ಬೆಂಗಳೂರು
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2026ನೇ ಸಾಲಿನ ‘ರಮಣಶ್ರೀ ಶರಣ ಪ್ರಶಸ್ತಿ’ ಘೋಷಣೆಯಾಗಿದ್ದು, ‘ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ’ಗೆ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕಾ ಪಾಟೀಲ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ₹ 50 ಸಾವಿರ ನಗದು ಒಳಗೊಂಡಿದೆ. ಶರಣ ಸಾಹಿತ್ಯ ಸಂಶೋಧನೆಗೆ ಹೊಸಪೇಟೆಯ ಕೆ. ರವೀಂದ್ರನಾಥ, ವಚನ ಸಾಹಿತ್ಯ ರಚನೆಗೆ ಗದಗದ ರಾಜೇಂದ್ರ ಎಸ್. ಗಡಾದ, ವಚನ ಸಂಗೀತಕ್ಕೆ ಧಾರವಾಡದ ಕೈವಲ್ಯ ಕುಮಾರ್ ಗುರವ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ್ ಗುರಪ್ಪ ಕೊನೇಕ ಅವರು ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಶರಣ ಸಾಹಿತ್ಯ ಸಂಶೋಧನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ವಸುಂಧರಾ, ಆಧುನಿಕ ವಚನ ರಚನೆಗೆ ಮೈಸೂರಿನ ನಗರ್ಲೆ ಶಿವಕುಮಾರ್, ವಚನ ಸಂಗೀತಕ್ಕೆ ಬೆಂಗಳೂರಿನ ರಾಜೇಶ್ವರಿ ಸಾದರ, ಕವಿತಾ ಸಾದರ, ಧಾರವಾಡದ ವಿಜಯಲಕ್ಷ್ಮಿ ಪೂಜೇರ ಹಾಗೂ ಮೈಸೂರಿನ ವಿಶ್ವ ವಚನ ಫೌಂಡೇಶನ್ನ ವಚನ ಕುಮಾರಸ್ವಾಮಿ ಅವರು ‘ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಹಿರಿಯ ಶ್ರೇಣಿ ಪ್ರಶಸ್ತಿಯು ತಲಾ ₹40 ಸಾವಿರ, ಉತ್ತೇಜನ ಶ್ರೇಣಿ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ 17ರಂದು ಇಲ್ಲಿನ ರಮಣಶ್ರೀ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ ತಿಳಿಸಿದ್ದಾರೆ.
