ವಚನಾಮೃತ ಕಾರ್ಯಕ್ರಮದಲ್ಲಿ ‘ಭಕ್ತಿ’ ವಿಷಯದ ಮೇಲೆ ಮುಕ್ತ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು :

ನಗರದ ಬಸವನಗರದ ಬಸವ ಸೇವಾ ಸಮಿತಿಯ ಮಾಸಿಕ ವಚನಾಮೃತ ಕಾರ್ಯಕ್ರಮದಲ್ಲಿ “ಭಕ್ತಿ” ವಿಷಯವಾಗಿ ಮುಕ್ತವಾಗಿ ಚರ್ಚಿಸಲಾಯಿತು.

ಬಸವನಗರದ ಅರ್ಥ ಕಲಾಶಾಲೆಯ ವೆಂಕಟೇಶ ಅವರ ಮನೆಯಲ್ಲಿ ರವಿವಾರ ನಡೆದ ಕಾರ್ಯಕ್ರಮ ಅನಿಲ ಅಂಗಡಿ ಅವರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ವೀರಭದ್ರಪ್ಪ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಮಹದೇವಪುರ ಅವರನ್ನು, ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಸ್ಮಾನ್,   ಮುಖ್ಯಸ್ಥರು, ಜಾನಪದ ಕಲಾಭಿವೃದ್ಧಿ ಸಂಸ್ಥೆ, ತಿಪ್ಪಸಂದ್ರ ಮತ್ತು ಸಭಾಧ್ಯಕ್ಷರಾಗಿ ಆಯ್ಕೆಯಾದ ಆರ್. ಎಚ್. ನಟರಾಜ ಅವರನ್ನು ಮತ್ತು ಸಮಸ್ತ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಜ್ಞಾನ, ಕರ್ಮ ಮತ್ತು ಧ್ಯಾನಗಳಂತೆ ಮೋಕ್ಷ ಪಡೆಯುವ ಮಾರ್ಗಗಳಲ್ಲಿ ಒಂದಾದ ಭಕ್ತಿ ಕುರಿತು ಸೂಕ್ತ ಚರ್ಚೆಯಲ್ಲಿ ಭಾಗವಹಿಸಲು ಸರ್ವರನ್ನು ಆಮಂತ್ರಿಸಿದರು.

ವೀರಭದ್ರಪ್ಪ ಅವರು ದೀಪ ಬೆಳಗಿಸಿ ಎಲ್ಲರೊಂದಿಗೆ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ನಂತರ ತಮ್ಮ ಬಸವತತ್ವವನ್ನು ಯುವ ಪೀಳಿಗೆಗೆ ತಲುಪಿಸುವತ್ತ ನಾವೆಲ್ಲ ಕಾರ್ಯೋನ್ಮುಖರಾಗಿ ಕೆಲಸ ಮಾಡಲು ಕರೆ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಸ್ಮಾನ್ ಅವರು ಗುರುವಿನ ಮಹತ್ವ ಕುರಿತು ಜಾನಪದ, ಭಾವಗೀತೆಯನ್ನು ಹಾಡಿ, ತಾವು ಕೊಪ್ಪಳದ ಗವಿಮಠದಲಿ ಅಭ್ಯಾಸ ಮಾಡುವಾಗ ಬಸವ ಸಂಸ್ಕೃತಿಯು ತಮ್ಮ ಮೇಲೆ ಬೀರಿದ ಪ್ರಭಾವವನ್ನು ವಿವರಿಸುತ್ತಾ, ಅದು ಸಮಾಜದಲ್ಲಿ ಭಾವೈಕ್ಯತೆಯನ್ನು ಸಾಧಿಸಲು ನೆರವಾಗುವುದೆಂದು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷರಾದ ನಟರಾಜ ಅವರು ಭಕ್ತಿಯ ಮಹಿಮೆಯನ್ನು, ತಾವು ವರನಟ ಡಾ. ರಾಜಕುಮಾರ ಅವರ ಮನೆಗೆ ಹೋದಾಗ ಅವರು ಆತ್ಮೀಯವಾಗಿ ಬರಮಾಡಿಕೊಂಡ ರೀತಿಯನ್ನು ವರ್ಣಿಸುತ್ತಾ, ಭಕ್ತಿಗೆ ಹೋಲಿಸುತ್ತಾ ಮನೆಯೇ ಮಂತ್ರಾಲಯ ಮನಸೇ ದೇವಾಲಯ ಎಂಬ ಹಾಡಿನಿಂದ ಸರ್ವರನ್ನು ಭಕ್ತಿಯ ಕುರಿತು ವಿಷಯ ಮಂಡಿಸಲು ಆಹ್ವಾನಿಸಿದರು.

ನಂತರ ಬಿಇಎಂಎಲ್ ಬಸವ ಬಳಗದ ಮಾಜಿ ಅಧ್ಯಕ್ಷರಾದ ಅಶೋಕ ಹಳ್ಳದಮಠ ಅವರು ಭಕ್ತಿಯ ೯ ವಿಧಗಳನ್ನು (ಶ್ರಾವಣ, ಕೀರ್ತನ, ಸ್ಮರಣ, ಪಾದಸೇವೆ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮನಿವೇದನೆ) ಕುರಿತು ವಿವರವಾಗಿ ತಿಳಿಸಿದರು.

ನಿವೃತ್ತ ಗುರುಗಳಾದ ಸಾಬಾದಿ ಅವರು ತಮಿಳು ನಾಡಿನಲ್ಲಿ ಶಿವನ ಆರಾಧಕರಾದ ನಯನಾರರು ಮತ್ತು ವಿಷ್ಣು ಆರಾಧಕರಾದ ಆಳ್ವಾರ ನೇತೃತ್ವದಲ್ಲಿ ಹುಟ್ಟಿದ ಭಕ್ತಿ ಪರಂಪರೆ ನಂತರ ಶರಣರು ಮತ್ತು ದಾಸರ ಪ್ರೋತ್ಸಾಹದಿಂದ ಉತ್ತರ ಭಾರತಕ್ಕೆ ಹಬ್ಬಿದ  ರೀತಿಯನ್ನು ವರ್ಣಿಸಿದರು.

ನಿವೃತ್ತ  ಹಿರಿಯ ಅಭಿಯಂತರಾದ ಮಲ್ಲೇಶಗೌಡ ಪಾಟೀಲ ಅವರು, ಭಕ್ತಿಯ ಪರಾಕಾಷ್ಟತೆ ಮುಟ್ಟಿದ ಬಸವೇಶ್ವರ ಅವರನ್ನು ನೆನೆಯುತ್ತಾ, ಶರಣ ಪರಂಪರೆಯ ಮನುಕುಲಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಶ್ರೀ ವಿಭೂತಿಪುರ ಮಠದ ಕಾರ್ಯದರ್ಶಿಗಳಾದ ಬಸವರಾಜ ಅವರು ಭಕ್ತಿಭಂಡಾರಿ ಬಸವೇಶ್ವರರ ಭಕ್ತಿಯಲ್ಲಿರುವ ನಿರ್ಮಲ  ಪ್ರೀತಿ, ವಿಶ್ವಾಸ, ದೃಢತೆ, ನಮ್ರತೆಯನ್ನು ಕೊಂಡಾಡಿದರು. ಮತ್ತು ಜ್ಞಾನರತ್ನ ಅಲ್ಲಮಪ್ರಭುಗಳ ಭಕ್ತಿ ಮತ್ತು ಜ್ಞಾನದ ಸಂಬಂಧವನ್ನು ವಚನಗಳ ಮುಖಾಂತರ ವಿವರಿಸಿದರು.

ಶಕುಂತಲಾ ಸಾಲಿಮಠ ಅವರು ನಾಲ್ಕು ವಿಧದ ಭಕ್ತರು (ಆರ್ತಿ, ಅರ್ಥಾರ್ಥಿ, ಜಿಜ್ಞಾಸು ಮತ್ತು  ಜ್ಞಾನಿ) ಮತ್ತು ಅವರ ಲಕ್ಷಣಗಳನ್ನು ಸವಿಸ್ತಾರವಾಗಿ ತಿಳಿಸಿದರು.

ನಂತರ ಯುವಕ ಕಲ್ಲಿನಾಥ ಅವರು ಭಕ್ತಿ ಹುಟ್ಟುವ ರೀತಿಯನ್ನು ವಿವರಿಸುತ್ತಾ, ಆಳವಾದ ಅಭ್ಯಾಸದಿಂದ ಜ್ಞಾನ ಸಂಪಾದನೆಯ ಗಾಢವಾದ ಭಕ್ತಿಗೆ ಸೋಪಾನವೆಂದು ವಿವರಿಸಿದರು.

ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಂಜಿ ಅವರು ಬ್ಲಾಕ್ ಹೋಲನಿಂದ ಹಿಡಿದು ಚಂದ್ರನವರೆಗೆ ಇರುವ ಗುರುತ್ವಾಕರ್ಷಣೆಯನ್ನು, ತಾಯಿ ಮಗುವಿನ ಸಂಬಂಧವನ್ನು, ಮನುಷ್ಯನ ಮನಸ್ಸು ಸೃಷ್ಟಿಸಿದ ದೇವರನ್ನು, ಪ್ರೀತಿಸುವ ಶಕ್ತಿಯನ್ನು ಭಕ್ತಿ ಎಂದು ಅರ್ಥೈಸಿದರು.

ತಮಿಳುನಾಡಿನ ಶಿವನ ಆರಾಧಕರಾದ ೮೩ ಪುರಾತನರು ಮತ್ತು ಅಂದಾಳಮ್ಮನನ್ನು ಸೇರಿಸಿ ವಿಷ್ಣು ಆರಾಧಕರಾದ ೧೨ ಪುರಾತನರು ಭಕ್ತಿ ಚಳುವಳಿಯನ್ನು ಸುಮಾರು ೯ನೇ ಶತಮಾನದಲ್ಲಿ ವೇದ, ಉಪನಿಷತ್ತುಗಳಿಗೆ ಸರಿಸಮನಾದ ಸಾಹಿತ್ಯವನ್ನು ತಮಿಳುನಲ್ಲಿ ಬರೆದು ಅವಕ್ಕೆ ಭಕ್ತಿಗೀತೆಗಳನ್ನು ಸೇರಿಸಿ ಜನಸಾಮಾನ್ಯರು ಸುಲಭವಾಗಿ ಮುಕ್ತಿ ಪಡೆಯುವ ದಾರಿ ತೋರಿದರು ಎಂದು ವಿವರಿಸಿದರು.

ಈ ಪ್ರಭಾವಕ್ಕೆ ಒಳಗಾದ ಕರ್ನಾಟಕದ ಶಿವಶರಣರು ಮತ್ತು ದಾಸರು ಆಡುಭಾಷೆಯಲ್ಲಿ ವಚನ ಮತ್ತು ಭಕ್ತಿ ಗೀತೆಗಳನ್ನು ರಚಿಸಿದರು. ಇವರಲ್ಲಿ ಅಲ್ಲಮಪ್ರಭುಗಳಿಂದ ಭಕ್ತಿ ಭಂಡಾರಿ ಎಂದೆನಿಸಿಕೊಂಡ ಬಸವೇಶ್ವರರು ಅಗ್ರಜರು.

ಇವರ ಪ್ರಭಾವಕ್ಕೆ ಒಳಗಾದ ಉತ್ತರ ಭಾರತದ ನಾಥ ಪರಂಪರೆಯವರು, ಭಕ್ತಿ ಚಳುವಳಿಯನ್ನು ಉತ್ತರ ಭಾರತದಲ್ಲಿ ಪಸರಿಸಿ ಕಬೀರ, ಮೀರಾಬಾಯಿ ಅಂತಹ ಹಲವಾರು ದಿಗ್ಗಜರ ಉದಯಕ್ಕೆ ಕಾರಣರಾದರು. ಈ ಭಕ್ತಿ ಪರಂಪರೆ ನಂತರ ಇತರ ದೇಶಗಳಿಗೆ ಹಬ್ಬಿತು ಎಂದು ತಿಳಿಸಿದರು.

ಮುಕ್ತಿಯ ನಾಲ್ಕು ಮಾರ್ಗಗಳಲ್ಲಿ ಅಲ್ಲಮಪ್ರಭುಗಳು ಜ್ಞಾನ ರತ್ನನೆನಿಸಿದರೆ, ಸಿದ್ಧರಾಮೇಶ್ವರರು ಕಾಯಕ ಯೋಗಿಗಳಾದರು. ಚನ್ನಬಸವಣ್ಣನವರು ಧ್ಯಾನ ಯೋಗದ ಷಟಸ್ಥಲ ಚಕ್ರವರ್ತಿ ಎನಿಸಿದರು. ಮತ್ತು ಬಸವೇಶ್ವರರು ಭಕ್ತಿ ಭಂಡಾರಿಯಾದರು. ವೈರಾಗ್ಯ ನಿಧಿಯಾದ ಅಕ್ಕಮಹಾದೇವಿ ನಾಲ್ಕು ಮಾರ್ಗಕ್ಕೆ ಕಳಶ ಪ್ರಾಯರಾದರು. ಈ ರೀತಿ ಸಮಗ್ರ ಆಧ್ಯಾತ್ಮಿಕ ಪ್ರಪಂಚಕ್ಕೆ ನಾಂದಿಯಾದರು ಎಂದು ವಿವರಿಸಿದರು.

ಸಮಾಜ ಸೇವಕರಾದ ಮನೋಜಕುಮಾರ, ಗಿರಿಜಮ್ಮ, ವೀರಭದ್ರಪ್ಪ ಮತ್ತು ಹಾಲೇಶ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಕೆ.ಆರ್. ಪುರ ತಾಲೂಕಿನ ಅಧ್ಯಕ್ಷರಾದ ಸಾಲಿಮಠ ಅವರು ಜಾನಪದ ಕಲಾಭಿವೃದ್ಧಿ ಸಂಘದಿಂದ ಕೊಡುವ ಪ್ರಶಸ್ತಿಪತ್ರಗಳನ್ನು ಗಣ್ಯರೊಡಗೂಡಿ ನೀಡಿ ಸನ್ಮಾನಿಸಿದರು.

ಸಭಾಧ್ಯಕ್ಷರು ಸರ್ವರ ಹಿತನುಡಿಗಳನ್ನು ಮೆಲಕು ಹಾಕುತ್ತಾ, ಶರಣರ ಭಕ್ತಿ ಪರಂಪರೆಯನ್ನು ಕೊಂಡಾಡಿದರು.

ಗಣ್ಯಮಾನ್ಯರಿಗೆ ಸಮಿತಿಯ ಪರವಾಗಿ ಅಂಗವಸ್ತ್ರ ಮತ್ತು ಶರಣ ಸಾಹಿತ್ಯವನ್ನು ಕೊಟ್ಟರೆ, ವಿಷಯ ಮಂಡನೆ ಮಾಡಿದ ಎಲ್ಲರಿಗೂ ಸಭಾಧ್ಯಕ್ಷರು ಶರಣ ಸಾಹಿತ್ಯ ವಿತರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಿಂಗನಗೌಡರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಸಮಸ್ತರಿಗೆ ವಂದನಾರ್ಪಣೆ ಮಾಡಿದರು.

ಶಕುಂತಲಾ ಸಾಲಿಮಠ ಅವರು ಮಂಗಳ ವಚನದೊಂದಿಗೆ ವಚನಾಮೃತ ಸಂಪನ್ನವಾಯಿತು. ಸಮಿತಿಯ ಹಿಂದಿನ ಅಧ್ಯಕ್ಷರಾದ ಆರ್.ಡಿ. ಪಾಟೀಲರ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು, ಪದಾಧಿಕಾರಿಗಳಾದ ಗೋವಿಂದ ರಾಜೂರ, ಮಲ್ಲಿಕಾರ್ಜುನ ಕಲಹಾಳ ಮತ್ತು ಉಮಾ ಶಂಕರ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಸಾದ ದಾಸೋಹದೊಂದಿಗೆ ಸಮಾಪ್ತಿಯಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *