ಲಿಂಗಾಯತರ ಮೇಲಿನ ದಾಳಿ ಹೊಸದಲ್ಲ, 800 ವರ್ಷ ಹಳೆಯದು (ಭಾಗ 1)

ಯಾರೂ ಲಿಂಗಾಯತರ ಬಾಗಿಲು ಒಡೆದಿಲ್ಲ, ನಾವೇ ತೆರೆದಿಟ್ಟು ನಿದ್ದೆ ಮಾಡುತ್ತಿದ್ದೇವೆ

ಬೆಂಗಳೂರು

ಬಸವಣ್ಣನನ್ನು ಇಂದು ಯಾರೂ ಬಯ್ಯುತ್ತಿಲ್ಲ, ಎಲ್ಲರೂ ಹೊಗಳುವವರೇ! ಹಾಗಿದ್ದರೆ ನಮ್ಮ ಧರ್ಮ ಕರಗುತ್ತಿರುವುದು ಯಾಕೆ?

ಇವತ್ತು ರಾತ್ರಿ ಮಲಗುವ ಮುಂಚೆ ಒಂದು ಸಣ್ಣ ಕೆಲಸ ಮಾಡಿ. ಮೊಬೈಲ್‌ನಲ್ಲಿ ಯಾವುದಾದರೂ AI ಚಾಟ್ ತೆರೆದು ಇಂಗ್ಲಿಷ್‌ನಲ್ಲಿ ಕೇಳಿ, “Is Lingayatism a part of Hinduism?” ಅದರಲ್ಲಿ ಉತ್ತರ ಹೌದು ಎಂದು ಬರುತ್ತದೆ. ನಿಮ್ಮ ಮೊಮ್ಮಗ ನಾಳೆ ಬಸವಣ್ಣನ ಬಗ್ಗೆ ಮೊದಲ ಪಾಠ ಕಲಿಯುವುದು ಅದೇ ಮೊಬೈಲ್‌ನಲ್ಲಿ.

ಆ ಯಂತ್ರಕ್ಕೆ ನಮ್ಮ ಮೇಲೆ ದ್ವೇಷವಿಲ್ಲ. ಪ್ರೀತಿಯೂ ಇಲ್ಲ. ಜಗತ್ತಿನಲ್ಲಿ ಯಾರು ಹೆಚ್ಚು ಬರೆದಿದ್ದಾರೋ ಅವರ ಪಾಠವನ್ನೇ ಅದು ಒಪ್ಪಿಸುತ್ತದೆ.

ಇಂಗ್ಲಿಷ್‌ನಲ್ಲಿ ಬಸವಣ್ಣನ ಬಗ್ಗೆ ಹೆಚ್ಚು ಬರೆದವರು ಯಾರು? ನಾವಂತೂ ಅಲ್ಲ. ನಾವು ಮಾಡಿರುವುದು, ಮಾಡಿಲ್ಲದಿರುವುದು, ಮಾಡಬೇಕಾಗಿರುವುದು ತಿಳಿದುಕೊಳ್ಳೋಣ.

ಬಾಗಿಲು ತೆರೆದಿಟ್ಟು ನಿದ್ದೆ

ಈ ಕೆಲವು ವರ್ಷಗಳಿಂದ ನಾವು “ಲಿಂಗಾಯತ ಧರ್ಮದ ಮೇಲೆ ದಾಳಿ” ಎಂದು ಕೂಗುತ್ತಿದ್ದೇವೆ. ನಾನೂ ಕೂಗಿದ್ದೇನೆ.

ಇವತ್ತು ಸ್ವಲ್ಪ ಕಹಿ ಮಾತು ಹೇಳಲೇಬೇಕು. ಯಾರೂ ನಮ್ಮ ಬಾಗಿಲು ಒಡೆದು ಒಳಗೆ ನುಗ್ಗಿಲ್ಲ. ನಾವೇ ಬಾಗಿಲು ತೆರೆದಿಟ್ಟು ನಿದ್ದೆ ಮಾಡುತ್ತಿದ್ದೇವೆ.

ಹೊಲವನ್ನು ಎರಡು ಮಳೆಗಾಲ ಪಾಳು ಬಿಟ್ಟು ನೋಡಿ. ಯಾರೂ ಬಂದು ಕಳೆಯ ಬೀಜ ಚೆಲ್ಲಬೇಕಿಲ್ಲ. ಕಳೆ ತಾನಾಗಿಯೇ ಎದೆಯೆತ್ತರ ಬೆಳೆಯುತ್ತದೆ. ಆಮೇಲೆ ಕಳೆಯ ಮೇಲೆ ಸಿಟ್ಟು ಮಾಡಿಕೊಂಡರೆ ಏನು ಬಂತು?

ಒಂದು ವಿಚಿತ್ರ ಗಮನಿಸಿದ್ದೀರಾ? ಕುಂಭಮೇಳದ ವೇದಿಕೆಯಲ್ಲಿ ಶರಣರ ಹೆಸರು ಕೇಳಿಬರುತ್ತದೆ. ದೊಡ್ಡ ದೊಡ್ಡ ಪ್ರವಚನಕಾರರು ವಚನ ಉದ್ಧರಿಸುತ್ತಾರೆ. “ಬಸವ ಶೈವ” ಎಂಬ ಹೊಸ ಪದ ಹುಟ್ಟಿಕೊಂಡಿದೆ.

ಜೀರ್ಣೋದ್ಧಾರವಾದ ಕೆಲವು ಗುಡಿಗಳಲ್ಲಿ ಶರಣರ ಮೂರ್ತಿಗೆ ಜನಿವಾರ ತೊಡಿಸಿದ್ದಾರೆ. ಬಯ್ದವನನ್ನು ನಾವು ಕೂಡಲೇ ಗುರುತಿಸುತ್ತೇವೆ. ಹೊಗಳಿದವನಿಗೆ ಶಾಲು ಹೊದಿಸಿ ವೇದಿಕೆಗೆ ಕರೆಯುತ್ತೇವೆ. ಅಪಾಯ ಅಡಗಿರುವುದೇ ಆ ಶಾಲಿನಲ್ಲಿ.

ಜನಿವಾರದ ಕಥೆ ನಮ್ಮ ಅಜ್ಜಿಯರಿಗೂ ಗೊತ್ತು. ಎಂಟು ವರ್ಷದ ಹುಡುಗ ಬಸವಣ್ಣ ಆ ದಾರ ನನಗೆ ಬೇಡ ಎಂದ. ಎಂಟುನೂರು ವರ್ಷದ ನಂತರ ಅದೇ ದಾರ ಅವರ ಮೂರ್ತಿಯ ಹೆಗಲ ಮೇಲೆ! ಯಾರೂ ಬಲವಂತ ಮಾಡಲಿಲ್ಲ. ಭಕ್ತಿಯಿಂದಲೇ ತೊಡಿಸಿದರು.

“ಬಸವ ಅಂದರೆ ನಂದಿ, ಬಸವತತ್ವ ಅಂದರೆ ಜೋಡೆತ್ತಿನ ಕೃಷಿ,” ಎಂಬ ಪ್ರಚಾರವೂ ನಡೆಯುತ್ತಿದೆ. ಇದು ಕೇಳಲು ಚಂದ ಎಂದು ಕೆಲವರಿಗೆ ಅನಿಸಬಹುದು. ಇದರಲ್ಲೇನು ಸಮಸ್ಯೆ?

ಚಮ್ಮಾರನ ಸೂಜಿಗೂ ಮಂತ್ರಿಯ ಲೇಖನಿಗೂ ಒಂದೇ ಘನತೆ. ಅದು ಜಾತಿಯ ಎದೆಗೆ ಬಸವಾದಿ ಶರಣರು ಹಿಡಿದ ಕತ್ತಿ. ಆ ಕತ್ತಿಯನ್ನು ಎತ್ತು ನೇಗಿಲಿನ ಚಿತ್ರಕ್ಕೆ ಇಳಿಸಿದರೆ ಕತ್ತಿ ಮಾಯವಾಗುತ್ತದೆ. ಗೋಡೆಯ ಮೇಲಿನ ಕ್ಯಾಲೆಂಡರ್ ಚಿತ್ರ ಮಾತ್ರ ಉಳಿಯುತ್ತದೆ.

ಲಿಂಗಾಯತರು ಅಶುದ್ಧರೆಂಬ ಹಣೆಪಟ್ಟಿ

ಈ ದಾಳಿ ನಾಲ್ಕೈದು ವರ್ಷದಿಂದ ಶುರುವಾದ ಆಟ ಅಂದುಕೊಂಡರೆ ತಪ್ಪಾದೀತು.

ಬಸವಣ್ಣ ಲಿಂಗೈಕ್ಯರಾಗಿ ನೂರು ವರ್ಷ ತುಂಬುವ ಮುಂಚೆಯೇ ಹರಿಹರನ ರಗಳೆ ಅವರನ್ನು ಪವಾಡಪುರುಷನನ್ನಾಗಿಸಿತ್ತು. ತೆಲುಗಿನಲ್ಲಿ ಪಾಲ್ಕುರಿಕೆ ಸೋಮನಾಥ ಅವರನ್ನು ಶಿವಗಣದ ಅವತಾರ ಮಾಡಿದ.

ಇವರು ಶತ್ರುಗಳಲ್ಲ, ಪರಮ ಭಕ್ತರು.

ಈಗ ೧೧೬೭ರ ಕಲ್ಯಾಣವನ್ನು ನೆನಪಿಸಿಕೊಳ್ಳಿ. ಶರಣರ ಮೇಲೆ ಕತ್ತಿ ಬಿದ್ದದ್ದು ಕೊನೆಗೆ. ಅದಕ್ಕೂ ಮುಂಚೆ ಎರಡು ಕೆಲಸ ಸದ್ದಿಲ್ಲದೆ ನಡೆದಿತ್ತು.

ಮೊದಲು ಊರಿನ ಉಳಿದವರ ಕಿವಿಯಲ್ಲಿ ಊದಿದರು, ಆಮೇಲೆ ಹಣೆಪಟ್ಟಿ ಅಂಟಿಸಿದರು.

ಶರಣರು ಸಮಾಜಕ್ಕೇ ಅಪಾಯ. ಇವರ ಆಚಾರ ಅಶುದ್ಧ, ಇವರ ಮದುವೆ ಅಪವಿತ್ರ. ಇದನ್ನೆಲ್ಲಾ ಕೇಳಿ ಜನ ದೂರ ಸರಿದ ಮೇಲೆಯೇ ಕತ್ತಿ ಎತ್ತುವುದು ಸುಲಭವಾಯಿತು.

ಲಿಂಗಾಯತರು ಅಶುದ್ಧರೆಂಬ ಹಣೆಪಟ್ಟಿ

ಕಳೆದ ವರ್ಷ ಬಸವ ಸಂಸ್ಕೃತಿ ಅಭಿಯಾನ ನಡೆದಾಗ ಮತ್ತು ಅದರ ನಂತರ ಏನೇನು ಕೇಳಿದಿರಿ, ನೆನಪು ಮಾಡಿಕೊಳ್ಳಿ. “ಬಸವ ತಾಲಿಬಾನ್” ಎಂಬ ಹೆಸರು ಹುಟ್ಟಿತು. ಬೇರೆ ಸಮಾಜಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಮಾತುಗಳು ಬಂದವು. ಇದು ದೂರ ಮಾಡುವ ಹೆಜ್ಜೆ. ಲಿಂಗಾಯತರು ಮಾಂಸ ಮದ್ಯಕ್ಕೆ ಪ್ರೋತ್ಸಾಹ ಕೊಡುತ್ತಾರೆ, ದೇವರನ್ನು ಅವಮಾನಿಸುತ್ತಾರೆ ಎಂಬ ಅಪಪ್ರಚಾರ ಹರಡಿತು.

ಇದು ಅಶುದ್ಧರೆಂದು ಹಣೆಪಟ್ಟಿ ಅಂಟಿಸುವ ಹೆಜ್ಜೆ.

ನಕ್ಷೆ ಎಂಟುನೂರು ವರ್ಷ ಹಳೆಯದು. ಬಣ್ಣ ಮಾತ್ರ ಹೊಸದು.

ಮೂರನೇ ಹೆಜ್ಜೆ ಕತ್ತಿಯೇ ಆಗಬೇಕಿಲ್ಲ, ಆಗದಿರಲಿ. ಮೊದಲ ಎರಡು ಗೆದ್ದರೆ ಸಾಕು. ನಾವು ನಮ್ಮದೇ ಊರಿನಲ್ಲಿ ಒಂಟಿಯಾಗುತ್ತೇವೆ. ಪಕ್ಕದ ಮನೆಯವನು ನಮ್ಮನ್ನು ಅನುಮಾನದ ಕಣ್ಣಿನಿಂದ ನೋಡುತ್ತಾನೆ.

ಆದರೆ ಎಲ್ಲದಕ್ಕೂ ಹೊರಗಿನವರತ್ತ ಬೆರಳು ತೋರಿಸಿ ಕೂತರೆ ಅರ್ಧ ಸತ್ಯ ಮಾತ್ರ ಹೇಳಿದಂತಾಗುತ್ತದೆ. ಉಳಿದರ್ಧ ನಮ್ಮ ಮನೆಯೊಳಗೇ ಇದೆ. ಬಸವಣ್ಣನವರೇ ಹೇಳಿದ್ದಾರೆ,

“ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ…”
ನಾವು ಮಾಡುತ್ತಿರುವುದೂ ಅದೇ.

ಕಲ್ಲಿನ ಬಸವಣ್ಣನಿಗೆ ಹಾಲು, ಹಾರ, ಮೆರವಣಿಗೆ, ಡಿಜೆ. ಜೀವಂತ ಬಸವತತ್ವ ಮಾತ್ರ ಮನೆಯ ಮೂಲೆಯಲ್ಲಿ ಉಪವಾಸ ಬಿದ್ದಿದೆ. ಯಾರಿಗೂ ಕಾಣುತ್ತಿಲ್ಲ.

ಲಂಡನ್‌ನ ಥೇಮ್ಸ್ ನದಿಯ ದಂಡೆಯಲ್ಲಿ ಬಸವಣ್ಣನ ಪ್ರತಿಮೆ ನಿಂತಿದೆ. ಹೆಮ್ಮೆ ಪಡೋಣ. ಆದರೆ ಅದೇ ಊರಿನ ಯಾವ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಇದೆ? ಪ್ರತಿಮೆ ಎಷ್ಟು, ಪೀಠ ಎಷ್ಟು ಎಂದು ಲೆಕ್ಕ ಹಾಕಿ ನೋಡಿ. ನಮ್ಮ ಆದ್ಯತೆ ಏನು ಎಂದು ಆ ಲೆಕ್ಕವೇ ಹೇಳುತ್ತದೆ.

ನಮ್ಮ ಮನೆಯ ಗೋಡೆಯಲ್ಲಿ ಮೂರು ದೊಡ್ಡ ಶೂನ್ಯಗಳಿವೆ: ಗ್ರಂಥ ಶೂನ್ಯ, ಪೀಠ ಶೂನ್ಯ, ನೆನಪಿನ ಶೂನ್ಯ.

ಹೊಗಳಿಕೆಯ ವೇಷದಲ್ಲಿ ಬರುವವರು ಒಳಗೆ ನುಸುಳುತ್ತಿರುವುದು ಅಲ್ಲಿಂದಲೇ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
4 Comments
  • ಲಿಂಗಾಯತ ದಾರಿ ತಪ್ಪುತ್ತೆ ದಾರಿಗೆ ತರುವ ಕಾಯಕ ನಮ್ಮದಾಗ್ಲಿ. ಮನದ ಮಾಲಿನ್ಯ ಕಳೆದುಕೊಂಡ ಸತ್ಯವಾದ ಧರ್ಮ ಎತ್ತಿ ಹಿಡಿಯೋಣ ಜಯ ಬಸವ. 💐👏🏻

  • ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

  • ಈ ವರ್ಷದ Best of Basava Media Book ನಲ್ಲಿ ನಿಮ್ಮೆಲ್ಕ ಲೇಖನಿಗಳು ಸೇರುತ್ತವೆ ಎಂಬ ಭರವಸೆ ನಮಗಿದೆ.

  • ಈಗ ನಾವು ಏನನ್ನು ಮಾಡಬೇಏಕು? ಇದು ನಮ್ಮೆಲ್ಲರ ಮುಂದಿರುವ ಪ್ರಶ್ನೆ, ಸರಿ ಸಾಮೂಹಿಕವಾಗಿ ಉನ್ನತಮಟ್ಟದಲ್ಲಿ ಇದರಬಗ್ಗೆ ಸೂಕ್ತವಾದ ನಿರ್ಧಾರಕ್ಕೆ ಹರಬೇಕಾಗಿದೆ. ಸ್ವತಂತ್ರ ಲಿಗಾಯತ ಧರ್ಮದ ವಿಷಯವನ್ನು ಮುನ್ನಲೆಗೆ ತರಬೇಕು. ನಮ್ಮನ್ನು ಹಿಂದೂ ಎನ್ನುವ ಅಪವಾದಿಂದ ಹೊರಗೆ ಹೋಗುವಂತವರಾಗಬೇಕು. ಇದು ನನ್ನ ಅನಿಸಿಕೆ ಶರಣುಶಶರಣಾರ್ಥಿಗಳು.

Leave a Reply

Your email address will not be published. Required fields are marked *