ಸಾಣೇಹಳ್ಳಿ :
ಮಠಾಧಿಪತಿಗಳಾಗಿ ನಾವು ಸಾಣೇಹಳ್ಳಿಗೆ ಬಂದಾಗ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಮೂರ್ತಿ ಪೂಜೆ ಮಾಡುವುದು ಸರಿಯಲ್ಲ. ಇದರ ಬದಲು ಬಸವತತ್ವ ಅನುಯಾಯಿಗಳಾಗಿ ಎನ್ನುವುದರ ಜೊತೆಗೆ ಶಿವಾನುಭವ ಶಿಬಿರ ಏರ್ಪಡಿಸಿದೆವು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ನಾಟಕೋತ್ಸವ ಅಂಗವಾಗಿ ಶುಕ್ರವಾರ ಮುಂಜಾನೆ ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು.
ಭವಿಷ್ಯ ಹೇಳುವವರು ಅಪಾಯಕಾರಿಗಳು. ಅವರು ವ್ಯಕ್ತಿ, ಸಂಸಾರ ಹಾಳು ಮಾಡುವವರು. ಹೀಗಾಗಿ ಭವಿಷ್ಯ ಕೇಳುವುದರಿಂದ ಪ್ರಯೋಜನವಿಲ್ಲ. ಇದರ ಬದಲು ಗಟ್ಟಿತನ ಬೆಳೆಸಿಕೊಂಡರೆ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.
ಸಾತ್ವಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಸತ್ಯದ ದಾರಿಯಲ್ಲಿ ಸಾಗಬೇಕು, ನೀತಿಗೆ ಪ್ರಭುವಾಗಬೇಕು. ಇದನ್ನು ಬಸವಣ್ಣನವರು ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದರು.
ಹೀಗೆಯೇ ಆಚಾರಕ್ಕೆ ಅರಸನಾಗು, ಮಾತಿನಲ್ಲಿ ಚೂಡಾಮಣಿಯಾಗು ಎನ್ನುವ ಮಾತಿದೆ. ಇದನ್ನೇ ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತಿರಬೇಕು, ಮಾಣಿಕ್ಯ ದೀಪ್ತಿಯಂತಿರಬೇಕು ಎಂದರು. ಅಲ್ಲದೆ ನುಡಿಯೊಳಗಾಗಿ ನಡೆಯದಿದ್ದರೆ ಎನ್ನುವುದನ್ನು ಗಮನಿಸಬೇಕು. ಸನ್ಮಾರ್ಗ ಬೇರೆ, ಕೃತಿ ಬೇರೆಯಾದರೆ ದುರ್ಮಾರ್ಗ ಆಗುತ್ತದೆ ಎಂದು ಎಚ್ಚರಿಸಿದರು.

ಕತ್ತಲಿನಿಂದ ಬೆಳಕಿನೆಡೆಗೆ, ಬೆಳಕಿನಿಂದ ಬೆಳೆಕಿನ ಕಡೆಗೆ ಅಂದರೆ ಅಜ್ಞಾನ ಕಳೆದುಕೊಂಡು ಸುಜ್ಞಾನಿಯಾಗಬೇಕು. ಆದರೆ ಬೆಳಕಿನಲ್ಲಿದ್ದೂ ಕತ್ತಲಿನ ಕಡೆಗೆ ಹೋಗುತ್ತೇವೆ.
ಹೋಮಹವನಕ್ಕೆ, ಮೌಢ್ಯಕ್ಕೆ ಬಲಿಯಾಬಾರದು. ಇದಕ್ಕಾಗಿ ಬೆಳಕಿನಿಂದ ಬೆಳೆಕಿನ ಕಡೆಗೆ ಸಾಗುವವರು ಸನ್ಮಾರ್ಗಿಗಳು. ಇದನ್ನೇ ಶರಣರು ತಮ್ಮ ದೋಷಗಳನ್ನು ಸರಿಪಡಿಸಿಕೊಂಡು ಇತರರನ್ನು ಬದಲಾಯಿಸಲು ಪ್ರಯತ್ನಿಸಿದರು ಎಂದು ಹೇಳಿದರು.
ಇದಕ್ಕೂ ಮೊದಲು ಪತ್ರಕರ್ತ ಮನಸುಳಿ ಮೋಹನ ಅವರು ‘ಸನ್ಮಾರ್ಗ’ ವಿಷಯ ಕುರಿತು ಮಾತನಾಡಿ, ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸಿಕೊಳ್ಳಲು, ಅರಿವನ್ನು ಹೆಚ್ಚಿಸಿಕೊಳ್ಳಲು ಸನ್ಮಾರ್ಗ ಅಗತ್ಯ ಎಂದರು.
ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಸನ್ಮಾರ್ಗಿಗಳು ಸಿಗುವುದಿಲ್ಲ. ಆದರೆ ದಾಸೋಹ ಹಾಗೂ ಜಂಗಮ ಸೇವೆಯಲ್ಲಿ ಸನ್ಮಾರ್ಗ ಸಿಗುವುದು. ಹಾಗೆಯೇ ಸಾಣೇಹಳ್ಳಿಗೆ ಬರುವುದೇ ಸನ್ಮಾರ್ಗ ಎಂದರು.
ಶಿವಸಂಚಾರ ಕಲಾವಿದರಾದ ಎಚ್.ಎಸ್. ನಾಗರಾಜ, ಕೆ. ಜ್ಯೋತಿ, ಕೆ. ದಾಕ್ಷಾಯಣಿ ವಚನ ಗೀತೆಗಳನ್ನು ಹಾಡಿದರು.

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ