ಪ್ರತ್ಯೇಕ ಧರ್ಮ ಬೇಡಿಕೆ ಬೆಂಬಲಿಸುವುದು ಹುತ್ತಕ್ಕೆ ಕೈ ಹಾಕಿದಷ್ಟು ಅಪಾಯಕಾರಿ ಅನ್ನುವಷ್ಟು ಭಯ ರಾಜಕಾರಣಿಗಳಲ್ಲಿ ಬಿತ್ತಲಾಗಿದೆ.
ಬೆಂಗಳೂರು
ಕೆಲವು ವರ್ಷಗಳ ಹಿಂದಿನ ತನಕ ಚಾಮರಾಜನಗರಕ್ಕೆ ಯಾವ ಮುಖ್ಯಮಂತ್ರಿಯೂ ಹೋಗುತ್ತಿರಲಿಲ್ಲ. ಆ ಹಿಂದುಳಿದ ಗಡಿ ಜಿಲ್ಲೆಗೆ ಹೋದರೆ ಸಿಂಹಾಸನದಿಂದ ಇಳಿಯಬೇಕಾಗುತ್ತದೆ ಎಂಬ ಭೀತಿ ಅವರಲ್ಲಿ ಆವರಿಸಿಕೊಂಡಿತ್ತು.
ಆ ಜಿಲ್ಲೆಯಿಂದ ಅಂತರ ಕಾಯ್ದುಕೊಂಡವರೂ ಹೆಚ್ಚಿನ ದಿನ ಅಧಿಕಾರದಲ್ಲಿ ಉಳಿಯಲಿಲ್ಲ ಎನ್ನುವುದು ಬೇರೆ ಮಾತು.
ಇಂದು ರಾಜಕಾರಣಿಗಳಲ್ಲಿ ಅದೇ ರೀತಿಯ ಮೂಢನಂಬಿಕೆ ಲಿಂಗಾಯತ ಧರ್ಮದ ಮಾನ್ಯತೆಯ ಹೋರಾಟಕ್ಕೂ ಅಂಟಿಕೊಂಡಿದೆ. ಅವರಿಗೆ ಲಿಂಗಾಯತ ಚಳುವಳಿ ಬಿಸಿತುಪ್ಪವಾಗಿದೆ, ನುಂಗಿದರೆ ಕಷ್ಟ, ಚೆಲ್ಲಿದರೆ ನಷ್ಟ.
ಇತ್ತೀಚೆಗೆ ಬಸವಕಲ್ಯಾಣದಲ್ಲಿ ನಡೆದ ಕಲ್ಯಾಣಪರ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಲಿಂಗಾಯತ ಹೋರಾಟದಿಂದ ಕಾಂಗ್ರೆಸ್ ಕೈ ಸುಟ್ಟಿಕೊಂಡಿತು, ಮುಖ್ಯವಾಗಿ ಎಂ ಬಿ ಪಾಟೀಲ್, ಸಿದ್ದರಾಮಯ್ಯ ಹೊಡೆತ ತಿಂದರು ಎಂದು ಹೇಳಿದರು.
ಜಾರಕಿಹೊಳಿ ಲಿಂಗಾಯತ ಧರ್ಮ ಬೆಂಬಲಿಸೋ ಅಪರೂಪದ ರಾಜಕಾರಣಿ. ಅವರಲ್ಲಿ ಬಸವಣ್ಣನವರ ಬಗ್ಗೆ ಅಭಿಮಾನವಿದೆ, ಬಸವತತ್ವಕ್ಕೆ ನಿಲ್ಲುವ ಗಟ್ಟಿತನವಿದೆ. ಅವರ ನೇತೃತ್ವದ ಮಾನವ ಬಂದುತ್ವ ವೇದಿಕೆ ನಾಗಪಂಚಮಿಯನ್ನು ಬಸವ ಪಂಚಮಿಯೆಂದು ನೂರಾರು ಊರುಗಳಲ್ಲಿ ಆಚರಿಸುತ್ತದೆ.

ಲಿಂಗಾಯತರಲ್ಲೂ ಜಾರಕಿಹೊಳಿ ಬಗ್ಗೆ ಅಷ್ಟೇ ಅಭಿಮಾನವಿದೆ.
ಇಂತಹ ಪ್ರಗತಿಪರ, ಲಿಂಗಾಯತಪರ ರಾಜಕಾರಣಿಯಲ್ಲೂ ಲಿಂಗಾಯತ ಚಳುವಳಿಯಿಂದ ರಾಜಕೀಯವಾಗಿ ಹಿನ್ನಡೆಯಾಗಬಹುದೆಂಬ ಆತಂಕವಿರುವುದು ದುರಾದೃಷ್ಟ.
ಈಗಿನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮೊದಲಿನಿಂದಲೂ ಲಿಂಗಾಯತ ಹೋರಾಟವನ್ನು ವಿರೋಧಿಸಿಕೊಂಡು ಬಂದಿರುವ ರಾಜಕಾರಣಿ. ಬೇಜಾರಾದಾಗೆಲ್ಲ ಹೋಗಿ ರಂಭಾಪುರಿ ಸ್ವಾಮೀಜಿಯವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ಬರುತ್ತಾರೆ.
ಅದಕ್ಕೆ ಅನೇಕ ಕಾರಣಗಳಿವೆ.
2018ರಲ್ಲಿ ಕಾಂಗ್ರೆಸ್ ಸೋತ ನಂತರ ಸಿದ್ದರಾಮಯ್ಯನವರನ್ನು ವಿರೋಧಿಸಲು ಇದನ್ನೊಂದು ಅಸ್ತ್ರವಾಗಿ ಡಿಕೆಶಿ ಬಳಸಿಕೊಂಡರು. ಜೊತೆಗೆ ಅವರಿಗೆ ನಿಜಕ್ಕೂ ಪಂಚಪೀಠ ಪರಂಪರೆಯ ನೊಣವಿನಕೆರೆಯ ಅಜ್ಜಯ್ಯನವರ ಮೇಲೆ ಗಾಢವಾದ ನಂಬಿಕೆಯಿದೆ.
ಇಲ್ಲಿ ಒಂದು ವಿಷಯ ಸೂಕ್ಷ್ಮವಾಗಿ ಗಮನಿಸಬೇಕು: ಡಿಕೆಶಿ ಮತ್ತೆ ಮತ್ತೆ ಕ್ಷಮೆ ಕೇಳುತ್ತಿರುವುದು 2018ರಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿದ ಕಾಂಗ್ರೆಸ್ ನಿರ್ಧಾರಕ್ಕೆ.
ಈಗ ನಡೆಯುತ್ತಿರುವ ಲಿಂಗಾಯತ ಹೋರಾಟದ ಬಗ್ಗೆ ಎಂದೂ ನೇರವಾಗಿ ಮಾತನಾಡಿಲ್ಲ.
ಅಕ್ಟೋಬರ್ ತಿಂಗಳು ಬೆಂಗಳೂರಿನಲ್ಲಿ ನಡೆದ ಪಂಚಾಚಾರ್ಯ ಕಾರ್ಯಕ್ರಮದಲ್ಲಿ ಅವರು 30 ನಿಮಿಷ ಭಾಷಣ ಮಾಡಿದರು.
ಅದರಲ್ಲಿ ರೇಣುಕಾಚಾರ್ಯರ ಬಗ್ಗೆ ಮಾತನಾಡಿದ್ದು ಒಂದು ಸಾಲು, ಮಿಕ್ಕ ಭಾಷಣ ಪೂರ್ತಿ ಬಸವಣ್ಣನವರ ಬಗ್ಗೆಯೇ ಇತ್ತು. ಜೊತೆಗೆ ಲಿಂಗಾಯತವನ್ನು ‘ಧರ್ಮ’ ಪದ ಬಳಸಿಯೇ ಉಲ್ಲೇಖಿಸಿದರು.
ಅವರಷ್ಟೇ ಅಲ್ಲ, ಇವತ್ತು ಬಹಳ ಜನ ಖಾಸಗಿಯಾಗಿ, ಸಾರ್ವಜನಿಕವಾಗಿ ‘ಲಿಂಗಾಯತ’ ‘ಧರ್ಮ’ ಎರಡೂ ಪದಗಳನ್ನು ಸೇರಿಸಿಕೊಂಡೇ ಮಾತನಾಡುತ್ತಾರೆ. ಕನ್ನೇರಿ ಸ್ವಾಮಿ ಹಿಂದೂ ಸಮಾವೇಶಗಳಲ್ಲಿಯೂ ಇದು ಕೇಳಿ ಬರುತ್ತಿದೆ. ಅಷ್ಟರ ಮಟ್ಟಿಗೆ ಲಿಂಗಾಯತ ಚಳುವಳಿ ಗೆಲುವು ಸಾಧಿಸಿದೆ.
ಯಾರದೋ ಮಾತು ಕೇಳಿಕೊಂಡು ಲಿಂಗಾಯತ ‘ಧರ್ಮ’ವಲ್ಲ ‘ಪಂಥ’ ಎಂದು ಗಿಣಿಪಾಠ ಹೇಳಲು ಶುರು ಮಾಡಿದ್ದ ಶಂಕರ ಬಿದರಿ ರಾತ್ರೋರಾತ್ರಿ ವರ್ಚಸ್ಸು, ಪ್ರಭಾವ ಕಳೆದುಕೊಂಡಿದ್ದು ಗಮನಿಸಬೇಕು.
ಆದರೆ ಬಹಳಷ್ಟು ರಾಜಕಾರಣಿಗಳಲ್ಲಿ ಲಿಂಗಾಯತ ಹೋರಾಟದ ಬಗ್ಗೆ ಒಂದು ರೀತಿಯ ಭೀತಿ ಮನೆ ಮಾಡಿದೆ.
ಪ್ರತ್ಯೇಕ ಧರ್ಮ ಬೇಡಿಕೆ ಬೆಂಬಲಿಸುವುದು ಹುತ್ತಕ್ಕೆ ಕೈ ಹಾಕಿದಷ್ಟು ಅಪಾಯಕಾರಿ ಅನ್ನುವಷ್ಟು ಭಯ ಅವರಲ್ಲಿ ಬಿತ್ತಲಾಗಿದೆ.
ಕಳೆದ ತಿಂಗಳು ನಡೆದ ಬಸವಶಕ್ತಿ ಶಿಬಿರದಲ್ಲಿ ಒಂದು ಬಸವ ಸಂಘಟನೆಯ ಪ್ರಮುಖರು ಹಂಚಿಕೊಂಡ ಅನುಭವ ಇದು.
ತಮ್ಮ ತಂಡದ ಜೊತೆ ಅಲ್ಲಿನ ಎಂಎಲ್ಎ ಒಬ್ಬರನ್ನು ಭೇಟಿಯಾಗಿ ಕೆಲವೊಂದು ವಿಷಯಗಳನ್ನು ಚರ್ಚಿಸುವಾಗ ವಿಧಾನಸಭೆಯಲ್ಲಿ ಲಿಂಗಾಯತ ಧರ್ಮ ಬೆಂಬಲಿಸಿ ಮಾತನಾಡಬೇಕೆಂದು ಮನವಿ ಮಾಡಿದರಂತೆ.
ಅದಕ್ಕೆ ಬೆಚ್ಚಿದ ಎಂಎಲ್ಎ ಅದೊಂದು ಬಿಟ್ಟು ಬೇರೆ ಏನಾದರೂ ಹೇಳಿ ಮಾಡಿಕೊಡುತ್ತೀನಿ ಅಂದರಂತೆ.
(ಮುಂದುವರೆಯುವುದು)
