ಮೈಸೂರು :
ಗಂಡು ಹೆಣ್ಣಿನ ಸರ್ವಾಂಗೀಣ ಸಮಾನತೆಗಾಗಿ ಪರಿಪರಿಯಾಗಿ ಪ್ರಯತ್ನಿಸಿ, ವಿಶೇಷವಾಗಿ ಸ್ತ್ರೀ ಸಬಲೀಕರಣಕ್ಕೆ ಪ್ರಾಮಾಣಿಕವಾಗಿ ಪರಿಶ್ರಮಿಸಿದವರು ಶರಣರು ಎಂದು ಕವಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ಮೈಸೂರಿನ ಕೆ.ಆರ್. ಮೊಹಲ್ಲಾದ, ‘ಶಿವಶ್ರೀ’ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ದತ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ‘ಬಸವಾದಿ ಶರಣರ ಮಹಿಳಾ ಸಬಲೀಕರಣ’ ಎಂಬ ವಿಷಯದ ಕುರಿತು ಮಾತನಾಡಿದರು.

ಅಂದು ಅಲಕ್ಷಿತಳಾಗಿ, ನಗಣ್ಯಳಾಗಿ, ಕೇವಲವೆನಿಸಿ ಅಮಾನ್ಯಳಾಗಿ, ವಿಪರೀತ ಶೋಷಣೆಗೊಳಗಾಗಿ, ಬಾಯಿಯಿದ್ದರೂ ಮೂಗಿಯಾಗಿ, ಮೌನವಾಗಿ ಸಂಕಟ ಅನುಭವಿಸುತ್ತಿದ್ದ ಮಹಿಳೆಗೆ, “ಒಳಗೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ” ಎಂತಲೂ, “ಹೆಣ್ಣು ಮಾಯೆಯಲ್ಲ; ಮನದ ಮುಂದಣ ಆಸೆಯೇ ಮಾಯೆ” ಯೆಂತಲೂ, “ಹೆಣ್ಣು ರಾಕ್ಷಸಿಯಲ್ಲ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ” ಎಂತಲೂ ಸಾರಿ, ಸಮಷ್ಟಿಯ ಕಣ್ದೆರೆಸಿ, ಸೂಳೆ ಸಂಕವ್ವೆಯಂಥವರಿಗೂ ತಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿ, ನಿರ್ಭಿಡೆಯಿಂದ ವಚನ ರಚಿಸಿ ಹೇಳುವಂತೆ ಬೆನ್ನಿಗೆ ನಿಂತು ಪ್ರೋತ್ಸಾಹಿಸಿ, ನಿಜವಾದ ಸಮಾನತೆ ಸಾರಿದವರು ಬಸವಾದಿ ಪ್ರಮಥರು, ಪ್ರಮುಖವಾಗಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಹಕ್ಕುಗಳನ್ನು ಸ್ತ್ರೀಯರಿಗೆ ಕಲ್ಪಿಸಿಕೊಟ್ಟವರೇ ಶರಣರು ಎಂದರು.

ಪರಿಷತ್ತಿನ ಉಪಾಧ್ಯಕ್ಷ ಚಿನ್ನಸ್ವಾಮಿ ಜ್ಯೋತಿ ಬೆಳಗುವ ಮೂಲಕ ಸಮಾರಂಭದ ಉದ್ಘಾಟನೆ ಮಾಡಿ, ‘ಶರಣರ ಬದುಕು ಬರಹ’ ಕುರಿತು ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುವ್ವತ್ತೂ ಮಕ್ಕಳಿಗೆ ಶುಭ ಹಾರೈಸಿದರು.
ಕರ್ನಾಟಕ ಸರ್ಕಾರದ, ಕುವೆಂಪು ಭಾಷಾ ಪ್ರಾಧಿಕಾರದ ಮಾಜಿ ಸದಸ್ಯರಾದ, ಖ್ಯಾತ ಅನುವಾದಕಿ ಡಾ. ಎಂ.ಎಸ್. ಶಶಿಕಲಾಗೌಡ ಉಪನ್ಯಾಸ ನೀಡಿದರು. ಮಲ್ಲಿಕಾ ಮಹದೇವಸ್ವಾಮಿ ಹಾಗೂ ವೀಣಾ ನಂದೀಶ್ವರ ಅವರು ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

‘ಶಿವಶ್ರೀ’ ವಿದ್ಯಾರ್ಥಿ ನಿಲಯದ ಸಂಸ್ಥಾಪಕರಾದ ಎಂ.ಸಿ. ಪ್ರಭಾಮಣಿ ಅವರನ್ನು ಪರಿಷತ್ತಿನ ಪರವಾಗಿ ಗೌರವಿಸಿ; ಸನ್ಮಾನಿಸಲಾಯಿತು. ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪ್ರಮಾಣಪತ್ರಗಳೊಂದಿಗೆ ನೀಡಲಾಯಿತು.
ದತ್ತಿದಾನಿಗಳಾದ ಶಶಿಕಲಾ ದೇವಿ, ಡಾ. ಹೆಚ್. ಮುದ್ದುಮಲ್ಲೇಶ, ಪರಿಷತ್ತಿನ ಕಾರ್ಯದರ್ಶಿ ನಂದೀಶ್ವರ ಬಿ. ಎನ್, ಸಂಚಾಲಕರಾದ ಡಾ. ಲೋಕೇಶಪ್ಪ, ಹೆಚ್. ಎನ್, ಸಾಹಿತಿ ನಗರ್ಲೆ ಶಿವಕುಮಾರ, ಚನ್ನಬಸಪ್ಪ, ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ದೇವಿಕಾ ನಂದೀಶ ಅತಿಥಿಗಳ ಪರಿಚಯಿಸಿದರು. ವಿದ್ಯಾರ್ಥಿಗಳು ನಿರೂಪಣೆ ಮಾಡಿದರು. ಯುವಘಟಕದ ಸಂಚಾಲಕಿ ರಶ್ಮಿ ಷಡಕ್ಷರಿ ವಂದನಾರ್ಪಣೆ ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
