ಶಿವಯೋಗ ವ್ಯಕ್ತಿಯ ಅಂತರಂಗವನ್ನು ಪರಿವರ್ತಿಸಿ ಸಮಾಜಮುಖಿ ಬದುಕಿಗೆ ಪ್ರೇರಣೆ ನೀಡುವ ಸಮಗ್ರ ಜೀವನದರ್ಶನ
ಬೆಳಗಾವಿ
ಪುಸ್ತಕ : ಶಿವಯೋಗ-ಲಿಂಗಾಂಗಯೋಗ
ಲೇಖಕರು : ಡಾ. ಅವಿನಾಶ್ ಕವಿ
ಪ್ರಕಾಶಕರು: ಅರಿವು ಪ್ರಕಾಶನ, ಬಸವಕೇಂದ್ರ, ಶಿವಮೊಗ್ಗ, ೨೦೨೬
ಲೇಖಕರ ಸಂಪರ್ಕವಾಣಿ : ೯೫೩೮೩೦೯೭೮೫
ಬೆಳಗಾವಿ
ಇತ್ತೀಚೆಗೆ ಮುದ್ದೇಬಿಹಾಳದ ಶರಣ ಚಿಂತಕರಾದ ಚಂದ್ರಶೇಖರ ಇಟಗಿ ಅವರು ನನಗೆ ಫೋನ್ ಮಾಡಿ, ‘ಡಾ. ಅವಿನಾಶ್ ಕವಿ ಅವರ ಶಿವಯೋಗ-ಲಿಂಗಾಂಗಯೋಗ ಎಂಬ ಹೊಸ ಪುಸ್ತಕ ಬಂದಿದೆ.
ಅದರಲ್ಲಿ ಅವರು ಇಷ್ಟಲಿಂಗಪೂಜೆಯುಕ್ತ ಧ್ಯಾನವನ್ನು ಕುರಿತು ತುಂಬ ಅದ್ಭುತವಾದ ವಿವರಣೆ ನೀಡಿದ್ದಾರೆ, ಹಾಗೆಯೇ ಅವರು ಸ್ವತಃ ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ, ಶರೀರ ಶಾಸ್ತ್ರ ಮತ್ತು ಲಿಂಗಾಂಗಯೋಗಗಳ ಸಂಬಂಧವನ್ನು ಕುರಿತು ತುಂಬ ವೈಜ್ಞಾನಿಕ ತಳಹದಿಯ ಮೇಲೆ ವಿಶ್ಲೇಷಿಸಿದ್ದಾರೆ. ಇದನ್ನು ಪ್ರತಿಯೊಬ್ಬ ಲಿಂಗಾಯತರು ಗಮನಿಸಲೇಬೇಕಾದ ಪುಸ್ತಕ ನೋಡ್ರಿ’ ಎಂದು ಹೇಳಿದರು.
ಹಿರಿಯರಾದ ಶರಣ ಚಂದ್ರಶೇಖರ ಇಟಗಿ ಅವರು ಯಾವುದೇ ಕೃತಿಯನ್ನು ತಲಸ್ಪರ್ಶಿಯಾಗಿ ಓದಿ, ಅದರ ಮೌಲ್ಯವನ್ನು ತೂಕ ಮಾಡಿ ಮಾತನಾಡುವ ಸ್ವಭಾವದವರು. ಶರಣ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಅಂತಹ ಹಿರಿಯರು ಡಾ. ಅವಿನಾಶ್ ಕವಿ ಅವರ ಕೃತಿ ಕುರಿತು ಇಂತಹ ಅಮೂಲ್ಯವಾದ ಮೆಚ್ಚುಗೆಯ ಮಾತುಗಳನ್ನಾಡಿದ್ದು ನನಗೆ ತುಂಬ ಸಂತೋಷವನ್ನುಂಟು ಮಾಡಿತು.
ಇಂದು ಲಿಂಗಾಯತರು ಆಧ್ಯಾತ್ಮಿಕ ಸುಖವನ್ನು ಅರಸಿಕೊಂಡು ಬೇರೆ ಬೇರೆ ಪಂಥ ಆಶ್ರಮ ಸಂಘ ಸಂಸ್ಥೆಗಳಿಗೆ, ಬೇರೆ ಬೇರೆ ಯೋಗ ಶಿಬಿರಗಳಿಗೆ ಹೋಗುತ್ತಿರುವುದು ನಿಜಕ್ಕೂ ವಿಷಾದ ಪಡುವ ಸಂಗತಿ. ಏಕೆಂದರೆ ಲಿಂಗಾಂಗಯೋಗದಲ್ಲಿಯೇ ಅದ್ಭುತವಾಗಿರುವಂತಹ ಆಧ್ಯಾತ್ಮಿಕ ಅನುಭೂತಿ ಸಿಗುತ್ತದೆ. ಮತ್ತೆ ಇದಕ್ಕೆ ಯಾರ ದಲ್ಲಾಳಿತನವೂ ಬೇಕಾಗಿಲ್ಲ. ಹೀಗಿದ್ದೂ ಲಿಂಗಾಯತರು ಅನ್ಯತನವನ್ನು ಆಶ್ರಯಿಸಿಕೊಂಡು ಹೋಗಿ ತಮ್ಮ ಸ್ವಾಭಿಮಾನ ಸ್ವಂತಿಕೆಯನ್ನು ಮರೆಯುತ್ತಿದ್ದಾರೆ.
ಇಂತಹ ಜನರ ಮನೋಸ್ಥಿತಿಯನ್ನು ಬದಲಾಯಿಸಬೇಕೆಂಬ ಕಾರಣಕ್ಕಾಗಿಯೇ ಡಾ. ಅವಿನಾಶ್ ಕವಿ ಇಂತಹ ಒಂದು ಮೌಲಿಕ ಕೃತಿ ರಚನೆ ಮಾಡಿರುವುದು ಅಭಿನಂದನಾರ್ಹವಾದುದು.
ಡಾ. ಅವಿನಾಶ್ ಕವಿ ಅವರು ಬಾಲ್ಯದಿಂದಲೂ ಶರಣ ಸಂಸ್ಕೃತಿ ಪ್ರಭಾವವಲಯದಲ್ಲಿ ಬೆಳೆದು ಬಂದವರು. ಹೀಗಾಗಿ ಲಿಂಗಾಯತ ಧರ್ಮ ಸಂಸ್ಕೃತಿಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ. ಆಳವಾದ ಅಧ್ಯಯನದ ಹರಿವು ಇದೆ.
ಮೇಲಾಗಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿದವರು. ಅವರ ವೈದ್ಯಕೀಯ ಸಂಶೋಧನೆಗಳಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿರುವುದು ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ.
ತಮ್ಮ ವೈದ್ಯಕೀಯ ಜ್ಞಾನ ಮತ್ತು ಬಸವಾದಿ ಶಿವಶರಣರ ವಚನಗಳ ಅಧ್ಯಯನದ ಪರಿಪಾಕದಿಂದ ಅವರು ಇತ್ತೀಚೆಗೆ ಶಿವಯೋಗ-ಲಿಂಗಾಂಗಯೋಗ ಎಂಬ ಕೃತಿ ಕೊಟ್ಟಿರುವುದು ಸಂತೋಷದ ಸಂಗತಿಯಾಗಿದೆ.
ಮನುಷ್ಯನ ಬದುಕು ಕೇವಲ ದೇಹದ ಅಸ್ತಿತ್ವಕ್ಕೆ ಸೀಮಿತವಾದುದಲ್ಲ. ದೇಹ, ಮನಸ್ಸು, ಭಾವನೆ, ಚಿಂತನೆ ಮತ್ತು ಆತ್ಮಪ್ರಜ್ಞೆಗಳ ಸಮನ್ವಯದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ಈ ಎಲ್ಲ ಆಯಾಮಗಳನ್ನು ಪರಿಶುದ್ಧಗೊಳಿಸಿ, ವ್ಯಕ್ತಿಯನ್ನು ತನ್ನ ಅಂತರಂಗದ ಅರಿವಿನ ಮೂಲಕ ಪರಮಚೈತನ್ಯದ ಅನುಭೂತಿಯತ್ತ ಕೊಂಡೊಯ್ಯುವ ಸಾಧನಾಮಾರ್ಗವೇ ಶಿವಯೋಗ.
ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಯೋಗಕ್ಕೆ ವಿಶಿಷ್ಟ ಸ್ಥಾನವಿದ್ದರೂ, ಬಸವಾದಿ ಶರಣರು ಅದಕ್ಕೆ ನೀಡಿದ ಅನುಭವಪರ, ಮಾನವೀಯ ಮತ್ತು ಜೀವನಮುಖಿ ಆಯಾಮ ಅನನ್ಯವಾದುದು.
ಶಿವಯೋಗವು ಕೇವಲ ಧ್ಯಾನ ಅಥವಾ ಏಕಾಂತ ಸಾಧನೆಯಲ್ಲ; ಅದು ಬದುಕಿನ ಪ್ರತಿಯೊಂದು ಕ್ರಿಯೆಯನ್ನೂ ಶಿವಪ್ರಜ್ಞೆಯಿಂದ ನೋಡುವ, ವ್ಯಕ್ತಿಯ ಅಂತರಂಗವನ್ನು ಪರಿವರ್ತಿಸಿ ಸಮಾಜಮುಖಿ ಬದುಕಿಗೆ ಪ್ರೇರಣೆ ನೀಡುವ ಸಮಗ್ರ ಜೀವನದರ್ಶನವಾಗಿದೆ.
ಈ ಮಹತ್ವದ ತಾತ್ವಿಕ ಮತ್ತು ಸಾಧನಾಪರ ಆಯಾಮಗಳನ್ನು ಡಾ. ಅವಿನಾಶ್ ಕವಿ ಅವರು ತಮ್ಮ ಶಿವಯೋಗ-ಲಿಂಗಾಂಗಯೋಗ ಕೃತಿಯಲ್ಲಿ ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.
ಶಿವಯೋಗದ ಪರಿಕಲ್ಪನೆಯನ್ನು ಅರಿಯಲು ಅದರ ದಾರ್ಶನಿಕ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಅಗತ್ಯ.
ಭಾರತೀಯ ಚಿಂತನ ಪರಂಪರೆಯಲ್ಲಿ ಯೋಗವು ಆತ್ಮಸಂಯಮ, ಚಿತ್ತಶುದ್ಧಿ, ಧ್ಯಾನ ಮತ್ತು ಆತ್ಮಸಾಕ್ಷಾತ್ಕಾರದ ವಿವಿಧ ಮಾರ್ಗಗಳ ಮೂಲಕ ವಿಕಾಸಗೊಂಡಿದೆ. ಈ ಪರಂಪರೆಯ ನಡುವೆ ಬಸವಾದಿ ಶರಣರು ಶಿವಯೋಗಕ್ಕೆ ವಿಶಿಷ್ಟವಾದ ಅನುಭವದ ನೆಲೆಯನ್ನು ಒದಗಿಸಿದರು.
ಅವರ ಪಾಲಿಗೆ ಪರಶಿವನು ದೂರದ ದೇವತೆಯಲ್ಲ; ಪ್ರತಿಯೊಬ್ಬ ಜೀವಿಯ ಅಂತರಂಗದಲ್ಲಿ ನೆಲೆಸಿರುವ ಪರಮಚೈತನ್ಯ. ಆ ಚೈತನ್ಯವನ್ನು ಇಷ್ಟಲಿಂಗದ ಮೂಲಕ ಅರಿತು, ತನ್ನ ಅಸ್ತಿತ್ವದೊಂದಿಗೆ ಅದನ್ನು ಅನುಸಂಧಾನಗೊಳಿಸುವುದೇ ಶಿವಯೋಗದ ಮೂಲ ಆಶಯ.
ಹೀಗಾಗಿ ಶಿವಯೋಗವು ಬಾಹ್ಯ ಆಚರಣೆ ಮತ್ತು ಅಂತರಂಗದ ಅನುಭವಗಳ ನಡುವೆ ಸಮನ್ವಯ ಸಾಧಿಸುವ ಸಾಧನಾಮಾರ್ಗವಾಗಿ ರೂಪುಗೊಂಡಿದೆ.
ಈ ಕೃತಿಯಲ್ಲಿ ಡಾ.ಅವಿನಾಶ್ ಕವಿ ಅವರು ಶಿವಯೋಗವನ್ನು ಕೇವಲ ತಾತ್ವಿಕತೆಯ ದೃಷ್ಟಿಯಿಂದ ಗಮನಿಸದೆ, ಅದರ ಮೂಲಭೂತ ಪರಿಕಲ್ಪನೆಗಳು, ಸಾಧನೆಯ ಕ್ರಮ, ಅನುಭವದ ಸ್ವರೂಪ ಮತ್ತು ಜೀವನದಲ್ಲಿ ಅದರ ಫಲಿತಾಂಶಗಳನ್ನು ಪರಸ್ಪರ ಸಂಬಂಧದಲ್ಲಿ ವಿವರಿಸಿರುವುದು ಗಮನಾರ್ಹ.
ಶಿವಯೋಗದ ಕೇಂದ್ರದಲ್ಲಿ ಇಷ್ಟಲಿಂಗವಿದೆ. ಇಷ್ಟಲಿಂಗವು ಪೂಜೆಯ ವಸ್ತುವಷ್ಟೇ ಅಲ್ಲ; ಅದು ಪರಮಚೈತನ್ಯದ ಸಂಕೇತ, ಸಾಧಕನ ಅಂತರಂಗದ ಜಾಗೃತಿಗೆ ಆಧಾರ ಮತ್ತು ಆತ್ಮಾನುಸಂಧಾನದ ಸಾಧನವಾಗಿದೆ.
ಇಷ್ಟಲಿಂಗದ ಮೂಲಕ ಸಾಧಕನು ತನ್ನ ದೃಷ್ಟಿಯನ್ನು ಬಾಹ್ಯ ಜಗತ್ತಿನಿಂದ ಅಂತರಂಗದತ್ತ ತಿರುಗಿಸುತ್ತಾನೆ. ಈ ಅನುಸಂಧಾನ ಕ್ರಮೇಣ ಪ್ರಾಣಲಿಂಗದ ಅರಿವಿಗೆ, ಅಲ್ಲಿಂದ ಭಾವಲಿಂಗದ ಅನುಭವಕ್ಕೆ ದಾರಿ ಮಾಡಿಕೊಡುತ್ತದೆ.
ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಈ ಸಾಧನಾಕ್ರಮವು ಶಿವಯೋಗದ ಅಂತರಂಗದ ವಿಕಾಸವನ್ನು ತಿಳಿಸುವ ಮಹತ್ವದ ತಾತ್ವಿಕ ಪರಿಕಲ್ಪನೆಯಾಗಿದೆ.
ಇಷ್ಟಲಿಂಗದ ಆರಾಧನೆಯು ಸಾಧಕನ ಬದುಕಿನಲ್ಲಿ ಶಿಸ್ತು, ಶ್ರದ್ಧೆ ಮತ್ತು ಆತ್ಮಸಂಯಮವನ್ನು ಬೆಳೆಸುತ್ತದೆ. ಪೂಜೆ, ಧ್ಯಾನ, ಮಂತ್ರಸ್ಮರಣೆ ಮತ್ತು ವಚನಚಿಂತನಗಳು ಮನಸ್ಸನ್ನು ಏಕಾಗ್ರಗೊಳಿಸುವುದರೊಂದಿಗೆ, ಸಾಧಕನನ್ನು ತನ್ನ ಅಂತರಂಗದ ಸ್ಥಿತಿಗತಿಗಳನ್ನು ಅರಿಯುವಂತೆ ಮಾಡುತ್ತವೆ.
ಇಷ್ಟಲಿಂಗದ ಮೇಲೆ ಸ್ಥಿರವಾದ ದೃಷ್ಟಿಯನ್ನು ನೆಲೆಗೊಳಿಸುವ ದೃಷ್ಟಿಯೋಗವು ಶಿವಯೋಗದ ಪ್ರಮುಖ ಸಾಧನಾಂಗವಾಗಿದೆ. ದೃಷ್ಟಿಯ ಸ್ಥಿರತೆಯ ಮೂಲಕ ಮನಸ್ಸಿನ ಚಂಚಲತೆ ಕಡಿಮೆಯಾಗಿ, ಏಕಾಗ್ರತೆ ಗಾಢವಾಗುತ್ತದೆ.
ಬಾಹ್ಯ ವಸ್ತುವಿನ ಮೇಲಿನ ಗಮನವು ಅಂತರಂಗದ ಅರಿವಾಗಿ ರೂಪಾಂತರಗೊಳ್ಳುವ ಈ ಪ್ರಕ್ರಿಯೆಯಲ್ಲಿ ಸಾಧಕನು ತನ್ನ ಚಿಂತನೆ, ಭಾವನೆ ಮತ್ತು ಪ್ರಜ್ಞೆಗಳ ಚಲನೆಯನ್ನು ಗಮನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ.
ಶಿವಯೋಗದ ಸಾಧನೆಯಲ್ಲಿ ಧ್ಯಾನಕ್ಕೆ ವಿಶಿಷ್ಟವಾದ ಸ್ಥಾನವಿದೆ. ಧ್ಯಾನವೆಂದರೆ ಬರೀ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ; ಮನಸ್ಸಿನ ಚಂಚಲತೆಯನ್ನು ಮೀರಿ ಅಂತರಂಗದ ಮೌನ ಮತ್ತು ಚೈತನ್ಯವನ್ನು ಅನುಭವಿಸುವ ಪ್ರಕ್ರಿಯೆ.
ಇಷ್ಟಲಿಂಗದ ಅನುಸಂಧಾನದಿಂದ ಆರಂಭವಾಗುವ ಸಾಧನೆ, ದೃಷ್ಟಿಯ ಏಕಾಗ್ರತೆಯ ಮೂಲಕ ಗಾಢವಾಗಿ, ಅಂತಿಮವಾಗಿ ಭಾವಲಿಂಗದ ಅನುಭವದಲ್ಲಿ ಪರಿಪೂರ್ಣತೆಯನ್ನು ಪಡೆಯುತ್ತದೆ. ಈ ಹಂತದಲ್ಲಿ ಸಾಧಕನ ಗಮನ ಬಾಹ್ಯ ರೂಪದಿಂದ ಅಂತರಂಗದ ಪರಮಚೈತನ್ಯದತ್ತ ಸಾಗುತ್ತದೆ.
ಲಿಂಗವು ಪೂಜೆಯ ಕೇಂದ್ರವಾಗಿರುವುದರ ಜೊತೆಗೆ ಸಾಧಕನ ಅಸ್ತಿತ್ವದ ಅರಿವಿನ ಭಾಗವಾಗುತ್ತದೆ. ಈ ಅನುಭವವೇ ಲಿಂಗಾಂಗ ಸಾಮರಸ್ಯದ ಮೂಲತತ್ವವಾಗಿದೆ. ಲಿಂಗ ಮತ್ತು ಅಂಗಗಳ ನಡುವಿನ ಭಿನ್ನಭಾವ ಕರಗಿ, ಸಾಧಕನು ಶಿವಚೈತನ್ಯದೊಂದಿಗೆ ತನ್ನ ಅಂತರಂಗದ ಸಂಬಂಧವನ್ನು ಅನುಭವಿಸುವುದು ಶಿವಯೋಗದ ಉನ್ನತ ಸ್ಥಿತಿಯಾಗಿದೆ.
ಲಿಂಗಾಂಗ ಸಾಮರಸ್ಯದ ಪರಿಕಲ್ಪನೆ ಶರಣರ ಅನುಭವದರ್ಶನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿ ಲಿಂಗವೆಂದರೆ ಪರಮಚೈತನ್ಯ; ಅಂಗವೆಂದರೆ ಆ ಚೈತನ್ಯವನ್ನು ಅರಿಯಲು ಪ್ರಯತ್ನಿಸುವ ಸಾಧಕನ ಜೀವಸ್ವರೂಪ.
ಈ ಎರಡರ ಸಂಬಂಧವು ಬರೀ ಭಕ್ತ ಮತ್ತು ಭಗವಂತನ ನಡುವಿನ ಆರಾಧನಾತ್ಮಕ ಸಂಬಂಧವಲ್ಲ; ಅದು ಅನುಭವದ ಮೂಲಕ ಅರಿವಾಗುವ ಆಂತರಿಕ ಐಕ್ಯ. ಸಾಧಕನ ಅಹಂಕಾರ, ಸ್ವಾರ್ಥ ಮತ್ತು ಮನೋವಿಕಾರಗಳು ಕ್ಷೀಣಿಸಿದಂತೆ ಲಿಂಗಭಾವ ಗಾಢವಾಗುತ್ತದೆ.
ಈ ಸ್ಥಿತಿಯಲ್ಲಿ ಭಕ್ತಿ, ಜ್ಞಾನ ಮತ್ತು ಕ್ರಿಯೆಗಳು ಪ್ರತ್ಯೇಕವಾಗಿರದೆ ಒಂದೇ ಜೀವನಾನುಭವದ ವಿವಿಧ ಮುಖಗಳಾಗುತ್ತವೆ. ಶರಣರ ದೃಷ್ಟಿಯಲ್ಲಿ ಅಧ್ಯಾತ್ಮದ ಪರಿಪೂರ್ಣತೆ ಬದುಕಿನಿಂದ ದೂರವಾಗುವುದರಲ್ಲಿ ಇಲ್ಲ; ಬದುಕಿನ ಎಲ್ಲ ಕ್ರಿಯೆಗಳಲ್ಲಿಯೂ ಶಿವಪ್ರಜ್ಞೆಯನ್ನು ಕಂಡುಕೊಳ್ಳುವುದರಲ್ಲಿದೆ.
ಈ ಹಿನ್ನೆಲೆಯಲ್ಲಿ ಶಿವಯೋಗದ ವೈಜ್ಞಾನಿಕತೆಯನ್ನು ಕುರಿತ ಅಧ್ಯಾಯವು ವಿಶೇಷ ಗಮನ ಸೆಳೆಯುತ್ತದೆ. ಯೋಗಾಭ್ಯಾಸದಲ್ಲಿ ದೇಹದ ಸ್ಥಿರತೆ, ಉಸಿರಾಟದ ಸಹಜತೆ, ದೃಷ್ಟಿಯ ಏಕಾಗ್ರತೆ ಮತ್ತು ಮನಸ್ಸಿನ ಸಂಯಮಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.
ನಿಯಮಿತ ಧ್ಯಾನವು ಮನಸ್ಸಿನ ಗಮನವನ್ನು ಒಂದು ಕೇಂದ್ರದಲ್ಲಿ ನೆಲೆಗೊಳಿಸಲು, ಭಾವನೆಗಳನ್ನು ಸಮತೋಲನದಲ್ಲಿಡಲು ಮತ್ತು ಅಂತರಂಗದ ನೆಮ್ಮದಿಯನ್ನು ಬೆಳೆಸಲು ನೆರವಾಗುತ್ತದೆ.
ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧವನ್ನು ಗುರುತಿಸಿ, ಸಾಧನೆಯನ್ನು ಸಮಗ್ರವಾಗಿ ನೋಡುವ ದೃಷ್ಟಿಯನ್ನು ಈ ಅಧ್ಯಾಯ ನೀಡುತ್ತದೆ. ಆಧ್ಯಾತ್ಮಿಕ ಅನುಭವ ಮತ್ತು ವೈಜ್ಞಾನಿಕ ಚಿಂತನೆಗಳ ನಡುವೆ ಸಂವಾದವನ್ನು ಬೆಳೆಸುವ ಲೇಖಕರ ಪ್ರಯತ್ನವು ಸಮಕಾಲೀನ ಓದುಗರಿಗೆ ಶಿವಯೋಗದ ಮಹತ್ವವನ್ನು ಪರಿಚಯಿಸುವಲ್ಲಿ ಉಪಯುಕ್ತವಾಗಿದೆ.
ಶಿವಯೋಗದ ಸಾಮಾಜಿಕ ಆಯಾಮವನ್ನು ಡಾ. ಅವಿನಾಶ್ ಕವಿ ಅವರು ತುಂಬ ಅದ್ಭುತವಾಗಿ ವಿವರಿಸಿದ್ದಾರೆ. ಬಸವಾದಿ ಶರಣರ ಅಧ್ಯಾತ್ಮವು ವ್ಯಕ್ತಿಯ ವೈಯಕ್ತಿಕ ಮುಕ್ತಿಗೆ ಮಾತ್ರ ಸೀಮಿತವಾಗಿರದೆ, ಸಮಾಜದ ಸಮಗ್ರ ಪರಿವರ್ತನೆಯ ಆಶಯವನ್ನು ಒಳಗೊಂಡಿದೆ.
ಜಾತಿ, ವರ್ಣ, ಲಿಂಗ ಮತ್ತು ಸಾಮಾಜಿಕ ಸ್ಥಾನಮಾನಗಳ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯ ಬದಲಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಘನತೆಯನ್ನು ಪ್ರತಿಪಾದಿಸಿದ ಶರಣರು, ಇಷ್ಟಲಿಂಗದ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು.
ದೇವರ ಅನುಭವಕ್ಕೆ ಜನ್ಮ, ಜಾತಿ, ಲಿಂಗ, ಭಾಷೆ ಅಥವಾ ಸಾಮಾಜಿಕ ಸ್ಥಾನಮಾನಗಳು ಅಡ್ಡಿಯಾಗಲಾರವು ಎಂಬ ಕ್ರಾಂತಿಕಾರಿ ನಿಲುವು ಶರಣರ ಧರ್ಮದರ್ಶನದ ಜೀವಾಳವಾಗಿದೆ.
ಇಷ್ಟಲಿಂಗ ಬರೀ ಧಾರ್ಮಿಕ ಸಂಕೇತ ಮಾತ್ರವಾಗಿರದೆ, ಅದು ವ್ಯಕ್ತಿಯ ಸ್ವತಂತ್ರ ಅಸ್ತಿತ್ವ ಮತ್ತು ಆತ್ಮಗೌರವದ ಪ್ರತೀಕವೂ ಆಗಿದೆ. ಪ್ರತಿಯೊಬ್ಬರೂ ತಮ್ಮ ಇಷ್ಟಲಿಂಗವನ್ನು ಧರಿಸಿ, ಸ್ವತಃ ಆರಾಧಿಸುವ ಹಕ್ಕನ್ನು ಹೊಂದಿರುವುದು ಧಾರ್ಮಿಕ ಅಧಿಕಾರದ ಕೇಂದ್ರೀಕರಣವನ್ನು ಮೀರುವ ಮಹತ್ವದ ಹೆಜ್ಜೆಯಾಗಿದೆ.
ಈ ಮೂಲಕ ಸಾಧಕನು ತನ್ನ ಆಧ್ಯಾತ್ಮಿಕ ಬದುಕಿನ ಹೊಣೆಗಾರಿಕೆಯನ್ನು ತಾನೇ ವಹಿಸಿಕೊಳ್ಳುತ್ತಾನೆ.
ಇಷ್ಟಲಿಂಗವು ವ್ಯಕ್ತಿ ಮತ್ತು ಪರಮಚೈತನ್ಯದ ನಡುವೆ ನೇರ ಅನುಸಂಧಾನವನ್ನು ಕಲ್ಪಿಸುವುದರಿಂದ, ಮಧ್ಯವರ್ತಿತನದ ಅವಲಂಬನೆಯಿಲ್ಲದ ಸ್ವತಂತ್ರ ಆಧ್ಯಾತ್ಮಿಕ ಅನುಭವಕ್ಕೆ ಅವಕಾಶ ಕಲ್ಪಿಸುತ್ತದೆ.
ಈ ವಿಚಾರದಲ್ಲಿ ಶರಣರ ಧಾರ್ಮಿಕ ಚಿಂತನೆ ಮತ್ತು ಸಾಮಾಜಿಕ ಸಮಾನತೆಯ ಆಶಯಗಳು ಒಂದಕ್ಕೊಂದು ಪೂರಕವಾಗಿವೆ.
ಶಿವಯೋಗದ ಪರಿಪೂರ್ಣತೆಯು ಸಾಧಕನ ಅಂತರಂಗದಲ್ಲಿ ಉಂಟಾಗುವ ಪರಿವರ್ತನೆಯಿಂದ ವ್ಯಕ್ತವಾಗುತ್ತದೆ. ಧ್ಯಾನದಿಂದ ದೊರೆಯುವ ಶಾಂತಿ, ಏಕಾಗ್ರತೆ ಮತ್ತು ಆತ್ಮಾನುಭವಗಳು ಬದುಕಿನ ನಡವಳಿಕೆಯಲ್ಲಿ ಅಭಿವ್ಯಕ್ತಿಗೊಳ್ಳಬೇಕು.
ಅಹಂಕಾರವನ್ನು ಮೀರುವುದು, ಎಲ್ಲ ಜೀವಿಗಳಲ್ಲಿಯೂ ಪರಮಚೈತನ್ಯವನ್ನು ಕಾಣುವುದು, ಪರರ ನೋವಿಗೆ ಸ್ಪಂದಿಸುವುದು, ಕಾಯಕದಲ್ಲಿ ಪ್ರಾಮಾಣಿಕತೆ ಮತ್ತು ದಾಸೋಹದಲ್ಲಿ ಸಮರ್ಪಣಾಭಾವ ಬೆಳೆಸಿಕೊಳ್ಳುವುದು ಈ ಸಾಧನೆಯ ಸಹಜ ಫಲಗಳಾಗಿವೆ.
ಹೀಗಾಗಿ ಶಿವಯೋಗವು ಧ್ಯಾನಕೋಣೆಯೊಳಗೆ ಮುಗಿಯುವ ಸಾಧನೆಯಲ್ಲ; ಅದು ವ್ಯಕ್ತಿಯ ಕುಟುಂಬಜೀವನ, ಸಾಮಾಜಿಕ ಸಂಬಂಧಗಳು, ವೃತ್ತಿ ಮತ್ತು ಸಾರ್ವಜನಿಕ ನಡವಳಿಕೆಗಳನ್ನೂ ಪರಿವರ್ತಿಸುವ ಜೀವನಶೈಲಿಯಾಗಿದೆ.
ಕೃತಿಯ ಅನುಬಂಧದಲ್ಲಿ ವಿವರಿಸಿರುವ ‘ಮಾಟ-ನೋಟ-ಕೂಟ’ ಎಂಬ ಮೂರು ಹಂತಗಳು ಶಿವಯೋಗದ ಪ್ರಾಯೋಗಿಕ ಸ್ವರೂಪವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ.
‘ಮಾಟ’ವು ಇಷ್ಟಲಿಂಗದ ಆರಾಧನೆ ಮತ್ತು ಪೂಜೆಯ ಮೂಲಕ ಸಾಧಕನನ್ನು ಸಾಧನೆಗೆ ಸಿದ್ಧಗೊಳಿಸುತ್ತದೆ. ‘ನೋಟ’ವು ಇಷ್ಟಲಿಂಗದ ಮೇಲಿನ ದೃಷ್ಟಿಯನ್ನು ಸ್ಥಿರಗೊಳಿಸಿ ಮನಸ್ಸಿನ ಏಕಾಗ್ರತೆಯನ್ನು ಬೆಳೆಸುತ್ತದೆ. ‘ಕೂಟ’ವು ಬಾಹ್ಯ ದೃಷ್ಟಿಯನ್ನು ಅಂತರಂಗದ ಅನುಭವವಾಗಿ ಪರಿವರ್ತಿಸಿ ಲಿಂಗದೊಂದಿಗೆ ಭಾವಸಾಮರಸ್ಯವನ್ನು ಸಾಧಿಸುವ ಹಂತವಾಗಿದೆ.
ಈ ಮೂರು ಹಂತಗಳು ಪ್ರತ್ಯೇಕ ಆಚರಣೆಗಳಲ್ಲ; ಅವು ಒಂದೇ ಸಾಧನೆಯ ಕ್ರಮಬದ್ಧ ಆಯಾಮಗಳು. ಪೂಜೆಯಿಂದ ಏಕಾಗ್ರತೆಗೆ, ಏಕಾಗ್ರತೆಯಿಂದ ಅಂತರ್ಮುಖತೆಗೆ, ಅಂತರ್ಮುಖತೆಯಿಂದ ಲಿಂಗಾಂಗ ಸಾಮರಸ್ಯಕ್ಕೆ ಸಾಗುವ ಈ ವಿಧಾನವು ಶಿವಯೋಗದ ಸಾಧನಾಕ್ರಮವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.
ಲಿಂಗಾಂಗಯೋಗದ ಫಲಗಳನ್ನು ವಿವರಿಸುವಾಗ ಲೇಖಕರು ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ನಿಯಮಿತ ಸಾಧನೆಯಿಂದ ಮನಸ್ಸಿನ ಏಕಾಗ್ರತೆ, ಆತ್ಮವಿಶ್ವಾಸ, ಭಾವನಾತ್ಮಕ ಸ್ಥಿರತೆ, ಅಂತರಂಗದ ಶಾಂತಿ ಮತ್ತು ಆತ್ಮಾವಲೋಕನದ ಸಾಮರ್ಥ್ಯ ಬೆಳೆಯುತ್ತವೆ.
ತನ್ನ ಆಲೋಚನೆ, ವರ್ತನೆ ಮತ್ತು ಜೀವನಮೌಲ್ಯಗಳನ್ನು ಪರಿಶೀಲಿಸುವ ಮನೋಭಾವ ವ್ಯಕ್ತಿಯಲ್ಲಿ ಆತ್ಮವಿಕಾಸದ ಹಂಬಲವನ್ನು ಮೂಡಿಸುತ್ತದೆ.
ಪ್ರತಿಯೊಂದು ಜೀವಿಯಲ್ಲಿಯೂ ಪರಮಚೈತನ್ಯ ನೆಲೆಸಿದೆ ಎಂಬ ಅರಿವು ಕರುಣೆ, ಸಹಾನುಭೂತಿ ಮತ್ತು ಪರಸ್ಪರ ಗೌರವದ ಭಾವನೆಗಳನ್ನು ಗಟ್ಟಿಗೊಳಿಸುತ್ತದೆ. ಈ ಮನೋಭಾವವು ಸಾಮಾಜಿಕ ಸಾಮರಸ್ಯಕ್ಕೆ ದಾರಿಯಾಗುತ್ತದೆ.
ಹೀಗೆ ಲಿಂಗಾಂಗಯೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಸಮನ್ವಯಗೊಳಿಸಿ, ಜವಾಬ್ದಾರಿಯುತ ಹಾಗೂ ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸುವ ಸಾಧನೆಯಾಗಿ ಪ್ರಕಟವಾಗುತ್ತದೆ.
ಡಾ. ಅವಿನಾಶ್ ಕವಿ ಅವರು ಶಿವಯೋಗವನ್ನು ಸಂಸಾರವಿಮುಖ ಸಾಧನೆಯಾಗಿ ಅಲ್ಲ, ಸಂಸಾರದೊಳಗೇ ಆತ್ಮಜಾಗೃತಿ ಮತ್ತು ಆತ್ಮಶುದ್ಧಿಯನ್ನು ಸಾಧಿಸುವ ಮಾರ್ಗವಾಗಿ ಪರಿಚಯಿಸಿದ್ದಾರೆ. ದೈನಂದಿನ ಬದುಕಿನ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಅಂತರಂಗದ ಶಾಂತಿ, ಸಮಚಿತ್ತತೆ ಮತ್ತು ಶಿವಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದು ಎಂಬ ಸಂದೇಶ ಇಲ್ಲಿ ಸ್ಪಷ್ಟವಾಗಿದೆ. ವಯಸ್ಸು, ಲಿಂಗ, ಜಾತಿ, ಧರ್ಮ, ಭಾಷೆ ಅಥವಾ ಸಾಮಾಜಿಕ ಹಿನ್ನೆಲೆಯ ಭೇದವಿಲ್ಲದೆ ಎಲ್ಲರೂ ಈ ಸಾಧನೆಯನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದು ಎಂಬ ಉದಾರ ದೃಷ್ಟಿ ಶಿವಯೋಗದ ಸಾರ್ವತ್ರಿಕತೆಯನ್ನು ಸಾರುತ್ತದೆ.
ವಿಶೇಷವಾಗಿ ಬಾಲ್ಯ ಮತ್ತು ಯುವಾವಸ್ಥೆಯಿಂದಲೇ ಏಕಾಗ್ರತೆ, ಶಿಸ್ತು, ಆತ್ಮವಿಶ್ವಾಸ, ಸಂವೇದನಾಶೀಲತೆ ಮತ್ತು ಸಮಾನತೆಯ ಮನೋಭಾವ ಬೆಳೆಸಿಕೊಳ್ಳಲು ಈ ಸಾಧನೆ ಸಹಕಾರಿಯಾಗಬಲ್ಲದು ಎಂಬುದು ಡಾ. ಅವಿನಾಶ್ ಕವಿ ಅವರ ಅಭಿಪ್ರಾಯ.
ಬಸವಾದಿ ಶರಣರ ವಚನದರ್ಶನವು ಅನುಭವಕ್ಕೆ ನೀಡಿದ ಮಹತ್ವವನ್ನು ಈ ಕೃತಿಯ ವಿವಿಧ ಅಧ್ಯಾಯಗಳು ನೆನಪಿಸುತ್ತವೆ. ಶರಣರ ಪಾಲಿಗೆ ಧರ್ಮವೆಂದರೆ ಕೇವಲ ನಂಬಿಕೆ ಅಥವಾ ಆಚರಣೆಯಲ್ಲ; ಅದು ಅನುಭವದಿಂದ ಅರಿಯಬೇಕಾದ ಸತ್ಯ ಮತ್ತು ಬದುಕಿನಲ್ಲಿ ಅನುಸರಿಸಬೇಕಾದ ಮೌಲ್ಯ. ಶಿವಯೋಗವೂ ಇದೇ ಅನುಭವಪರಂಪರೆಯ ಮುಂದುವರಿಕೆಯಾಗಿದೆ.
ಇಷ್ಟಲಿಂಗದ ಆರಾಧನೆಯಿಂದ ಆರಂಭವಾಗುವ ಸಾಧನೆ, ಪ್ರಾಣಲಿಂಗದ ಅರಿವು, ಭಾವಲಿಂಗದ ಅನುಭವ ಮತ್ತು ಲಿಂಗಾಂಗ ಸಾಮರಸ್ಯದ ಪರಿಪೂರ್ಣತೆಯ ಮೂಲಕ ವ್ಯಕ್ತಿಯ ಅಂತರಂಗವನ್ನು ರೂಪಾಂತರಿಸುತ್ತದೆ.
ಈ ರೂಪಾಂತರವು ಕಾಯಕ, ದಾಸೋಹ, ಸಮಾನತೆ, ಕರುಣೆ ಮತ್ತು ಸಹಬಾಳ್ವೆಯ ಮೌಲ್ಯಗಳಲ್ಲಿ ವ್ಯಕ್ತವಾದಾಗ ಮಾತ್ರ ಶಿವಯೋಗದ ಜೀವನಸಾರ್ಥಕತೆ ಪೂರ್ಣಗೊಳ್ಳುತ್ತದೆ.
ಒಟ್ಟಿನಲ್ಲಿ, ಡಾ. ಅವಿನಾಶ ಕವಿ ಅವರ ಶಿವಯೋಗ-ಲಿಂಗಾಂಗಯೋಗ ಕೃತಿಯು ಬಸವಾದಿ ಶರಣರ ಶಿವಯೋಗದರ್ಶನವನ್ನು ತಾತ್ತ್ವಿಕ, ಅನುಭವಪರ, ಸಾಧನಾತ್ಮಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ.
ಶಿವಯೋಗದ ದಾರ್ಶನಿಕ ಹಿನ್ನೆಲೆಯಿಂದ ಆರಂಭಿಸಿ ಅದರ ಸ್ವರೂಪ, ವಿಕಾಸ, ಸಾಧನಾಮಾರ್ಗ, ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗಗಳ ಅನುಸಂಧಾನ, ಅಂಗಲಿಂಗ ಸಾಮರಸ್ಯ, ವೈಜ್ಞಾನಿಕ ಮತ್ತು ಸಾಮಾಜಿಕ ಆಯಾಮಗಳು, ಅಂತಿಮವಾಗಿ ಲಿಂಗಾಂಗಯೋಗದ ಪ್ರಾಯೋಗಿಕ ವಿಧಾನ ಹಾಗೂ ಫಲಗಳವರೆಗೆ ವಿಷಯವನ್ನು ಕ್ರಮಬದ್ಧವಾಗಿ ವಿಸ್ತರಿಸಿರುವುದು ಕೃತಿಯ ವೈಶಿಷ್ಟ್ಯವಾಗಿದೆ.
ಅಧ್ಯಾತ್ಮವನ್ನು ಬದುಕಿನಿಂದ ಬೇರ್ಪಡಿಸದೆ, ಅಂತರಂಗದ ಶುದ್ಧಿಯನ್ನು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಬೆಸೆಯುವ ಶರಣರ ಮೂಲ ಆಶಯವನ್ನು ಈ ಕೃತಿ ಓದುಗರ ಮುಂದಿಡುತ್ತದೆ.
ಶಿವಯೋಗದ ಕೊನೆಯ ಗುರಿ ಕೇವಲ ಧ್ಯಾನದಲ್ಲಿ ಆನಂದವನ್ನು ಪಡೆಯುವುದಲ್ಲ; ತನ್ನೊಳಗಿನ ಅಹಂಕಾರವನ್ನು ಗೆದ್ದು, ಎಲ್ಲರಲ್ಲಿಯೂ ಸಮಾನ ಚೈತನ್ಯವನ್ನು ಕಾಣುವ ಉದಾತ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ. ವ್ಯಕ್ತಿಯ ಅಂತರಂಗದಲ್ಲಿ ಮೂಡುವ ಶಾಂತಿ ಕುಟುಂಬದಲ್ಲಿ ಸೌಹಾರ್ದವಾಗಿ, ಸಮಾಜದಲ್ಲಿ ಸಮಾನತೆಯಾಗಿ ಮತ್ತು ವಿಶ್ವದಲ್ಲಿ ಮಾನವೀಯತೆಯಾಗಿ ವಿಸ್ತರಿಸಬೇಕು.
‘ತನ್ನ ತಾನು ಗೆದ್ದವನೇ ಲೋಕವನು ಗೆಲ್ಲಬಲ್ಲನು’ ಎಂಬ ಶರಣರ ಜೀವನದರ್ಶನದ ಆಶಯವನ್ನು ಲಿಂಗಾಂಗಯೋಗದ ಸಾಧನೆಯೊಂದಿಗೆ ಸಮನ್ವಯಗೊಳಿಸಿರುವುದು ಈ ಕೃತಿಯ ಕೇಂದ್ರ ಸಂದೇಶವಾಗಿದೆ.
ಅಂತರಂಗದ ಅರಿವಿನಿಂದ ಆರಂಭವಾಗಿ ಸಮಸ್ತ ಜೀವಿಗಳೊಂದಿಗಿನ ಸಾಮರಸ್ಯದಲ್ಲಿ ಪರಿಪೂರ್ಣಗೊಳ್ಳುವ ಈ ಶಿವಯೋಗದ ಮಾರ್ಗವು ವ್ಯಕ್ತಿಯ ಉನ್ನತಿಗೂ ಸಮಾಜದ ಉದಾತ್ತೀಕರಣಕ್ಕೂ ದಾರಿದೀಪವಾಗಬಲ್ಲದು ಎಂಬುದನ್ನು ಡಾ. ಅವಿನಾಶ್ ಕವಿ ಅವರು ತುಂಬ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.
ಡಾ. ಅವಿನಾಶ್ ಕವಿ ಅವರು ಸ್ವತಃ ವೈದ್ಯರಾಗಿರುವುದರಿಂದ ಇಡೀ ಶಿವಯೋಗ ಸಿದ್ಧಾಂತವನ್ನು ವೈದ್ಯಕೀಯ ಅನುಭವಗಳ ನೆಲೆಯಲ್ಲಿ ಚಿತ್ರಗಳ ವಿವರಣೆ ನೀಡಿರುವುದು ಸಾಮಾನ್ಯ ಓದುಗರಿಗೂ ಶಿವಯೋಗತತ್ವ ಸುಲಭಗ್ರಾಹ್ಯವಾಗುವಂತೆ ಮಾಡಿದ್ದಾರೆ.
ತಮ್ಮ ಲೇಖಕರ ನುಡಿಯಲ್ಲಿ ಅವರು ‘ದಯವಿಟ್ಟು ಎಲ್ಲರೂ ಈ ಕೃತಿಯನ್ನು ಕೇವಲ ಓದಿನ ಮಟ್ಟಕ್ಕೆ ನಿಲ್ಲಿಸದೆ, ಲಿಂಗಾನುಸಂಧಾನ ಮಾಡಿ ಅದರ ಫಲಶ್ರುತಿಯನ್ನು ಅನುಭವಿಸಿ’ ಎಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಬುಕ್ ಎಲ್ಲಿ ಸಿಗುತದೆ?