ನರಗುಂದ :
ಅಭಿನವ ಬಸವಣ್ಣನಾಗಿ ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವೈಚಾರಿಕ ಕ್ರಾಂತಿ ಮಾಡಿದ ಈ ಶತಮಾನ ಕಂಡ ಶ್ರೇಷ್ಠ ಸಂತರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು.
ಅವರು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಅವರ ಜೀವನವೇ ನಮಗೆಲ್ಲ ಆದರ್ಶ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಮಾರುತಿ ಅಸುಂಡಿ ಬಣ್ಣಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೩೮೮ ನೇ ಶಿವಾನುಭವ ಹಾಗೂ ಕೋಮುಸೌಹಾರ್ದತೆಯ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ೮ ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದುಡಿಯುವವರ, ಶ್ರಮಿಕರ ಪರವಾದ ಉದಾರತೆಯನ್ನು ತೋರಿದ ತೋಂಟದ ಶ್ರೀಗಳು ಈ ಶತಮಾನದ ಬಸವಣ್ಣ. ಅರಣ್ಯ, ಪ್ರಾಣಿ, ರೈತ ಹಾಗೂ ಶ್ರಮಿಕರು ಹೀಗೆ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ ಪೂಜ್ಯರು ಸರ್ವರಿಗೂ ಆದರ್ಶಪ್ರಾಯರು.

ಭಾಷೆ, ನಾಡು ಜನರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಕನ್ನಡ ಭಾಷೆ ಉಳಿದರೆ ನಾವು ಉಳಿದೇವು ಎಂಬ ನಿಲುವನ್ನು ಹೊಂದಿದ್ದ ಪೂಜ್ಯರು ತಮ್ಮ ಉಸಿರು ಇರುವರೆಗೂ ಕನ್ನಡದ ಸಂರಕ್ಷಕರಾಗಿದ್ದರು ಎಂದರು.
ಸಾನಿದ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ, ಗಾಳಿ, ನೀರು, ಬೆಂಕಿ ಯಾರೊಂದಿಗೂ ಬೇಧ ಮಾಡುವುದಿಲ್ಲ. ಹಾಗೆ ಸ್ವಾಮಿಗಳಾದವರು ಯಾರೊಂದಿಗೂ ಬೇಧ ಮಾಡಬಾರದೆಂದು ಹೇಳಿದ ಅವರು ನುಡಿದಂತೆ ನಡೆದ ಶ್ರೀಸಾಮಾನ್ಯರ ಜಗದ್ಗುರುಗಳು.
ಜಾತಿ ಬೇಧವರಿಯದೆ ಮನುಕುಲದ ಒಳತಿಗಾಗಿ ಶ್ರಮಿಸಿದ, ಎಲ್ಲ ಜನಾಂಗದ ಮಹನೀಯರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಿ ಭಾವೈಕ್ಯತೆಯ ಸಂದೇಶವನ್ನು ಸಾರಿದವರು ಎಂದು ಶ್ರೀಗಳು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗದುಗಿನ ಸುಮಾ ಸಿದ್ಧಲಿಂಗೇಶ ಗೊಡಚಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ಕುಳಗೇರಿ ಕ್ರಾಸ್ ಶಿವಾಣಿ ಮಾತಾಜಿ, ಭಾವನಾ ಪಾಟೀಲ, ಉಮಾ ಕುರಿ, ಈರಮ್ಮ ಮುದಕವಿ, ಬಿ.ಬಿ. ಕುರಿ ಹಾಗೂ ಶ್ರದ್ಧಾನಂದ ಅಕ್ಕನ ಬಳಗದ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರೊ. ಆರ್. ಬಿ. ಚಿನಿವಾಲರ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮಠದ ವ್ಯವಸ್ಥಾಪಕರಾದ ಮಹಾಂತೇಶ ಹಿರೇಮಠ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
