ಜಮಖಂಡಿ
ಬರುವ ಮಾರ್ಚ್ ತಿಂಗಳಿನಲ್ಲಿ ಬಸವ ಪುರಾಣ ಹಮ್ಮಿಕೊಳ್ಳುವುದು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬರುವ ಬಸವ ಜಯಂತಿ ದಿನದಂದು ಆನಂದ ದೇವರ ಪಟ್ಟಾಧಿಕಾರ ಏರ್ಪಡಿಸಲು ಸಮಾಜದ ಎಲ್ಲ ಗುರು-ಹಿರಿಯರು ನಿಶ್ಚಯಿಸಿದ್ದಾರೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಓಲೆಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಡಾ. ಅಭಿನವಕುಮಾರ ಚೆನ್ನಬಸವ ಸ್ವಾಮೀಜಿಯವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶ್ರೀಮಠದ ಕರ್ಣಧಾರತ್ವ ವಹಿಸಿಕೊಂಡಿರುವ ಆನಂದದೇವರ ನಿರಂಜನ ಚರಪಟ್ಟಾಧಿಕಾರ ದಿನಾಂಕ ಘೋಷಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಚೆನ್ನಬಸವ ಸ್ವಾಮೀಜಿಯವರ ಬಗ್ಗೆ ಮಾತನಾಡುತ್ತ ಕಾವ್ಯ ರಚನೆಗೆ ಸಂವೇದನಾಶೀಲತೆ ಅಗತ್ಯ. ಸಂವೇದನಾಶೀಲರಾಗಿದ್ದ ಡಾ. ಚೆನ್ನಬಸವ ಸ್ವಾಮಿಗಳಲ್ಲಿ ಒಳ್ಳೆಯ ಕವಿ ಹೃದಯವಿತ್ತು. ಅಂತೆಯೇ ಉತ್ಕೃಷ್ಟ ಕಾವ್ಯ ರಚನೆ ಮಾಡಿ ಋಷಿ ಜೀವನ ನಡೆಸಿದವರು ಎಂದರು.
13ನೇ ಶತಮಾನ ಬಳಿಕ ದ್ವಿಪದಿಯಲ್ಲಿ ಬಸವ ಪುರಾಣ ಬರೆದವರು ಡಾ. ಚೆನ್ನಬಸವ ಶ್ರೀಗಳು. ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅದ್ಭುತ ಸ್ಥಾನ ಪಡೆದಿರುವ ಅವರ ಹೆಸರು ಸ್ಥಿರಸ್ಥಾಯಿಯಾಗಿದೆ. ಅವರು ರಚಿಸಿರುವ ಉತ್ಕೃಷ್ಟ ಸಾಹಿತ್ಯ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು ಎಂದರು.
ಮನಕವಾಡದ ಶ್ರೀದೇವ ಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಸ್ವಾಮಿಗಳಾದವರು ಸಮಾಜ ಕಟ್ಟಬೇಕು. ಸಮಾಜ ಸ್ವಾಮಿಗಳಿಗೆ ಪಟ್ಟ ಕಟ್ಟಬೇಕು. ಧಾರ್ಮಿಕ ಸಂಸ್ಕಾರ ಕೊಟ್ಟು ಅಧಿಕಾರವಾಣಿಯ ಶಕ್ತಿ ತುಂಬುವುದೇ ಪಟ್ಟಾಧಿಕಾರ ಎಂದು ಹೇಳಿದರು.
ತೇರದಾಳ ಶಾಸಕ ಸಿದ್ದು ಸವದಿ ಮುಖ್ಯ ಅತಿಥಿಯಾಗಿ ಮಾತನಾಡಿ, ಡಾ. ಚೆನ್ನಬಸವ ಸ್ವಾಮೀಜಿ ತಾವು ಹೇಳಬೇಕಾಗಿದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಯಾವುದೇ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುತ್ತಿದ್ದರು. ಅವರು ರಚಿಸಿದ ಸಾಹಿತ್ಯ ಮತ್ತು ನೀಡಿದ ಪ್ರವಚನಗಳನ್ನು ಸ್ಮರಿಸಿ ಪರಂಪರೆ ಉಳಿಸುವುದೆ ಪುಣ್ಯಾರಾಧನೆ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹಾವೇರಿಯ ಹುಕ್ಕೇರಿ ಮಠದ ಡಾ. ಸದಾಶಿವ ಸ್ವಾಮೀಜಿ, ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಮುತ್ತೂರಿನ ರಾಚೋಟೇಶ್ವರ ವಿರಕ್ತಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಹುನ್ನೂರಿನ ವಿಶ್ವನಾಥಶಾಸ್ತ್ರಿ ಕೊಣ್ಣೂರಮಠ ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ಕೆ.ಕೆ. ತುಪ್ಪದ, ಬಸಯ್ಯ ಸಿದ್ದಗಿರಿಮಠ, ಪ್ರೊ. ಬಸವರಾಜ ಕಡ್ಡಿ, ಡಾ. ಎಚ್.ಜಿ. ದಡ್ಡಿ, ಬಿ.ಎಸ್. ಸಿಂಧೂರ, ಎ.ಆರ್. ಶಿಂಧೆ, ರಾಜೇಸಾಬ ಕಡಕೋಳ, ಸದಾಶಿವ ಕವಟಗಿ, ಎಸ್.ಆರ್. ಶಿರೋಳ, ಮಹಾದೇವ ಇಟ್ಟಿ, ಶಿವಾನಂದ ಕುಲ್ಲೊಳ್ಳಿ, ಡಾ. ಟಿ.ಪಿ. ಬಾಂಗಿ, ಸಿ.ಎಸ್. ಬಾಂಗಿ, ಕಾಡು ಮಾಳಿ, ಈಶ್ವರ ಕರಬಸನವರ ಇತರರು ಇದ್ದರು.
ಸಾನಿಯಾ ಹುನಗುಂದ ಹಾಗೂ ತಂಡದವರು
ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ – ಅಲ್ಲಮಪ್ರಭು ನಡುವೆ ನಡೆದ ಸನ್ನಿವೇಶದ ನೃತ್ಯ ಪ್ರದರ್ಶನ ನೀಡಿದರು.
ಸರಸ್ವತಿ ಸಬರದ, ಹನುಮಂತ ಅಂಕದ ವಚನ ಪ್ರಾರ್ಥಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.
