ಅನುಭವಮಂಟಪ ಉತ್ಸವ ಭಿತ್ತಿಪತ್ರ ಬಿಡುಗಡೆ
ಬೀದರ :
ವಚನ ಸಾಹಿತ್ಯ ಇಡೀ ಮನುಕುಲದ ಉದ್ದಾರಕ್ಕಾಗಿ ನಿರ್ಮಾಣಗೊಂಡಿದೆ. ಸಕಲ ಜೀವಾತ್ಮರ ಲೇಸು ಇದರಲ್ಲಿ ಅಡಗಿದೆ. ಲಿಂಗಾಯತರಾದ ನಾವೆಲ್ಲರು ನಮ್ಮ ಅಭಿಮಾನದಲ್ಲಿ ಅನುಭವ ಮಂಟಪ ಉತ್ಸವದಲ್ಲಿ ಪಾಲ್ಗೊಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಎಂದು ಜಾಗತ್ತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧನ್ನೂರ ಹೇಳಿದರು.

ನಗರದ ವಿದ್ಯಾನಗರ ಚನ್ನಬಸವ ಪಟ್ಟದ್ದೇವರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಅನುಭವ ಮಂಟಪ ಉತ್ಸವದ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಜಗತ್ತಿನ ಇತಿಹಾಸದಲ್ಲಿ ಶರಣರು ಮಾಡಿದ ಕ್ರಾಂತಿ ಅಪರೂಪದ್ದಾಗಿದೆ. ಸಮಸಮಾಜ ನಿರ್ಮಾಣ ಮಾಡಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಮುಟ್ಟಿಸುವ ಬಸವಣ್ಣನವರ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂದು ಹೇಳಿದರು.
ನವೆಂಬರ್ ೨೮, ೨೯ ಬಸವಕಲ್ಯಾಣದ ಅನುಭವ ಮಂಟಪದ ತಾಣದಲ್ಲಿ ನಡೆಯುವ ೪೭ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ವಿಶ್ವಧರ್ಮ ಟ್ರಸ್ಟ ಅನುಭವ ಮಂಟಪ ಅಡಿಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, ಈ ವರ್ಷದ ಅನುಭವ ಮಂಟಪ ಉತ್ಸವ ಅತ್ಯಂತ ವೈಚಾರಿಕತೆಯಿಂದ ಕೂಡಿದೆ. ಬಸವಕಲ್ಯಾಣದಲ್ಲಿ ೧೬ ರಂದು ಪ್ರವಚನ ಪ್ರಾರಂಭ, ೨೧ ರಂದು ವಚನ ಪಾರಾಯಣ, ೨೨ ರಂದು ಮಹಾರಾಷ್ಟ್ರದಿಂದ ಪಾದಯಾತ್ರೆಯಲ್ಲಿ ಹೊರಟು ೨೭ ರಂದು ಮುಂಜಾನೆ ಬಸವಕಲ್ಯಾಣ ತಲುಪಲಿದೆ.
ಬೀದರ ಜಿಲ್ಲೆಯ ಎಲ್ಲಾ ಬಸವ ಭಕ್ತರು ೨೮ ರಂದು ಮುಂಜಾನೆ ೧೦ ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷರಾದ ಬಾಬು ವಾಲಿ, ಅನುಭವ ಮಂಟಪ ಉತ್ಸವ ನಮ್ಮೆಲ್ಲರ ಸ್ವಾಭಿಮಾನದ ಹಬ್ಬ. ನಾವೆಲ್ಲರು ನಗರದ ಬಸವೇಶ್ವರ ವೃತ್ತದಲ್ಲಿ ಅಂದು ೮ ಗಂಟೆಗೆ ವಿವಿಧ ಬಸವಪರ ಸಂಘಟನೆಗಳು ಸೇರಿ ಕಾರು ಮುಂಖಾತರ ಬಸವಕಲ್ಯಾಣಕ್ಕೆ ಬರುತ್ತೇವೆಂದು ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ನಾವೆಲ್ಲರು ಭೇದಭಾವ ಮರೆತು ಅನುಭವ ಮಂಟಪ ಉತ್ಸವದಲ್ಲಿ ಪಾಲ್ಗೊಳುತ್ತೇವೆಂದು ನುಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಬಲ್ಲೂರ ಅವರನ್ನು ಗೌರವಪೂರಕವಾಗಿ ಸತ್ಕರಿಸಲಾಯಿತು.
ಸಭೆಯಲ್ಲಿ ಡಾ. ಜಗನಾಥ ಹೆಬ್ಬಾಳೆ, ಜೈರಾಜ ಖಂಡ್ರೆ, ಚಂದ್ರಶೇಖರ ಹೆಬ್ಬಾಳೆ, ಡಾ. ದೇವಕಿ ನಾಗೂರೆ, ಚಂದ್ರಕಾಂತ ಮಿರ್ಚೆ, ಯೋಗೆಂದ್ರ ಯದಲಾಪುರೆ, ಸಿದ್ದಯ್ಯಾ ಕೌಡಿಮಠ, ವಿಜಯಕುಮಾರ ಪಾಟೀಲ, ಶಾಂತಕುಮಾರ ಪಾಟೀಲ, ಡಿ.ಕೆ. ಗಣಪತಿ ವೇದಿಕೆಯ ಮೇಲೆ ಹಾಜರಿದ್ದು ಮಾತನಾಡಿದರು.

ಮೊದಲಿಗೆ ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯ ಮಕ್ಕಳು ವಚನ ಗಾಯನ ಮಾಡಿದರು. ಪ್ರೊ. ಸಂಗ್ರಾಮ ಎಂಗಳೆ ಸ್ವಾಗತಿಸಿದರೆ, ಚೇತನ ಆಣದೂರ ವಂದಿಸಿದರೆ, ಡಾ. ಶಿವಶಂಕರ ಟೋಕರೆ ನಿರೂಪಿಸಿದರು.
