‘ದೇಹ ದೇವಾಲಯ ಮಾಡಿಕೊಂಡ ಶರಣರಂತೆ ಬದುಕಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

“ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ, ಎನ್ನಕಾಲೆ ಕಂಬ, ದೇಹವೆ ದೇವಾಲಯ, ಶಿರವೇ ಹೊನ್ನ ಕಳಸವಯ್ಯಾ, ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.” ಎಂಬ ಧರ್ಮಗುರು ಬಸವಣ್ಣನವರ ವಚನದ ಒಂದು ಸಾಲಿನ ಉಕ್ತಿ “ದೇಹವೆ ದೇವಾಲಯ” ಎಂಬ ವಿಷಯವಾಗಿ ಅನುಭಾವಿ ಗಿರಿಜಕ್ಕ ಧರ್ಮರಡ್ಡಿ ಅವರು ಉಪನ್ಯಾಸ ನೀಡಿದರು.

ಅವರು, ಮನುಷ್ಯನ ಕೈಯಲ್ಲಿ ತಮ್ಮ ದೇಹವನ್ನು ದೇವಾಲಯ ಮಾಡಿಕೊಳ್ಳುವ ಶಕ್ತಿಯಿದೆ. ಅಂಥಹದೊಂದು ಕಲೆಯನ್ನು ಬಸವಾದಿ ಶರಣರು ಸಾಧಿಸಿ, ಅನುಭವಿಸಿ ತಮ್ಮ ಅನುಭಾವದ ವಚನಗಳಲ್ಲಿ ಹಿಡಿದಿಟ್ಟಿದ್ದಾರೆ.

ಈ ವಚನಗಳು ಕನ್ನಡದಲ್ಲಿಯೆ ಇರುವುದರಿಂದ ಸಹಜವಾಗಿ ಅರ್ಥವಾಗುತ್ತವೆ. ನಾವು ಸೇವಿಸುವ ಆಹಾರ, ನೀರು, ಗಾಳಿ ಶುದ್ಧವಾಗಿರಬೇಕು. ನಾಲಿಗೆ ರುಚಿಗೆ ಸಿಕ್ಕಸಿಕ್ಕದ್ದನ್ನು ತಿಂದರೆ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ಮನಸ್ಸು ಸ್ಥಿಮಿತ ಕಳೆದುಕೊಂಡು ಅಶಾಂತಿಗೆ ಒಳಗಾಗಿ ಮಾತನಾಡುವುದನ್ನು ಬಿಟ್ಟು ಏನೇನೋ ಮಾತನಾಡುತ್ತದೆ. ದುಶ್ಚಟಗಳಿಂದ ನಾನಾರೋಗಗಳು ದೇಹಕ್ಕೆ ಮುತ್ತುತ್ತವೆ. ಸಾಧಿಸುವುದನ್ನು ಸಾಧಿಸಲಿಕ್ಕೆ ಆಗೋದಿಲ್ಲವೆಂದು ತಿಳಿಸಿದರು.

ಅವಿರಳಜ್ಞಾನಿ ಚೆನ್ನಬಸವಣ್ಣನವರು ಒಂದು ವಚನದಲ್ಲಿ ಹೇಳಿದಂತೆ, ತಲೆ ಹೊಲಸು ಆದರೆ, ಶ್ಯಾಂಪೋ ಇಷ್ಟಾದಿ ಹಚ್ಚಿಕೊಂಡು ಸ್ನಾನ ಮಾಡುತ್ತೇವೆ. ತಮ್ಮ ಅರಿವೆ ವಸ್ತ್ರಗಳು ಕೊಳೆಯಾದರೆ ಒಳ್ಳೆ ಸೋಪು ಹಚ್ಚಿ ಸ್ವಚ್ಛ ಮಾಡುತ್ತೇವೆ. ಆದರೆ ನಮ್ಮ ಮನಸ್ಸು ಮಲೀನವಾದರೆ ? ಸತ್ಯ ಶರಣರ ಸಂಗದಿಂದ, ಅನುಭಾವಿಗಳ ಸ್ನೇಹ ಮಾಡಿಕೊಂಡು ಒಳ್ಳೆಯ ವಿಚಾರಗಳನ್ನು ತಿಳಿದುಕೊಂಡು ಆಚರಿಸಿದರೆ ಮನಸ್ಸು ಕೂಡಾ ಸುಮನವಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.

ಬಸವದಳದ ೧೭೨೩ ನೇ ಶರಣ ಸಂಗಮದಲ್ಲಿ ಉಪನ್ಯಾಸ ನೀಡುತ್ತ, ಮುಂದುವರೆದು ನಮ್ಮ ದೇಹದಲ್ಲಿ ಪಂಚಮಹಾಭೂತಗಳು ಅಡಗಿವೆ, ನಮ್ಮೊಳಗೆ ಆ ಪರಮಾತ್ಮನ ಚೈತನ್ಯವಿದೆ ಈ ಸತ್ಯವನ್ನು ತಿಳಿದುಕೊಂಡು ಅಲ್ಲಿ-ಇಲ್ಲಿ ಸುತ್ತಾಡುತ್ತಾ ಹಣ, ಸಮಯ, ಆರೋಗ್ಯ ಹಾಳು ಮಾಡುವುದನ್ನು ಬಿಟ್ಟು, ನಿತ್ಯ ಇಷ್ಟಲಿಂಗಯೋಗ, ಮಾಡುವ ಮೂಲಕ ನಮ್ಮ ಶರೀರವನ್ನು, ಮನಸ್ಸನ್ನು ಮತ್ತು ಭಾವಶುದ್ಧವಾಗಿಸಿಕೊಂಡು ಜೀವನ ಸಾಗಿಸಿದಾಗ ನಮ್ಮ ದೇಹ ದೇವಾಲಯವಾಗುತ್ತದೆ ಎಂಬುದನ್ನು ಹಲವಾರು ವಚನಗಳ ಮೂಲಕ ಧರ್ಮರಡ್ಡಿ ಅವರು ತಿಳಿಸಿಕೊಟ್ಟರು.

ಪ್ರತಿವಾರದಂತೆ ವಚನಗಳ ಚಿಂತನೆಯನ್ನು ಮೃತ್ಯುಂಜಯ ಜಿನಗಾ ಅವರು ನಿಜಶರಣ ಅಂಬಿಗ ಚೌಡಯ್ಯನವರ ಎರಡು ವಚನಗಳ ಕುರಿತು ಮಾತನಾಡುತ್ತಾ, “ಅಂಗವ ಅಂದ ಮಾಡಿಕೊಂಡು ತಿರುಗುವ ಭಂಗಗೇಡಿಗಳು ನೀವು ಕೇಳಿರೋ”. ಎಂಬುದನ್ನು ವಿವರಿಸುತ್ತಾ, ಭಕ್ತನಾದವನು ಅರಿವೆ ಗುರುವಾಗಿ, ಆಚಾರವೇ ಲಿಂಗವಾಗಿ, ಅನುಭಾವವೇ ಜಂಗಮವಾಗಿ ತಿಳಿದು ನಡೆದುಕೊಳ್ಳುವುದೇ ಸುಂದರವಾಗುತ್ತದೆ. ಹಾಗಲ್ಲದೇ ತನ್ನ ಹೆಂಡಿರು, ಮಕ್ಕಳು, ಸಿರಿ-ಸಂಪತ್ತು ಶಾಶ್ವತವೆಂದು ತಿಳಿದು, ದಾಸೋಹವ ಮಾಡದಿದ್ದರೆ ಅದು ಶರಣ ಸಂಸ್ಕೃತಿಗೆ ವಿರುದ್ಧವಾಗುತ್ತದೆ ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಗದಗ ಜಿಲ್ಲಾಡಳಿತದಿಂದ ೭೧ ಮಹನೀಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಜಿಲ್ಲಾಡಳಿತದಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ನೀಡಿದ್ದಾರೆ.

ಕೆ.ಎಸ್. ಚಟ್ಟಿ ಅವರು ದಿ. ಮರ್ಚಂಟ್ಸ್ ಕೋ-ಆಪ್. ಬ್ಯಾಂಕ್ ಲಿ., ಗದಗ ಅಧ್ಯಕ್ಷರಾಗಿ ಹಲವಾರು ವರ್ಷ ಸೇವೆಯನ್ನು ಗುರುತಿಸಿ ಸಹಕಾರ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ನಿಮಿತ್ಯ ಬಸವದಳ ಗದಗ-ಬೆಟಗೇರಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನೋತ್ತರವಾಗಿ ಚಟ್ಟಿಯವರು, ನಾನು ಸಹಕಾರ ಕ್ಷೇತ್ರದಲ್ಲಿ ಮತ್ತು ಬಸವತತ್ವದಲ್ಲಿ ಇನ್ನೂ ಹೆಚ್ಚಿನ ಸೇವೆ ತಮ್ಮೆಲ್ಲರ ಸಹಕಾರದಿಂದ ಸಲ್ಲಿಸುತ್ತೇನೆಂದು ನುಡಿದರು.

ಸಣ್ಣ ಮನೆತನದಿಂದ ಬಂದ ನಮ್ಮ ತಂದೆಯವರು ಪರಿಶ್ರಮ ಮತ್ತು ತೋಂಟದಾರ್ಯ ಮಠದ ಪೂಜ್ಯ ಲಿಂಗೈಕ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಿಂದ ಈ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ನಮ್ಮೆಲ್ಲ ಗ್ರಾಹಕರಿಗೆ ಮತ್ತು ಸಹಕರಿಸಿದವರಿಗೆ ಸಲ್ಲಬೇಕೆಂದು ತಿಳಿಸಿದರು.

ಮತ್ತೋರ್ವ ಸನ್ಮಾನಿತರಾದ ಶೇಖಣ್ಣ ಎಸ್. ಕಳಸಾಪೂರಶೆಟ್ರ ಅವರು ಸಮಾನ ಮನಸ್ಕರೊಂದಿಗೆ ಪ್ರಾರಂಭವಾದ “ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ” ಗದಗ ಇದರ ಸಂಚಾಲಕರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಅವರನ್ನೂ ಬಸವದಳದಿಂದ ಸನ್ಮಾನಿಸಲಾಯಿತು.

ಸನ್ಮಾನಕ್ಕೋತ್ತರವಾಗಿ ಕಳಸಾಪೂರಶೆಟ್ರ ಅವರು, ಬಡವಿದ್ಯಾರ್ಥಿಗಳಿಗೆ, ಅನಾಥರಿಗೆ, ಅಂಗವಿಕಲರಿಗೆ ಉಚಿತವಾಗಿ ಪ್ರಸಾದ ಸೇವೆ ಗೈದಿರುವುದು ನಮ್ಮೆಲ್ಲ ಸಮಾನಮನಸ್ಕರರಿಗೆ ಈ ಪ್ರಶಸ್ತಿ ಸಲ್ಲಬೇಕೆಂದು ತಿಳಿಸಿದರು. ಮತ್ತು ಇದೆಲ್ಲ ನಮ್ಮ ಶ್ರೀ ತೋಂಟದಾರ್ಯ ಮಠದ ಸಂಸ್ಕಾರದಿಂದ ಸಾಧ್ಯವಾಗಿದೆ ಎಂದರು.

ಇನ್ನೋರ್ವ ಸನ್ಮಾನಿತರಾದ ಪ್ರಕಾಶ ಬ. ಬಂಡಿ ಅವರಿಗೆ ಇತ್ತೀಚಿಗೆ ಬೆಂಗಳೂರಿನ ರೋಟರಿ ಗ್ಲೋಬಲ್ ಯೋಗ ಸಂಸ್ಥೆಯು “ರಾಷ್ಟ್ರೀಯ ಯೋಗ ಶಿಕ್ಷಕ” ಎಂದು ಪ್ರಶಸ್ತಿ ನೀಡಿದೆ. ಬಂಡಿಯವರನ್ನು ಸಹ ಬಸವದಳದಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಕ್ಕೋತ್ತರವಾಗಿ ಬಂಡಿಯವರು ಮಾತನಾಡುತ್ತಾ, ನಾನು ವೃತ್ತಿಯಿಂದ ಚಿತ್ರಕಲಾ ಶಿಕ್ಷಕನಾದರೆ ಪ್ರವೃತ್ತಿಯಿಂದ ದಿನನಿತ್ಯ ಯೋಗವನ್ನು ಕಲಿಸುತ್ತಿದ್ದೇನೆ. ಇನ್ನೂ ನಾನು ಹೆಚ್ಚಿನ ಸೇವೆ ಮಾಡಲು ಬಸವದಳದವರು ಪ್ರೋತ್ಸಾಹಿಸಬೇಕೆಂದು ಮಾತನಾಡಿದರು.

ಬಸವದಳದ ೧೭೨೩ ನೇ ಶರಣ ಸಂಗಮದ ಆರಂಭದಲ್ಲಿ ಸಂಜೀವಿನಿ ಬಂಡಿವಡ್ಡರ, ನಾಗರತ್ನಾ ಅಸುಂಡಿ ಅವರಿಂದ ವಚನ ಪ್ರಾರ್ಥನೆ ಜರುಗಿತು, ಪ್ರೊ. ಶಿವಾನಂದ ಹೊಂಬಳ ಅವರು ಸ್ವಾಗತಿಸಿದರು. ನಿರೂಪಣೆಯನ್ನು ಎಂ. ಬಿ. ಲಿಂಗಧಾಳ ಮಾಡಿದರೆ, ಶರಣು ಸಮರ್ಪಣೆಯನ್ನು ವಿ. ಕೆ. ಕರೇಗೌಡ್ರ ಮಾಡಿದರು. ಪ್ರಸಾದ ಸೇವೆಯನ್ನು ಅನಸಮ್ಮ ಆರ್. ಜಿನಗಾ ಕುಟುಂಬ ವರ್ಗದವರು ವಹಿಸಿಕೊಂಡಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *