ಕಳ್ಳದನಗಳನ್ನು ದೂರುವುದಕ್ಕಿಂತ ಬೇಲಿಯನ್ನು ಭದ್ರಗೊಳಿಸಿ

ಬೀದರ್

ಬರಹಗಾರರಾದ, ​ಶರಣ ವಿನಯ ಶಿರಹಟ್ಟಿಮಠ ಅವರು ತಮ್ಮ ಒಂದು ಲೇಖನದಲ್ಲಿ ಅತ್ಯಂತ ಮುಖ್ಯವಾದ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ.

“ಲಿಂಗಾಯತ ಧರ್ಮದ ಬಾಗಿಲನ್ನು ನಾವೇ ತೆರೆದಿಟ್ಟು, ನಮ್ಮ ಧರ್ಮದ ಮೇಲೆ ದಾಳಿ ನಡೆಯುತ್ತಿದೆ ಎಂದು ಕೂಗಾಡಿದರೆ ಏನು ಪ್ರಯೋಜನ?”

​ಸನಾತನವಾದಿಗಳು ಹಾಗೂ ವೈದಿಕವಾದಿಗಳು ಲಿಂಗಾಯತ ಧರ್ಮದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಕೇವಲ ಚಿಂತಿಸುತ್ತ ವಿರೋಧಿಸುವುದಕ್ಕಿಂತ, ಮೊದಲು ನಮ್ಮ ಧರ್ಮದ ಬೇಲಿ ಹಾಗೂ ಬಾಗಿಲನ್ನು ಗಟ್ಟಿಗೊಳಿಸಬೇಕು ಎಂದು ಅವರು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಈ ಒಂದು ಹಿನ್ನೆಲೆಯಲ್ಲಿ ನನ್ನ ಕೆಲವು ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

​ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಮಾತೆ ಮಹಾದೇವಿಯವರು, ಹೊಲದ ಬೆಳೆಯನ್ನು ಹಾಳುಮಾಡಲು ನುಗ್ಗುವ ‘ಕಳ್ಳದನಗಳನ್ನು ನಿಷೇಧಿಸಿ’ ಎಂದು ಕೇವಲ ದೂರುವುದಕ್ಕಿಂತ, ಹೊಲದ ಬೇಲಿಯನ್ನು ಭದ್ರಪಡಿಸುವುದಕ್ಕೆ ಹೆಚ್ಚಿನ ಸಮಯ, ಶಕ್ತಿ ಮತ್ತು ಪರಿಶ್ರಮವನ್ನು ವಿನಿಯೋಗಿಸಿದರು.

ಅವರು ಬಸವ ಮಂಟಪಗಳನ್ನು ಸ್ಥಾಪಿಸಿದರು; ಪ್ರವಚನಗಳ ಮೂಲಕ, ಧರ್ಮ ಪ್ರಚಾರದ ಮೂಲ ಲಿಂಗಾಯತ ಆಚರಣೆಗಳನ್ನು ಗಟ್ಟಿಗೊಳಿಸಿ, ಭಕ್ತರಲ್ಲಿ ಏಕದೇವೋಪಾಸನೆಯ ಅರಿವು ಮೂಡಿಸಿದರು.

​ಬಸವ ತತ್ವಕ್ಕಾಗಲಿ, ಲಿಂಗಾಯತ ಧರ್ಮಕ್ಕಾಗಲಿ ಯಾರಾದರೂ ಚ್ಯುತಿ ತಂದಾಗ ಗಣಾಚಾರದ ಮೂಲಕ ಸೈದ್ಧಾಂತಿಕ ಸ್ಪಷ್ಟನೆ, ಉತ್ತರ ಹಾಗೂ ಪ್ರತಿಕ್ರಿಯೆ ನೀಡುವುದು ನಮ್ಮ ಕರ್ತವ್ಯ. ನಿಜ. ಆದರೆ, ಅದರ ಜೊತೆಜೊತೆಗೆ ಧರ್ಮದ ತತ್ವದ ಬೇಲಿಯನ್ನು ಬಲಪಡಿಸುವುದು ಅತ್ಯಂತ ಮುಖ್ಯ.

​ಆದರೆ, ನಮ್ಮ ಇಂದಿನ ಕಾವಿಧಾರಿ ಮಠಾಧೀಶರು ಮತ್ತು ಲಿಂಗಾಯತ ಮುಖಂಡರು ಮಾಡುತ್ತಿರುವುದೇನು?

ಧರ್ಮ ಪ್ರಚಾರ ಮಾಡುವುದು ಹಾಗೂ ಲಿಂಗಾಯತರಿಗೆ ನಿಜವಾದ ಆಚರಣೆಗಳನ್ನು ತಿಳಿಸುವುದನ್ನು ಬಟಾಬಯಲು ಮಾಡಿ, ಕೇವಲ ಶಾಲಾ-ಕಾಲೇಜುಗಳನ್ನು ನಡೆಸುತ್ತಾ, ಸರ್ಕಾರದ ಅನುದಾನದ ಹಿಂದೆ ಬಿದ್ದು, ರಾಜಕಾರಣಿಗಳನ್ನು ಓಲೈಸುತ್ತಾ ಉದ್ಯಮಿಗಳಂತೆ (ಬಿಸಿನೆಸ್‌ಮ್ಯಾನ್‌) ಓಡಾಡುತ್ತಿದ್ದಾರೆ.

​ಯಾವುದೇ ಒಂದು ಧರ್ಮಕ್ಕೆ ಒಂದೇ ರೀತಿಯ ಪ್ರಾರ್ಥನೆ, ಒಂದೇ ಧ್ವಜ ಹಾಗೂ ಒಂದೇ ರೀತಿಯ ಮಂತ್ರಗಳಿರಬೇಕು. ಆದರೆ, ಲಿಂಗಾಯತ ಧರ್ಮದ ಆಚರಣೆಗಳಲ್ಲಿ ಇವರೆಲ್ಲರೂ ಸೇರಿ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲು ತಯಾರಿಲ್ಲ.

​ಶ್ರೇಷ್ಠ ಸಾಹಿತಿ ಹಾಗೂ ದಾರ್ಶನಿಕರಾದ ಪೂಜ್ಯ ಮಾತೆ ಮಹಾದೇವಿಯವರು ಇದನ್ನೆಲ್ಲ ನಮಗೆ ಕೊಟ್ಟು ಹೋಗಿದ್ದರೂ, ಅದನ್ನು ಮುಕ್ತಮನಸ್ಸಿನಿಂದ ಒಪ್ಪಿಕೊಳ್ಳುವ ಉದಾರತೆ ನಮ್ಮ ಮಠಾಧೀಶರಲ್ಲಾಗಲಿ, ಮುಖಂಡರಲ್ಲಾಗಲಿ ಇಲ್ಲ. ಮಾತಾಜಿಯವರಿಗೆ ಎಲ್ಲಿ ಶ್ರೇಯಸ್ಸು ಹೊರಟುಹೋಗುತ್ತದೋ, ತಮ್ಮ ಮಠಗಳ ಭಕ್ತರ ಸಂಖ್ಯೆ ಎಲ್ಲಿ ಕಡಿಮೆಯಾಗುತ್ತದೋ ಎಂಬ ಸ್ವಾರ್ಥ ಚಿಂತೆ ಅವರನ್ನು ಕಾಡುತ್ತಿದೆ!

​ಹೀಗೆ ಧರ್ಮದ ಬೇಲಿಯನ್ನು ಭದ್ರಪಡಿಸುವುದನ್ನು ಬಿಟ್ಟು, “ಲಿಂಗಾಯತ ಧರ್ಮದ ಮೇಲೆ ದಾಳಿಯಾಗುತ್ತಿದೆ; ಬಸವ ಭಕ್ತರೆಲ್ಲ ಎಚ್ಚರಗೊಳ್ಳಿ, ಹೋರಾಟ ಮಾಡಿ” ಎಂದು ಬೊಬ್ಬೆ ಹೊಡೆದರೆ ಏನು ಪ್ರಯೋಜನ?

​ಲಿಂಗಾಯತ ಧರ್ಮದ ಅತಿ ದೊಡ್ಡ ಸಂಘಟನೆಯಾದ ‘ರಾಷ್ಟ್ರೀಯ ಬಸವದಳ’ವನ್ನು (ಮಾತಾಜಿಯವರ ಸಂಶೋಧನೆಯ ನೆಪವೊಡ್ಡಿ) ತಮ್ಮ ಸ್ವಾರ್ಥಕ್ಕಾಗಿ, ಹಿತಾಸಕ್ತಿಗಾಗಿ ಒಡೆದು ಹಾಕಿದ ಇವರು, “ಈಗ ಧರ್ಮದ ಮೇಲೆ ದಾಳಿಯಾಗುತ್ತಿದೆ, ಒಗ್ಗಟ್ಟಾಗಿ ಹೋರಾಡಿ” ಎಂದು ಕೂಗಿದರೆ ಅದಕ್ಕೇನಾದರೂ ಅರ್ಥವಿದೆಯೇ?

​ಅದಕ್ಕಾಗಿಯೇ, ಪೂಜ್ಯ ಮಾತೆ ಮಹಾದೇವಿಯವರು ಲಿಂಗೈಕ್ಯರಾದ ನಂತರ ಇಂದಿನ ಮಠ-ಪೀಠಗಳ ಮುಖ್ಯಸ್ಥರ ಧೋರಣೆಯನ್ನು ನೋಡಿ ಬೇಸರಗೊಂಡ, ಸಚಿವರಾದ ಎಂ.ಬಿ. ಪಾಟೀಲರು—”ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಬಸವಣ್ಣನವರನ್ನು ಮಾರ್ಕೆಟಿಂಗ್ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ” ಎಂದು ತಮ್ಮ ಭಾಷಣದಲ್ಲಿ ಅತ್ಯಂತ ನೋವಿನಿಂದ ಹೇಳಿದ್ದರು.

​ಆದ್ದರಿಂದ, ಬಸವ ಭಕ್ತರು ಹಾಗೂ ಲಿಂಗಾಯತ ಧರ್ಮೀಯರು ಈಗಲಾದರೂ   ಎಚ್ಚರಗೊಳ್ಳಬೇಕಿದೆ. ಗುರು ಬಸವಣ್ಣನವರನ್ನು ವ್ಯಾಪಾರಿ ವಸ್ತುವನ್ನಾಗಿ ಬಳಸಿಕೊಳ್ಳುತ್ತಿರುವವರ ಮೇಲೆ ಅವಲಂಬಿತ ಆಗದೆ, ಲಿಂಗಾಯತ ಧರ್ಮದ ನಿಜವಾದ ಆಚರಣೆ ಮತ್ತು ಸಿದ್ಧಾಂತಗಳನ್ನು ಸ್ವತಃ ಅನುಸರಿಸುತ್ತಾ ಪ್ರಚಾರ ಮಾಡೋಣ. ಬಸವ ಭಕ್ತರಲ್ಲಿ ಸಹಮತಿ ಹಾಗೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಮ್ಮ ಧರ್ಮದ ಬೇಲಿಯನ್ನು ಭದ್ರಪಡಿಸಿಕೊಳ್ಳೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *