“ಜ್ಯೋತಿಷ್ಯ ಕೇಳಿ ಮದುವೆಯಾದವರು ವನವಾಸಕ್ಕೆ ಹೋಗಬೇಕಾಯಿತು”

ಬಸವ ಮೀಡಿಯಾ
ಬಸವ ಮೀಡಿಯಾ

ಬಂದುದನ್ನು ಇದ್ದಂತೆ ಸ್ವೀಕರಿಸುವುದೇ ಶರಣಸ್ಥಲ

ಗುಳೇದಗುಡ್ಡ :

ಬಸವ ಕೇಂದ್ರದ ವತಿಯಿಂದ ಶರಣ ಶಿವಾನಂದ ಸಂಗಪ್ಪ ನಾಯನೇಗಲಿ ಅವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು.

ಬಸವ ತಂದೆಗಳ ಕೆಳಗಿನ ವಚನವನ್ನು ಚಿಂತನೆಗಾಗಿ ಆಯ್ದುಕೊಳ್ಳಲಾಗಿತ್ತು.

ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ
ತಪ್ಪಿತ್ತು ಗಣಪದವಿ ; ಲಿಂಗಕ್ಕೆ ದೂರ !
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಡಿ ಮನುಜರನೇನೆಂಬೆ ಕೂಡಲಸಂಗಮದೇವ.

ವಚನ ಚಿಂತನೆಯಲ್ಲಿ ಪಾಲ್ಗೊಂಡ ಪ್ರೊ. ಎಸ್.ಎಂ. ಗಡೇದ ಅವರು “ಈ ವಚನವನ್ನು ಅಪ್ಪ ಬಸವಣ್ಣನವರು ರಚಿಸಿದ್ದಾರೆ. ಶರಣರ ಮಾರ್ಗದರ್ಶಿಯಾಗಿ, ನಾಯಕನಾಗಿ ಹೊರಹೊಮ್ಮಿದ ಬಸವಣ್ಣನವರು ಆವರೆಗೆ ನಾಡಿನಲ್ಲಿ ಬೀಡು ಬಿಟ್ಟಿದ್ದ ಕಂದಾಚಾರಗಳನ್ನು ಅಳಿಸಲಿಕ್ಕಾಗಿ, ವಚನಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಂಡರು. ಅಂದಿನ ಸಾಮಾಜಿಕ ಸಮಾನತೆಯ ಕ್ರಾಂತಿಯ ಬೆಳಕು ಇಂದಿಗೂ ಬೆಳಗುತ್ತಲಿದೆ”.

“ಆರ್ಥಿಕ ಶೋಷಣೆ, ಮಾನಸಿಕ ಭಯೋತ್ಪಾದನೆ, ಅರ್ಥವಿಲ್ಲದ ವ್ರತಗಳೆಲ್ಲ ವ್ಯರ್ಥವೆಂದು ಸಾರಿ. ಜನರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಗುರುತಾಗಿ ಈ ವಚನವಿದೆ. ಕೇವಲ ಕೆಲವರ ಸ್ವಾರ್ಥ ಸಾಧನೆಗಾಗಿ ಗೊಡ್ಡು ಸಂಪ್ರದಾಯಗಳನ್ನು ನಂಬಿದವರನ್ನು ನಿರ್ಬುದ್ದಿ ಮನುಜರೆಂದು ನಮ್ಮ ಶರಣರು ಕರೆದರು” ಎಂದು ಪ್ರತಿಪಾದಿಸಿದರು.

ಈ ಮಾತುಗಳಿಗೆ ದನಿಗೂಡಿಸಿದ ಶರಣ ಮಹಾಲಿಂಗಪ್ಪ ಕರನಂದಿಯವರು ನಾಳೆ ಮಾಡುವುದನ್ನು ಇಂದೆ ಮಾಡಬೇಕು. ಇಂದು ಮಾಡುವುದನ್ನು ಈಗಲೇ ಮಾಡಿ ಮುಗಿಸಬೇಕು. ದಿನ, ವಾರ, ನಕ್ಷತ್ರ, ತಿಥಿ ಎಂಬುದನ್ನು ಮುಂದಿಟ್ಟುಕೊಂಡು ವ್ಯರ್ಥ ಕಾಲಹರಣ ಸಲ್ಲದು. “ಜ್ಯೋತಿಷ್ಯ ಕೇಳಿ ಮದುವೆಯಾದವರು ವನವಾಸಕ್ಕೆ ಹೋಗಬೇಕಾಯಿತು.” ಇವೆಲ್ಲಾ ವೈದಿಕ ಸಂಪ್ರದಾಯದ ಹುರುಳಿಲ್ಲದ ಆಚರಣೆಗಳು. ಇವು ಅನುಕರಣೀಯವಲ್ಲ ಎಲ್ಲ ದಿನ ಮುಹೂರ್ತಗಳು ಕೂಡಲಸಂಗಮವೆಂಬ ವಿಶ್ವ ಚೈತನ್ಯವಾಗಿದ್ದು ಅಲ್ಲಿ ಸರಿ ತಪ್ಪುಗಳ ಲೆಕ್ಕಾಚಾರವಿಲ್ಲ ಸರ್ವವೂ ಲಿಂಗಮಯ ಎನ್ನುವುದೇ ಬುದ್ಧಿವಂತರ ಲಕ್ಷಣ” ಎಂದು ಹೇಳಿದರು .

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕಿ ಶರಣೆ ರೋಹಿಣಿ ನಾಯನೇಲಿ ಅವರು “ನೂರನೋದಿ ನೂರ ಕೇಳಿದರೇನು? ಮಹೂರ್ತದ ಹೆಸರಿನಲ್ಲಿ ತಪ್ಪನ್ನೆಸಗುತ್ತಾ ಬಂದೆವು. ಇಂದು ಕಲಿತವರೆ ಹೆಚ್ಚು ಹೆಚ್ಚು ಮೌಢ್ಯಕ್ಕೆ ಒಳಗಾಗುತ್ತಿರುವುದು ದುರ್ದೈವ. ಅಂದಿನ ಹೆಬ್ಬಟ್ಟಿನವರನ್ನು ಅನಕ್ಷರಸ್ಥರೆಂದು ಹೀಯಾಳಿಸುತ್ತಿದ್ದೆವು. ಆದರೆ ಅವರಲ್ಲಿ ಮಾನವೀಯತೆ ಇತ್ತು. ಇಂದು ಅದೇ ಹೆಬ್ಬೆರಳು ಕಂಪ್ಯೂಟರ್ ಯುಗದಲ್ಲಿ ಆಧುನಿಕತೆಯ ಸಂಕೇತವಾಗಿದೆ. ಈಗಲೂ ಭಾರತ ಎದ್ದು ನಿಲ್ಲಲುˌ ನಾವೇ ಕಲ್ಪಿಸಿಕೊಂಡ ತಿಥಿ ವಾರಗಳನ್ನು ಒಳ್ಳೆಯದು, ಕೆಟ್ಟದ್ದು ಎನ್ನದೆ ˌಎಲ್ಲವೂ ಸಮವಾಗಿ ಸ್ವೀಕಾರಾರ್ಹ ಆಗಿದೆ ಎಂದು ಭಾವಿಸಿ ಮುಂದುವರಿಯಬೇಕು. ಆಗ ಮಾತ್ರ ನಾವು ಶರಣರ ಅನುಯಾಯಿಗಳಾಗುತ್ತೇವೆ ಎಂದು ಈ ವಚನ ಸಾರುತ್ತದೆ” ಎಂದರು.

ಇಂದು ಈ ವಚನವನ್ನು ಕುರಿತು ವಿಶೇಷವಾಗಿ ಉಪನ್ಯಾಸ ನೀಡಿದ ಸಾಹಿತಿ ಪ್ರೊ. ಚಂದ್ರಶೇಖರ ಹೆಗಡೆ ಅವರು “ವೈದಿಕ ಕಾಲದಿಂದಲೂ ನಮ್ಮಲ್ಲಿ ಇಂತಹ ಅನಿಷ್ಟ ಪದ್ದತಿಗಳು ಹಾಗೂ ನಡತೆಗಳು ನಡೆದುಕೊಂಡು ಬಂದಿವೆ. ಇವೆಲ್ಲವುಗಳು ಕಲ್ಪಿತˌ ಮೂಲವಾಗಿದ್ದಲ್ಲ. ಇವು ನಾವು ಸೃಷ್ಟಿಸಿಕೊಂಡು ಸಂಪ್ರದಾಯಕ್ಕೆ ಆಳಾಗಿದ್ದೇವೆ. ಇವುಗಳನ್ನೇ ಅಲ್ಲಮರು ಅಜ್ಞಾನವೆಂದು ಕರೆದರು. ಶರಣರಿಗೆ ಪ್ರತಿದಿನವೂ ಶಿವರಾತ್ರಿ ಆಗಬೇಕು. ಮನುಷ್ಯನ ಮಹಾಶತ್ರುಗಳಾದ ಮೂಢನಂಬಿಕೆ, ಅಜ್ಞಾನಗಳು ಶರಣರಿಗೆ ಸಲ್ಲವು”.

“ಜೀವ ಶಿವನಾಗುವ ವಿಕಾಸದ ಹಾದಿಯಲ್ಲಿ ಶರಣಸ್ಥಲ ಐದನೆಯದು. ಅಷ್ಟಮಿ ನವಮಿ ಅನ್ನುತ್ತ ಕುಳಿತರೆ ಶರಣತ್ವ ಸಂಬಂಧಿಸದು ; ಸಮರಸವಂತೂ ದೂರದ ಮಾತಾಗುತ್ತದೆ. ಸ್ವಂತಿಕೆ ಕಳೆದುಕೊಂಡು ಮೌಡ್ಯಕ್ಕೆ ಆಳಾಗಿ ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ. ಇದೊಂದು ಮಾಯೆ ಯು” ಎಂದು ಅಲ್ಲಮ, ಸಿದ್ದರಾಮ, ಜೇಡರ ದಾಸಿಮಯ್ಯಗಳಾದಿಯಾಗಿ ಖಂಡಿಸಿದ್ದಾರೆ.

“ನಮ್ಮ ಬುದ್ಧಿಗೇಡಿತನದಿಂದಾಗಿ ದೇವಸ್ಥಾನಗಳು ತೀರ್ಥಕ್ಷೇತ್ರಗಳು ವ್ಯಾಪಾರಿ ಕೇಂದ್ರಗಳಾಗಿ ಬಿಟ್ಟಿವೆ. ಯಾವುದನ್ನಾದರೂ ಅರಿತು ಮಾಡಬೇಕು. ಅರಿಯದೆ ಮಾಡುವುದರಲ್ಲಿ ಯಾವುದೇ ಹುರಳಿಲ್ಲ . ಇಂದು ಜ್ಯೋತಿಷ್ಯ ವಹಿವಾಟಿನ ವಸ್ತುವಾಗಿದೆ. ಹೀಗಾಗಿ ಶರಣರು ಇವನ್ನು ತಿರಸ್ಕರಿಸಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ” ಎಂದು ಎಚ್ಚರಿಸಿದರು.

ನಿವೃತ್ತ ಪ್ರಾಧ್ಯಾಪಕ ಅನುಭಭಾವಿ ಪ್ರೊ. ಮಹಾದೇವಯ್ಯ ನೀಲಕಂಠಮಠ ಅವರು “ಈ ವಚನವು ಸ್ಪಷ್ಟವಾಗಿ ವೈದಿಕತೆಯನ್ನು ವಿರೋಧಿಸುತ್ತದೆ. ಇಲ್ಲಿನ ಅಷ್ಟಮಿ ನವಮಿ ಎಂಬ ಪದ ಬಳಕೆಗಳು ಕೃಷ್ಣಾಷ್ಟಮಿ ಮತ್ತು ರಾಮನವಮಿಯನ್ನು ಒಳಗೊಂಡು ಕಲ್ಪಿತ ಅನಿಷ್ಟ ಪರಂಪರೆಯನ್ನು ತಿಳಿಸುತ್ತದೆ. ನಿಜವಾದ ಶರಣರಿಗೆ ಇಡೀ ಜಗವೇ ಲಿಂಗಮಯವಾಗಬೇಕು ಎಂಬ ಬಯಕೆ ಇತ್ತು. ಬಂದುದನ್ನು ಕೈಕೊಳ್ಳುವ ನೇಮ ನಮ್ಮದಾಗಬೇಕು. ಇವೆಲ್ಲವೂ ಲಿಂಗದ ಸೊಮ್ಮು, ಅಲ್ಲಿರುವುದೆಲ್ಲ ಮಂಗಳಮಯ,ˌ ಒಳಿತು ಕೆಡಕುಗಳ ಪ್ರಶ್ನೆ ಅಲ್ಲಿ ಬರುವುದಿಲ್ಲ. ನಮ್ಮ ಆಚಾರವೇ ನಮ್ಮ ನಿಲವು ಇದೇ ಶರಣ ಮಾರ್ಗ. ಈ ಮಾರ್ಗ ಬಿಟ್ಟವರೆಲ್ಲರೂ ನಿರ್ಬುದ್ದಿಯುಳ್ಳವರೆ ” ಎಂಬುದಾಗಿ ವಿವರಿಸಿ ಹೇಳಿದರು.

ಸಮಾರೋಪ ಗೈದ ಶರಣ ಸಿದ್ದಲಿಂಗಪ್ಪ ಬರಗುಂಡಿ ಅವರು, “ಹಿಂದೆ ಕೇವಲ ಲೌಕಿಕ ವ್ಯವಹಾರಕ್ಕಾಗಿ ಮಾಡಿಕೊಂಡ ಈ ತಿಥಿ, ಮಾಸಗಳು ಇಂದು ಭ್ರಮಾದೀನ ಬದುಕಿಗೆ ಕಾರಣವಾಗಿವೆ. ಸೌರಮಾನ ಚಂದ್ರಮಾನ ಎಂಬ ಕಾಲಮಾನದಲ್ಲಿ ಆಗುತ್ತಿವೆ ಉದಯ ಮಧ್ಯಾಹ್ನ ಅಸ್ತಮಾನ; ಹೋಗುತ್ತಿವೆ ದಿನ ವಾರ ಸಂವತ್ಸರಗಳು ಎಂದು ಶರಣರೆ ಸಾರಿದ್ದಾರೆ. ಇವುಗಳಲ್ಲಿ ಇಲ್ಲದ ಶುಭ ಅಶುಭಗಳನ್ನು ಹುಡುಕುವುದು ದಡ್ಡತನ.”

ಸದಾಕಾಲ ಆನಂದ ಭಕ್ತಿಯಲ್ಲಿರುವ ಶರಣನಿಗೆ ಬಂಧನವಿಲ್ಲ ಬಿಡುಗಡೆಯಿಲ್ಲ ಅವು ಸಹಜ ನಡೆಯುವ ನೈಸರ್ಗಿಕ ಕ್ರಿಯೆಗಳು. ಅಂದಂದಿಗೆ ಬಂದುದನ್ನು ಇದ್ದಂತೆ ಸ್ವೀಕರಿಸುವುದೇ ಶರಣಸ್ಥಲ. ಅದಿಲ್ಲವಾಗಿ ಸುಖ ದುಃಖವನ್ನು ಅದರಲ್ಲಿಯೇ ಅರಸುತ್ತಾ ಹೋದರೆ ಶರಣಗಣದಲ್ಲಿ ಸ್ಥಾನವಿಲ್ಲ. ಯಾವುದೇ ಮುಹೂರ್ತ ನಂಬಿ ಯಾರಿಗೊ ಆಳಾಗಿ ನಮ್ಮ ಅಂತ:ಕರಣದಲ್ಲಿ ನೊಂದುಕೊಂಡರೆ ನೈಜ ನಿಷ್ಕರ್ಷೆಯ ತಾಣವಾದ ಬುದ್ಧಿ ನಿರ್ಬುದ್ದಿಯಾಗುತ್ತದೆ. ಇವೆಲ್ಲವೂ ಕಲ್ಪಿತಗಳೆಂಬ ನಿಶ್ಚಿತ ಬುದ್ಧಿ ಇದ್ದಲ್ಲಿ ಆತನಿಗೆ ಲಿಂಗಪಥದ ಅರಿವುಂಟಾಗುತ್ತದೆ. ಆತ ಶರಣನಾಗುತ್ತಾನೆ, ಲಿಂಗವೇ ಆಗುತ್ತಾನೆ” ಎಂದರು.

ಕಾರ್ಯಕ್ರಮದಲ್ಲಿ ಕುಮಾರ ನಿಹಾಂತ ನಾಯನೇಗಲಿ ಹಾಡಿದ ವಚನವು ಎಲ್ಲರ ಮನಸೂರೆಗೊಂಡಿತು .ಮಹಾಮನೆಯ ಒಡೆಯರಾದ ಎಸ್.ಎಸ್. ನಾಯನೇಗಲಿ ಸ್ವಾಗತ ಮಾಡುತ್ತಾ, ಅಮೇರಿಕಾ ಪ್ರವಾಸದಲ್ಲಿನ ಅನುಭವವನ್ನು ಹಂಚಿಕೊಂಡು “ಬಸವಣ್ಣನವರ ಪ್ರತಿಮೆˌ ವಚನಗಳು ಜಗತ್ತಿನ ಉದ್ದಕ್ಕೂ ಪಸರಿಸಿದ್ದರೂ ಉತ್ತರ ಭಾರತಕ್ಕೆ ಹಬ್ಬದಿರುವುದು ನನಗೆ ತುಂಬಾ ಕೆಡುಕೆನಿಸಿದೆ.

ಅಲ್ಲಿ ಸೇರಿದ ಸುಮಾರು 30 ಜನರು ಬಸವಣ್ಣನವರ ಕಳಬೇಡ ಕೊಲಬೇಡ ಎಂಬ ವಚನವನ್ನು ಕೇಳಿ ಬಹಳ ಅಚ್ಚರಿಪಟ್ಟು ಬಸವಣ್ಣನವರ ಬಗ್ಗೆ ಕೇಳಿ ತಿಳಿದುಕೊಂಡರು” ಎಂದು ಹೇಳಿದುದನ್ನು ಕೇಳಿ ನೆರೆದ ಶರಣರು ಪುಲಕಿತರಾದರು.

ಪ್ರಾರಂಭದಲ್ಲಿ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ, ವಿಶಾಲಾಕ್ಷಿ ಗಾಳಿಯವರು ಸಾಮೂಹಿಕ ವಚನ ಪ್ರಾರ್ಥನೆ ಮಾಡಿದರು.

ಇಂದಿನ ಕಾರ್ಯಕ್ರಮದಲ್ಲಿ ಡಾ. ಸಣ್ಣವೀರಣ್ಣ ದೊಡ್ಡಮನಿ, ರವೀಂದ್ರ ಪಟ್ಟಣಶೆಟ್ಟಿ, ಸಂಗಣ್ಣ ಯಳಮೇಲಿ, ಬಸವರಾಜ ಖಂಡಿ, ಪಾಂಡಪ್ಪ ಕಳಸಾ, ಪ್ರೊ. ಜಿ. ಜಿ. ಹೂಗಾರ, ಶಿಕ್ಷಕ ಚೌಹಾಣ, ಸಿದ್ದಯ್ಯ ರೇವಣಸಿದ್ದೇಶ್ವರಮಠ, ಕಸ್ತೂರಮ್ಮ ನಾಯನೇಗಲಿ, ದಾಕ್ಷಾಯಿಣಿ ತೆಗ್ಗಿ, ಸುರೇಖಾ ಗೆದ್ದಲಮರಿ, ಶಾರದಾ ನಾಯನೇಗಲಿ ಹಾಗೂ ನಾಯನೇಗಲಿ ಬಂಧು ಬಳಗದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *