ಮೈಸೂರು :
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಶರಣ ಮಹಾದೇವಪ್ಪ ಅವರ ಸಿದ್ಧಾರ್ಥ ನಗರದಲ್ಲಿರುವ ಮನೆಯಲ್ಲಿ ‘ವಚನ ಬೆಳಕಿನ ದೀಪಾವಳಿ’, ‘ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ’ ಹಾಗೂ ‘ಸಾಮೂಹಿಕ ಇಷ್ಟಲಿಂಗಯೋಗ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರು ಶ್ರೀ ನೀಲಕಂಠಸ್ವಾಮಿ ಮಠದ ಪೂಜ್ಯ ಸಿದ್ಧಮಲ್ಲ ಸ್ವಾಮಿಗಳು ಮತ್ತು ಎಂ.ಎಲ್. ಹುಂಡಿ ವಿರಕ್ತಮಠದ ಪೂಜ್ಯ ಗೌರಿಶಂಕರ ಸ್ವಾಮಿಗಳು ವಹಿಸಿಕೊಂಡಿದ್ದರು.
ಸ್ವಾಮಿಗಳು ಆಶೀರ್ವಚನ ನೀಡುತ್ತ, ಬಸವ ಪ್ರಣೀತ ಲಿಂಗಾಯತ ಧರ್ಮದ ಉಳಿವಿಗೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಕೊಟ್ಟ ಕೊಡುಗೆಯನ್ನು ಸ್ಮರಿಸಿಕೊಂಡರು. ಸಣ್ಣ ವಯಸ್ಸಿನ ಅಪಾರ ಕೊಡುಗೆಯ ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ವಚನ ದೀಪಾವಳಿ ಎಂಬ ಜ್ಞಾನದ ಕಾರ್ಯಕ್ರಮ ಜನರ ಮನ ಮನೆ ಬೆಳಗಲಿ. ಇಂತಹ ವಿನೂತನ ಕಾರ್ಯಕ್ರಮಗಳು ಪ್ರತಿಯೊಬ್ಬ ಬಸವ ಅನುಯಾಯಿಗಳ ಮನೆಯಲ್ಲಿ ನಡೆಯಬೇಕು ಎಂಬುದನ್ನು ಸ್ವಾಮಿಗಳು ತಿಳಿಸಿದರು.
ಬೆಂಗಳೂರಿನ ಶರಣತತ್ವ ಚಿಂತಕರಾದ ಶಿವಶರಣಪ್ಪ ಮದ್ದೂರ ಅವರು ಇಷ್ಟಲಿಂಗಯೋಗ, ಕರಸ್ಥಲ ಕುರಿತು ಅನುಭಾವ ನೀಡಿದರು.
ಧಾರವಾಡ ಹೈಕೋರ್ಟ್ ನ್ಯಾಯವಾದಿಗಳಾದ ಕೆ.ಎಸ್. ಕೋರಿಶೆಟ್ಟರ ಅವರು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಕುರಿತು ಅನುಭಾವ ನೀಡಿದರು.

ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಬಸವಭಕ್ತರು ಸಾಮೂಹಿಕ ಇಷ್ಟಲಿಂಗಯೋಗದಲ್ಲಿ ಭಾಗವಹಿಸಿದ್ದರು.
ಶರಣ ಮಹದೇವಪ್ಪ, ಪ್ರಮೀಳಾ ಮಹಾದೇವಪ್ಪ, ಎಂ. ನೀಲಿಂಪಾ ಸೇರಿದಂತೆ ನೂರಾರು ಬಸವಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಚ್ಚುಕಟ್ಟಾದ ಪ್ರಸಾದ ದಾಸೋಹವನ್ನು ಮಹಾದೇವಪ್ಪ ಮತ್ತು ಕುಟುಂಬಸ್ಥರು ಮಾಡಿದ್ದರು.

