22ನೇ ಶರಣ ಕಮ್ಮಟದ ಸಾರ್ವಜನಿಕ ಸಭೆ
ವಿಜಯಪುರ
ಜಗತ್ತಿನಲ್ಲಿ ಬೇರೆ ಕಡೆ ಬಸವಣ್ಣ ಜನಿಸಿದ್ದರೆ ಬಸವ ಧರ್ಮ ಇವತ್ತು ಜಾಗತಿಕ ಧರ್ಮವಾಗಿ ಬೆಳಗುತ್ತಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.
“ಇಂದೂ ಎಲ್ಲರೂ ಜಾಗೃತರಾದರೆ ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಬೆಳೆಯಲಿದೆ. ಬಸವ ಪ್ರಜ್ಞೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ. ಇಂದಿನ ಯುವ ಪೀಳಿಗೆ ಮತ್ತು ಜನತೆಯ ಮೇಲಿದೆ,” ಎಂದು ಹೇಳಿದರು.
ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ದಾವಣಗೆರೆಯ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ದಾವಣಗೆರೆ ಸಹಯೋಗದಲ್ಲಿ ಆಯೋಜಿಸಿದ್ದ 22ನೇ ಶರಣ ಕಮ್ಮಟದ 3ನೇ ದಿನ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

“ಬಸವಣ್ಣನವರು ತಮ್ಮನ್ನೇ ತಾವು ಅರ್ಪಿಸಿಕೊಂಡು ನಮಗೆ ಈ ಸಂಸ್ಕಾರದ ದಾರಿಯನ್ನು ಕೊಟ್ಟು ಹೋಗಿದ್ದಾರೆ. ಇದನ್ನು ತಿಳಿದುಕೊಂಡು ಸಮುದಾಯ ಮುಂದುವರಿಸಿಕೊಂಡು ಹೋಗಬೇಕು, ಇರುವ ಗೊಂದಲಗಳನ್ನು ಎಲ್ಲ ಸ್ವಾಮೀಜಿಗಳು ಬಗೆಹರಿಸಬೇಕು,” ಎಂದು ಹೇಳಿದರು.
ವಚನ ಕಾಪಾಡಿದ “ಫ.ಗು.ಹಳಕಟ್ಟಿಯವರು ಇರದಿದ್ದರೆ ನಾವು ಹೀಗೆ ಕೂತು ಚರ್ಚಿಸಲೂ ಸಾಧ್ಯವಿರಲಿಲ್ಲ, ಶರಣರ ವಚನಗಳನ್ನು ಕಾಪಾಡಿದ ಅವರ ಸೇವೆ ಅನನ್ಯ. ಧಾರವಾಡದ ಬಾಸೆಲ್ ಮಿಷನ್ನವರು ಹಳಕಟ್ಟಿಯವರು ತೆಗೆದುಕೊಂಡು ಹೋದ ವಚನಗಳನ್ನು ಮುದ್ರಿಸಲಿಲ್ಲ. ಅವರು ವಚನಗಳಲ್ಲಿನ ಪ್ರಜಾಸತ್ತಾತ್ಮಕ ಅಂಶಗಳನ್ನು ನಮಗಿಂತ ಮೊದಲೇ ಕಂಡುಕೊಂಡರು,” ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
“ಸಣ್ಣ ಸಣ್ಣ ಕಾಯಕ ವರ್ಗಗಳ ಧೀಮಂತರೇ ಬಸವಾದಿ ಶರಣರ ಚಿಂತನೆಗಳು ಎಲ್ಲೆಡೆ ಪಸರಿಸಲು ಕಾರಣರಾಗಿದ್ದಾರೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಅಕ್ಷರ, ಅನ್ನ ದಾಸೋಹ
ತತ್ವ ಬಿತ್ತಿದ್ದಾರೆ. ಬಂಥನಾಳ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ,” ಎಂದು ಹೇಳಿದರು.

ಇಳಕಲ್ಲ ಚಿತ್ತರಗಿ ಮಠದ ಗುರುಶಾಂತ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ತತ್ವದಲ್ಲಿ
ವಿಜ್ಞಾನವಿದೆ. ಬದುಕನ್ನು ಜಾಣ ರೀತಿಯಲ್ಲಿ ಕಟ್ಟಿಕೊಂಡು ಸಮ ಸಮಾಜ, ಕಾಯಕ ಹಾಗೂ ದಾಸೋಹದ ಪರಿಪಾಲನೆಯಿಂದ ನಮ್ಮನು ಬದಲಿಸಿಕೊಳ್ಳುವ ಶಕ್ತಿ ಇದಕ್ಕಿದೆ. ಬಸವಣ್ಣನವರ
ಆದರ್ಶಗಳನ್ನು ಉಳಿಸಿ, ಬೆಳೆಸಬೇಕಾದ ಧರ್ಮ ಸಂಸ್ಕಾರ ಎಲ್ಲರಲ್ಲಿಬೇಕು,” ಎಂದು ತಿಳಿಸಿದರು.
“ಲಿಂಗಾಯತರಲ್ಲಿ ಜಾಗೃತ ಪ್ರಜ್ಞೆ’ ಕುರಿತು ಉಪನ್ಯಾಸ ನೀಡಿದ ಸಾಫ್ಟ್ವೇರ್ ಎಂಜಿನಿಯರ್ ನಿತಿನ್ ಕಲ್ಯಾಣಕುಮಾರ, ಬಸವಣ್ಣನವರಲ್ಲಿ ಅಂತರಿಕ ಸಂಘರ್ಷ ನಡೆಯುತ್ತಿತ್ತು. ಬಸವಣ್ಣನವರ ದಯೆಯಿಂದ ಲಿಂಗಾಯತ ಧರ್ಮ ಹುಟ್ಟಿದೆ ಎಂದು ಹೇಳಿದರು.
ಇಷ್ಟಲಿಂಗದ ಜನಕರೇ ಬಸವಣ್ಣ, ಇದು ಐತಿಹಾಸಿಕ ಸತ್ಯ. ಇದನ್ನು ಅನೇಕ ಶರಣರು ತಮ್ಮ ವಚನಗಳಲ್ಲಿ ದೃಢಪಡಿಸಿದ್ದಾರೆ. ಅಂಗದಲ್ಲಿ ಲಿಂಗವಾಗುವುದೇ ಲಿಂಗಾಯತ. ಇಂತಹ ನಮ್ಮ ಅನುಭವವೇ ಸ್ವತಂತ್ರ ಧರ್ಮಕ್ಕೆ ದಾರಿ ಎಂದು ಅವರು ವಿವರಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯಾಧ್ಯಕ್ಷ ಎಸ್.ಎಚ್.ನಾಡಗೌಡ ಅಧ್ಯಕ್ಷತೆ ವಹಿಸಿದ್ದರು.
ಅಜ್ಜಂಪುರ ಟ್ರಸ್ಟ್ನ ಕಾರ್ಯಾಧ್ಯಕ್ಷ ಶಿವಲಿಂಗಪ್ಪ ಅಜ್ಜಪ್ಪ ಶೆಟ್ಟರು, ಟ್ರಸ್ಟ್ ಸದಸ್ಯ ರುದ್ರಪ್ಪ ಪಗಡದದಿನ್ನಿ, ಅಜ್ಜಂಪುರ ಟ್ರಸ್ಟ್ ಅಧ್ಯಕ್ಷೆ ಪ್ರಭಕ್ಕೆ ಸಿಂದಗಿ, ಕಾರ್ಯಾಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಷಡಕ್ಷರಿ, ಸದಸ್ಯರಾದ ಗೌರಮ್ಮ ನೆಲೋಗಲ್, ಸಿದ್ದಲಿಂಗಪ್ಪ, ಓಂಕಾರಪ್ಪ, ರುದ್ರಪ್ಪ ಪಿ., ವಿ.ಸಿ.ನಾಗಠಾಣ, ಬಸನಗೌಡ ಹರನಾಳ, ಜಂಬೂನಾಥಕಂಚಾಣಿ, ಡಾ.ಜೆ.ಎಸ್.ಪಾಟೀಲ, ಕದಳಿ ವೇದಿಕೆಯ ಶಾರದಾ ಕೊಪ್ಪ, ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಅಧ್ಯಕ್ಷೆ ಭಾರತಿ ಭುಯ್ಯಾರ, ಜಾಗತಿಕ ಲಿಂಗಾ ಯತ ಮಹಾಸಭೆಯ ಅಧ್ಯಕ್ಷೆ ಮಹಾದೇವಿ ಗೋಕಾಕ, ಇತರರಿದ್ದರು.
