ವಚನ ಸಾಹಿತ್ಯ ರಕ್ಷಣೆಗಾಗಿ ದಿಟ್ಟ ಕ್ರಮ ತೆಗೆದುಕೊಂಡ ಮಹಾಮಾತೆ ಗಂಗಾಂಬಿಕೆ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣೆ ಗಂಗಾಂಬಿಕೆ ಜಯಂತಿ ಆಚರಣೆ

ಚಿತ್ರದುರ್ಗ :

ಬಸವಾದಿ ಶಿವಶರಣರ ವಚನ ಸಾಹಿತ್ಯವು ಸ್ತ್ರೀ ಸಂವೇದನೆಯನ್ನು ಸಹ ಒಳಗೊಂಡಿದೆ. ಬಸವ, ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ ಇನ್ನಿತರ ನೂರಾರು ವಚನಕಾರರೆಲ್ಲರೂ ಸಮಾನತೆಯ ಪಥದಲ್ಲಿ ಸಾಗಲು ಮಾರ್ಗದರ್ಶನ ತೋರಿ, ಕೇವಲ ನುಡಿಯದೇ ನಡೆದು ತೋರಿದರು ಎಂದು ತಳಕಿನ ಎಸ್.ಜಿ.ಟಿ. ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ನರಸಿಂಹಪ್ಪ ಅವರು ವಿಚಾರ ಮಂಡಿಸಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಬಸವಣ್ಣನವರ ಆಚಾರ ಪತ್ನಿ ಎಂದೇ ಬಿಂಬಿತವಾಗಿದ್ದ ಶಿವಶರಣೆ ಗಂಗಾಂಬಿಕಾ ತಾಯಿ ಅವರ ಜಯಂತಿ (ಶರಣೋತ್ಸವ)ಯಲ್ಲಿ ವಿಷಯಾವಲೋಕನ ಮಾಡುತ್ತಿದ್ದರು.

ಅಂದಿನ ಕಾಲಘಟ್ಟದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಗೆ ಅಷ್ಟಾಗಿ ಮನ್ನಣೆ ಸಿಗದೆ ಆಕೆಯನ್ನು ಅವಮಾನಿಸುವ, ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಸಂದರ್ಭದಲ್ಲಿ ಬಸವಣ್ಣನವರ ವಿಚಾರಗಳ ಆಚರಣೆಗೆ ಬೆನ್ನೆಲುಬಾಗಿ ನಿಂತು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಶಿವಶರಣರ ನಡೆ ನುಡಿಗಳಿಗೆ ಆದ್ಯತೆ ನೀಡುತ್ತಿದ್ದ ಮಹಾಮಾತೆ ಗಂಗಾಂಬಿಕೆಯವರು.

ಅಂದಿನ ಕಲ್ಯಾಣದ ಕಲಚುರಿ ರಾಜ ಬಿಜ್ಜಳನ ಮಂತ್ರಿ, ದಂಡಾಧಿಪತಿ, ಬಲದೇವನ ಮಗಳಾಗಿ, ಕವಯತ್ರಿಯಾಗಿ ಮತ್ತು ಕಲಿಯಾಗಿ ಕಾರ್ಯನಿರ್ವಹಿಸಿದವಳು.

ಗಂಡನ ಮಾರ್ಗದರ್ಶನದಲ್ಲಿ ನಡೆಯುವ ಅಂತರಂಗ ಬಹಿರಂಗದಲ್ಲಿ ಸತ್ಕಾರ್ಯಗಳಿಗೆ ನೆರವಾಗುತ್ತ, ಜೀವನ ಸಾಗಿಸುವವರಿಗೆ ಬೇರೆ ನಿಯಮಗಳು, ವ್ರತಗಳು ಬೇಕೆ? ಎಂದು ಪ್ರಶ್ನಿಸಿದವರು.

ಆಕೆಯ ವಚನಗಳಲ್ಲಿ ಶರಣಸತಿ ಲಿಂಗಪತಿ ಭಾವ ಅಡಗಿದೆ. ವಚನ ಸಾಹಿತ್ಯ ರಚನೆಯಲ್ಲಿ ಅವರ ವಚನಗಳ ಸಂಖ್ಯೆ ಕಡಿಮೆಯಾದರೂ ಸಿಕ್ಕಿರುವ ೯ ವಚನಗಳು ನವರತ್ನಗಳಾಗಿವೆ.

ಆಕೆಯ ಒಂದು ವಚನದಲ್ಲಿ ಬರುವ ಸಾರ ಹೀಗಿದೆ – ಈ ಕಾಯ ಭೂಮಿಯೂ ಹೌದು, ಹುಲಿ ಮತ್ತು ಎಳೆಕರುವಿನ ವಾಸಸ್ಥಾನವೂ ಹೌದು ಎಂಬುದಾಗಿ ಪ್ರಸ್ತಾಪವಿದೆ ಎಂದು ಹೇಳಿದರು.

ಗಂಗಾಂಬಿಕೆ ತನ್ನ ಕುಟುಂಬ ವ್ಯವಸ್ಥೆಯಲ್ಲಿ ಭಿನ್ನ ಪಾತ್ರ ನಿರ್ವಹಿಸಿದರು. ಒಬ್ಬ ಗುರುಗಳ ಶಿಷ್ಯಳಾಗಿ, ಬಸವಣ್ಣನವರಿಗೆ ಆದರ್ಶ ಪತಿಯಾಗಿ, ಬಲದೇವ ಮಂತ್ರಿಯ ಮಗಳಾಗಿ ಗುರುತಿಸಿಕೊಂಡಿದ್ದ ತಾಯಿ ಆಕೆ. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಆರ್ಥಿಕ ಮಂತ್ರಿಯಾಗಿ ನ್ಯಾಯ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದವರು.

ಕಲ್ಯಾಣದಲ್ಲಿ ಕ್ರಾಂತಿಯ ಸಂದರ್ಭದಲ್ಲಿ ಮಹತ್ವಪೂರ್ಣ ಸಲಹೆಗಳನ್ನು ನೀಡಿದರು. ನಂತರದಲ್ಲಿ ಕ್ರಾಂತಿಯ ನೇತೃತ್ವ ವಹಿಸಿ ಸಾವಿಗೂ ಅಂಜದೆ ಉಳಿದ ಶರಣರಿಗೆ ತ್ಯಾಗ ಬಲಿದಾನದ ಬಗ್ಗೆ ಸ್ಫೂರ್ತಿ ತುಂಬಿ ದಿಟ್ಟತನದಿಂದ ಹೋರಾಡಲು ಪ್ರೇರೇಪಿಸಿದ ವೀರವನಿತೆ ಅವರು.

ವಚನಗಳ ಉಳಿಸಲು ಅವುಗಳ ಕಟ್ಟನ್ನು ಹೊತ್ತು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ವಚನಗಳನ್ನು ಹಿಡಿದು ಹೊರಟಾಗ ಶತೃಗಳು ಎದುರಾದಾಗ ವೀರಾವೇಶದಿಂದ ಹೋರಾಡಿ ಬೆಳಗಾವಿ ಜಿಲ್ಲೆಯ ಮಲಪ್ರಭಾ ನದಿ ತೀರದ ಕಂದರವಳ್ಳಿಯಲ್ಲಿ ವೀರ ಮರಣವನ್ನಪ್ಪುತ್ತಾಳೆ. ಅವರ ಲಿಂಗೈಕ್ಯ ಸಮಾಧಿ ಎಂ.ಕೆ. ಹುಬ್ಬಳ್ಳಿ ಹತ್ತಿರ ಸ್ಮಾರಕವಾಗಿ ಉಳಿದಿದೆ. ಇಂತಹ ವೀರಾಗ್ರಣಿಯ ಬಗ್ಗೆ ಜನಪದರು ಹಾಡು ಕಟ್ಟಿ ಹಾಡಿದ್ದಾರೆ.

ಶರಣ-ಶರಣೆಯರು ಕೇವಲ ನುಡಿಯಲ್ಲಲ್ಲ ನಡೆದು ತೋರಿಸಿದರು. ಸಮಯ ಬಂದಾಗ ಕತ್ತಿ ಹಿಡಿದು ಹೋರಾಡಿದರು ಎಂಬುದಕ್ಕೆ ಗಂಗಾಂಬಿಕೆ ಸಾಕ್ಷಿಯಾಗಿದ್ದಾರೆ. ಶರಣರೆಲ್ಲರೂ ಕಾಯಕ ಜೀವಿಗಳೇ. ತಮ್ಮ ಕಸುಬಿನ ಜತೆಗೆ ಸಮಾಜ ಕಟ್ಟುವ ಕೆಲಸವನ್ನು ಮಾಡಿದರು. ಇಂತಹ ಪುಣ್ಯ ಪುರುಷರ ಸಾಧನೆಯ ವ್ಯಕ್ತಿತ್ವದ ಪರಿಚಯ ಶ್ರೀಮಠದಿಂದ ನಡೆಯುತ್ತಿರುವುದು ನಿಜಕ್ಕೂ ಔಚಿತ್ಯಪೂರ್ಣ ಎನಿಸಿದೆ ಎಂದರು.

ಸಮಾರಂಭದ ಮುಖ್ಯಅತಿಥಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಬಹುತೇಕ ಬಸವಣ್ಣನವರ ಜೀವನ ವೃತ್ತಾಂತ ಎಲ್ಲರಿಗೂ ಗೊತ್ತಿದೆ. ಆ ಕಾಲದಲ್ಲಿ ಬಹುಪತ್ನಿತ್ವ ಆಚರಣೆಯಲ್ಲಿದ್ದರೂ ಹೊಂದಾಣಿಕೆ ಕಷ್ಟ ಸಾಧ್ಯವಾದರೂ ಬಸವಣ್ಣನ ಪತ್ನಿಯರಾದ ಗಂಗಾಂಬಿಕೆ ಹಾಗೂ ನೀಲಾಂಬಿಕೆಯವರಲ್ಲಿ ಸಾಮರಸ್ಯವಿತ್ತು. ಅವರು ಮೊದಲೇ ಮಾತಾಡಿಕೊಂಡು ನಮ್ಮ ವೈಯಕ್ತಿಕ ಹಿತಕ್ಕಿಂತ ಪತಿ ಬಸವಣ್ಣನವರ ವಿಚಾರಧಾರೆಗಳಿಗೆ ಒತ್ತಾಸೆಯಾಗಿರಬೇಕೆಂಬ ಆಶಯ ಅವರಲ್ಲಿತ್ತು.

ಬಸವಣ್ಣನವರ ವಿಚಾರಗಳು ಗಟ್ಟಿಯಾಗಬೇಕಾದರೆ ವ್ಯಕ್ತಿತ್ವ ವಿಶಿಷ್ಟ ರೀತಿಯಲ್ಲಿ ವ್ಯಕ್ತವಾಗುವುದಕ್ಕೆ ಸಂಸಾರದಲ್ಲಿ ಸತ್ಯವಡಗಿರಬೇಕೆಂದು ಮಾತಾಡಿಕೊಂಡು ಬಲದೇವ ಮಂತ್ರಿಯ ಮಗಳನ್ನು ವಿವಾಹವಾಗಲು ಮಾತುಕತೆಯಾಗುತ್ತದೆ. ಅದರಂತೆ ನಡೆಯುತ್ತದೆ ಕೂಡ. ನಂತರದಲ್ಲಿ ರಾಜಮನೆತನದ ಎಲ್ಲ ವೈಭವ ಬದಿಗಿಟ್ಟು ಸಾಮಾನ್ಯ ಮಂತ್ರಿ ಬಸವಣ್ಣನ ಸತಿಯಾಗಿ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನಿಸಿ ಅದರಂತೆ ನಡೆಯುತ್ತಾಳೆ.

ಮುಂದೆ ನಡೆದ ಎಲ್ಲ ವಿಚಾರಗಳನ್ನು ಉಪನ್ಯಾಸ ಮಂಡಿಸಿದವರು ತಿಳಿಸಿದ್ದಾರೆ ಎಂದು ನುಡಿದ ಅವರು, ಬಸವಣ್ಣನ ಎಲ್ಲಿಯು ಕಾರ್ಯಚಟುವಟಿಕೆಗಳಲ್ಲಿ ನಿಂತು ಮುನ್ನೆಡೆಸಿ ಕಲ್ಯಾಣ ಕ್ರಾಂತಿಯ ನಂತರ ಆದ ಘಟನೆಗಳಲ್ಲಿ ವಚನ ಸಾಹಿತ್ಯ ರಕ್ಷಣೆಗಾಗಿ ದಿಟ್ಟ ಕ್ರಮ ತೆಗೆದುಕೊಂಡ ಮಹಾಮಾತೆ ಗಂಗಾಂಬಿಕೆ ಎಂದು ಬಣ್ಣಿಸಿದರು.

ಸಮಾರಂಭದ ಸಮ್ಮುಖ ವಹಿಸಿದ್ದ ಶಿರಸಂಗಿ ಮುರುಘೇಂದ್ರ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಪುತ್ರಶೋಕ ನಿರಂತರ ಎನ್ನುವುದು ಎಲ್ಲ ತಂದೆತಾಯಿಗಳಿಗೆ ಇರುತ್ತದೆ. ಗಂಗಾಂಬಿಕೆ ನೀಲಾಂಬಿಕೆಯರು ಪುತ್ರನನ್ನು ಕಳೆದುಕೊಂಡ ಸಂದರ್ಭದಲ್ಲಿ ಬಸವಣ್ಣನವರಿಗೆ ಗಡಿಪಾರು ಮಾಡಬೇಕೆಂಬ ತೀರ್ಮಾನವಾದಾಗ ಬಸವಣ್ಣನವರು ತಮ್ಮ ಇಬ್ಬರು ಪತ್ನಿಯರನ್ನು ಕರೆದುಕೊಂಡು ಹೋಗದೆ ಹಡಪದ ಅಪ್ಪಣ್ಣನವರನ್ನು ಜತೆಗೆ ಕರೆದುಕೊಂಡು ಕೂಡಲಸಂಗಮದೆಡೆಗೆ ನಡೆಯುತ್ತಾರೆ.

ಇಂತಹ ಸಂದರ್ಭದಲ್ಲಿ ಎದೆಗುಂದದೆ ಕೈಯಲ್ಲಿ ಕತ್ತಿ ಹಿಡಿದು ಹೋರಾಡುವುದು ಊಹಿಸಿಕೊಳ್ಳಲು ಅಸಾಧ್ಯದ ಮಾತು. ಆಚಾರ ಪತ್ನಿ ಗಂಗಾಂಬಿಕೆ, ವಿಚಾರ ಪತ್ನಿ ನೀಲಾಂಬಿಕೆ ಇವರೀರ್ವರ ಮನಸ್ಥಿತಿ ಒಂದೇ ಆಗಿದ್ದು ಬಸವಣ್ಣನವರಿಗೆ ನೆರಳಾಗಿ ಎಲ್ಲ ಸಂದರ್ಭದಲ್ಲಿ ನಿಲ್ಲುತ್ತಾರೆ.

ಗಂಡು ದುಡಿಯಬಹುದು, ಹಣ ಸಂಪಾದಿಸಬಹುದು ಆದರೆ ಮನೆಯನ್ನು ನಿಭಾಯಿಸುವ ಹೊಣೆಗಾರಿಕೆ ಪತ್ನಿಯರದಾಗಿರುತ್ತದೆ. ಅಂತಹ ಜವಾಬ್ದಾರಿಯನ್ನು ಹೊತ್ತು ಕಲ್ಯಾಣದಲ್ಲಿ ಲಕ್ಷಗಟ್ಟಲೆ ಶರಣರು ಬಸವಣ್ಣನವರ ಮಹಾಮನೆಗೆ ಬಂದಾಗ ಅವರನ್ನು ಆದರಾತಿಥ್ಯದಿಂದ ನೋಡಿಕೊಂಡದ್ದು ಗಂಗಾಂಬಿಕೆ. ಕೇವಲ ಒಬ್ಬರಿಂದ ಸಂಸಾರ ಸಾಗುವುದಿಲ್ಲ. ಸತಿ-ಪತಿಗಳು ಒಗ್ಗಟ್ಟಾಗಿ ನಿಭಾಯಿಸಬೇಕಾಗುತ್ತದೆ. ಅಂತಹ ದಿಟ್ಟ ನಿಲುವನ್ನು ಗಂಗಾಂಬಿಕೆ ಹೊಂದಿದ್ದರೆಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಶ್ರೀಗಳು, ಬಸವ ಮುರುಘೇಂದ್ರ ಸ್ವಾಮೀಜಿ, ಡಾ. ಬಸವ ಚೇತನ ಸ್ವಾಮೀಜಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರುಗಳಾದ ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಕೋದಂಡ, ಹನುಮಂತಪ್ಪ, ನಾಗರಾಜ ಸಂಗಂ, ಎಸ್. ವೀರೇಶ, ಮಹಾಂತಮ್ಮ, ಇಟಗಿ ವಿಜಯಕುಮಾರ ದಂಪತಿ, ಎಸ್.ವಿ. ಕೊಟ್ರೇಶ ದಂಪತಿ, ಡಿ.ವಿ. ಮುರುಗೇಶ, ಪ್ರಾಂಶುಪಾಲೆ ಸವಿತಾ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜಿನ ಕೆಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ರತ್ನಮ್ಮ ಅವರನ್ನು ಗೌರವಿಸಲಾಯಿತು.

ಎಸ್.ಜೆ.ಎಂ. ಫಾರ್ಮಸಿ ಹಾಗೂ ಎಸ್.ಜೆ.ಎಂ. ನರ್ಸಿಂಗ್ ಮಹಾವಿದ್ಯಾಲಯಗಳ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೋತಿ ಬಸವರಾಜ ಗಂಗಾಂಬಿಕೆ ಅವರ ವಚನ ಹಾಡಿದರು. ಡಾ. ಸ್ನೇಹಲತಾ ಸ್ವಾಗತಿಸಿದರು. ಡಾ. ಬಸವರಾಜ ಹರ್ತಿ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *