ಮುರುಘಾ ಮಠದಲ್ಲಿ ಚೆನ್ನಬಸವಣ್ಣನವರ ಜಯಂತಿ
ಚಿತ್ರದುರ್ಗ :
ಚೆನ್ನಬಸವಣ್ಣನವರ ರಚನೆಯ ಸಾವಿರಾರು ವಚನಗಳು ಲಭ್ಯವಿರಬಹುದು. ಅವುಗಳೆಲ್ಲವೂ ಲಿಂಗ ಸಾಹಿತ್ಯದಿಂದಲೇ ಕೂಡಿವೆ. ಲಿಂಗ ಸಾಹಿತ್ಯ ಬೇರೆ; ಅಂಗ ಸಾಹಿತ್ಯ ಬೇರೆ. ಅಂಗ ಸಾಹಿತ್ಯದಲ್ಲಿ ಅಂಗಗುಣಗಳಿರುತ್ತವೆ. ಲಿಂಗ ಸಾಹಿತ್ಯದಲ್ಲಿ ನಡೆ-ನುಡಿ ಶುದ್ಧೀಕರಿಸುವ ವಿಚಾರಧಾರೆಯಿರುತ್ತದೆ.
ಚೆನ್ನಬಸವಣ್ಣನವರನ್ನು ಅವಿರಳಜ್ಞಾನಿ ಅಂತಾರೆ. ಅವರಂತೆ ಯಾರೂ ಇಲ್ಲ ಎನ್ನುವ ಪ್ರಶಂಸೆ. ಆದರೆ ಶರಣರಾರೂ ಹೊಗಳಿಕೆಗೆ ಮಾರುಹೋದವರಲ್ಲ. ಪ್ರತಿಹಂತದಲ್ಲಿಯೂ ತಮ್ಮ ಆತ್ಮಾವಲೋಕನಕ್ಕೆ ಹೆಚ್ಚು ಮಹತ್ವ ಕೊಟ್ಟವರು. ಅಂತಹವರಲ್ಲಿ ಪ್ರಖಾಂಡ ಪಂಡಿತ ಚೆನ್ನಬಸವಣ್ಣನವರು ಎಂದರೆ ತಪ್ಪಾಗದು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಹಾಗೂ ಎಸ್.ಜೆ.ಎಂ. ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಚೆನ್ನಬಸವಣ್ಣನವರ ವ್ಯಕ್ತಿತ್ವದ ಗುಣಗಾನ ಮಾಡಿದರು.
ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶೂನ್ಯಪೀಠದ ದ್ವಿತೀಯಾಧ್ಯಕ್ಷರಾದ ಷಟ್ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅನುಭಾವ ಗೈದರು.
ನಮ್ಮ ಪುರಾತನರು ಅಂದು ಯಾರೇ ಇರಲಿ ಅವರು ಕೈಗೊಂಡ ಭೌತಿಕ ಅಥವಾ ಯಾವುದೇ ಮೌಲ್ಯವಿರಬಹುದು ಅದು ಅಷ್ಟು ಸುಲಭವಾಗಿ ನಶಿಸುವಂತಹದಲ್ಲ. ನೂರಾರು ವರ್ಷಗಳ ವಚನ ಸಾಹಿತ್ಯ, ಅವರ ಅಂದಿನ ಕಟ್ಟಡಗಳು ನಮ್ಮ ಮುಂದೆ ಇವೆ. ಬಸವಾದಿ ಶರಣರೂ ಸಹ ದೇವರನ್ನು ನಂಬಿದ್ದರು. ಆದರೆ ಅವರ ದೇವರು ಯಾರೆಂದರೆ ನಡೆ-ನುಡಿ, ಆತ್ಮಾವಲೋಕನ, ಆಲೋಚನೆ, ಭಾವಶುದ್ಧಿ, ಇವು ಅವರ ದೇವರಾಗಿತ್ತು. ಶರಣರ ಪ್ರತಿಯೊಂದು ವಚನಗಳಲ್ಲಿ ಆತ್ಮಾವಲೋಕನಕ್ಕೆ ಅವಕಾಶವಿದ್ದುದರಿಂದ ಅದು ಲಿಂಗ
ಸಾಹಿತ್ಯವಾಗಲು ಸಾಧ್ಯವಾಗಿದೆ.

ಶರಣರಾರು ಜಗತ್ತಿಗೆ ಬೋಧನೆ ಮಾಡಲಿಲ್ಲ ಬದಲಿಗೆ ತಮ್ಮಲ್ಲಿರುವ ಅವಗುಣಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಶರಣರ ವಚನಸಾಹಿತ್ಯ ಶ್ರಮಜೀವಿಗಳ ಸಾಹಿತ್ಯ. ಅಲ್ಲಿ ವಿದ್ವತ್, ಸಂಶೋಧನೆ ಯಾವುದೇ
ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿರಲಿಲ್ಲ. ಅನುಭವ ಮಂಟಪವೇ ಅವರ ವಿಶ್ವವಿದ್ಯಾಲಯವಾಗಿತ್ತು. ಅಂತಹ ವಚನಗಳ ಅನುಸರಣೆಯಾದಲ್ಲಿ ಕುಟುಂಬ, ಸಮಾಜ, ಈ ಲೋಕವೇ ಸುಧಾರಿಸಲು ಸಾಧ್ಯವಿದೆ ಎಂದು ನುಡಿದರು.
ಯಾವುದೋ ಒಂದು ಪ್ರದೇಶಕ್ಕೆ ರಾಜನಾಗುವುದು ಸುಲಭ. ಆದರೆ ನಡೆ-ನುಡಿ, ಆಚಾರ- ವಿಚಾರ, ಅಧ್ಯಯನಕ್ಕೆ ಚಕ್ರವರ್ತಿ ಎಂದೆನಿಸುವುದು ಸುಲಭವಲ್ಲ. ಅಂತಹ ಮೇರುಸದೃಶ ವ್ಯಕ್ತಿತ್ವದ ಚೆನ್ನಬಸವಣ್ಣನವರು ಶೂನ್ಯಪೀಠದ ೨ನೇ ಅಧ್ಯಕ್ಷರು. ಅನುಭವ ಮಂಟಪದಲ್ಲಿ ಅನೇಕ ವಿಷಯಗಳ ಬಗೆಗೆ ಚರ್ಚೆ ನಡೆಯುತ್ತಿತ್ತು. ಹಾಗೆಯೇ ವಚನಗಳ ವಿಶ್ಲೇಷಣೆ ಅವುಗಳ ಗುಣಗಳ ಪರಾಮರ್ಶೆ ನಡೆದು ಚೆನ್ನಬಸವಣ್ಣನವರು ಅದಕ್ಕೆ ಅಂಕಿತ ಹಾಕಿದ ಮೇಲೆ ಅವುಗಳಿಗೆ ಮಹತ್ವ ಬರುತ್ತಿತ್ತು ಎಂದರು.
ಕಲ್ಯಾಣ ಕ್ರಾಂತಿಯ ನಂತರ, ಶರಣರೆಲ್ಲರೂ ದಿಕ್ಕಾಪಾಲಾಗುತ್ತಾರೆ. ಅಮೂಲ್ಯ ವಚನ ಸಾಹಿತ್ಯವನ್ನು ಪಟ್ಟಭದ್ರರು ಸುಡುತ್ತಾರೆ. ಅಳಿದುಳಿದವುಗಳನ್ನು ಹೊತ್ತು ವೈರಿಗಳನ್ನು ಸದೆಬಡಿದು ಉಳವಿಯ ಕಡೆಗೆ ಚೆನ್ನಬಸವಣ್ಣನವರ ತಂಡ ಬರುತ್ತದೆ. ಅವರೊಂದಿಗೆ ಅನೇಕ ಶರಣರಿರುತ್ತಾರೆ. ವಚನ ಸಾಹಿತ್ಯ ಉಳಿಯಲು ಪ್ರೇರಣೆ ನೀಡಿದ ಜಾಗ ಉಳವಿಯಾಗಿ ಇಂದು ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದೆ ಎಂದು ಸ್ಮರಿಸಿದರಲ್ಲದೆ, ಅಂತಹ ಶರಣರ ಪವಿತ್ರ ಜಾಗಗಳಿಗೆ ನೀವುಗಳು ಹೋಗುತ್ತಿರಬೇಕೆಂದು ಸಲಹೆ ನೀಡಿದರು.

ಸಮ್ಮುಖ ವಹಿಸಿದ್ದ ಗುರುಮಠಕಲ್ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಚೆನ್ನಬಸವಣ್ಣನವರನ್ನು ಷಟ್ಸ್ಥಲ ಚಕ್ರವರ್ತಿ ಅಂತ ಕರಿತಾರೆ. ನಮ್ಮ ನಡುವೆ ಆಳಿ ಹೋದ ರಾಜ ಮಹಾರಾಜರನ್ನು ಚಕ್ರವರ್ತಿ, ದೊರೆ, ರಾಜ ಅಂತೀವಿ. ಆದರೆ ಚೆನ್ನಬಸವಣ್ಣನವರು ಸಾಹಿತ್ಯದಲ್ಲಿ ಪ್ರಖಾಂಡ ಪಾಂಡಿತ್ಯವನ್ನು ಹೊಂದಿ ಅದರ ಮೇಲೆ ವಿಜಯ ಸಾಧಿಸಿದ್ದಕ್ಕಾಗಿ ಅವರನ್ನು ಷಟಸ್ಥಲ ಚಕ್ರವರ್ತಿ ಎಂದರು.
ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ಟಿ. ಶಂಕರಪ್ಪ ಹೊನ್ನೂರು ಅವರು ವಿಷಯಾವಲೋಕನ ಮಾಡುತ್ತ, ಚೆನ್ನಬಸವಣ್ಣನವರು ೧೨ನೇ ಶತಮಾನದ ಅತ್ಯಂತ ಪ್ರಭಾವಿ ವಚನಕಾರರು. ಬಸವಣ್ಣನವರ ಅಕ್ಕನವರಾದ ನಾಗಲಾಂಬಿಕೆ ಹಾಗೂ ಶಿವಸ್ವಾಮಿಯವರ ಪುತ್ರರೇ ಚೆನ್ನಬಸವಣ್ಣ. ಬಸವಣ್ಣನವರ ಸೋದರಳಿಯ. ಬಾಲ್ಯದಲ್ಲಿಯೇ ಬಸವಣ್ಣನವರ ಪ್ರಭಾವಕ್ಕೊಳಗಾಗಿ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅನುವಾಯಿತು. ಇವರು ಕೂಡಲಚೆನ್ನಸಂಗಮದೇವ ಎಂಬ ಅಂಕಿತನಾಮದಲ್ಲಿ ರಚಿಸಿದ ಸುಮಾರು ೧೭೬೩ ವಚನಗಳು ದೊರೆತಿವೆ.
ಇವರ ಪ್ರಮುಖ ಕೃತಿಗಳು ಕರಣಹಸಿಗೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಪದಮಂತ್ರ ಗೋಪ್ಯ, ಸ್ವರವಚನಗಳು, ಸಕೀಲರ ವಚನಗಳು. ಇವರ ವಚನಗಳಲ್ಲಿ ಆಧ್ಯಾತ್ಮಿಕ ಚಿಂತನೆ, ಭಕ್ತಿ, ಜ್ಞಾನ ಮತ್ತು ಷಟಸ್ಥಲ ವಚನಗಳು ನಿರೂಪಿತಗೊಂಡಿವೆ. ಮಾನವೀಯ ಮೌಲ್ಯಗಳ ಪ್ರತಿಪಾದನೆಗೆ ಆದ್ಯತೆ ನೀಡಿದವರೆಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಬಸವ ಮುರುಘೇಂದ್ರ ಶ್ರೀಗಳು, ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳಾದ ಸವಿತಾ ಶ್ರೀನಿವಾಸ, ನಾಗರಾಜ ಸಂಗಮ್, ಶಿವಾನಂದ, ಬಸವರಾಜ ಕಟ್ಟಿ, ಜಿ.ಟಿ. ನಂದೀಶ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಮಹಾಂತಮ್ಮ, ಎಸ್. ವೀರೇಶ, ನಿಂಬೇಕಾಯಿ ನಾಗರಾಜ, ಅಣಜಿ ವೀರಣ್ಣ, ಪ್ರಾಚಾರ್ಯ ರೇವಣ್ಣ ಸೇರಿದಂತೆ ಎಸ್.ಜೆ.ಎಂ. ಶಾಲಾ ಕಾಲೇಜುಗಳ ಕೆಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರದ ಚಂದ್ರವಳ್ಳಿ ಎಸ್.ಜೆ.ಎಂ. ಪದವಿಪೂರ್ವ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭದಲ್ಲಿ ಕಲಾವಿದ ಉಮೇಶ ಪತ್ತಾರ ಚೆನ್ನಬಸವಣ್ಣನವರ ವಚನಗಳು ಹಾಡಿದರು. ಉಪನ್ಯಾಸಕ ಮಂಜುನಾಥ ಸ್ವಾಗತಿಸಿದರು. ಇನ್ನೋರ್ವ ಉಪನ್ಯಾಸಕ ಚಿಕ್ಕಪ್ಪನಹಳ್ಳಿ ವಿಶ್ವನಾಥ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.
