ನವೆಂಬರ್ 13ರಿಂದ ಡಿಸೆಂಬರ್ 13ರವರೆಗೆ ನಗರದಲ್ಲಿ ವಿವಿಧೆಡೆ ವಚನ ಚಿಂತನ
ಶಿವಮೊಗ್ಗ :
ಬಸವಕೇಂದ್ರದ 20ನೇ ವರ್ಷದ ಚಿಂತನ ಕಾರ್ತಿಕ ನವೆಂಬರ್ 13 ರಿಂದ ಡಿಸೆಂಬರ್ 13 ರವರೆಗೆ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಗರದ ವಿವಿಧೆಡೆ ಒಂದು ತಿಂಗಳು ನಿರಂತರವಾಗಿ ನಡೆಯಲಿದೆ ಎಂದು ಬಸವಕೇಂದ್ರ ಹಾಗೂ ಬಸವಪರ ಸಂಘಟನೆಗಳ ಪ್ರಮುಖರು ತಿಳಿಸಿದರು.
ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಶಿವಮೊಗ್ಗ ಬಸವಕೇಂದ್ರಕ್ಕೆ ಪೂಜ್ಯ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಚರಮೂರ್ತಿಗಳಾಗಿ ಬಂದು ಇಪ್ಪತ್ತು ವರ್ಷಗಳಾಗಿವೆ. ಇದರೊಂದಿಗೆ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕ ಆರಂಭಿಸಿ ಇಪ್ಪತ್ತು ವರ್ಷಗಳಾಗಿವೆ. ಈ ಎರಡೂ ಸಂಭ್ರಮಗಳು ಈ ವರ್ಷದ ಚಿಂತನ ಕಾರ್ತಿಕದಲ್ಲಿ ಪ್ರತಿಫಲಿಸಲಿವೆ ಎಂದರು.

ನಾಡಿನ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವಣ್ಣನವರ ಅನನ್ಯ ವ್ಯಕ್ತಿತ್ವದೊಂದಿಗೆ ಮುಖಾಮುಖಿ ಆಗುವ ನಿಟ್ಟಿನಲ್ಲಿ ಈ ಭಾರಿಯ ಚಿಂತನ ಕಾರ್ತಿಕದ ಕಾರ್ಯಕ್ರಮ ವಿನ್ಯಾಸಗೊಂಡಿದೆ.
20ನೇ ವರ್ಷದ ಚಿಂತನ ಕಾರ್ತಿಕ ಉದ್ಘಾಟನಾ ಸಮಾರಂಭ ಇದೇ ತಿಂಗಳ 13ರ ಶುಕ್ರವಾರ ಸಂಜೆ 6.30ಕ್ಕೆ ವೆಂಕಟೇಶ ನಗರದಲ್ಲಿರುವ ಬಸವಕೇಂದ್ರದಲ್ಲಿ ನಡೆಯಲಿದೆ. ಈ ಬಾರಿಯ ಚಿಂತನ ಕಾರ್ತಿಕವನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿ ಎಂ.ವಿ. ಧನಂಜಯ ಅವರು ಉದ್ಘಾಟಿಸಲಿದ್ದಾರೆ ಎಂದರು.
ಬಸವಕೇಂದ್ರದ ಅಧ್ಯಕ್ಷರಾದ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ. ಕೆ.ಸಿ. ಶಶಿಧರ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂಧನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯುತ್ ಇಲಾಖೆಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ಜಿ. ಶಶಿಧರ್, ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಎಂ. ಆರ್. ಜಯದೇವಪ್ಪ ಉಪಸ್ಥಿತರಿರುತ್ತಾರೆ.
ಈ ದಿನದ ಕಾರ್ಯಕ್ರಮವು ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಸವಕೇಂದ್ರ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ ಎಂದು ಹೇಳಿದರು.
ಡಿಸೆಂಬರ್ 12 ಮತ್ತು 13 ರಂದು ಕ್ರಮವಾಗಿ ಸಮಾರೋಪ ಸಮಾರಂಭ ಹಾಗೂ ಗಣಪರ್ವ ಜರುಗುವುದರೊಂದಿಗೆ ಈ ಬೃಹತ್ ಚಿಂತನ ಕಾರ್ತಿಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಚಿಂತನ ಕಾರ್ತಿಕ ಹಿನ್ನಲೆ :
ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಈ ಬಸವಕೇಂದ್ರಕ್ಕೆ ಚರಮೂರ್ತಿಗಳಾಗಿ 20.12.2006 ರಂದು ನೇಮಕವಾದರು. ಬಸವಕೇಂದ್ರದ ಅಧ್ಯಕ್ಷರಾಗಿದ್ದ ಜಿ. ಬೆನಕಪ್ಪ, ಉಪಾಧ್ಯಕ್ಷರಾದ ಎನ್.ಕೆ. ದಾನಪ್ಪ ಹಾಗೂ ಎಚ್.ಕೆ. ಮಂಜಪ್ಪ, ಪ್ರೊ. ಕಿರಣ್ ದೇಸಾಯಿ ಮೊದಲಾದವರು ನಿತ್ಯ ಶಿವಾನುಭವ, ಮಾಸಿಕ ಶರಣ ಸಂಗಮ, ಆಗಾಗ ವಿಚಾರಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದರು.
ಬಸವ ಮರುಳಸಿದ್ಧ ಸ್ವಾಮಿಗಳು ಬಸವಕೇಂದ್ರದಲ್ಲಿ ನಿರಂತರ ಹನ್ನೆರಡು ವರ್ಷಗಳ ಕಾಲ ಪ್ರತಿದಿನ ಪ್ರವಚನ ನೀಡಿದ್ದಾರೆ. ತಾವು ಕೇಂದ್ರಕ್ಕೆ ಬಂದ ಪ್ರಾರಂಭದಲ್ಲಿಯೇ ಕೇವಲ ಬಸವಕೇಂದ್ರದ ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದ ಶಿವಾನುಭವ ಚಿಂತನೆ ಮಂಡನೆಗಳ ಪರಿಣಾಮ ಸಮಾಜದ ಮೇಲೆಯೂ ಆಗಬೇಕು ಎಂಬುದು ಡಾ. ಬಸವ ಮರುಳಸಿದ್ಧ ಸ್ವಾಮಿಗಳವರು ಅಪೇಕ್ಷೆಪಟ್ಟು, ಆ ಮೂಲಕ ಬಸವಾದಿ ಶರಣರ ವಿಚಾರಧಾರೆಗಳ ಅನುಷ್ಠಾನಕ್ಕೆ ಪ್ರೇರಣೆ ಆಗಬೇಕೆಂಬ ಆಶಯದಿಂದ ‘ಚಿಂತನ ಕಾರ್ತಿಕ’ ಪ್ರಾರಂಭಿಸಿದರು ಎಂದರು.

ಇದರಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಒಂದೊಂದು ಮನೆಯಲ್ಲಿ ಶಿವಾನುಭವ ಚಿಂತನೆ- ಭಜನೆ ಮತ್ತು ದಾಸೋಹ ನಡೆಯುತ್ತಿದೆ.
ಈ ರೀತಿ ಆರಂಭಗೊಂಡ ಚಿಂತನ ಕಾರ್ತಿಕ ನಿರಂತರವಾಗಿ ಇಪ್ಪತ್ತು ವರ್ಷ ಕಳೆದಿದೆ. ಕರೋನದ ಸಂಕಷ್ಟ ಕಾಲದಲ್ಲೂ ಆನ್ಲೈನ್ ಮೂಲಕ ಚಿಂತನ ಕಾರ್ತಿಕ ನಡೆಸಲಾಯಿತು ಎಂಬುದು ವಿಶೇಷ. ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಚಿಂತನ ಕಾರ್ತಿಕದ ಬೆಳಕು ಹರಡಿದೆ.
ಕಾರ್ತಿಕ ಮಾಸ ಹಗಲು ಕಡಿಮೆ ರಾತ್ರಿ ಹೆಚ್ಚಿದ್ದು ಮಾನವನ ಅಂತರಂಗದಲ್ಲಿನ ಜ್ಞಾನ ಅಜ್ಞಾನಗಳ ಮಂಥನವನ್ನು ಸಾಂಕೇತಿಕವಾಗಿ ತಿಳಿಸುವ ಮಾಸ. ಈ ನಿಟ್ಟಿನಲ್ಲಿ ಪ್ರತಿದಿನ ಮನೆಯ ಮುಂದೆ ದೀಪ ಹಚ್ಚಿ ಕತ್ತಲೆ ಓಡಿಸುವ ಪದ್ಧತಿ ನಮ್ಮ ಪರಂಪರೆಯಿಂದ ಬಂದಿದೆ.
ಬಹಿರಂಗದ ದೀಪ ಬಹಿರಂಗದ ಕತ್ತಲನ್ನು, ಅಂತರಂಗದ ಅಜ್ಞಾನದ ಕತ್ತಲೆ ಓಡಿಸಲು ಸುಜ್ಞಾನದ ದೀಪ ಬೆಳಗಬೇಕು. ಈ ಆಶಯದೊಂದಿಗೆ “ಚಿಂತನ ಕಾರ್ತಿಕ”ಪ್ರತೀ ವರ್ಷ ನಿರಂತರವಾಗಿ ನಡೆಯುತ್ತಿದೆ ಎಂದು ಮುಖಂಡರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ. ಬೆನಕಪ್ಪ ಅಧ್ಯಕ್ಷರು, ಚಂದ್ರಪ್ಪ ಉಪಾಧ್ಯಕ್ಷರು, ಚಂದ್ರಶೇಖರ ತಲಗಿಹಾಳ ಕಾರ್ಯದರ್ಶಿ ಬಸವಕೇಂದ್ರ, ರುದ್ರಮುನಿ ಸಜ್ಜನ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ
ಲವಕುಮಾರ, ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ, ಶಶಿಕಲಾ ಚಂದ್ರಪ್ಪ ಅಧ್ಯಕ್ಷರು ಅಕ್ಕನಬಳಗ, ಗಾಯತ್ರಿ ಪಾಟೀಲ ಜಿಲ್ಲಾಧ್ಯಕ್ಷರು ಕದಳಿ ಮಹಿಳಾ ವೇದಿಕೆ ಮತ್ತಿತರರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ