ಗುಳೇದಗುಡ್ಡ
ಬಸವ ಕೇಂದ್ರದ ವತಿಯಿಂದ ವಾರದ ‘ಮನೆಯಲ್ಲಿ ಮಹಾಮನೆ ‘ಕಾರ್ಯಕ್ರಮ ಶರಣ ಅವಿನಾಶ ಗಣೇಶ ಉದ್ನೂರ ಅವರ ಮನೆಯಲ್ಲಿ ನಡೆಯಿತು.
ಹಾಗೂ ವಚನ ಚಿಂತನೆಗಾಗಿ ವೀರವಿರಾಗಿಣಿ ಅಕ್ಕಮಹಾದೇವಿ ತಾಯಿಯವರ ಈ ಕೆಳಗಿನ ವಚನವನ್ನು ಆಯ್ದುಕೊಳ್ಳಲಾಗಿತ್ತು.

ಮುತ್ತು ನೀರಲಾಯಿತ್ತು
ವಾರಿಕಲ್ಲು ನೀರಲಾಯಿತ್ತು.
ಉಪ್ಪು ನೀರಲಾಯಿತ್ತು. ಉಪ್ಪು ಕರಗಿತ್ತು;
ವಾರಿಕಲ್ಲು ಕರಗಿತ್ತು.
ಮುತ್ತು ಕರಗಿದನಾರೂ ಕಂಡವರಿಲ್ಲ.
ಈ ಸಂಸಾರಿ ಮಾನವರುˌ ಲಿಂಗವ ಮುಟ್ಟಿ
ಭವ ಭಾರಿಗಳಾದರು. ನಾ ನಿಮ್ಮ ಮುಟ್ಟಿ
ಕರಿಗೊಂಡೆನಯ್ಯ ಚೆನ್ನಮಲ್ಲಿಕಾರ್ಜುನಾ.
ರಂಗಕರ್ಮಿ ಶರಣ ಮಹಾಲಿಂಗಪ್ಪ ಕರನಂದಿ ಅವರು “ಈ ವಚನವನ್ನು ಜಗತ್ತಿಗೆ ಅಕ್ಕನೆನಿಸಿದˌ ಕನ್ನಡ ಮೊದಲ ಕವಿಯಿತ್ರಿಯೆನಿಸಿದ ಅಕ್ಕಮಹಾದೇವಿ ತಾಯಿಯವರು ರಚಿಸಿದ್ದಾರೆ. ಉಡುತಡಿಯಲ್ಲಿ ಜನಿಸಿ ಕಲ್ಯಾಣದ ಅನುಭವ ಮಂಟಪಕ್ಕೆ ಬಂದು ಶ್ರೀಶೈಲ ಗಿರಿಯ ಕದಳಿ ವನದಲ್ಲಿ ಐಕ್ಯಳಾದಳು. ಅವಳ ಈ ಯಾತ್ರೆ ಶರಣ ಜೀವನದ ಮಹಾಮಾರ್ಗವಾಗಿದೆ. ನೀರಿನಲ್ಲಿ ಹುಟ್ಟಿದ ಮುತ್ತು ಉಪ್ಪು ಹಾಗೂ ಮಂಜುಗಡ್ಡೆಗಳಲ್ಲಿˌˌ ಮುತ್ತು ಮಾತ್ರ ಮರಳಿ ನೀರಾಗುವುದಿಲ್ಲ. ಶರಣನಾದವನು ಲಿಂಗಮುಖಿಯಾಗಿ ಸಾಗಿದಾಗ ಲಿಂಗವೇ ಆಗುತ್ತಾನೆ. ವಿನ: ಅಂಗಸಂಗಿಯಾಗುವುದಿಲ್ಲ ಎಂಬುದನ್ನು ಈ ವಚನವು ನಮಗೆ ತಿಳಿಸುತ್ತದೆ ” ಎಂದರು.
ಶಿಕ್ಷಕಿ ವಿಜಯಲಕ್ಷ್ಮೀ ಉದ್ನೂರ ಅವರು “ಹೆಣ್ಣು ಮಕ್ಕಳಿಗೆ ನಿಜವಾದ ಸ್ವಾತಂತ್ರ್ಯವನ್ನು ತಂದು ಕೊಟ್ಟವರೇ ಪೂಜ್ಯ ಬಸವಾದಿ ಶರಣರು. ಮಹಿಳೆಯರಿಗೆ ಮನೆಯಲ್ಲಿ ಎಷ್ಟೇ ಕೆಲಸದ ಹೊರೆ ಇರಲಿ. ನಡುವೆ ಒಂದಿಷ್ಟು ಸಮಯವನ್ನು ವಚನದ ಓದಿಗೆ ಮೀಸಲಿಡಬೇಕು. ಅಂದರೆ ವಚನ ಸಂಸ್ಕೃತಿಯನ್ನು ನಮ್ಮ ಮಕ್ಕಳ ಮುಖೇನ ಮುಂದಿನ ಪೀಳಿಗೆಗೆ ವರ್ಗಾಯಿಸಿದಂತಾಗುತ್ತದೆ. ಎಂತಹ ಸಂಸಾರದಲ್ಲಿದ್ದರೂ ನಾವು ಮುತ್ತಿನಂತಾಗಬೇಕು; ಉಪ್ಪು ವಾರಿಕಲ್ಲಿನಂತೆ ಭವಭಾರಿಗಳಾಗಬಾರದು.” ಎಂದು ಅಭಿಪ್ರಾಯಪಟ್ಟರು.
ಬಸವ ಕೇಂದ್ರದ ಅನುಭಾವಿ ಡಾ. ಗಿರೀಶ ನೀಲಕಂಠಮಠ ಅವರು ವಚನ ಚಿಂತನೆ ಮಾಡುತ್ತಾ, ವಚನಗಳು ನಮ್ಮ ಅರಿವಿನ ಜ್ಞಾನ ದೀವಿಗೆಗಳು. ಇಲ್ಲಿನ ವಚನದ ಮೂಲಕ ಅಕ್ಕಮಹಾದೇವಿ ತಾಯಿ ಅವರು ಒಂದು ದಿವ್ಯ ಸಂದೇಶ ನೀಡಿದ್ದಾರೆ. ಭವಕ್ಕೆ ಬರಬಾರದೆಂದೇ ನಮಗೆ ಲಿಂಗವನ್ನು ನೀಡಿಯಾಗಿದೆ. ಅದನ್ನು ಹೊಂದಿಯೂ ಸಂಸಾರಿಗಳಾದವರು ತಮ್ಮ ಪೂರ್ವವಾಸನೆ ಬಿಡದೆ ಅಂಗಸಂಗಿಗಳಾಗಿ ನಡೆದುಕೊಂಡರು. ಇದಕ್ಕೆ ಮಹಾದೇವಿ ತಾಯಿಯವರ ಒಪ್ಪಿಗೆ ಇಲ್ಲ. ಸಮುದ್ರದ ನೀರಿನಲ್ಲಿಯೇ ಉಪ್ಪು ಹಿಮಗಡ್ಡೆ ಹಾಗೂ ಮುತ್ತುಗಳು ಜನಿಸುತ್ತವೆ. ಆ ಸಮುದ್ರದ ನೀರೇ ಈ ಮೂರು ರೀತಿಯ ಬದಲಾವಣೆಯನ್ನು ಹೊಂದಿವೆ, ಈ ಬದಲಾವಣೆಯಲ್ಲಿ ಏಕಮುಖ ಬದಲಾವಣೆ ಹಾಗೂ ದ್ವಿಮುಖ ಬದಲಾವಣೆ ಇದೆ.

ಸಮುದ್ರದ ನೀರು ಉಪ್ಪಾಗಿ ಆಣೆಕಲ್ಲಾಗಿ ಬದಲಾವಣೆ ಹೊಂದಿ, ಮತ್ತೆ ತನ್ನ ಮೂಲ ರೂಪದಲ್ಲಿ ಬದಲಾವಣೆಯಾಗುತ್ತದೆ. ಇದು ದ್ವಿಮುಖ ಬದಲಾವಣೆ. ಆದರೆ ಮುತ್ತು ಸಹ ಅದೇ ನೀರಿನಲ್ಲಿ ಹುಟ್ಟಿದರೂ ನೀರಿನಲ್ಲಿ ಮರಳಿ ನೀರಾಗುವುದಿಲ್ಲ ˌ ಇದೇ ಏಕಮುಖ ಬದಲಾವಣೆ. ಶರಣರು ಸಹ ಒಮ್ಮೆ ಇಷ್ಟ ಲಿಂಗವನ್ನು ಧರಿಸಿಯಾದ ಮಾತ್ರಕ್ಕೆ ಅವರು ಲಿಂಗಿಗಳೇ ಆಗುತ್ತಾರೆ. ಮರಳಿ ಮೂಲ ಸಂಸಾರಕ್ಕೆ ಜೋತು ಬೀಳಬಾರದು.
ಮಾನವರು ತಮ್ಮ ತನು ಮನ ಭಾವದಲ್ಲಿ ಕಸದಂತೆ ಇಂಬಿಟ್ಟುಕೊಂಡ ಅಷ್ಟಮದ ಇಂದ್ರಿಯ ಲಾಲಸೆ ಮುಂತಾದವುಗಳಿಗೆ ಒಳಗಾಗಿ, ಲಿಂಗಧರಿಸಿ ಪೂರ್ವ ವಾಸನೆ ಬಿಡದಿದ್ದರೆ ಅವರು ಭವಿಗಳೆಂದೇ ಅರ್ಥ. ಪ್ರತಿಯೊಬ್ಬರು ಬಾಲ್ಯ, ಯೌವನ ಮತ್ತು ಮುಪ್ಪುಗಳೆಂಬ ಏಕಮುಖ ಬದಲಾವಣೆಯನ್ನು ಹೊಂದಿದ್ದಾರೆ. ಇವರೆಲ್ಲ ಲಿಂಗವ್ಯಸನಿ ಜಂಗಮ ಪ್ರೇಮಿಯಾಗಿ ಬದುಕಬೇಕು.
ತಮ್ಮ ಅಂಗವನ್ನು ಲಿಂಗವನ್ನಾಗಿ ಮಾಡಿಕೊಳ್ಳಬೇಕು. ಹಾಗಾಗದೆ ಮರಳಿ ಅಂಗ ಸುಖಕ್ಕೆ ಎಳಸಿದರೆ ಅಂದಣವನೇರಿದ ಸೊಣಗನಂತಾಗುತ್ತಾರೆ. ಆದುದರಿಂದ ಅಂಗಸುಖಕ್ಕೆ ಹಾತೊರೆದು ಸಂಸಾರ ಭಾರವನ್ನು ಹೊತ್ತ ಮನುಜರು ಆ ಬಾರವನ್ನೆಲ್ಲ ಚೆಲ್ಲಿ ಹಗುರಾಗಿ ಮೈಮನಗಳನ್ನೆಲ್ಲ ಲಿಂಗವಾಗಿಸಿದಾಗ ಮಹಾಶರಣವೇ ಆಗುತ್ತಾರೆ. ಇದಕ್ಕೆ ಮನವನ್ನು ಸಜ್ಜುಗೊಳಿಸಬೇಕೆಂದು ಅಕ್ಕ ಹೇಳಿದ್ದಾಳೆ” ಎಂದು ವಿವರವಾಗಿ ತಿಳಿಸಿದರು.
ಹಿರಿಯ ಅನುಭಾವಿ ವಿಶ್ರಾಂತ ಪ್ರಾಧ್ಯಾಪಕ ಶರಣ ಮಹದೇವಯ್ಯ ನೀಲಕಂಠಮಠ ಅವರು ” ಸೃಷ್ಟಿಯಲ್ಲಿ ಸಹಜವಾಗಿ ಜರಗುತ್ತಲಿರುವ ಕ್ರಿಯೆಗಳನ್ನಾಧರಿಸಿ ಇಲ್ಲಿ ಅಕ್ಕಮಹಾದೇವಿಯವರು ತಾತ್ವಿಕ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ಸಮುದ್ರದನೀರು ಉಪ್ಪು ಮಂಜುಗಡ್ಡೆ ಹಾಗೂ ಮುತ್ತಾಗಿ ಬದಲಾವಣೆಯಾಗುತ್ತದೆ. ಇಲ್ಲಿ ಬದಲಾವಣೆಯಾಗಬೇಕಾದರೆ ಬದಲಾಗುವ ಮನಸ್ಸು ಕೂಡ ಮುಖ್ಯವಾಗುತ್ತದೆ. ಉಪ್ಪು ಆಣೆಕಲ್ಲು ಮತ್ತೆ ಮತ್ತೆ ಬದಲಾವಣೆ ಚಕ್ರಕ್ಕೆ ಸಿಲುಕಬಹುದು, ಆದರೆ ಮುತ್ತಿನಂತೆ ಅಚಲವಾಗಿ ನಿಲ್ಲುವುದೇ ನಿಜಶರಣ ನಿಲುವಾಗಿದೆ.
ಸಂಸಾರದಿಂದ ಜಡವಾಗದೆ ಲಿಂಗಹೊಂದಿ ಲಿಂಗೈಕ್ಯರಾಗುವುದೇ ಶರಣ ಸಮ್ಮತˌ, ಅವರೇ ಮುತ್ತಿನಂತವರು ಎಂದು ಮಹಾದೇವಿ ತಾಯಿ ಹೇಳಿದ್ದಾಳೆ ” ಎಂಬುದಾಗಿ ಅರ್ಥೈಸಿದರು.
ಕೊನೆಯಲ್ಲಿ ಸಮಾರೋಪಗೈದ ಶರಣ ಸಿದ್ದಲಿಂಗಪ್ಪ ಬರಗುಂಡಿ, ಶರಣೆ ಅಕ್ಕಮಹಾದೇವಿ ತಾಯಿಯವರು ತಮ್ಮ ಕಿರಿಯ ವಯಸ್ಸಿನಲ್ಲಿ ಎಲ್ಲ ತರಹದ ಜನರನ್ನೂ ಕಂಡಿದ್ದಾರೆ. ಲೌಕಿಕರನ್ನು ಪಾರಮಾರ್ಥಿಕರನ್ನು ಹಾಗೂ ಅವೆರಡರ ಸಮರಸ ಹೊಂದಿದವರನ್ನೆಲ್ಲಾ ಕಂಡಿದ್ದಾಳೆ. ಈ ವಚನವೇ ಸ್ಪಷ್ಟಪಡಿಸುವಂತೆˌ ಸಮುದ್ರದಲ್ಲಿ ಜನಿಸಿದ ಉಪ್ಪು ಮಂಜು ಹಾಗೂ ಮುತ್ತುಗಳು ವಿವಿಧ ರೂಪ ಆಗುತ್ತವೆ ಅದರಲ್ಲಿ ಮುತ್ತು ಮರಳಿ ನೀರಾಗದು. ಹಾಗೆಯೇ ಮನುಷ್ಯನಾದವನು ಲಿಂಗವನ್ನು ಹೊಂದಿ ಭಕ್ತನೆನಿಸಿ, ಮುಂಬರಿಯುತ್ತ ಲಿಂಗೈಕ್ಯನೇ ಆಗಬೇಕು. ಇದು ಸಂಸ್ಕೃತಿ ˌಹಾಗಿಲ್ಲದೇ ಹಿಮ್ಮುಖವಾಗಿ ಚಲಿಸಿದರೆ ಅದು ವಿಕೃತಿಯಾಗುತ್ತದೆ.
ಮಹಾಲಿಂಗವೆನಿಸುವ ಸಾಗರದಲ್ಲಿ ಉತ್ಪನ್ನವಾದ ಅಂಗಸಂಗಿಗಳು ಭವಿಗಳೆಲ್ಲ ಉಪ್ಪು ಮಂಜಿನಂತೆ ಮರಳಿ ಅದೇ ಭವಬಂಧನದಲ್ಲಿ ಸಿಲುಕುತ್ತಾರೆ. ಆದರೆ ನಿಜವಾದ ಶರಣರು ಲಿಂಗವೇ ಆಗುತ್ತಾರೆ. ಇತರರ ಸ್ಥಿತಿಗೆ ಮರುಗಿದ ಅಕ್ಕ, ತಾನು ಮಾತ್ರ ಲಿಂಗದ ದಾರಿಯಲ್ಲಿಯೇ ಸಾಗಿ ಲಿಂಗಭಾವದಲ್ಲಿ ನಿಶ್ಚಲಳಾಗಿದ್ದೇನೆ ಎಂದು ಅಭಿಮಾನದಿಂದ ಹೇಳಿಕೊಂಡು ಉಳಿದವರಿಗೆ ಮಾದರಿಯಾಗಿದ್ದಾಳೆ.
ಇಲ್ಲಿ ಅಹಂ ಭಾವವಿಲ್ಲ ; ಆತ್ಮಸ್ತೈರ್ಯವಿದೆ ˌಶುದ್ಧ ಆತ್ಮ ನಿರೀಕ್ಷಣೆಯಿದೆ “ ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶೇಖಾ ಅವರು ಸ್ವಾಗತಿಸಿದರು. ವಚನ ಪ್ರಾರ್ಥನೆಯನ್ನು ಸಾಮೂಹಿಕವಾಗಿ ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಹಾಗೂ ವಿಶಾಲಾಕ್ಷಿ ಗಾಳಿಯವರು ಮಾಡಿದರು.
ಪಾಂಡಪ್ಪ ಕಳಸಾ, ಪ್ರೊ. ಸುರೇಶ ರಾಜನಾಳ, ಬಸವರಾಜ ಖಂಡಿ, ಬಸವರಾಜ ಬರಗುಂಡಿ, ರಾಚಪ್ಪ ಎಂಡಿಗೇರಿ, ಅನ್ನಪೂರ್ಣ ತಿಪ್ಪಾ, ಸುರೇಖಾ ಗೆದ್ದಲಮರಿ, ಸುಧಾ ಉದ್ನೂರ, ಶಿವಲೀಲಾ ಮೊದಲಾದವರು ಉಪಸ್ಥಿತರಿದ್ದರು.

ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ