ವಚನ ಸಾಹಿತ್ಯ, ಶರಣ ತತ್ವಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾ ಶರಣ
ಬೀದರ :
12ನೇ ಶತಮಾನದ ಮಹಾನ್ ಕ್ರಾಂತಿಕಾರಿ, ಜ್ಞಾನ ವೈರಾಗ್ಯಗಳ ಮೂರ್ತಿ ಹಾಗೂ ವಚನ ಸಾಹಿತ್ಯದ ಜ್ಞಾನನಿಧಿ ಎಂದೇ ಪ್ರಸಿದ್ಧರಾದ ಚಿನ್ಮಯಜ್ಞಾನಿ ಶ್ರೀ ಚೆನ್ನಬಸವೇಶ್ವರರ ಜಯಂತಿಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಬಸವಣ್ಣನವರ ಅಕ್ಕ ಅಕ್ಕನಾಗಮ್ಮನ ಪುತ್ರರಾದ ಚೆನ್ನಬಸವಣ್ಣನವರು ಅಲ್ಪ ವಯಸ್ಸಿನಲ್ಲಿಯೇ ಅಪಾರ ಜ್ಞಾನ ಸಂಪತ್ತನ್ನು ಗಳಿಸಿ ‘ಚಿನ್ಮಯಜ್ಞಾನಿ’ ಎಂದೇ ಚಿರಪರಿಚಿತರಾದವರು. ಅನುಭವ ಮಂಟಪದ ಶೂನ್ಯ ಸಿಂಹಾಸನವನ್ನು ಅಲಂಕರಿಸಿ, ವಚನ ಸಾಹಿತ್ಯ ಮತ್ತು ಶರಣ ತತ್ವಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾನುಭಾವರಾಗಿದ್ದರು ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಬೀದರ ಬಸವ ಮಂಟಪದಲ್ಲಿ ಚನ್ನಬಸವೇಶ್ವರ ಜಯಂತಿ ಆಚರಿಸಿದ ಶುಭ ಸಂದರ್ಭದಲ್ಲಿ
“ಚೆನ್ನಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ; ಅವು ಜೀವನಕ್ಕೆ ದಾರಿದೀಪ. ಅವರ ಜ್ಞಾನ ವೈರಾಗ್ಯ ಮತ್ತು ತಾರ್ಕಿಕ ಚಿಂತನೆಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಪ್ರಸ್ತುತ” ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದೇ ವೇಳೆ ಶರಣ ಶರಣೆಯರು ಚೆನ್ನಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಸವಕುಮಾರ ಚಟನಳ್ಳಿ ವಚನ ಗಾಯನ ನಡೆಸಿಕೊಟ್ಟರು.
ಚೆನ್ನಬಸವಣ್ಣನವರ ರಚಿತ ವಚನಗಳ ಅರ್ಥಪೂರ್ಣ ಗಾಯನ ಹಾಗೂ ಅವರ ಜೀವನ, ತತ್ವ ಸಿದ್ಧಾಂತಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಲ್ಯಾಣ ಕ್ರಾಂತಿಯ ಸಮಯದಲ್ಲಿ ವಚನ ಕಟ್ಟುಗಳನ್ನು ಸುರಕ್ಷಿತವಾಗಿ ಉಳಿಸಿ, ಉಳವಿಗೆ ಕೊಂಡೊಯ್ದು ಶರಣ ಪರಂಪರೆಯನ್ನು ಕಾಪಾಡಿದ ಚೆನ್ನಬಸವಣ್ಣನವರ ಸಾಹಸ ಹಾಗೂ ಜಾಣ್ಮೆ ನಿಜಕ್ಕೂ ಸ್ಮರಣೀಯ ಎಂದು ಮಾತೆ ಸತ್ಯಾದೇವಿ ನುಡಿದರು.
”ಅರಿವೇ ಗುರು, ಕ್ರಿಯೆಯೇ ಲಿಂಗ” ಎಂಬ ತತ್ವದಡಿ ಸಮಾಜದಲ್ಲಿ ಸಮಾನತೆ, ಕಾಯಕ ಮತ್ತು ದಾಸೋಹ ಭಾವನೆಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂದು ಕರೆ ನೀಡಲ.
ಕಾರ್ಯಕ್ರಮದಲ್ಲಿ ಅನೇಕ ಶರಣರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಪ್ರಸಾದ ದಾಸೋಹ ಸ್ವೀಕರಿಸಿದರು.


ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ