ಮಾನ್ವಿ
ಇದು ಹಂಗಿನ ಅರಮನೆಯಲ್ಲ, ಸತ್ಯಶುದ್ಧ ಕಾಯಕ ಜೀವಿಗಳ ಮಹಾಮನೆ!
ಇದು ಕೇವಲ ನಾಲ್ಕು ಗೋಡೆಗಳ ಭೌತಿಕ ಮನೆಯಲ್ಲ; ಇಲ್ಲಿ ಜಾತೀಯತೆಯ ಅಡ್ಡಗೋಡೆಗಳಿಲ್ಲ, ಮೇಲು-ಕೀಳು ಎಂಬ ಭಾವನೆಗಳಿಲ್ಲ. ಮುಚ್ಚಿದ ಬಾಗಿಲುಗಳೂ ಇಲ್ಲ. ಇದು ಬಸವಣ್ಣನವರ ನೇತೃತ್ವದಲ್ಲಿ ಬಸವಾದಿ ಶರಣರು ನಿರ್ಮಿಸಿದ ತೆರೆದ ಹೃದಯಗಳ ‘ಮಹಾಮನೆ’.
ಹನ್ನೆರಡನೇ ಶತಮಾನದಲ್ಲಿ ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಆಗಮಿಸಿದ ಶರಣ-ಶರಣೆಯರಿಗೆ ಕಾಯಕ ಕಡ್ಡಾಯವಾಗಿತ್ತು. ಕಾಯಕದಲ್ಲಿ ಮೇಲು-ಕೀಳು ಎಂಬ ಭೇದವಿರಲಿಲ್ಲ. ಯಾರಿಗೂ ಕೆಡುಕಾಗದಂತೆ, ತಮ್ಮ ವೃತ್ತಿಯ ಮೂಲಕ ಸಮಾಜಕ್ಕೆ ಒಳಿತಾಗುವಂತೆ, ಹೆಚ್ಚಿನ ಫಲಾಪೇಕ್ಷೆಯಿಲ್ಲದೆ ಪ್ರತಿಯೊಬ್ಬರೂ ತಮ್ಮ ದೈನಂದಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ದಿನನಿತ್ಯ ದುಡಿದು ಗಳಿಸಿದ ದ್ರವ್ಯ(ಹಣ)ವನ್ನು ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಸದೆ, ಅಂದೇ ಸಮಾಜದ ಒಳಿತಿಗಾಗಿ ವಿನಿಯೋಗಿಸುತ್ತಿದ್ದರು. ಇದುವೇ ‘ಕಾಯಕ ತತ್ವ’.
ಅಂದು ಉದಯಿಸಿದ ಕಾಯಕವೆಂಬ ತತ್ವವು ಶರಣರ ಪಾಲಿಗೆ ಕೈಲಾಸವೇ ಆಗಿತ್ತು. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ತನು, ಮನ, ಧನಗಳನ್ನು ಸಮರ್ಪಿಸಿ, ಅದನ್ನು ಇಷ್ಟದೈವದ ಪೂಜೆಯೆಂದೇ ಭಾವಿಸುತ್ತಿದ್ದರು. ಇಷ್ಟ, ಪ್ರಾಣ, ಭಾವವೆಂಬ ತ್ರಿವಿಧಕ್ಕೂ ಸಲ್ಲುವಂತಹ ಪವಿತ್ರ ಕಾರ್ಯವೇ ಕಾಯಕವೆಂದು ನಂಬಿದ್ದರು. ಕಾಯಕದಿಂದ ಬಂದ ಸಂಪತ್ತನ್ನು ‘ದಾಸೋಹ’ವೆಂಬ ಸಾಮಾಜಿಕ ಸೇವೆಗೆ ವಿನಿಯೋಗಿಸುತ್ತಿದ್ದರು.
ಅನುಭವ ಮಂಟಪ ಮತ್ತು ಮಹಾಮನೆಯ ದಾಸೋಹ ಪರಂಪರೆ
ಪ್ರತಿಯೊಬ್ಬ ಕಾಯಕಜೀವಿ ಶರಣರೂ ತಮ್ಮ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡು, ದಿನದ ದುಡಿಮೆಯ ನಂತರ ಸಂಜೆ ಬಸವಣ್ಣನವರ ನೇತೃತ್ವದಲ್ಲಿ, ಅಲ್ಲಮಪ್ರಭುದೇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು.
ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಚಿಂತನೆಗಳ ವೇದಿಕೆ ಎಂದು ಪ್ರಸಿದ್ಧಿ ಪಡೆದ ಅನುಭವ ಮಂಟಪದಲ್ಲಿ ಆತ್ಮೋದ್ಧಾರ ಹಾಗೂ ಲೋಕೋದ್ಧಾರದ ಕುರಿತು ಗಂಭೀರ ಚಿಂತನೆಗಳು ನಡೆಯುತ್ತಿದ್ದವು.
ಪ್ರತಿದಿನ ಅನುಭವ ಮಂಟಪವನ್ನು ಸಂದರ್ಶಿಸಲು ಅಸಂಖ್ಯಾತ ಜನರು ಆಗಮಿಸುತ್ತಿದ್ದರು. ಅವರೆಲ್ಲರಿಗೂ ಅನ್ನದಾಸೋಹ ನಡೆಯಬೇಕಿತ್ತು. ಅದಕ್ಕಾಗಿ ಬಸವಣ್ಣನವರೂ ಸೇರಿದಂತೆ ಎಲ್ಲ ಶರಣರು ತಮ್ಮ ತಮ್ಮ ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹಕ್ಕೆ ಅರ್ಪಿಸುತ್ತಿದ್ದರು.
ಅನುಭವ ಮಂಟಪದಲ್ಲಿ ಚಿಂತನೆಗಳು ಮುಗಿದ ನಂತರ ಎಲ್ಲ ಶರಣರು ತಮ್ಮ ಪರಿಶ್ರಮದಿಂದ ಗಳಿಸಿದ ಪರಿಶುದ್ಧ ಸಂಪತ್ತನ್ನು ಒಂದೆಡೆ ಸೇರಿಸಿ, ಮಹಾದಾಸೋಹವನ್ನು ನಡೆಸುತ್ತಿದ್ದರು. ಅದುವೇ ಶರಣರ ಮಹಾಮನೆ!
ಆ ಮಹಾಮನೆಯಲ್ಲಿ ಪ್ರತಿಯೊಬ್ಬ ಶರಣರ ಪರಿಶ್ರಮದ ಫಲವೂ ಇತ್ತು. ಬಸವಣ್ಣನವರು ಮಹಾಮಂತ್ರಿಗಳಾಗಿ ಪಡೆಯುತ್ತಿದ್ದ ಸಂಭಾವನೆಯೂ ಸೇರಿದಂತೆ, ಎಲ್ಲ ಶರಣರ ಕಾಯಕದಿಂದ ಬಂದ ಸಂಪತ್ತನ್ನು ಸಮಾಜದ ಒಳಿತಿಗಾಗಿ ಬಳಸಲಾಗುತ್ತಿತ್ತು.
ಅನುಭವ ಮಂಟಪಕ್ಕಾಗಲಿ, ಮಹಾಮನೆಗಾಗಲಿ ಬಸವಣ್ಣನವರು ಪ್ರವೇಶಿಸುವಾಗ ಅಧಿಕಾರದ ಅಹಂಕಾರದಿಂದಲ್ಲ, ಒಬ್ಬ ಸಾಮಾನ್ಯ ಸೇವಕರ ಭಾವನೆಯಿಂದಲೇ ಬರುತ್ತಿದ್ದರು.
ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುತ್ತಾರೆ:
ಭಕ್ತಿಯಿಲ್ಲದ ಬಡವ ನಾನಯ್ಯ;
ಕಕ್ಕಯ್ಯನ ಮನೆಯಲು ಬೇಡಿದೆ;
ಚೆನ್ನಯ್ಯನ ಮನೆಯಲು ಬೇಡಿದೆ;
ದಾಸಯ್ಯನ ಮನೆಯಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದರೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
ಇಲ್ಲಿ ಬಸವಣ್ಣನವರು ತಮ್ಮನ್ನು ‘ಭಕ್ತಿಭಂಡಾರಿ’ ಎಂದು ಕರೆದುಕೊಳ್ಳುವುದರ ಹಿಂದಿನ ಭಾವವೇ ವಿಶಿಷ್ಟವಾದುದು. ಕಕ್ಕಯ್ಯ, ಚೆನ್ನಯ್ಯ, ದಾಸಯ್ಯ ಸೇರಿದಂತೆ ಎಲ್ಲ ಶರಣರು ನೀಡಿದ ಭಕ್ತಿಭಿಕ್ಷೆಯಿಂದಲೇ ತನ್ನ ಭಕ್ತಿಯ ಪಾತ್ರೆ ತುಂಬಿದೆ ಎಂದು ವಿನಯದಿಂದ ಹೇಳಿಕೊಳ್ಳುತ್ತಾರೆ.
ಮತ್ತೊಂದು ವಚನದಲ್ಲಿ ಶರಣರ ಸಂಗದ ಮಹತ್ವವನ್ನು ಹೀಗೆ ಸಾರುತ್ತಾರೆ:
ಎನಗಿಂತ ಕಿರಿಯರಿಲ್ಲ,
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ, ಎನಗಿದೇ ದಿಬ್ಯ.
ಹೀಗೆ ಬಸವಣ್ಣನವರು ಸದಾ ಶರಣರ ಸಂಗವನ್ನೇ ಬಯಸುತ್ತಿದ್ದರು. ಯಾರಿಗಿಂತಲೂ ತಾವು ದೊಡ್ಡವರಲ್ಲ, ಶಿವಭಕ್ತರೇ ತಮಗಿಂತ ಹಿರಿಯರು ಎಂಬ ವಿನಯಭಾವವನ್ನು ಜಗತ್ತಿಗೆ ಸಾರಿದರು.
ಅಧಿಕಾರಕ್ಕಿಂತ ಕಾಯಕವೇ ಶ್ರೇಷ್ಠ!
ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಗಳಾಗಿದ್ದರೂ, ಆ ಅಧಿಕಾರವನ್ನು ತಮ್ಮ ವೈಯಕ್ತಿಕ ಸುಖ-ಸಂಪತ್ತಿಗಾಗಿ ಬಳಸಿಕೊಳ್ಳಲಿಲ್ಲ. ಅದನ್ನು ಜನಸೇವೆಗೆ ದೊರೆತ ಒಂದು ಅವಕಾಶವೆಂದೇ ಭಾವಿಸಿದ್ದರು.
ಬಿಜ್ಜಳನ ಅರಮನೆಯಲ್ಲಿ ಚಿನ್ನದ ನಿಧಿಯ ಸುಳಿವು ದೊರೆತ ಸಂದರ್ಭದಲ್ಲಿ, ಅದರ ಸ್ಥಳವನ್ನು ಗುರುತಿಸಿ ರಾಜನಿಗೆ ತಿಳಿಸಿದರೆಂದು ಹೇಳಲಾಗುವ ಪ್ರಸಂಗವು ಬಸವಣ್ಣನವರ ನೈತಿಕ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ.
ಸೇವಕರಿಂದ ಆ ಸ್ಥಳವನ್ನು ಅಗೆಸಿದಾಗ ಅಪಾರ ಪ್ರಮಾಣದ ಚಿನ್ನದ ಖಜಾನೆ ದೊರೆಯುತ್ತದೆ. ಅದನ್ನು ಕಂಡು ಸಂತೋಷಗೊಂಡ ರಾಜ ಬಿಜ್ಜಳನು ಬಸವಣ್ಣನವರಿಗೆ, ‘ನಿಮಗೆ ಎಷ್ಟು ಪಾಲು ಬೇಕು?’ ಎಂದು ಕೇಳುತ್ತಾನೆ.
ಆಗ ಬಸವಣ್ಣನವರು ರಾಜನಿಗೆ ಹೀಗೆ ಎಚ್ಚರಿಸುತ್ತಾರೆ:
ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ, ನಾಣುಗೆಡಲೇಕೆ?
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?
ಈ ವಚನದ ಮೂಲಕ ಬಸವಣ್ಣನವರು, ಸಾರ್ವಜನಿಕ ಸಂಪತ್ತಿನ ಮೇಲೆ ವೈಯಕ್ತಿಕ ಆಸೆ ಪಡುವುದು ಸರಿಯಲ್ಲ ಎಂಬ ಸಂದೇಶವನ್ನು ಸಾರುತ್ತಾರೆ.
ರಾಜನಾಗಲಿ, ಮಂತ್ರಿಯಾಗಲಿ, ರಾಜ್ಯದ ಜನರ ಸಂಪತ್ತನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಜನರ ಸಂಪತ್ತು ಜನರ ಒಳಿತಿಗಾಗಿಯೇ ವಿನಿಯೋಗವಾಗಬೇಕು. ನನಗೆ ನನ್ನ ಸತ್ಯಶುದ್ಧ ಕಾಯಕದಿಂದ ಬಂದ ಸಂಪತ್ತೇ ಸಾಕು ಎಂಬ ನಿಲುವನ್ನು ಬಸವಣ್ಣನವರು ತೋರಿಸಿಕೊಟ್ಟರು.
ಶರಣರ ಮಹಾಮನೆ ನಡೆಸಲು ಸತ್ಯಶುದ್ಧ ಕಾಯಕದಿಂದ ದುಡಿದು ಅರ್ಪಿಸುವ ಅನೇಕ ಶರಣರಿದ್ದರು. ಹೀಗಾಗಿ ಅಧಿಕಾರದ ಹಂಗಿಲ್ಲದೆ, ಕಾಯಕದ ಗೌರವದಿಂದ ಬದುಕಿದ ಮಹಾನ್ ವ್ಯಕ್ತಿತ್ವ ಬಸವಣ್ಣನವರದು.
ಕಾಯಕ ನಿಷ್ಠೆಯ ಕುರಿತು ಶರಣರ ವಚನಗಳು
ಬಸವಣ್ಣನವರಂತೆಯೇ ಎಲ್ಲ ಶರಣರೂ ಕಾಯಕನಿಷ್ಠೆಗೆ ಮಹತ್ವ ನೀಡಿದ್ದರು.
ಉರಿಲಿಂಗಪೆದ್ದಿಗಳ ಧರ್ಮಪತ್ನಿ ಕಾಳವ್ವೆಯವರು ತಮ್ಮ ವಚನದಲ್ಲಿ ಹೀಗೆ ಹೇಳಲಾಗಿದೆ:
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
ಈ ವಚನದಲ್ಲಿ ಶರಣೆ ಕಾಳವ್ವೆಯವರು ಕಾಯಕನಿಷ್ಠೆಯ ಮಹತ್ವವನ್ನು ತಿಳಿಸಿದ್ದಾರೆ.
ಕಾಯಕ ಮಾಡದವರು ನಿಜವಾದ ಭಕ್ತರಲ್ಲ; ಸತ್ಯಶುದ್ಧವಲ್ಲದ ಕಾರ್ಯವನ್ನು ಕಾಯಕವೆಂದು ಕರೆಯಲು ಸಾಧ್ಯವಿಲ್ಲ ಎಂಬುದನ್ನು ಎಷ್ಟು ಸ್ಪಷ್ಟವಾಗಿ ಸಾರಿದ್ದಾರೆ ನೋಡಿ!
ಮತ್ತೊಂದು ವಚನದಲ್ಲಿ ಶರಣೆ ಸತ್ಯಕ್ಕನವರು ತಮ್ಮ ಕಾಯಕದ ಪರಿಶುದ್ಧತೆಯನ್ನು ಹೀಗೆ ವ್ಯಕ್ತಪಡಿಸುತ್ತಾರೆ:
ಲಂಚವಂಚನಕ್ಕೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ,
ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
ಪರರ ಸಂಪತ್ತಿನ ಮೇಲೆ ಆಸೆಪಡುವುದಿಲ್ಲ, ಲಂಚ-ವಂಚನೆ ಮಾಡುವುದಿಲ್ಲ. ತಾನು ಕಾಯಕದಿಂದ ಗಳಿಸಿದ ಪರಿಶುದ್ಧ ಸಂಪತ್ತಿನಲ್ಲಿಯೇ ಜೀವನ ನಡೆಸುತ್ತೇನೆ ಎಂಬ ದೃಢ ನಿಲುವನ್ನು ಈ ವಚನದಲ್ಲಿ ಕಾಣಬಹುದು.
ಇನ್ನು ಶರಣೆ ಆಯ್ದಕ್ಕಿ ಲಕ್ಕಮ್ಮನವರು ತಮ್ಮ ಪತಿ ಮಾರಯ್ಯನವರಿಗೆ, ‘ಈಸಕ್ಕಿ ಆಸೆ ನಿಮಗೇಕೆ?’ ಎಂದು ಪ್ರಶ್ನಿಸುವ ಮೂಲಕ ಕಾಯಕದ ಪ್ರಾಮಾಣಿಕತೆ ಮತ್ತು ದಾಸೋಹದ ಮಹತ್ವವನ್ನು ತಿಳಿಹೇಳುತ್ತಾರೆ.
ಕಾಶ್ಮೀರದ ಅರಸನಾಗಿದ್ದ ಮಹಾದೇವ ಭೂಪಾಲನು, ಕಲ್ಯಾಣಕ್ಕೆ ಬಂದು ಶರಣನಾಗಿ, ‘ಮೋಳಿಗೆಯ ಮಾರಯ್ಯ’ ಎಂಬ ಹೆಸರಿನಿಂದ ಕಾಯಕಜೀವಿಯಾಗಿ ಪ್ರಸಿದ್ಧನಾದದ್ದು ಕಾಯಕದ ಮಹತ್ವಕ್ಕೆ ಮತ್ತೊಂದು ನಿದರ್ಶನ.
ಹೀಗೆ ಹನ್ನೆರಡನೇ ಶತಮಾನದಲ್ಲಿ ತಮ್ಮ ಕಾಯಕದ ಹೆಸರಿನಿಂದಲೇ ಗುರುತಿಸಿಕೊಂಡ ಅನೇಕ ಶರಣರು ಕಲ್ಯಾಣದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಕಿನ್ನರಿ ಬೊಮ್ಮಯ್ಯ, ಮೇದಾರ ಕೇತಯ್ಯ, ಕುಂಬಾರ ಗುಂಡಯ್ಯ, ಹೂಗಾರ ಮಾದಯ್ಯ, ಒಕ್ಕಲಿಗ ಮುದ್ದಣ್ಣ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆಯ ಮಾರಯ್ಯ ಸೇರಿದಂತೆ ಅನೇಕ ಶರಣ-ಶರಣೆಯರು ಕಾಯಕತತ್ವದ ನಿಷ್ಠಾವಂತ ಅನುಯಾಯಿಗಳಾಗಿದ್ದರು.
ಇವರೆಲ್ಲರೂ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಹಾಗೂ ವೈಚಾರಿಕ ಕ್ರಾಂತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಇಂದಿನ ಸಮಾಜಕ್ಕೆ ಕಾಯಕ-ದಾಸೋಹ ತತ್ವದ ಅಗತ್ಯ
ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಅನುಷ್ಠಾನಕ್ಕೆ ತಂದ ಕಾಯಕ ಮತ್ತು ದಾಸೋಹ ತತ್ವಗಳನ್ನು ಇಂದಿನ ಸಮಾಜದಲ್ಲಿಯೂ ನಾವೆಲ್ಲರೂ ಅಳವಡಿಸಿಕೊಂಡರೆ ಎಷ್ಟೊಂದು ಬದಲಾವಣೆ ತರಬಹುದು!
ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾಯಕದಲ್ಲಿ ತೊಡಗಿಸಿಕೊಂಡರೆ ನಿರುದ್ಯೋಗದ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.
ಕಾಯಕದಿಂದ ಬಂದ ಸಂಪತ್ತಿನಲ್ಲಿ ಒಂದು ಭಾಗವನ್ನು ಸಮಾಜದ ಹಸಿದವರಿಗಾಗಿ, ಅಸಹಾಯಕರಿಗಾಗಿ ವಿನಿಯೋಗಿಸಿದರೆ ಹಸಿವುಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಜಾತಿ, ಧರ್ಮ, ವರ್ಗ, ಲಿಂಗ ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ, ಗೌರವ ಮತ್ತು ಬದುಕುವ ಹಕ್ಕು ದೊರೆಯುವಂತಾಗಬೇಕು.
ಬಸವಣ್ಣನವರ ಕಾಯಕ-ದಾಸೋಹ ತತ್ವಗಳು ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗದೆ, ನಮ್ಮ ಬದುಕಿನ ಭಾಗವಾಗಬೇಕು.
ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆ, ಸಮಾನತೆ, ಕಾಯಕನಿಷ್ಠೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಆಧಾರದ ಮೇಲೆ ಭಾರತವು ವಿಶ್ವಕ್ಕೆ ಮಾದರಿಯಾಗಬಲ್ಲದು.
ಅದೇ ಬಸವಾದಿ ಶರಣರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಶರಣರ “ಮಹಾಮನೆಯ” ಆಶಯಕ್ಕೆ ಸಲ್ಲಿಸುವ ನಿಜವಾದ ಭಕ್ತಿಯ ನಮನ.

ಒಳ್ಳೆಯ ಸಂದೇಶ ರವಾನಿಸಿದ್ದಿರಿ ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ