬಸವಣ್ಣನವರು ಕೇರಿಗಳನ್ನು ಹುಡುಕಿಕೊಂಡು ಹೋದರು. ಅಲ್ಲಿನ ಅವವ್ಯಸ್ಥೆ, ಅಂಧಕಾರ, ಬಡತನ ಇತ್ಯಾದಿಗಳಿಗೆ ಸಮರ್ಪಕ ಮದ್ದನ್ನು ಕೊಟ್ಟರು.
ದೇವರನ್ನು ನಿರಾಕರಿಸುವುದು ಒಪ್ಪಿಕೊಳ್ಳುವುದು ಶರಣರ ಉದ್ದೇಶವಲ್ಲ. ಅರಿವನ್ನು ಅರಿಯಲು ಕುರುಹನ್ನು ಕೊಟ್ಟರು. ದಾಸೋಹ ಮತ್ತು ಕಾಯಕ ಅರಿವಿನಲ್ಲಿ ಬಸವಣ್ಣನವರು ದೇವರನ್ನು ಹುಡುಕಿದರು.
ಎರಡು ಪ್ರಭುತ್ವಗಳು ಅಂದು ಕಲ್ಯಾಣವನ್ನು ಆಳುತ್ತಿದ್ದರು. ಒಂದು ರಾಜಶಾಹಿ ವ್ಯವಸ್ಥೆ ಜನರಿಗೆ ತೆರಿಗೆ ಹಾಕುವ ಮೂಲಕ ಅವರನ್ನು ಶೋಷಿಸುತ್ತಿತ್ತು. ಇನ್ನೊಂದು ಪುರೋಹಿತಶಾಹಿ ಧರ್ಮದ ಹೆಸರಿನಲ್ಲಿ ಜನರನ್ನು ಮೌಢ್ಯಗಳ ದಾಸರನ್ನಾಗಿ ಮಾಡಿ ಅವರನ್ನು ಸುಲಿಗೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡರು. ಕನಲಿದರು, ಮರುಗಿದರು. ಸಮಾಜದ ಅಂಚಿನಲ್ಲಿರುವ ಜನರ ಶೋಷಣೆಯನ್ನು ತಪ್ಪಿಸಲು ಬಸವಣ್ಣನವರು ಅಹರ್ನಿಶಿ ಶ್ರಮಿಸಿದರು.

ಯಜ್ಞ ಯಾಗಗಳನ್ನು ಏರ್ಪಡಿಸಿ ಜನರ ತೆರಿಗೆಯ ಹಣವನ್ನು ರಾಜನ ಮೂಲಕ ಪಡೆಯುತ್ತಿದ್ದ ವರ್ಗ ಸುಖ ಸಂಕಥ ಜೀವನ ನಡೆಸುತ್ತಿತ್ತು. ಸ್ವರ್ಗ, ನರಕ, ಮೋಕ್ಷ ಪುರಾಣ ಇತ್ಯಾದಿಗಳಲ್ಲಿ ಮುಳುಗಿಸಿತ್ತು. ದುಡಿಯುವ ವರ್ಗವನ್ನು ಶೋಷಣೆ ಮಾಡುತ್ತ ರಾಜರು ಮತ್ತು ಪುರೋಹಿತರು ಆರಾಮವಾಗಿದ್ದರು.
ಬಸವಣ್ಣನವರು ಜನಸಾಮಾನ್ಯನ ಎದೆಯೊಳಗೆ ಅಕ್ಷರ ಬಿತ್ತಿ, ಅವರಲ್ಲಿ ಅರಿವನ್ನು ತಂದರು. ಆಶ್ಚರ್ಯವೆಂದರೆ ಆ ನಿಮ್ಮ ವರ್ಗದವರಿಂದಲೆ ಪ್ರತಿಭಟನೆ ಮಾಡಲು ಹಚ್ಚಿದರು. ಇತಿಹಾಸದ ಪುಟದಲ್ಲಿ ಇದೊಂದು ಮಹತ್ವದ ಚಾರಿತ್ರಿಕ ಸತ್ಯವಾಗಿದೆ ಎಂದು ನಾಗರಾಳ ವಿವರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಬಸವಣ್ಣನವರು ವಾಸ್ತವವಾದಿಗಳು. ಕಾಲ್ಪನಿಕ ಜಗತ್ತಿನ ಕಡೆಗೆ ಜನರನ್ನು ಕರೆದುಕೊಂಡು ಹೋಗಲಿಲ್ಲ. ಇಲ್ಲದ ದೇವರುಗಳ ಕುರಿತು ಹೆಚ್ಚು ಮಾತನಾಡಲಿಲ್ಲ. ಮನುಷ್ಯರ ಸಂಕಟ ನೋವುಗಳ ಕುರಿತು ಮೊಟ್ಟ ಮೊದಲು ಮಾತನಾಡಿದರು. ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಗೌರವವನ್ನು ತಂದುಕೊಟ್ಟು ಜೀವಿಸುವಂತೆ ಮಾಡಿದರು ಎಂದರು.
ಜಪಾನ, ಚೀನಾ, ಅಮೇರಿಕಾ ಮುಂತಾದ ದೇಶಗಳು ವಿಜ್ಞಾನ ಮತ್ತು ವೈಚಾರಿಕತೆಯನ್ನು ಮುಂದೆ ಇಟ್ಟುಕೊಂಡು ಹೊರಟಿದ್ದರೆ ನಮ್ಮ ಭಾರತ ಪುರಾತನವಾದ, ಅರ್ಥವಿಲ್ಲದ ಸಂಗತಿಗಳ ಕುರಿತು ಮಾತನಾಡುತ್ತ, ಜನರನ್ನು ಮೌಢ್ಯದ ಕಡೆಗೆ ದೂಡುತ್ತಿದೆ. ಬುದ್ಧ ಬಸವ ಅಂಬೇಡ್ಕರರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಾವೆಲ್ಲ ಬಸವಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗುಂಡಪ್ಪ ತುಂಬಗಿ ವಹಿಸಿದ್ದರು. ವೇದಿಕೆಯಲ್ಲಿ ಮರಿಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು. ಗೋದಾ ಎಸ್. ಸಜ್ಜನ ನಂದಗಾವಿ, ಗೋದಾ ಸೇವಾ ಪ್ರತಿಷ್ಠಾನ ಹರಿಹರ ದಾಸೋಹ ಸೇವೆ ಮಾಡಿದ್ದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಣ ಲಾಳಸೇರಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಿದ್ಧಲಿಂಗಪ್ಪ ಆನೇಗುಂದಿ, ದೇವಿಂದ್ರಪ್ಪ ಬಡಿಗೇರ, ತಿಪ್ಪಣ್ಣ ಬಸವಕಲ್ಯಾಣ, ಪ್ರಮೋದ ಶಾಬಾದಿ, ಸಂಗಮ್ಮ ಹರನೂರ, ಶಿವಕುಮಾರ ಅವಂಟಿ, ಚಂದ್ರು ಇಟಗಿ, ಚಂದ್ರಶೇಖರ ಹೈಯಾಳ, ಶಿವಲೀಲಾ ವಡಿಗೇರಿ, ಗೀತಾ ವಾಗಾ, ನೀಲಾ ಗದ್ದಿಗಿ, ಅನುಷಾ ಯಡ್ರಾಮಿ, ರಮೇಶ ಮೇದಾ, ಮಲ್ಕಣ್ಣ ಕುಂಬಾರ, ಸುವರ್ಣ ಸಗರ, ಅನಿತಾ ಹುಣಸಗಿ , ಮರೆಪ್ಪ ಅಣಬಿ ಶಿಕ್ಷಕರು, ವಿರೂಪಾಕ್ಷಿ ,ಬಸವರಾಜ ಗುಡಿಮನಿ ಮುಂತಾದವರು ಭಾಗವಹಿಸಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
