ಬಸವಕಲ್ಯಾಣ
ಕಾರ್ಮಿಕ, ಕೃಷಿಕ ಮತ್ತು ಶ್ರಮಿಕರಿದ್ದರೆ ಮಾತ್ರ ಬದುಕು ನಡೆಯುತ್ತದೆ ಎಂಬುದನ್ನು ಬಸವಣ್ಣನವರ ಸಂಸತ್ತು ಸಾರುತ್ತದೆ. ಇಂತಹ ಪ್ರಜಾಪ್ರಭುತ್ವವನ್ನು ಪಾಲಿಸುವ ನಮ್ಮ ದೇಶದಲ್ಲಿ ಇಂದು ಧರ್ಮಾಕ್ರಸಿ ಎದುರಾಗಿದೆ. ಡೆಮಾಕ್ರಸಿ ಮತ್ತು ಧರ್ಮಾಕ್ರಸಿಯ ನಡುವೆ ಯುದ್ಧ ನಡೆಯುತ್ತಿದ್ದು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿದೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಬಸವ ಮಹಾಮನೆಯಲ್ಲಿ ಶನಿವಾರ ನಡೆದ 25ನೇ ಕಲ್ಯಾಣ ಪರ್ವದ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನ ಕ್ರಾಂತಿ ನಡೆದ ಈ ಪುಣ್ಯಭೂಮಿಯಲ್ಲಿ ಕಲ್ಯಾಣ ಪರ್ವದ ರಜತ ಮಹೋತ್ಸವವನ್ನು ಉದ್ಘಾಟಿಸಿರುವುದು ನನಗೆ ಇನ್ನೊಂದು ಜನ್ಮ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಒಂದೇ ಕಾಲದಲ್ಲಿ ಶರಣರೆಲ್ಲರೂ ಕೂಡಿ ವಚನ ಕ್ರಾಂತಿ ನಡೆಸಿದ ಭೂಮಿ ಇದಾಗಿದೆ. ಈ ರಜತ ಕಲ್ಯಾಣ ಪರ್ವ ಮತ್ತೊಂದು ಕ್ರಾಂತಿಗೆ ನಾಂದಿ ಹಾಡಬೇಕಿದೆ. ಬುದ್ಧ ಕಾಣದ ತುದಿಗಳನ್ನು ಬಸವಣ್ಣ ಕಂಡರು. ಬಸವಣ್ಣ ಕಂಡ ತುದಿಗಳಲ್ಲಿ ಕತ್ತಲು ತುಂಬಿತ್ತು. ಆ ಕತ್ತಲಿನಲ್ಲಿ ಬೆಳಕು ತುಂಬಿದ ಅವರು, ಆ ಬೆಳಕಿನ ಮೂಲಕ ಮಹಿಳೆಯರಿಗೆ ದೊಡ್ಡ ಶಕ್ತಿ ತುಂಬಿದರು. ಇದರಿಂದಾಗಿ ಇಂದು ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸುವ ಸ್ಥಾನಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಕಲ್ಯಾಣ ಪರ್ವದ ರಜತ ಮಹೋತ್ಸವ ಮತ್ತೊಂದು ಕ್ರಾಂತಿಗೆ ಚಾಲನೆ ನೀಡುವಂತಾಗಬೇಕು. ಪ್ರಜಾಪ್ರಭುತ್ವಕ್ಕೆ ಬಲ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಹಂಸಲೇಖ ತಿಳಿಸಿದರು.

ಡಾ. ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವತತ್ವದ ಪ್ರಸಾರ ಹಾಗೂ ಚಿಂತನೆ ನಿರಂತರವಾಗಿ ನಡೆಯಬೇಕು. ಆದರೆ, ಯಾರೊಬ್ಬರ ವೈಯಕ್ತಿಕ ಚಾರಿತ್ರ್ಯಹರಣ ಮಾಡುವ ಮೂಲಕ ಟೀಕೆ-ಟಿಪ್ಪಣಿಗಳನ್ನು ಮಾಡಬಾರದು. ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಸವತತ್ವವನ್ನು ಇನ್ನಷ್ಟು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಕೆಲವರು ನಮ್ಮನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ. ಆದರೆ, ನಾವು ಹಿಂದೂ ವಿರೋಧಿಗಳಲ್ಲ; ನಮ್ಮ ತತ್ವ ಮತ್ತು ಸಿದ್ಧಾಂತಗಳನ್ನು ಬಲಪಡಿಸುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಸಾರಿದ ತತ್ವಾದರ್ಶಗಳನ್ನು ಇಂದಿನ ಯುವಕ-ಯುವತಿಯರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಕಳೆದ 25 ವರ್ಷಗಳಿಂದ ಕಲ್ಯಾಣ ಪರ್ವವನ್ನು ಆಯೋಜಿಸಲಾಗುತ್ತಿದೆ. ಇಂದಿನ ಯುವಕರು ಕಾಯಕದಿಂದ ವಿಮುಖರಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕ-ಯುವತಿಯರಿಗೆ ವಚನ ಸಾಹಿತ್ಯದ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಜಗತ್ತಿನ ಇತಿಹಾಸದಲ್ಲಿ 12ನೇ ಶತಮಾನದಲ್ಲಿ ಸಮಾನತೆಗಾಗಿ ನಡೆದ ಕಲ್ಯಾಣ ಕ್ರಾಂತಿ ಅತ್ಯಂತ ದೊಡ್ಡ ಕ್ರಾಂತಿಯಾಗಿತ್ತು. ಪ್ರಸ್ತುತ ವಿಶ್ವದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದು, ಯುದ್ಧಗಳು ನಡೆಯುತ್ತಿವೆ. ಮಹಿಳೆಯರು ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತೆ ಡಾ. ಗಂಗಾದೇವಿ, ಡಾ. ಚನ್ನವೀರ ಶಿವಾಚಾರ್ಯ, ಬಸವಕುಮಾರ್ ಸ್ವಾಮಿ, ಸಿದ್ಧರಾಮೇಶ್ವರ ಸ್ವಾಮಿ, ಶಾಸಕ ಶರಣು ಸಲಗರ್, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ಸಿ. ಸೋಮಶೇಖರ್, ಡಾ. ಕವಿತಾ ಮಿಶ್ರಾ, ವಿಜಯಲಕ್ಷ್ಮೀ ಕೌಟೆ, ಬಸವರಾಜ್ ಬುಳ್ಳಾ, ಬಾಬಾ ವಾಲಿ ಹಾಗೂ ಶಶಿಕಾಂತ್ ದುರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೃಪೆ ವಾರ್ತಾ ಭಾರತಿ

ಶ್ರೀ ಹಂಸಲೇಖ ಸರ್ ಅವರು ಆಡಿದ ಮಾತಿನಲ್ಲಿ ಸದ್ಯ ಇಡೀ ದೇಶದ ಪ್ರಜಾಪ್ರಭುತ್ವ ಮತ್ತು ಸರ್ವ ಸಮಾನತೆಯ ಶರಣ ಧರ್ಮದ ಮೇಲೆ ನಡೆದಿರುವ ದಾಳಿ ದಬ್ಬಾಳಿಕೆ ಕುರಿತು ಎಚ್ಚರಿಸಿದ್ದಾರೆ.